ಆಹಾ ಮತ್ಸ್ಯ ಖಾದ್ಯ!

7

ಆಹಾ ಮತ್ಸ್ಯ ಖಾದ್ಯ!

Published:
Updated:

‘ನನ್ನಾಕೆ ಈಗ ಎಂಟು ತಿಂಗಳ ತುಂಬು ಗರ್ಭಿಣಿ. ಆಕೆಗೆ ಕೆಲ ದಿನಗಳಿಂದ ಬಂಗುಡೆ ಮೀನನ್ನು ತಿನ್ನಬೇಕೆಂಬ ಅದಮ್ಯ ಬಯಕೆ ಉಂಟಾಗಿತ್ತು. ಬೆಂಗಳೂರು ತುಂಬಾ ಸುತ್ತಿದರೂ ಎಲ್ಲಿಯೂ ಬಂಗುಡೆ ಸಿಕ್ಕಿರಲಿಲ್ಲ. ನನ್ನ ಅದೃಷ್ಟವೆಂಬಂತೆ ಬೆಂಗಳೂರಿನಲ್ಲಿ ಮತ್ಸ್ಯ ಮೇಳ ಶುರುವಾಗಿದೆ. ಬಂಗುಡೆ ಇಲ್ಲಿ ಖಂಡಿತ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ ಅರಮನೆ ಮೈದಾನಕ್ಕೆ ಇಬ್ಬರೂ ಬಂದೆವು. ನಮ್ಮ ನಿರೀಕ್ಷೆ ಸುಳ್ಳಾಗಲಿಲ್ಲ. ರುಚಿ ಹಾಗೂ ಶುಚಿಯಾದ ಬಂಗುಡೆ ಮೀನನ್ನು ಆಕೆಗೆ ನನ್ನ ಕೈಯಾರೆ ತಿನ್ನಿಸಿ ಬಸುರಿ ಬಯಕೆ ಈಡೇರಿಸಿದೆ’ ಎನ್ನುತ್ತಾ ಸಮಾಧಾನದ ನಿಟ್ಟುಸಿರು ಬಿಟ್ಟರು ಪತಿ ಉಮೇಶ್.ಆಗ, ಬಂಗುಡೆ ಮೀನು ತಿನ್ನುವ ತನ್ನ ಆಸೆ ಪೂರೈಸಿದ ಪತಿ ಉಮೇಶ್ ಅವರತ್ತ ಕಿರುಗಣ್ಣಿನಲ್ಲಿ ಪ್ರೀತಿ ತುಂಬಿದ ಒಂದು ಮೆಚ್ಚುಗೆಯ ನೋಟ ಬಿಸಾಕಿದರು ಅವರ ಪತ್ನಿ ಶೀಲಾ.ಹೌದು. ಅರಮನೆ ಮೈದಾನದಲ್ಲಿ ಸೋಮವಾರ (ಫೆ.21)ಮುಕ್ತಾಯಗೊಳ್ಳಲಿರುವ ಮತ್ಸ್ಯ ಮೇಳದಲ್ಲಿ ಮೀನಿನ ವೈವಿಧ್ಯಮಯ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ. ಹಲವರ ಮನೋಭಿಲಾಶೆಗಳನ್ನು ಈಡೇರಿಸುತ್ತಿವೆ.ಕಡಲ ಮೀನಿನ ಸೂಪ್, ಅಂಜಲ್ ಪ್ರೈ, ಬಂಗುಡೆ, ಸೀಗಡಿ, ಕಬಾಬ್,  ಫಿಶ್ ಕಟ್ಲೆಟ್, ಫ್ರೈಡ್ ಟಿನ್ನಿ ಪ್ರಾನ್ಸ್, ಸಮೋಸಾ, ಫಿಶ್ ಸ್ಟ್ರಿಂಗ್ ರೋಲ್, ನೆತಿಲಿ ಪ್ರೈ, ಶೀರ್ ಫಿಶ್ ಪ್ರೈ, ಜಂಬೋ ಪ್ರಾನ್ಸ್ ಪ್ರೈ, ಚಿಲ್ಲಿ ಫಿಶ್, ಕ್ರ್ಯಾಬ್ ಮಸಾಲಾ, ಫಿಶ್ ಬಿರಿಯಾನಿ, ಪ್ರಾನ್ಸ್ ಬಿರಿಯಾನಿ ಹೀಗೆ ನೂರಕ್ಕೂ ಅಧಿಕ ಬಗೆಯ ಮೀನಿನ ಖಾದ್ಯಗಳು ಇಲ್ಲಿ ನಾಲಿಗೆ ಚಪಲ ತೀರಿಸುತ್ತಿವೆ.ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳದಲ್ಲಿ ಕಡಲ ಮೀನಿನ ಸವಿಯನ್ನು ನಾಲ್ಕು ದಿನಗಳ ಕಾಲ ಮನಸಾರೆ ಅನುಭವಿಸಬಹುದು. ಅದು ವೀಕೆಂಡ್‌ನಲ್ಲಿ ಮೇಳ ಪ್ರಾರಂಭಗೊಂಡಿರುವುದು ನಗರವಾಸಿಗಳಿಗೆ ಒಂದು ಬೆನಿಫಿಟ್.ಮೇಳದಲ್ಲಿ ಮೀನಿನ ಖಾದ್ಯ ಸವಿಯುವುದು ಒಂದಂಶವಾದರೆ, ಮನೆಯನ್ನು ಅಂದಗಾಣಿಸುವ ಮನಮೋಹಕ ಫಿಶ್ ಅಕ್ವೇರಿಯಂಗಳು ಸಹ ಇವೆ. ಎಲ್ಲ ವರ್ಗದವ ರಿಗೂ ಕೈಗೆಟುಕುವ ದರದಲ್ಲಿ ಅಕ್ವೇರಿಯಂಗಳು, ಆಲಂಕಾರಿಕ ಮೀನುಗಳು ದೊರಕುತ್ತವೆ.ಮಾಹಿತಿ, ಮನರಂಜನೆ: ಮತ್ಸ್ಯ ಮೇಳದಲ್ಲಿ ಭರಪೂರ ಮಾಹಿತಿ ಮತ್ತು ಮನರಂಜನೆ ಎರಡೂ ಲಭ್ಯ. ಮೇಳದಲ್ಲಿ ಮೀನುಗಾರರು, ಮೀನು ಕೃಷಿಕರು, ಮೀನು ಹವ್ಯಾಸಿಗಳು, ಮೀನುಗಾರಿಕೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದಾರೆ. ಮೀನುಗಾರಿಕೆಗೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ತಾಂತ್ರಿಕ ಅವಿಷ್ಕಾರಗಳ ಅನಾವರಣ, ಜಲಕೃಷಿ ಸಲಕರಣೆಗಳು ಮತ್ತು ಉತ್ಪನ್ನಗಳ ಪ್ರದರ್ಶನ, ಆಲಂಕಾರಿಕ ಮೀನುಗಳ ಮಾರಾಟ ಮತ್ತು ಪ್ರದರ್ಶನ ಹಾಗೂ ತಾಜಾ ಮೀನು ಮಾರಾಟ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.ಒತ್ತಡದಲ್ಲಿ ಜೀವನ ಕಳೆಯುವ ಮೆಟ್ರೊ ವಾಸಿಗಳು ವಾರಾಂತ್ಯದಲ್ಲಿ ಒಂದು ಅದ್ಭುತ ರಿಲೀಫ್ ಪಡೆಯಲು ಮತ್ಸ್ಯ ಮೇಳ ಒಂದು ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ! ಎಲ್ಲ ಒತ್ತಡಗಳನ್ನು ಬದಿಗೊತ್ತಿ ಮೀನಿನ ಖಾದ್ಯಗಳ  ಮಧುರಾನುಭೂತಿಯನ್ನು ಅನುಭವಿಸಿ. 


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry