ಆಹಾಹಾ...ಆರಾಮ ಆಟೊ...

7

ಆಹಾಹಾ...ಆರಾಮ ಆಟೊ...

Published:
Updated:

ಆಟೊ ಅಂದ್ರೆನೇ ರಾಮ ರಾಮ ಅನ್ನೋ ಹಂಗಾಗಿದೆ. ಕರೆದಲ್ಲಿ ಬರೊಲ್ಲ. ಬಂದ್ರೆ ಮೀಟರ್ ಸರಿ ಇರಲ್ಲ. ಮೀಟರ್‌ಸರಿ ಇದ್ರೆ, ಮೇಲೆ ಹಣ ಕೇಳದೇ ಇರೊಲ್ಲ.. ರಾಮ ರಾಮ...ಆದರೆ ಬೆಂಗಳೂರು ದಕ್ಷಿಣ ಜನರಿಗೆ ಮಾತ್ರ ರಾಮ... ರಾಮ... ಅಲ್ಲ, ಆಟೊ.. ಆಹಹ... ಆರಾಮ...!ಅಚ್ಚರಿಯಾಯಿತೆ? ಇಲ್ಲೊಂದು ಆರಾಮ ಆಟೊ ಸಂಸ್ಥೆ ಇದೆ. ತಿಂಗಳ ಲೆಕ್ಕದಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ಪ್ರಯಾಣಿಕರನ್ನು ಬಿಟ್ಟು, ಕರೆತರುವ ಸೇವೆಗೆ ಈ ಆಟೊ ಸಂಸ್ಥೆಯ ವ್ಯಾಪ್ತಿಗೆ ಬರುವ ಚಾಲಕರು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.ಜಯನಗರ, ಹನುಮಂತನಗರ, ಬನಶಂಕರಿ, ಬಿಟಿಎಂ ಲೇಔಟ್ ಮುಂತಾದೆಡೆ ಆರಾಮ ಆಟೊದ 50 ಜನ ಚಾಲಕರಿದ್ದಾರೆ. ಸುಮಾರು 450 ಜನರನ್ನು ಬಿಟ್ಟು, ಕರೆತರುವ ಕಾಯಕದಲ್ಲಿ ನಿರತರಾಗಿದ್ದಾರೆ.ಈ ಆರಾಮ ಆಟೊದ ರೂವಾರಿ ಪ್ರಸಾದ್. ಓದಿದ್ದು ಬಿಕಾಂ. ಮೊದಲು ಮಿನರ್ವ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆಟೊ ಕೂಡ ಓಡಿಸುತ್ತಿದ್ದರು. ಮಿಲ್‌ನಿಂದ ನಿವೃತ್ತಿ ಪಡೆದು ಸಂಪೂರ್ಣವಾಗಿ ಆಟೊ ಚಾಲಕರಾದರು.`ಆಗ ಶಾಲಾ ಮಕ್ಕಳನ್ನು ಮಾತ್ರ ಬಿಟ್ಟು, ಕರೆತರುವ ವ್ಯವಸ್ಥೆ ಇತ್ತು. ಆದರೆ, ಮಾಸಿಕ ವೇತನದಂತೆ ಸಂಬಳ ಬರುತ್ತಿರಲಿಲ್ಲ. ಆದಾಯ-ವೆಚ್ಚಗಳ ಲೆಕ್ಕವೇ ಸಿಗುತ್ತಿರಲಿಲ್ಲ. ಮನೆ ಖರ್ಚು ತೂಗಿಸುವುದು ಕಷ್ಟವಾಯಿತು. ಎಷ್ಟೇ ಕಷ್ಟಪಟ್ಟರೂ ಶಾಲೆಗೆ ಬಿಟ್ಟು-ಕರೆತರುವ ಮಕ್ಕಳ ಮನೆಯವರು ಕೊಡುತ್ತಿದ್ದ ಹಣವಷ್ಟೆ ಕೈಲಿ ಉಳಿಯುತ್ತಿತ್ತು.ಮೊಬೈಲ್ ಬಂದ ಹೊಸತು. ಒಂದು ಸಲ ಸುಮ್ಮನೆ ನೋಡುವ ಎಂದುಕೊಂಡೇ ಆಟೊ ಹಿಂದೆ `ಪಿಕಪ್-ಡ್ರಾಪ್ ವ್ಯವಸ್ಥೆ ಲಭ್ಯ. ಸಂಪರ್ಕಿಸಿ~ ಎಂದು ಬರೆಯಿಸಿಕೊಂಡರು. ಅದಕ್ಕೆ ಅಗಾಧವಾದ ಪ್ರತಿಕ್ರಿಯೆ ಬಂತು. ಕಾಲೇಜು, ಕಚೇರಿಗಳಿಗೂ ಬಿಟ್ಟು ಕರೆತರುವ ಕೆಲಸ ಮಾಡತೊಡಗಿದೆ. ಕೆಲವೊಮ್ಮೆ ಇದು ಕಷ್ಟ ಕೂಡ. ಬಾಡಿಗೆಗೆ ಇನ್ನೆಲ್ಲೋ ಹೋಗಿರ್ತೀವಿ. ಮತ್ತೆ ಅಷ್ಟು ದೂರ ಬರಬೇಕು.. ಇವೆಲ್ಲವೂ ಮೊದಲ ಹಂತದ ಅಡೆತಡೆಗಳಾಗಿದ್ದವು.ಆಗ ಸಮಯ ಪರಿಪಾಲನೆಗೆ ಮೊದಲ ಆದ್ಯತೆ ನೀಡಿದೆ. ಪಿಕಪ್ ಮಾಡುವ ಅವಧಿಯಲ್ಲಿ ದೂರದ ಬಾಡಿಗೆಗಳನ್ನು ನಿರಾಕರಿಸತೊಡಗಿದೆ. ಈ ರೀತಿಯ ಸಮಯ ಪರಿಪಾಲನೆಯಿಂದಾಗಿ ಮತ್ತಷ್ಟು ಕರೆಗಳು ಬರತೊಡಗಿದವು. ಆಗ ಸಮಾನಮನಸ್ಕ ಆಟೊ ಚಾಲಕರನ್ನು ಒಂದೆಡೆ ಸೇರಿಸಿದೆ. 50 ಜನ ಈ ವ್ಯವಸ್ಥೆಗೆ ಒಪ್ಪಿಕೊಂಡರು.ಆದರೆ, ಬಹುತೇಕರಿಗೆ ಆಟೊ ಬಾಡಿಗೆ ನೀಡಬೇಕಿತ್ತು. ಅದೂ ದಿನದ ಲೆಕ್ಕದ ಮೇಲೆ.

ಆಗ ನಾವೇ ಒಂದು ಸ್ವಸಹಾಯ ಗುಂಪು ರಚಿಸಿಕೊಂಡೆವು. 20 ಆಟೊ ಚಾಲಕರು ಒಂದೊಂದು ಸಾವಿರ ರೂಪಾಯಿ ಸೇರಿಸಿ, ಆಟೊದ ಡೌನ್ ಪೇಮೆಂಟ್ ವ್ಯವಸ್ಥೆ ಮಾಡಿದೆವು. ಮುಂದೆ ತಿಂಗಳ ಹಣದಲ್ಲಿ ಕಂತಿನ ಹಣವನ್ನು ಕಡಿತಗೊಳಿಸಿ, ಉಳಿದದ್ದನ್ನು ಅವರಿಗೆ ನೀಡಲಾರಂಭಿಸಿದೆವು. ಬಹುತೇಕರು ವರ್ಷ ಎರಡು ವರ್ಷಗಳಲ್ಲಿ ಆಟೊ ಚಾಲಕನಿಂದ ಮಾಲೀಕರಾದರು. ಅವರಿಗೂ ವಿಶ್ವಾಸ ಬಂತು.ಈಗ 50 ಜನರ ಗುಂಪಿನಲ್ಲಿ ಮಾಸಿಕ ವರಮಾನ 20-25 ಸಾವಿರ ರೂಪಾಯಿಗಳಷ್ಟು ಗಳಿಸುವವರಿದ್ದಾರೆ. ಕನಿಷ್ಠವೆಂದರೂ 10-15 ಸಾವಿರ ರೂಪಾಯಿ ತಿಂಗಳ ವರಮಾನವಾಗಿದೆ. ಉಳಿದ ಖರ್ಚನ್ನು ಬಾಡಿಗೆಯಿಂದ ನಿರ್ವಹಿಸಬಹುದಾಗಿದೆ...~

ಪ್ರಸಾದ್ ಆರಾಮ ಆಟೊದ ವಿಷಯವನ್ನು ಬಿಚ್ಚಿಟ್ಟದ್ದು ಹೀಗೆ.ಈ ವ್ಯವಸ್ಥೆ ಆರಂಭವಾಗಿ ಎರಡು ವರ್ಷಗಳಾಗಿವೆ. ಸದ್ಯ 450 ಗ್ರಾಹಕರಿಗೆ ಈ ಸೇವೆ ನೀಡತೊಡಗ್ದ್ದಿದಾರೆ. ಪ್ರಾಮಾಣಿಕತೆ ಹಾಗೂ ಶ್ರಮದ ದುಡಿಮೆಗೆ ಎಲ್ಲರೂ ಪಣ ತೊಟ್ಟಿದ್ದು, ತೀರ ಹೆಚ್ಚೆನಿಸುವಷ್ಟು ದುಡ್ಡು ಕೇಳುವುದಿಲ್ಲ. ಆದರೆ ಈವರೆಗೂ ಯಾರಿಗೂ ತೊಂದರೆ ಕೊಟ್ಟಿರುವ ದೂರುಗಳಿಲ್ಲ ಎಂದೂ ಪ್ರಸಾದ್ ಮಾತು ಸೇರಿಸುತ್ತಾರೆ.ಮೂಲತಃ ಬೆಂಗಳೂರಿನವರಾದ ಪ್ರಸಾದ್ ಬನಶಂಕರಿ ಮೂರನೆಯ ಹಂತದಲ್ಲಿದ್ದಾರೆ. ವಿದ್ಯಾಪೀಠದ ಬಳಿ ಸಣ್ಣ ಕಚೇರಿಯನ್ನೂ ಆರಂಭಿಸಿದ್ದಾರೆ. ಎಲ್ಲರೂ ಶಿಕ್ಷಿತರಾಗಬೇಕು. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ಹೇಳುವ ಪ್ರಸಾದ್ ಚ್ಟಞಚ್ಠಠಿಟ.್ಚಟಞ ಎಂಬ ವೆಬ್‌ತಾಣವನ್ನೂ ಹೊಂದಿದ್ದಾರೆ. ಆದರೆ ಅದನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ ಎಂಬ ಬೇಸರ ಅವರದ್ದು. ಮುಂಬರುವ ದಿನಗಳಲ್ಲಿ ತಾವೇ ಶಿಕ್ಷಿತ ಚಾಲಕರ ಒಡಗೂಡಿ, ಇದನ್ನು ನಿಭಾಯಿಸಬೇಕು ಎಂಬ ಉತ್ಸಾಹವನ್ನೂ ಹೊಂದಿದ್ದಾರೆ.`ಈಸಿ ಆಟೊ~ ಎಂಬ ವ್ಯವಸ್ಥೆಯನ್ನು ಈ ಹಿಂದೆ ತರಲಾಗಿತ್ತು. ಆದರೆ ಅದು ಸಮರ್ಪಕ ನಿರ್ವಹಣೆ ಮತ್ತು ಯೋಜನೆ ಇಲ್ಲದೇ ನಿಂತುಹೋಯಿತು. ಅದರಿಂದ ಕಲಿತ ಪಾಠವೆಂದರೆ ನಿಯಮಿತ ಹಾಗೂ ನಿಗದಿತ ವೇಳೆಯ ಖಾತರಿ ಸೇವೆಯನ್ನು ಮಾತ್ರ ನೆಚ್ಚಬೇಕು ಎನಿಸಿದ್ದು. ಆ ನಂಬಿಕೆಯ ಎಳೆಯನ್ನೇ ಹಿಡಿದು ಈ ಸೇವಾ ವ್ಯವಸ್ಥೆಯನ್ನು ಬೆಳೆಸಿದ್ದೇವೆ ಎನ್ನುತ್ತಾರೆ ಪ್ರಸಾದ್.ಯೋಜನೆ, ಕಾರ್ಯ ನಿರ್ವಹಣೆ, ಕ್ರೀಯಾಶೀಲ ಮನಸ್ಸು ಇದ್ದರೆ ಆಟೊ ಚಾಲಕರು ಮಾಲೀಕರಾಗಬಹುದು. ಸಣ್ಣದೊಂದು ಉದ್ಯಮವನ್ನೇ ಆರಂಭಿಸಬಹುದು ಎನ್ನುವುದನ್ನು ಪ್ರಸಾದ್ ಸಾಬೀತುಪಡಿಸಿದ್ದಾರೆ. ಸಾಮಾನ್ಯರಲ್ಲಿಯೇ ಸಾಧಕರು ಇವರು.

ಹೆಚ್ಚಿನ ಮಾಹಿತಿಗೆ: 98861 62289/ 98804 62289

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry