ಆಹಾರ, ಶರೀರ ಆರೋಗ್ಯಕರ...

7

ಆಹಾರ, ಶರೀರ ಆರೋಗ್ಯಕರ...

Published:
Updated:
ಆಹಾರ, ಶರೀರ ಆರೋಗ್ಯಕರ...

ಆರಂಭದ ದಿನಗಳಲ್ಲಿ ಫಿಟ್ ನಟ ಎನಿಸಿಕೊಂಡಿದ್ದ ವಿಜಯ ರಾಘವೇಂದ್ರ ನಡುವೆ ದಪ್ಪಗಾಗಿದ್ದರು. ಅದರಿಂದ ವಿಚಲಿತರಾಗಿ ದಿಢೀರ್ ಸಣ್ಣಗಾದ ಅವರು ಇದೀಗ ಮತ್ತೆ ಯೋಗ್ಯ ಮೈಕಟ್ಟಿಗೆ ಮರಳಿದ್ದಾರೆ.`ನನಗೆ ಮದುವೆ ಆದ ಹೊಸತು. ಫಣಿರಾಮಚಂದ್ರ ಅವರ `ಗಣೇಶ ಮತ್ತೆ ಬಂದ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಚಿತ್ರಕ್ಕಾಗಿ ಐದು ಕೇಜಿ ದಪ್ಪಗಾಗಲು ನಿರ್ದೇಶಕರು ಹೇಳಿದರು. ನಾನು ಅತಿಯಾಗಿ ತಿಂದು 15 ಕೇಜಿ ಊದಿಕೊಂಡೆ.ಸೋಮಾರಿತನ ನನ್ನನ್ನು ಆವರಿಸಿಕೊಂಡಿತು. ಮನೆಯವರು ನನ್ನನ್ನು ನೋಡಿ `ಡುಮ್ಮ' ಎನ್ನುತ್ತಾ ಕೋಪ ಮಾಡಿಕೊಳ್ಳತೊಡಗಿದರು. ಆಗ ನಾನು ಸಣ್ಣಗಾಗಬೇಕೆಂದು ನಿರ್ಧರಿಸಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ತಕ್ಷಣ ಅತಿಯಾದ ಡಯಟ್ ಅನುಸರಿಸಿದೆ. ದಿನವಿಡೀ ಕ್ಯಾರೆಟ್, ಸೌತೆಕಾಯಿ, ಚಪಾತಿ ಬಿಟ್ಟು ಬೇರೇನನ್ನೂ ತಿನ್ನುತ್ತಿರಲಿಲ್ಲ. ಅನ್ನದ ರುಚಿ ಮರೆತೇ ಹೋಗಿತ್ತು. ಕೇವಲ ಮೂರು ತಿಂಗಳಲ್ಲಿ 22 ಕೆಜಿ ತೂಕ ಕಳೆದುಕೊಂಡೆ. ಅದು ನಾನು ಮಾಡಿದ ದೊಡ್ಡ ತಪ್ಪು' ಎಂದು ನೆನಪುಗಳನ್ನು ಕೆದಕಿದರು ವಿಜಯ್.ಹೀಗೆ ತುಂಬಾ ಕಡಿಮೆ ಅವಧಿಯಲ್ಲಿ ಅತಿಯಾಗಿ ತೂಕ ಕಳೆದುಕೊಂಡ ಅವರು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಆಗಾಗ್ಗೆ ಜ್ವರ ಬರುವುದು, ತಲೆ ಸುತ್ತುವುದು, ನೆಗಡಿ, ಕೆಮ್ಮು ಅವರನ್ನುಆವರಿಸಿಕೊಳ್ಳುತ್ತಿತ್ತಂತೆ. ದೇಹಕ್ಕೆ ಸಿಗಬೇಕಾದ ಪೋಷಕಾಂಶ ದೊರಕದೇ ಜರ್ಝರಿತರಾಗಿದ್ದರಂತೆ. ಆಗ ಸಮತೋಲನದ ಡಯಟ್ ಕಡೆ ಮುಖ ತಿರುಗಿಸಿದ್ದಾರೆ. ಮೂರು ವರ್ಷಗಳಿಂದ ಅದನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದಾರೆ.`ಈಗ ನಾನು ಅನ್ನ, ಚಪಾತಿ, ಚಿಕನ್, ಮೊಟ್ಟೆಯ ಬಿಳಿ ಭಾಗ ತಿನ್ನುತ್ತೇನೆ. ಪ್ರತೀ ದಿನ ನಾಲ್ಕು ಲೀಟರ್ ನೀರು ಕುಡಿಯುತ್ತೇನೆ. ಪ್ರೊಟೀನ್ ಅಂಶ ಹೆಚ್ಚು ಇರುವ ತಿನಿಸುಗಳನ್ನು ಸೇವಿಸುತ್ತೇನೆ. ಅದರಿಂದ ನನ್ನ ದೇಹ ತೂಕ 68-72 ಕೆಜಿ ನಡುವೆ ಇರುತ್ತದೆ' ಎನ್ನುವ ಅವರಿಗೆ ಅನ್ನ ಬಿಡುವುದು ದಕ್ಷಿಣ ಭಾರತೀಯರಿಗೆ ಒಳ್ಳೆಯದಲ್ಲ ಎನಿಸಿದೆ. `ಅನ್ನವನ್ನು ಜೀರ್ಣಿಸಿಕೊಳ್ಳುವಂಥ ಜೀನ್ಸ್ ದಕ್ಷಿಣ ಭಾರತೀಯರಲ್ಲಿ ಇರುತ್ತದೆ. ಅದರಿಂದ ಅನ್ನ ತ್ಯಜಿಸಿದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ' ಎನ್ನುವುದು ಅವರ ಅನುಭವದ ಮಾತು.

ಈಗಂತೂ ಇಷ್ಟವಾಗಿದ್ದನ್ನೆಲ್ಲಾ ತಿನ್ನುವ ವಿಜಯ್, ಅದಕ್ಕೊಂದು ಮಿತಿಯನ್ನು ವಿಧಿಸಿಕೊಂಡಿದ್ದಾರೆ. ಐಸ್‌ಕ್ರೀಮ್, ಚಾಕೋಲೆಟ್, ಕೇಕ್ ತಿನ್ನದೇ ಇರುವುದು ತುಂಬಾ ಕಷ್ಟದ ಸಂಗತಿಯಂತೆ. `ಪ್ರತೀ ದಿನ ನನ್ನ ಮಗ ಶೌರ್ಯನಿಗೆ ಚಿಕ್ಕ ಚಾಕ್ಲೆಟ್. ನನಗೆ ದೊಡ್ಡ ಚಾಕ್ಲೆಟ್ ತೆಗೆದುಕೊಂಡು ಹೋಗುತ್ತೇನೆ. ಅವನೊಂದಿಗೆ ಕಿತ್ತಾಡಿಕೊಂಡು ಚಾಕೋಲೆಟ್ ತಿನ್ನುವುದೇ ಮಜಾ' ಎಂದು ನಗುವ ಅವರಿಗೆ ದೇಹ ಹಗುರವಾದ ಹಾಗೂ ಆರೋಗ್ಯಕರವಾದ ಅನುಭವ ಸಿಗುತ್ತಿದೆ.ಹೀಗೆ ಊಟದಲ್ಲಿ ಸಮತೋಲನ ಕಾಯ್ದುಕೊಂಡಿರುವ ಅವರು ನಿಯಮಿತ ವ್ಯಾಯಾಮ ರೂಢಿಸಿಕೊಂಡಿದ್ದಾರೆ. `ಪ್ರತೀ ದಿನ ಜಿಮ್‌ನಲ್ಲಿ 45 ನಿಮಿಷ ಕಾರ್ಡಿಯೋ ವ್ಯಾಯಾಮ ಮಾಡುತ್ತೇನೆ. ಅದಕ್ಕಿಂತ ಹೆಚ್ಚಾಗಿ ದಿನವಿಡೀ ಲವಲವಿಕೆ ಇರುತ್ತೇನೆ. ಇದಕ್ಕಿಂತ ಹೆಚ್ಚು ಏನನ್ನೂ ಮಾಡಬೇಕಾಗಿಲ್ಲ' ಎಂದು ನುಡಿಯುತ್ತಾರೆ.

ಚಿತ್ರ: ಕೆ.ಎನ್.ನಾಗೇಶ್ ಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry