ಆಹಾ... ಹಿಮನಗರಿ

7

ಆಹಾ... ಹಿಮನಗರಿ

Published:
Updated:
ಆಹಾ... ಹಿಮನಗರಿ

ನಿತ್ಯದ ಜಂಜಾಟಗಳಿಂದ ಬಳಲಿದ ತನುಮನಕ್ಕೆ ನವಚೈತನ್ಯ ತುಂಬುವ ಅವಕಾಶಕ್ಕಾಗಿ ಎದುರುನೋಡುತ್ತಿದ್ದೀರಾ?  ಹಾಗಿದ್ದರೆ ಬನ್ನಿ ನಮ್ಮಲ್ಲಿ ಹಿಮಚಾರಣ ಮಾಡಿ ಎಂದು ಕೈಬೀಸಿ ಕರೆಯುತ್ತಿದೆ ನಗರದಲ್ಲಿ ಸೃಷ್ಟಿಯಾಗಿರುವ ಹಿಮಾಲಯ...!ಎತ್ತ ಕಣ್ಣು ಹಾಯಿಸಿದರೂ ಹಾಲ್ನೊರೆಯಂತಹ ಹಿಮರಾಶಿ. ಒಂದು ಮುಷ್ಟಿ ಎತ್ತಿ ತಿನ್ನಬೇಕು, ಆಡಿ ತಣಿಯಬೇಕು ಎಂಬ ಬಯಕೆ ಮೂಡುತ್ತದೆ. ಹಿಮಪರ್ವತಗಳ ಮೇಲಿಟ್ಟಿದ್ದ ಹಿಮರಾಣಿಯ ಚಿತ್ರ ಜಾರಿ ಬೀಳುತ್ತದೇನೊ ಎಂದು ಭಾಸವಾಗುತ್ತದೆ.ಹಿಮದ ಮೇಲೆ ಕುಳಿತು ಜಾರುಬಂಡಿಯಾಡುತ್ತಾ ಮೋಜು ಮಾಡುವ ಮನಸ್ಸಾಗುತ್ತದೆ. ಬಿಸಿಲನ್ನೇ ಕುಡಿದು ಬೆವರಿಗೆ ಒದ್ದೆಮುದ್ದೆಯಾಗುತ್ತಿರುವಾಗ ಹಿಮದ ಮಾತೆಲ್ಲಿಂದ ಅನ್ನುತ್ತೀರಾ?ಜೆ.ಸಿ.ನಗರದ ಟಿವಿ ಟವರ್ ಬಳಿಯ ಮೈದಾನದಲ್ಲಿರುವ ಫನ್ ವರ್ಲ್ಡ್‌ನಲ್ಲಿ ಈ ಸ್ನೋ ಸಿಟಿ ತಲೆಯೆತ್ತಿದೆ.ಹಾಗಂತ ಇದು ಖಂಡಿತಾ ಹಿಮಾಲಯ ಅಲ್ಲ  ಮಾರಾಯ್ರೆ. ಥೇಟ್ ಹಿಮಾಲಯದಂತೆಯೇ ಕಾಣುವ ಸ್ನೋ ಸಿಟಿ ಅಷ್ಟೇ.ಹಿಮಾಲಯದ ಸೌಂದರ್ಯ  ಸವಿಯುವ, ಆಡಿ ತಣಿಯುವ ಮೋಜಿಗಾಗಿ ಈ ಕೃತಕ ಹಿಮಾಲಯ ನಿರ್ಮಿಸಲಾಗಿದೆ ಎನ್ನುವುದು ಆಯೋಜಕರ ಮಾತು.

ಒಳಗೆ ಹೆಜ್ಜೆ ಇಡುತ್ತಿದ್ದಂತೆ  ಸ್ನೋ ಫಾಲ್ ಮೈಮೇಲೆ ಬಿದ್ದು ಅರೆಕ್ಷಣ ರೋಮಾಂಚನಗೊಳಿಸುತ್ತವೆ. ಒಳಹೋಗುವ ಮುನ್ನ ಜ್ಯಾಕೆಟ್, ಗ್ಲೌಸ್, ಶೂಸ್, ಹ್ಯಾಟ್ ಹಾಕಿಕೊಳ್ಳದಿದ್ರೆ ಮೈ ಕೊರೆಯುವ ಚಳಿಯಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ.ಹಿಮನಗರದಲ್ಲಿ 33 ಅಡಿ ಎತ್ತರವಿರುವ 12,500 ಚದರ ಅಡಿ ವಿಸ್ತೀರ್ಣದ ಒಳಾಂಗಣವಿದ್ದು, ಶೂನ್ಯಕ್ಕಿಂತ ಕಡಿಮೆ ತಾಪಮಾನದ ಹಿಮಗೋಪುರವನ್ನು ರೂಪಿಸಲಾಗಿದೆ. ಇಡೀ ಹಿಮಪ್ರದೇಶವನ್ನು ಶುದ್ಧವಾದ ಕುಡಿಯುವ ನೀರು, ಹಾಗೂ ಗಾಳಿಯಿಂದ ರಚಿಸಲಾಗಿದೆ. ಈ ಹಿಮವನ್ನು ತಿನ್ನಲೂಬಹುದು, ಕುಡಿಯಲುಬಹುದು ಎನ್ನುತ್ತಾರೆ ನಿರ್ದೇಶಕ ರಾಜ.ಹಿಮಾಲಯಕ್ಕೆ ಎಲ್ಲರಿಗೂ ಹೋಗುವುದಕ್ಕೆ ಆಗುವುದಿಲ್ಲ. ಹಾಗಾಗಿ ಹಿಮಾಲಯದಲ್ಲಿ ಸಿಗುವ ಖುಷಿಯನ್ನು ಇಲ್ಲಿ ನಗರದ ಜನರೂ ಅನುಭವಿಸಲಿ ಎಂದು ಸ್ನೋ ಸಿಟಿಯನ್ನು ತಯಾರಿಸಿದ್ದೇವೆ ಎನ್ನುತ್ತಾರವರು.ಹಿಮದಲ್ಲಿ ಆಡಲಿಕ್ಕೆಂದೇ ತರಾವರಿ ಆಟಗಳನ್ನು ರೂಪಿಸಲಾಗಿದೆ. ಸ್ನೋ ಬಾಲಿಂಗ್, ಹಿಮಪಾತ, ಹಿಮಶಿಖರಾರೋಹಣ, ಹಿಮದ ಮೇಲೆ ಜಾರುವುದು, ಬ್ಯಾಸ್ಕೆಟ್ ಬಾಲ್, ಹಿಮ ನೃತ್ಯ ಹೀಗೆ ವಿವಿಧ ಆಟಗಳು ಮನರಂಜನೆಗೆಂದೇ ಇಲ್ಲಿವೆ. ಇವೆಲ್ಲವನ್ನೂ ಆಡಿ ನಕ್ಕು ನಲಿಯುತ್ತಾ ಹೊರಗೆ ಬಂದರೆ ಖಂಡಿತಾ ಹಿಮಾಲಯಚಾರಣದ ಅನುಭವವಾಗುತ್ತದೆ ಎನ್ನುತ್ತಾರೆ ರಾಜ.ಜನರ ದೇಹಸ್ಥಿತಿಗೆ ಅನುಗುಣವಾಗಿ ವಿವಿಧ ತಾಪಮಾನಗಳಿರುವ ಲೌಂಜ್‌ಗಳ ಮೂಲಕ ಸ್ಥಳಕ್ಕೆ ಕರೆದೊಯ್ಯಲಾಗುವುದು. ಅಲ್ಲದೇ ಪ್ರವಾಸಿಗರಿಗಾಗಿ ಓವರ್‌ಕೋಟ್, ಟೋಪಿ, ಕೈಗವಸು, ಬೂಟುಗಳನ್ನು ಉಚಿತವಾಗಿ ನೀಡುತ್ತಾರೆ, ಹಿಂತಿರುಗುವಾಗ ವಾಪಸ್ಸು ನೀಡಬೇಕು ಎಂಬ ಷರತ್ತಿನೊಂದಿಗೆ!ವಾರದ ಎಲ್ಲ ದಿನಗಳಲ್ಲೂ ಬೆಳಿಗ್ಗೆ 10.30ರಿಂದ ರಾತ್ರಿ 9.30ರವರೆಗೆ ಸ್ನೋ ಸಿಟಿ ತೆರೆದಿರುತ್ತದೆ. ಪ್ರವೇಶ ಶುಲ್ಕ ತಲಾ ರೂ.390, ವಾರಾಂತ್ಯದಲ್ಲಿ ರೂ.490.

ದಿನಕ್ಕೆ ಒಂಬತ್ತು ಸೆಷನ್ ಇರುತ್ತದೆ. ಪ್ರತಿ ಸೆಷನ್ ಅವಧಿ 45 ನಿಮಿಷ. ಸಮಯ ಬೆಳಿಗ್ಗೆ 10.30ರಿಂದ ರಾತ್ರಿ 8.30. ಎರಡು ಸೆಷನ್‌ಗಳ ನಡುವೆ 30 ನಿಮಿಷಗಳ ವಿರಾಮ.

ಹಾಗಿದ್ದರೆ ನೀವೂ ಸ್ನೋ ಸಿಟಿಯಲ್ಲಿ ಆಡಿ ನಕ್ಕು ನಲಿಯಿರಿ...

 

* ಶೀತ ಸಹಿಸಲಾಗದವರು, ಅದರಿಂದ ಅಲರ್ಜಿಗೆ ಒಳಗಾಗುವವರು, ಅಸ್ತಮಾ ಇರುವವರು ಕೂಡ ಹಿಮದಾಟ ಆಡಬಹುದು. ಯಾವ ರೀತಿಯ ಆಟವಾಡಬೇಕು ಎಂಬುದನ್ನು ತಿಳಿಸುವ ತಜ್ಞರ ತಂಡವೇ ಇದೆ.* ಹಿಮಪರ್ವತ ಏರುವ ಬಗ್ಗೆ, ಹಿಮಜಾರುಬಂಡೆಯಿಂದ ಜಾರಬೇಕಾದ ರೀತಿಯನ್ನೂ ಹೇಳಿಕೊಡುತ್ತಾರೆ.* ಐದು ವರ್ಷದ ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಪ್ರವೇಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry