ಬುಧವಾರ, ಅಕ್ಟೋಬರ್ 23, 2019
23 °C

ಆಹಾರ ಸುರಕ್ಷತೆ, ಗುಣಮಟ್ಟ ಕಾಯ್ದೆ ಜಾರಿ

Published:
Updated:

ದಾವಣಗೆರೆ: `ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006~ ಆ. 5, 2011ರಿಂದ ದೇಶದಾದ್ಯಂತ ಜಾರಿಗೆ ಬಂದಿದ್ದು, ಜಿಲ್ಲೆಯಲ್ಲೂ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುಭಾಷ್ ಎಸ್. ಪಟ್ಟಣಶೆಟ್ಟಿ ತಿಳಿಸಿದರು.



ಹಿಂದೆ ಇದ್ದ ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ ರದ್ದಾಗಿದ್ದು, ಅದರ ಬದಲು ಹೊಸ ಕಾಯ್ದೆ ಅನುಷ್ಠಾನಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರನ್ನು ಆಹಾರ ಸುರಕ್ಷತಾ ಆಯುಕ್ತರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.



ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನ್ಯಾಯ ನಿರ್ಣಯ ಅಧಿಕಾರಿಯಾಗಿ, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಯನ್ನು ಅಂಕಿತ ಅಧಿಕಾರಿಯಾಗಿ ನೇಮಿಸಲಾಗಿದ್ದು, ತಾಲ್ಲೂಕುಮಟ್ಟದಲ್ಲಿ ಇಬ್ಬರು ನೋಂದಣಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.



ಶಿಕ್ಷೆ ಏನು?: ಸಾರ್ವಜನಿಕರ ಹಿತ ಕಾಪಾಡುವ ಉದ್ದೇಶವನ್ನು ಈ ಕಾಯ್ದೆ ಒಳಗೊಂಡಿದ್ದು, ಉತ್ತಮ ಗುಣಮಟ್ಟದ, ಸುರಕ್ಷಿತ ಮತ್ತು ಶುಚಿಯಾದ ಆಹಾರವನ್ನು ಸಾರ್ವಜನಿಕರ ಸೇವನೆಗೆ ನೀಡುವುದು ಪ್ರತಿಯೊಬ್ಬ ಆಹಾರ ಪದಾರ್ಥ ಮಾರಾಟಗಾರರ ಕರ್ತವ್ಯ ಆಗಿರುತ್ತದೆ.



ವೈಜ್ಞಾನಿಕ ಗುಣಮಟ್ಟ ಆಧರಿಸಿ ಆಹಾರ ತಯಾರಿಕೆ, ದಾಸ್ತಾನು, ಪ್ಯಾಕಿಂಗ್, ಸಾಗಣೆ, ಹಂಚಿಕೆ, ಮಾರಾಟ ಮತ್ತು ಆಮದು ಮತ್ತಿತರ ವಿಚಾರದಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ನಿಯಮ ಉಲ್ಲಂಘಿಸಿದವರಿಗೆ ನ್ಯಾಯಾಲಯ ಕನಿಷ್ಠ 6 ತಿಂಗಳ ಶಿಕ್ಷೆ, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಅಸುರಕ್ಷಿತ ಆಹಾರದಿಂದ ತೊಂದರೆ ಅನುಭವಿಸಿದವರಿಗೆ ಸಂಬಂಧಿಸಿದ ಉದ್ದಿಮೆದಾರರು ರೂ. 2 ಲಕ್ಷದಿಂದ ರೂ. 5ಲಕ್ಷದವರೆಗೆ ಪರಿಹಾರ ನೀಡಬೇಕಿದೆ ಎಂದು ವಿವರ ನೀಡಿದರು.



ಯಾರು ಕಾಯ್ದೆ ವ್ಯಾಪ್ತಿಗೆ?: ಬೀದಿಬದಿ ಮಾರಾಟಗಾರರಿಂದ ಹಿಡಿದು ದೊಡ್ಡ ಆಹಾರ ಉದ್ದಿಮೆದಾರರು, ಹಾಲು ಉತ್ಪಾದಕರು, ಮಾಂಸ, ಸಸ್ಯಾಹಾರ, ಲಿಕ್ಕರ್ಸ್‌, ತಂಪು ಪಾನೀಯ, ನೀರು ಮಾರಾಟಗಾರರು ಅಕ್ಕಿ, ಸಕ್ಕರೆ, ಎಣ್ಣೆ, ಬೇಕರಿ ಪದಾರ್ಥ ತಯಾರಕರು, ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರು ಕಾಯ್ದೆ ವ್ಯಾಪ್ತಿಗೆ ಬರಲಿದ್ದು, ಅವರೆಲ್ಲರೂ ಪ್ರಸಕ್ತ ವರ್ಷದ ಆ. 4ರ ಒಳಗೆ ಆಹಾರ ಪರವಾನಗಿ, ಇಲ್ಲವೇ ನೋಂದಣಿ ಮಾಡಿಸಿಕೊಳ್ಳಬೇಕು.



ತಪ್ಪಿದಲ್ಲಿ ರೂ. 2 ಲಕ್ಷದಿಂದ ರೂ.5 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಹೋಟೆಲ್‌ಗಳಲ್ಲಿ ಐಎಸ್‌ಐ ಗುಣಮಟ್ಟ ಸೇರಿದಂತೆ ಯಾವುದೇ ರೀತಿಯ ಬಣ್ಣವನ್ನು ಆಹಾರಕ್ಕೆ ಉಪಯೋಗಿಸುವಂತಿಲ್ಲ. ಐಎಸ್‌ಐ ಮುದ್ರೆ ಇಲ್ಲದೇ ನೀರನ್ನೂ ಮಾರಾಟ ಮಾಡುವಂತಿಲ್ಲ ಎಂದರು.



ನೀವೂ ದೂರು ನೀಡಿ:  ಜಿಲ್ಲೆಯಲ್ಲಿ ಡಾ.ಜೆ.ಎಂ. ಸರೋಜಾಬಾಯಿ (ಮೊಬೈಲ್: 94498 43256) ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿ, ಜಗಳೂರು, ಹರಿಹರ, ಹರಪನಹಳ್ಳಿ ತಾಲ್ಲೂಕಿಗೆ ಕೊಟ್ರೇಶ್ (ಮೊಬೈಲ್: 97405 64714) ಹಾಗೂ ಚನ್ನಗಿರಿ, ಹೊನ್ನಾಳಿ ಹಾಗೂ ದಾವಣಗೆರೆ ತಾಲ್ಲೂಕಿಗೆ ಬಿ. ಚಂದ್ರಶೇಖರ್ (ಮೊಬೈಲ್: 94485 79261) ಅವರನ್ನು ಆಹಾರ ಸುರಕ್ಷತಾ ಮತ್ತು ನೋಂದಣಾಧಿಕಾರಿಯಾಗಿ ನಿಯೋಜಿಸಲಾಗಿದೆ. ಗ್ರಾಹಕರು ಈ ಅಧಿಕಾರಿಗಳಿಗೆ ದೂರು ನೀಡಬಹುದು.



ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಸ್. ವಿಜಯಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಸುಮಿತ್ರಾದೇವಿ ಉಪಸ್ಥಿತರಿದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)