ಆಹಾರ ಹಣದುಬ್ಬರ ಏರಿಕೆ

7

ಆಹಾರ ಹಣದುಬ್ಬರ ಏರಿಕೆ

Published:
Updated:

ನವದೆಹಲಿ (ಪಿಟಿಐ): ತರಕಾರಿ, ಹಣ್ಣು, ಹಾಲು ಮತ್ತು ಪ್ರೋಟಿನ್ ಆಧಾರಿತ ಇತರ ಆಹಾರ ಪದಾರ್ಥಗಳ ಬೆಲೆಗಳು ಏರಿಕೆ ಕಂಡಿದ್ದರಿಂದ ಸೆಪ್ಟೆಂಬರ್ 24ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಶೇ 9.41ರಷ್ಟಾಗಿದೆ.ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಆಹಾರ ಹಣದುಬ್ಬರವು ಅದಕ್ಕೂ ಹಿಂದಿನ ವಾರ ಶೇ 9.13ರಷ್ಟಿತ್ತು. 2010ರಲ್ಲಿ ಈ ಅವಧಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಪ್ರಮಾಣವು ಶೇ 16.88ರಷ್ಟಿತ್ತು ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಪರಾಮರ್ಶೆಯಲ್ಲಿ ಇರುವ ವಾರದಲ್ಲಿ ತರಕಾರಿಗಳ ಬೆಲೆಗಳು ಕಳೆದ ವರ್ಷದ ಬೆಲೆಗಳಿಗೆ ಹೋಲಿಸಿದರೆ, ಶೇ 15ರಷ್ಟು, ಆಲೂಗಡ್ಡೆ, ಈರುಳ್ಳಿ ಮತ್ತು ಹಣ್ಣು ಕ್ರಮವಾಗಿ ಶೇ 9, ಶೇ 11 ಮತ್ತು  ಶೇ 12ರಷ್ಟು ದುಬಾರಿಗೊಂಡಿವೆ. ಹಾಲು ಶೇ 10.35, ಮೊಟ್ಟೆ, ಮಾಂಸ ಮತ್ತು ಮೀನು ಶೇ 10.33ರಷ್ಟು ಏರಿಕೆಯಾಗಿವೆ. ದ್ವಿದಳ ಧಾನ್ಯಗಳು ಶೇ 4.75, ಬೇಳೆಕಾಳು ಶೇ 7.54ರಷ್ಟು ತುಟ್ಟಿಯಾಗಿವೆ. ಆಹಾರ ಹಣದುಬ್ಬರವು ಕಳೆದ ಮೂರು ವಾರಗಳಲ್ಲಿ ತೀವ್ರವಾಗಿ ಏರಿಕೆ ಕಂಡಿದೆ. ಸೆಪ್ಟೆಂಬರ್ 10ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಇದು ಶೇ 8.84ರಷ್ಟಿತ್ತು.ಮುಖರ್ಜಿ ಪ್ರತಿಕ್ರಿಯೆ: ಆಹಾರ ಮತ್ತು ಇತರ ಅವಶ್ಯಕ ಸರಕುಗಳ ಹಣದುಬ್ಬರವು ಖಂಡಿತವಾಗಿಯೂ ಕಳವಳಕಾರಿ ವಿದ್ಯಮಾನವಾಗಿದೆ. ಬೆಲೆ ಏರಿಕೆ ಮಟ್ಟವನ್ನು ಸಾಧಾರಣ ಮಟ್ಟಕ್ಕೆ ಇಳಿಸಲು ಸರ್ಕಾರ  ಪ್ರಯತ್ನ ಮಾಡುತ್ತಲೇ ಇದೆ. ನಾನು ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಜತೆಗೂ  ನಿರಂತರ ಸಂಪರ್ಕದಲ್ಲಿ ಇದ್ದೇನೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.ಈ ವರ್ಷ ಮುಂಗಾರು ವಾಡಿಕೆಯಂತಿದ್ದು, ಬೆಲೆಗಳು ಇಳಿಕೆಯಾಗುವ ಬಗ್ಗೆ ಸರ್ಕಾರ ಈ ಮುಂಚೆಯೇ ನಿರೀಕ್ಷಿಸಿತ್ತು.

 ಆದರೆ, ಅಂತಹ ನಿರೀಕ್ಷೆಗಳು ಈಗ ತಲೆಕೆಳಗಾಗಿವೆ. 2010ರ ಜನವರಿ ತಿಂಗಳಿನಿಂದ ಆಹಾರ ಹಣದುಬ್ಬರವು ಯಾರ ಅಂಕೆಗೂ ನಿಲುಕದೇ ಏರುತ್ತಲೇ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry