ಶನಿವಾರ, ನವೆಂಬರ್ 16, 2019
21 °C

ಆಹಾರ, ವ್ಯಾಯಾಮವೇ ಪಿಯಾ ಮಂತ್ರ

Published:
Updated:

ಮಾಂಸಖಂಡಗಳು ತುಂಬಿಕೊಂಡ ದೇಹ ಕೇವಲ ಡಯಟ್‌ನಿಂದ ಬಾರದು. ಬದಲಿಗೆ ಸರಿಯಾದ ಸಮಯಕ್ಕೆ ಉತ್ತಮ ಆಹಾರ ಸೇವನೆ ಹಾಗೂ ನಿರಂತರ ವ್ಯಾಯಾಮ ಸಾಕು ಎಂದು ದಕ್ಷಿಣದ ನಟಿ ಪಿಯಾ ಬಾಜ್ಪೇಯಿ ಹೇಳಿದ್ದಾರೆ.`ನಾನು ಡಯಟ್ ವಿರೋಧಿ. ಒಮ್ಮೆ ಡಯಟ್ ಮಾಡಿ ಬಿಟ್ಟಲ್ಲಿ ಕರಗಿದ ಬೊಜ್ಜು ಮತ್ತೆ ಬರುತ್ತದೆ. ಅದರ ಬದಲು ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಂಡು, ನಿರಂತರ ವ್ಯಾಯಾಮ ಮಾಡುತ್ತಿದ್ದರೆ ದೇಹ ಸುಸ್ಥಿತಿಯಲ್ಲಿರುತ್ತದೆ. ನಾನು ಹಲವು ತಿಂಗಳಿಂದ ಇದನ್ನು ಅಭ್ಯಾಸ ಮಾಡಿಕೊಂಡು ಬರುತ್ತಿದ್ದೇನೆ. ಫಲಿತಾಂಶವೂ ಉತ್ತಮವಾಗಿದೆ' ಎಂದು ಪಿಯಾ ಹೇಳಿದ್ದಾರೆ.`ಈ ಕ್ರಮವನ್ನು ಅಳವಡಿಸಿಕೊಂಡ ನಂತರ ನನ್ನಲ್ಲಾಗಿರುವ ಬದಲಾವಣೆಯನ್ನು ಬಹಳಷ್ಟು ಮಂದಿ ಹೊಗಳಿದ್ದಾರೆ. ಈ ಜೀವನ ಕ್ರಮ ಅಳವಡಿಸಿಕೊಳ್ಳುವ ಮೊದಲು ಇದರಲ್ಲಿ ಎಲ್ಲಿಯೂ ಅಡಚಣೆ ಆಗದಂತೆ ಎಚ್ಚರವಹಿಸುವುದು ಅತ್ಯಗತ್ಯ. ನಾನು ನನ್ನ ದೇಹವನ್ನು ಅತಿಯಾಗಿ ಪ್ರೀತಿಸುತ್ತೀನಿ. ಹೀಗಾಗಿ ಸಿನಿಮಾಗಳಿಗಾಗಿ ದೇಹವನ್ನು ದಂಡಿಸುವುದು ನನಗಿಷ್ಟವಿಲ್ಲ. ಸದಾ ಹೊಸ ಅವಕಾಶಗಳ ನಿರೀಕ್ಷೆಯಲ್ಲಿರುವ ನಾನು ಫಿಟ್ ಇರಬೇಕಾದ್ದು ಅನಿವಾರ್ಯ. ಹೀಗಾಗಿ ಆರೋಗ್ಯ ಹಾಗೂ ಫಿಟ್ ಆಗಿರುವುದರತ್ತಲೇ ನನ್ನ ಚಿತ್ತ' ಎಂದು ಪಿಯಾ ಫಿಟ್‌ನೆಸ್ ಮಂತ್ರವನ್ನು ಜಪಿಸಿದರು.ವಯಸ್ಸಾಗುತ್ತಿದ್ದಂತೆ ದೇಹದ ಚಯಾಪಚಯ ಕ್ರಮ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ನಾನು ಒಂದೇ ರೀತಿಯ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದರ ಮೂಲಕ ದೀರ್ಘಕಾಲದ ಆರೋಗ್ಯಕ್ಕೆ ಆಗುವ ಲಾಭದ ಕುರಿತು ಯೋಚಿಸುತ್ತಿದ್ದೇನೆ. ಇದಕ್ಕಾಗಿ ನನ್ನ ಆಹಾರದಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಹಾಗೂ ಹೆಚ್ಚು ಪ್ರೊಟೀನ್ ಇರುವ ಪದಾರ್ಥಗಳೇ ಇರುತ್ತವೆ.ಇದಕ್ಕಾಗಿ ಮೊಟ್ಟೆಯ ಬಿಳಿ ಭಾಗ, ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಯತೇಚ್ಛವಾಗಿ ಸೇವಿಸುತ್ತೇನೆ. ಕೆಲವೊಂದು ಧಾನ್ಯಗಳಿಂದ ಮಾಡಿದ ರೊಟ್ಟಿಯನ್ನು ತಿನ್ನುತ್ತೇನೆ. ಆದರೆ ಸಂಜೆ ನಂತರ ಯಾವ ಕಾರಣಕ್ಕೂ ಹಣ್ಣುಗಳನ್ನು ಸೇವಿಸುವುದಿಲ್ಲ. ಇದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ' ಎಂದು ಡಯಟೀಷಿಯನಳಂತೆ ಪಿಯಾ ನುಡಿಯುತ್ತಾರೆ.ಪಿಯಾ ಬಾಜ್ಪೇಯಿ ಅವರ ಡಯಟ್ ಸೂತ್ರ ಇಲ್ಲಿಗೇ ಮುಗಿಯದೇ ಅಪರೂಪಕ್ಕೊಮ್ಮೆ ಸಂಜೆ ವೇಳೆ ಚಾಕೊಲೇಟ್ ತಿನ್ನುತ್ತಾರಂತೆ. ಒಣ ಹಣ್ಣುಗಳು ಹಾಗೂ ಕಡಿಮೆ ಕೊಬ್ಬಿನಂಶ ಇರುವ ಮೊಸರು ಸೇವಿಸುತ್ತಾರಂತೆ. ತಿನ್ನಲು ಏನಾದರೂ ಬೇಕು ಎಂದೆನಿಸಿದರೆ ಎಣ್ಣೆ ಇಲ್ಲದ ಆಮ್ಲೆಟ್ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುವುದರ ಜತೆಗೆ ಬದಲಿ ದಿನಗಳಲ್ಲಿ ಕಾರ್ಡಿಯೋ ಹಾಗೂ ಜಾಗಿಂಗ್ ಅಭ್ಯಾಸ ಮಾಡುತ್ತಾರೆ.ಇದರೊಂದಿಗೆ ಅತಿ ಎನಿಸದರ ತೂಕವನ್ನು ಎತ್ತುವುದು ಹಾಗೂ ಆ್ಯಬ್ಸ್ ಅಭ್ಯಾಸ ಮಾಡುವುದು ಇವರ ವ್ಯಾಯಾಮ ಮಂತ್ರ.

 

ಪ್ರತಿಕ್ರಿಯಿಸಿ (+)