ಭಾನುವಾರ, ಮೇ 29, 2022
22 °C

ಆಹಾರ ಹಣದುಬ್ಬರಎರಡಂಕಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಹಾರ ಹಣದುಬ್ಬರಎರಡಂಕಿಗೆ

ನವದೆಹಲಿ (ಪಿಟಿಐ): ಅಕ್ಟೋಬರ್ 8ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಆರು ತಿಂಗಳ ಹಿಂದಿನ ಗರಿಷ್ಠ ಮಟ್ಟವಾದ ಶೇ 10.60ಕ್ಕೆ ಏರಿಕೆಯಾಗಿದೆ.

ಹಣ್ಣು ಮತ್ತು ತರಕಾರಿಗಳ ಬೆಲೆಗಳು ಗಗನಕ್ಕೇರಿದ್ದು ಜನಸಾಮಾನ್ಯರ ಮೇಲಿನ ಹೊರೆ ಇನ್ನಷ್ಟು ಹೆಚ್ಚಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ವಾರ ಬಡ್ಡಿ ದರಗಳನ್ನು ಮತ್ತೆ ಪರಿಷ್ಕರಿಸಲಿರುವ ಸಾಧ್ಯತೆ ಇರುವುದರಿಂದ ಈ ಬೆಳವಣಿಗೆಯು ಬ್ಯಾಂಕ್ ಸಾಲ ಪಡೆಯುವವರಿಗೂ ಕಹಿ ಸುದ್ದಿಯಾಗಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಆಹಾರ ಹಣದುಬ್ಬರವು ಹಿಂದಿನ ವಾರ ಶೇ 9.32ರಷ್ಟಿತ್ತು. ಆರು ತಿಂಗಳ ಹಿಂದೆ ಏಪ್ರಿಲ್ 16ಕ್ಕೆ ಆಹಾರ ಹಣದುಬ್ಬರವು ಶೇ 11.25ರಷ್ಟು ದಾಖಲಾಗಿತ್ತು.

2010ರ ಇದೇ ಅವಧಿಯಲ್ಲಿನ ಶೇ 15.72ರಷ್ಟಕ್ಕೆ ಹೋಲಿಸಿದರೆ ಆಹಾರ ಹಣದುಬ್ಬರವು  ಕಡಿಮೆ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಇದೊಂದು ಕಳವಳಕಾರಿ ವಿದ್ಯಮಾನವಾಗಿದೆ. ಜನಸಾಮಾನ್ಯರು ತರಕಾರಿಗಳಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 18ರಷ್ಟು ಹೆಚ್ಚು ಬೆಲೆ ಪಾವತಿಸಬೇಕಾಗಿದೆ. ಹಣ್ಣುಗಳು ಶೇ 12ರಷ್ಟು, ಹಾಲು ಶೇ 11, ಮೊಟ್ಟೆ, ಮಾಂಸ ಮತ್ತು ಮೀನು ಶೇ 14ರಷ್ಟು ತುಟ್ಟಿಯಾಗಿವೆ.

ರಂಗರಾಜನ್ ಕಳವಳ: ಆಹಾರ ಪದಾರ್ಥಗಳು ದುಬಾರಿಯಾಗುತ್ತಿರುವ ಬಗ್ಗೆ ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಆಹಾರ ಹಣದುಬ್ಬರ ಕಡಿಮೆಯಾಗಲಿರುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತಮ ಮಳೆ ಮತ್ತು ಫಸಲಿನ ಸಕಾರಾತ್ಮಕ ಪರಿಣಾಮವು ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಕಂಡುಬರಲಿದೆ. ಆಗ ಆಹಾರ ಧಾನ್ಯಗಳ ಲಭ್ಯತೆ ಖಂಡಿತವಾಗಿಯೂ ಹೆಚ್ಚಲಿದ್ದು, ಬೆಲೆಗಳು ಇಳಿಯಲಿವೆ ಎಂದು ಹೇಳಿದ್ದಾರೆ.

ಆಹಾರೇತರ ಹಣದುಬ್ಬರವು ಎಣ್ಣೆ ಬೀಜ, ನಾರು ಮತ್ತು ಖನಿಜಗಳಲ್ಲೂ ಕಂಡು ಬಂದಿದ್ದು, ಬೆಲೆಗಳು ಶೇ 8.51ರಷ್ಟು ಹೆಚ್ಚಳಗೊಂಡಿದೆ.

ವಾಡಿಕೆಯ ಮುಂಗಾರು ಮತ್ತು ಉತ್ತಮ ಫಸಲಿನ ಹೊರತಾಗಿಯೂ ಆಹಾರ ಧಾನ್ಯಗಳ ಬೆಲೆಗಳು ಇಳಿಯದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕ್ರಿಸಿಲ್‌ನ ಮುಖ್ಯ ಆರ್ಥಿಕತಜ್ಞ ಡಿ. ಕೆ. ಜೋಷಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.