ಆಹಿರಿಯಲ್ಲಿ ಝೇಂಕರಿಸಿದ ಸರೋದ್ ನಾದ

7

ಆಹಿರಿಯಲ್ಲಿ ಝೇಂಕರಿಸಿದ ಸರೋದ್ ನಾದ

Published:
Updated:
ಆಹಿರಿಯಲ್ಲಿ ಝೇಂಕರಿಸಿದ ಸರೋದ್ ನಾದ

`ಆಹಿರಿ ಅಪರೂಪದ ರಾಗ. ಈ ರಾಗ ನಡೆಯಲ್ಲಿ ಆಹಿರ್ ಭೈರವಿಯನ್ನೇ ಹೋಲಿದರೂ ಆ ರಾಗದ ಪ್ರಭಾವಕ್ಕೆ ಸಿಲುಕದೇ, ಆಹಿರಿಯ ಸ್ವಂತಿಕೆಯನ್ನು ಕಾಯ್ದುಕೊಳ್ಳಬೇಕಾದ್ದು ಈ ರಾಗಯಾನಕ್ಕೆ ಹೊರಡುವ ಸಂಗೀತಗಾರನ ಮುಂದಿರುವ ಸವಾಲು' ಎಂದೇ ತಮ್ಮ ಕಛೇರಿಯಲ್ಲಿ ಆಹಿರಿಯನ್ನು ತೆಕ್ಕೆಗೆ ತೆಗದುಕೊಂಡರು ಪಂಡಿತ್ ರಾಜೀವ್ ತಾರಾನಾಥರು.ಅಪರೂಪದ ರಾಗದೊಂದಿಗೆ ಆರಂಭವಾದ ಅವರ ಸರೋದ್ ವಾದನ ಪ್ರೇಕ್ಷಕರು ಆಹಿರಿಯ ಆಲಾಪದ ಸ್ವರಗಳಲ್ಲಿ ಲೀನವಾಗುವಂತೆ ಮಾಡಿತು. ವೀಣಾ ದೊರೆಸ್ವಾಮಿ ಅಯ್ಯಂಗಾರ್ ಸ್ಮಾರಕ ಟ್ರಸ್ಟ್ ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ಅದು. ಸರೋದ್‌ನ ತಂತಿಗಳ ಮೇಲೆ ನವಿರಾಗಿ ಹರಿದಾಡಿದ ಅವರ ಬೆರಳುಗಳು ಮೂಡಿಸಿದ ಮಾಂತ್ರಿಕ ನಾದ ಆಲಾಪದಲ್ಲಿ ಆಹಿರಿಯ ಸ್ವರಗಳನ್ನು ರಂಜಿಸಿತು. ಆಲಾಪದಲ್ಲಿ ರಾಗದ ಎಲ್ಲ ಮಜಲುಗಳನ್ನು ಹಾಯ್ದ ಅವರ ವಾದನ, ಗತ್‌ನಲ್ಲಿ ಹಂತ ಹಂತವಾಗಿ ರಾಗದ ವಿಸ್ತಾರವನ್ನು ಪಡೆಯಿತು. ಧೃತ್ ಏಕ್‌ತಾಲ್‌ನಲ್ಲಿ ಹರಡಿದ ಆಹಿರಿಯ ಕಂಪು ಭವನದ ಇಂಚಿಂಚನ್ನೂ ಆವರಿಸಿಕೊಂಡಿತು.ಧೃತ್ ಲಯದಲ್ಲಿ ತಮ್ಮನ್ನೇ ತಾವು ಮರೆತು ಸಂಗೀತ ಯಾನಕ್ಕೆ ಹೊರಟ ರಾಜೀವರ ಮೀಟುಗಳು ಅಲ್ಲಲ್ಲಿ ಘಾತಕ್ಕೆ ಒಳಗಾದವು. ಆದರೆ, ಸಂಗೀತ ರಸಿಕರನ್ನು ನಾದ ತೀರಕ್ಕೆ ಸಾಗಿಸಲು ಅವು ತೊಡಕಾಗಲಿಲ್ಲ. ರಾಜೀವರ ಮೀಟುಗಳು ಎಷ್ಟು ನವಿರೋ ಅಷ್ಟೇ ಘಾತವೂ ಆಗಿದ್ದವು. ಅವರ ಮೀಟಿನ ಘಾತವು ಎಷ್ಟು ಬಲವಾಗಿತ್ತೆಂದರೆ ವಾದನದ ನಡುವೆಯೇ ಸರೋದ್‌ನ ಒಂದು ತಂತಿ ತುಂಡರಿಸಿತು. ನಾದಯಾನಕ್ಕೆ ಇದು ಅಡ್ಡಿಯಾಗದಂತೆ, ತಂತಿ ಕಟ್ಟುವ ಸಮಯವನ್ನು ಉದಯ್‌ರಾಜ್ ಕರ್ಪೂರ್ ಅವರ ತಬಲಾ ವಾದನದ ಗತ್ ಮತ್ತು ಚಕ್ರಧಾರ್‌ಗಳು ತುಂಬಿದವು.

ತಮ್ಮ ಕಛೇರಿಯ ಅಂತ್ಯಕ್ಕೆ ಸಿಂಧುಭೈರವಿಯನ್ನು ಆರಿಸಿಕೊಂಡ ಅವರ ವಾದನದ ಮೋಡಿ ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ಸಿಂಧುಭೈರವಿಯ ಸ್ವರಗಳ ಸಾಂಗತ್ಯದಲ್ಲಿ ಸರೋದ್ ವಾದನ ಅಪೂರ್ವವಾಗಿ ಮೂಡಿಬಂತು. ಗತ್‌ನಲ್ಲಿ ಸಿಂಧುಭೈರವಿಯ ಮೀಟುಗಳು ಸ್ವರಗಳ ಮಾಧುರ್ಯವನ್ನು ಅನಾವರಣಗೊಳಿಸಿದವು.ಕಛೇರಿಯಲ್ಲಿ ಅತ್ಯಂತ ಶಿಸ್ತನ್ನು ಬಯಸುವ ರಾಜೀವರಿಗೆ ಕೆಲವು ಸಭಿಕರ  ಓಡಾಟ, ಆಸನಗಳ ಕಿರುಗುಟ್ಟುವಿಕೆ, ಛಾಯಾಗ್ರಾಹಕರ ಒತ್ತಾಯಕ್ಕೆ ಆಗಾಗ ಹೆಚ್ಚಾಗುತ್ತಿದ್ದ ವೇದಿಕೆಯ ಬೆಳಕು ಕಿರಿಕಿರಿ ಉಂಟು ಮಾಡುತ್ತಿದ್ದವು. ಸಭಾಂಗಣದ ಮುಂದಿನ ಸಾಲಿನಲ್ಲಿದ್ದ ಕೆಲ ಹಿರಿಯರಿಗೆ ಕಾರ್ಯಕ್ರಮದ ಆಯೋಜಕರು ಚಹಾ ವಿತರಿಸಲು ಮುಂದಾದರು. ರಾಜೀವರು, `ಸಂಗೀತ ಕಛೇರಿಯಲ್ಲಿ ಸಂಗೀತದ ಹೊರತು ಚಹಾಗೆ ಅವಕಾಶವಿಲ್ಲ' ಎಂದು ಖಾರವಾಗಿಯೇ ನುಡಿದರು. ಚಹಾ ಕೊಡುವುದನ್ನು ನಿಲ್ಲಿಸಿದರು.ಕಛೇರಿ ಮುಗಿದ ನಂತರ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ, `ಪ್ರಾಚೀನ ಮತ್ತು ನವೀನ ಎರಡನ್ನೂ ಒಳಗೊಳ್ಳುತ್ತಾ ಸಾಗುವುದು ಸಂಗೀತ. ಅಂತಹ ಪ್ರಾಚೀನ ಮತ್ತು ನವೀನದ ಸಂಗಮ ರಾಜೀವ್ ತಾರಾನಾಥ್' ಎಂದು ಹೇಳಿದ ಮಾತುಗಳು ಸಂಗೀತ ಮತ್ತು ರಾಜೀವರ ಸರೋದ್ ವಾದನ ಎರಡರ ಅನನ್ಯತೆಯನ್ನು ಸಾರಿ ಹೇಳುವಂತಿದ್ದವು.ಸರೋದ್ ವಾದನವಷ್ಟೇ ಅಲ್ಲದೇ ರಾಜೀವರ ಸಿಟ್ಟು, ಮಾತುಗಳೂ ಕಛೇರಿಯ ಭಾಗವೇ ಆಗಿದ್ದು ವಿಶೇಷವಾಗಿತ್ತು. ಕಛೇರಿಯಿಂದ ಹೊರಡುವಾಗ ಹಿರಿಯರೊಬ್ಬರು, `ರಾಜೀವರ ಕಛೇರಿಯೇ ಹಾಗೆ; ಅದು ಹರಿಯುವ ನದಿಯೂ ಹೌದು, ಭೋರ್ಗರೆಯುವ ಸಮುದ್ರವೂ ಹೌದು' ಎಂದ ಮಾತು ಅಕ್ಷರಶಃ ನಿಜ ಎನಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry