ಬುಧವಾರ, ಏಪ್ರಿಲ್ 14, 2021
24 °C

ಆಹಾರ ಹಣದುಬ್ಬರ ಒಂದಂಕಿಗೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಆಹಾರ ಹಣದುಬ್ಬರವು ಒಂದಂಕಿಗೆ (ಶೇ 9.52) ಇಳಿದಿದೆ.

ಆಲೂಗಡ್ಡೆ, ಬೇಳೆಕಾಳು ಬೆಲೆ ಅಗ್ಗವಾಗಿರುವುದರಿಂದ ಆಹಾರ ಹಣದುಬ್ಬರ ಈ ಮಟ್ಟಕ್ಕೆ ಇಳಿದಿದೆ. ಹೆಚ್ಚುತ್ತಿರುವ ಬೆಲೆ ಏರಿಕೆ ತಗ್ಗಿಸಲು ಶ್ರಮಿಸುತ್ತಿರುವ ಸರ್ಕಾರಕ್ಕೆ ಇದು ಕೊಂಚ ಸಮಾಧಾನ ತರುವ ಸಂಗತಿಯಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಆಹಾರ ಹಣದುಬ್ಬರವು ಶೇ 10.39ರಿಂದ  ಶೇ 0.87ರಷ್ಟು ಕಡಿಮೆಯಾಗಿ ಶೇ 9.52ಕ್ಕೆ ಇಳಿದಿದೆ. ಕಳೆದ ವರ್ಷದ ಡಿಸೆಂಬರ್ 4ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಇದು ಶೇ 9.46ರಷ್ಟಿತ್ತು.ಆಹಾರ ಹಣದುಬ್ಬರ ಪರಿಶೀಲನೆಯ ವಾರದಲ್ಲಿ, ಗೋಧಿ ಶೇ 1.07, ಬೇಳೆಕಾಳುಗಳ ಬೆಲೆಗಳು- ವರ್ಷದಿಂದ ವರ್ಷಕ್ಕೆ ಶೇ 3.91ರಷ್ಟು ಅಗ್ಗವಾಗಿವೆ.  ಆದರೆ, ಇಳಿಯುತ್ತಿರುವ ಆಹಾರ ಹಣದುಬ್ಬರವು, ಭಾರತೀಯ ರಿಸರ್ವ್ ಬ್ಯಾಂಕ್ ಹಣದ ಹರಿವಿಗೆ ಕಡಿವಾಣ ವಿಧಿಸುವುದಕ್ಕೆ ಅಡ್ಡಿಪಡಿಸಲಾರದು. ಈಗಲೂ ಅನೇಕ ಅವಶ್ಯಕ ಸರಕುಗಳು ದುಬಾರಿಯಾಗಿವೆ. ಕಚ್ಚಾ ತೈಲದ ಬೆಲೆ ಮತ್ತು ಇತರ ಸರಕುಗಳ ಬೆಲೆಗಳು ಏರಗತಿಯಲ್ಲಿಯೇ ಇವೆ.ಒಂದಂಕಿಗೆ ಇಳಿದಿರುವ ಆಹಾರ ಹಣದುಬ್ಬರವು ಮಾರ್ಚ್ ತಿಂಗಳಾಂತ್ಯದ ಹೊತ್ತಿಗೆ ಶೇ 7ಕ್ಕೆ ಇಳಿಯಲಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಸಿ. ರಂಗರಾಜನ್ ಹೇಳಿದ್ದಾರೆ. ಹಣದುಬ್ಬರ ಒತ್ತಡವು ಈಗ ಆಹಾರ ಪದಾರ್ಥಗಳಿಂದ ಕಚ್ಚಾ ತೈಲದಂತಹ ಇತರ ಸರಕುಗಳಿಗೆ ವರ್ಗಾವಣೆಗೊಂಡಿದೆ. ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಅಶಾಂತಿಯ ಫಲವಾಗಿ ಕಚ್ಚಾ ತೈಲದ ಬೆಲೆಯು 2008ರ ಮಟ್ಟಕ್ಕೆ ತಲುಪಿದೆ.ಆರ್‌ಬಿಐ ತನ್ನ ಬಿಗಿಯಾದ ಹಣಕಾಸು ನೀತಿ  ಮುಂದುವರೆಸುವ ಸಾಧ್ಯತೆಗಳಿವೆ. ಈ ತಿಂಗಳ 17ರಂದು  ಪ್ರಕಟಿಸಲಿರುವ ಹಣಕಾಸು ನೀತಿಯ ಮಧ್ಯಂತರ ತ್ರೈಮಾಸಿಕ ಪರಾಮರ್ಶೆಯಲ್ಲಿ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೆ ಶೇ 0.25ರಷ್ಟು ಹೆಚ್ಚಿಸಬಹುದು ಎಂದು ಕ್ರೈಸಿಲ್‌ನ ಮುಖ್ಯ ಆರ್ಥಿಕ ತಜ್ಞ ಡಿ. ಕೆ. ಜೋಷಿ ಅಭಿಪ್ರಾಯಪಟ್ಟಿದ್ದಾರೆ.ಈ ಕುಸಿತವು ನಿರೀಕ್ಷಿತವಾಗಿದ್ದು, ಮುಂಬರುವ ವಾರಗಳಲ್ಲೂ ಇಳಿಯುತ್ತಲೇ ಸಾಗುವ ಸಾಧ್ಯತೆಗಳಿವೆ. ಇದು ಒಟ್ಟಾರೆ ಹಣದುಬ್ಬರ ಪರಿಸ್ಥಿತಿ ಮೇಲೆಯೂ ಪ್ರಭಾವ ಬೀರಲಿದೆ ಎಂದಿದ್ದಾರೆ. ಲಿಬಿಯಾದಲ್ಲಿ ದೇಶದ ಮುಖಂಡ ಮುಅಮ್ಮರ್ ಗಡಾಫಿ ಮತ್ತು ಅವರ ವಿರೋಧಿ ಬಣಗಳ ಮಧ್ಯೆ ನಡೆಯುತ್ತಿರುವ ಕದನದಿಂದಾಗಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗೆ ಏರಿಕೆ ಕಂಡಿದೆ.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.