ಆಹಾ... ಮಸಾಲೆ ದೋಸೆ

7

ಆಹಾ... ಮಸಾಲೆ ದೋಸೆ

Published:
Updated:
ಆಹಾ... ಮಸಾಲೆ ದೋಸೆ

ಕಪ್ಪು ಬಣ್ಣದ ಶರ್ಟ್, ಗಾಗಲ್, ಜತೆಗೆ ನೀಲಿ ಬಣ್ಣದ ಪ್ಯಾಂಟ್ ಧರಿಸಿ ನಟ ಶಾಮಕ್ ದಾವರ್ ಒಂದು ತಾಸು ತಡವಾಗಿ ಬಂದಾಗ ತಾಸುಗಟ್ಟಲೆ ಕಾದು ಕುಳಿತಿದ್ದ ವಿಶೇಷ ಮಕ್ಕಳ ಮುಖದಲ್ಲಿ ಸಂಭ್ರಮದ ಗೆರೆ ಮೂಡಿತು. ಕೆಲವು ಮಕ್ಕಳು ಶಾಮಕ್ ಜೊತೆ ಫೋಟೋ ತೆಗೆಸಿಕೊಳ್ಳುವ ಆತುರದಲ್ಲಿದ್ದರೆ, ಇನ್ನು ಕೆಲವು ಮಕ್ಕಳಿಗೆ ಆಟೋಗ್ರಾಫ್ ಪಡೆದುಕೊಳ್ಳುವ ಕಾತರ.

ಇವು ಕಂಡು ಬಂದಿದ್ದು ಮಲ್ಲೇಶ್ವರದ ರೇಣುಕಾಂಬ ಥಿಯೇಟರ್‌ನಲ್ಲಿ `ಪ್ರಸಾದ್~ ಸಿನಿಮಾದ ಪ್ರಿವ್ಯೆನಲ್ಲಿ. `ಝೂಟ್ ಬೋಲೆ ಕವ್ವಾ ಕಾಟೆ~ ಚಿತ್ರದ ಮೂಲಕ ಗಮನ ಸೆಳೆದ ಶಾಮಕ್ ಹಲವಾರು ಸಿನಿಮಾ, ಮ್ಯೂಸಿಕ್ ಅಲ್ಬಂಗಳಿಗೆ ಕೊರಿಯಾಗ್ರಫಿ ಮಾಡಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು `ಮೆಟ್ರೊ~ ಜೊತೆ ಹಂಚಿಕೊಂಡ ಮಾತುಗಳಿವು.

ಪ್ರಥಮ ಬಾರಿಗೆ ಕನ್ನಡದ ಪ್ರಸಾದ್ ಸಿನಿಮಾದಲ್ಲಿ ಕಾಣಿಸಿಕೊಂಡ್ದ್ದಿದೀರಿ. ಅದರ ಬಗ್ಗೆ ಹೇಳಿ?

`ಪ್ರಸಾದ್~ ವೈಯಕ್ತಿಕವಾಗಿ ನನಗೆ ತುಂಬಾ ಖುಷಿ ಕೊಟ್ಟ ಚಿತ್ರ. ಈ ಸಿನಿಮಾದಲ್ಲಿ ಬರುವ ಪಾತ್ರ ನಿಜ ಜೀವನಕ್ಕೆ ಹತ್ತಿರವಾದದ್ದು. ಈ ಸಿನಿಮಾದ ಪ್ರಮುಖ ಪಾತ್ರ ಪ್ರಸಾದ್ ಒಬ್ಬ ಕಿವುಡ ಮತ್ತು ಮೂಗ. ತಂದೆಯ ತಾತ್ಸಾರದ ನಡುವೆ ಬದುಕುವ ಆತನಲ್ಲಿನ ವಿಶೇಷ ಶಕ್ತಿಯನ್ನು ಗುರುತಿಸುವ ತಾಯಿ ಅವನನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಚಿತ್ರದ ಕಥಾವಸ್ತು. ನಾನು ವಿಶೇಷ ಮಕ್ಕಳೊಂದಿಗೆ ಹಲವಾರು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನಿರ್ದೇಶಕರು ಕಥೆ ಹೇಳಿದಾಗ ಒಪ್ಪಿಕೊಂಡೆ.

ವಿಶೇಷ ಮಕ್ಕಳಿಂದ ಏನು ಕಲಿತಿರಿ?

ಈ ಮಕ್ಕಳಿಂದ ತುಂಬಾ ಕಲಿತಿದ್ದೀನಿ. ಈ ಮಕ್ಕಳಲ್ಲಿರುವ ತಾಳ್ಮೆ ಮತ್ತು ಹೊಸತನ್ನು ಆಸಕ್ತಿಯಿಂದ ಕಲಿಯುವಂತಹ ಗುಣ, ಈ ಮಕ್ಕಳ ಜೊತೆ ಕೆಲಸ ಮಾಡುತ್ತಾ ನನ್ನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಪ್ರಸಾದ್ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಜೊತೆ ಒಡನಾಟ ಹೇಗಿತ್ತು?

ತುಂಬಾ ಚೆನ್ನಾಗಿತ್ತು. ಅವರಿಂದ ಸಾಕಷ್ಟು ಕಲಿತೆ. ಅಷ್ಟು ದೊಡ್ಡ ನಟನಾಗಿದ್ದರೂ ಅಹಂಕಾರ ಇಲ್ಲ, ತುಂಬಾ ತಾಳ್ಮೆ ಮತ್ತು ಎಲ್ಲವನ್ನೂ ಆಸಕ್ತಿಯಿಂದ ಕಲಿಯುವಂತಹ ಅವರ ಗುಣ ಇಷ್ಟವಾಯಿತು.

ಬಾಲಿವುಡ್ ಕೊರಿಯಾಗ್ರಫಿಯಲ್ಲಿ ಸರೋಜ್ ಖಾನ್ ಮತ್ತು ಫರ‌್ಹಾನ್ ಹೆಚ್ಚು ಜನಪ್ರಿಯರು. ಈ ಮಹಿಳಾ ಪ್ರಾಧಾನ್ಯ ಏಕೆ?

(ನಗು) ಹೌದು. ಒಳ್ಳೆಯದು. ಯಾಕೆಂದರೆ, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರು ಕೊರಿಯಾಗ್ರಫಿ ಮಾಡಿರುವ ಸಿನಿಮಾಗಳು ಪುರುಷರ ನೃತ್ಯ ಸಂಯೋಜನೆಯಷ್ಟೇ ಹೆಸರು ಮಾಡುತ್ತಿರುವುದು ಒಳ್ಳೆಯದರ ಸಂಕೇತ.

ಬೆಂಗಳೂರೆಂದರೆ ಏನನ್ನಿಸುತ್ತದೆ? ಇಲ್ಲಿನ ಯಾವ ತಿಂಡಿ ನಿಮಗೆ ತುಂಬಾ ಇಷ್ಟ?

ದಕ್ಷಿಣ ಭಾರತೀಯರನ್ನು ಕಂಡರೆ ನನಗೆ ತುಂಬಾ ಸರಳಾ ಜೀವಿಗಳು, ಕಷ್ಟ ಸಹಿಷ್ಣುಗಳು, ಆತ್ಮಿಯರು ಎನ್ನಿಸುತ್ತದೆ. ಬೆಂಗಳೂರು ಎಂದರೆ ನನಗೆ ನೆನಪಾಗುವುದು ಮಸಾಲೆ ದೋಸೆ. ಅದೇ ಇಷ್ಟ. ಆಹಾ, ಮಸಾಲೆ ದೋಸೆ!

ಹಿಂದಿಗಿಂತ ಈಗ ನೃತ್ಯದ ಬಗೆಗಳು ಹೆಚ್ಚಾಗಿವೆ. ಈ ವಿಷಯದಲ್ಲಿ ನಿಮ್ಮನ್ನು ನೀವು ಹೇಗೆ ಅಪ್‌ಡೇಟ್ ಮಾಡಿಕೊಳ್ಳಿವಿರಿ?

ನನಗೆ ಒಳ್ಳೆಯದು ಅನ್ನಿಸಿದರೆ ಎಲ್ಲರಿಂದ ಕಲಿಯುತ್ತೀನಿ. ಆದರೆ ಶೇ 80ರಷ್ಟು ನನ್ನ ನೃತ್ಯದ ಪಟ್ಟುಗಳನ್ನು ನಕಲು ಮಾಡುವ ಕೆಲವು ಗುರುಗಳನ್ನು ಕಂಡಾಗ ಬೇಸರವಾಗುತ್ತದೆ.

ರಿಯಾಲಿಟಿ ಶೋನಲ್ಲಿ ಬರುವ ಯುವ ನೃತ್ಯಗಾರರ ಬಗ್ಗೆ ಹೇಳಿ?

ಎಷ್ಟೋ ಸಲ ನನಗೆ ಅಘಾತವಾಗುತ್ತದೆ. ನನ್ನದೇ ನೃತ್ಯ ಶೈಲಿಯನ್ನು `ಯು ಟ್ಯೂಬ್~ನಲ್ಲಿ ನಕಲು ಮಾಡಿ, ತಾವೇ ಹೊಸ ಶೈಲಿ ಕೊಟ್ಟವರಂತೆ ಬಿಂಬಿಸುತ್ತಾರೆ. ನಕಲು ಮಾಡುವುದು ತಪ್ಪಲ್ಲ, ಆದರೆ ಸ್ವಲ್ಪ ಸ್ವಂತಿಕೆ ಉಳಿಸಿಕೊಳ್ಳುವ ಅಗತ್ಯವಿದೆ.

ಸದ್ಯಕ್ಕೆ ಯಾವ ಪ್ರಾಜೆಕ್ಟ್ಸ್ ಮುಗಿಸಿದ್ದಿರಾ?

ಜೀ ಸಿನಿಮಾ, ಅಪ್ಸರಾ ಆವಾರ್ಡ್, ಮಿಷನ್ ಇಂಪಾಸಿಬಲ್‌ಗೆ (ಟಾಮ್ ಕ್ರೂಸ್ ನಾಯಕತ್ವದ ಚಿತ್ರ) ಕೊರಿಯಾಗ್ರಫಿ  ಮಾಡಿದ್ದಿನಿ.

ಮಣಿರತ್ನಂ ಅವರ `ರೋಬೋ~ ಸಿನಿಮಾದ ಕೊರಿಯಾಗ್ರಫಿ ನಿರಾಕರಿಸಲು ಕಾರಣ?

ಆ ಸಂದರ್ಭದಲ್ಲಿ ನಾನು ತುಂಬಾ ಬ್ಯುಸಿಯಾಗಿದ್ದೆ. ಆದಷ್ಟೂ ವಾಸ್ತವಕ್ಕೆ ಹತ್ತಿರವಿರುವ ಸಿನಿಮಾಗಳಲ್ಲಿ ಅಭಿನಯಿಸಲು ಮತ್ತು ಕೊರಿಯಾಗ್ರಫಿ ಮಾಡಲು ನನಗಿಷ್ಟ.

ಮುಂದಿನ ಯೋಜನೆಗಳು?

ನನ್ನದೇ ಮ್ಯೂಸಿಕ್ ಅಲ್ಬಂ ಬರುತ್ತಿದೆ. ಇದರ ಜೊತೆಗೆ ದಕ್ಷಿಣ ಭಾರತದಿಂದ ಇನ್ನು ಒಳ್ಳೆಯ ಅವಕಾಶಗಳು ಬಂದರೆ ನಟಿಸಲು ಮತ್ತು ಕೊರಿಯಾಗ್ರಫಿ ಮಾಡಲು ಸಿದ್ಧನ್ದ್ದಿದೇನೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry