ಆಹ್ವಾನ ತಂದ ಮುಜುಗರ!

7

ಆಹ್ವಾನ ತಂದ ಮುಜುಗರ!

Published:
Updated:

ಬೆಂಗಳೂರು: ಶಿವಮೊಗ್ಗದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಹ್ವಾನಿಸಲು ಹೋಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮುಜುಗರಕ್ಕೆ ಒಳಗಾದ ಪ್ರಸಂಗ ಶುಕ್ರವಾರ ಜರುಗಿದೆ.ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಶಿವಮೊಗ್ಗದಲ್ಲಿ ಶನಿವಾರ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಅವರ ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿಯವರು ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದರು.ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಯಡಿಯೂರಪ್ಪ, `ಮೊದಲು ಮುಖ್ಯಮಂತ್ರಿ ಸ್ಥಾನ ತ್ಯಜಿಸಿ. ನಂತರ ಏನಿದ್ದರೂ ಮಾತು~ ಎಂದು ರೇಗಿದರು. ಇದರಿಂದ ವಿಚಲಿತರಾದ ಮುಖ್ಯಮಂತ್ರಿಯವರು, `ಪಕ್ಷದ ಹೈಕಮಾಂಡ್ ಹೇಳಿದ ಕೂಡಲೇ ರಾಜೀನಾಮೆ ನೀಡುತ್ತೇನೆ~ ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.ಇದೇ ವೇಳೆ, ಶಿವಮೊಗ್ಗದ ಕಾರ್ಯಕ್ರಮಕ್ಕೆ ಹೋಗದಂತೆ ವಸತಿ ಸಚಿವ ವಿ.ಸೋಮಣ್ಣ ಅವರಿಗೂ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.ಮುಖ್ಯಮಂತ್ರಿಯವರು ಸಂಜೆ ಈಶ್ವರಪ್ಪ ಜತೆ ಮಾತುಕತೆ ನಡೆಸಿದ್ದು, ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಬೇರೆ ಕಾರ್ಯಕ್ರಮ ಇರುವ ಕಾರಣ ಶಿವಮೊಗ್ಗಕ್ಕೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಈಶ್ವರಪ್ಪ ಅವರೂ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದಾರೆ. ಆದರೆ, ಪಕ್ಷದ ಪ್ರಮುಖರ ಮೇಲಿನ ಸಿಟ್ಟಿನಿಂದ ಅವರು ಶಿವಮೊಗ್ಗದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.ಸಂಪುಟ ವಿಸ್ತರಣೆ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಯಡಿಯೂರಪ್ಪ ಜತೆ ಚರ್ಚಿಸಿದ್ದಾಗಿ ಸದಾನಂದಗೌಡರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ರಾತ್ರಿಯೇ ರೈಲಿನಲ್ಲಿ ಮುಖ್ಯಮಂತ್ರಿಯವರು ಶಿವಮೊಗ್ಗಕ್ಕೆ ತೆರಳಿದರು.ಈ ನಡುವೆ ಯಡಿಯೂರಪ್ಪ ಅವರ ಹುಟ್ಟು ಹಬ್ಬವನ್ನು (ಫೆ.27) ಅದ್ದೂರಿಯಾಗಿ ಆಚರಿಸಲು ಅವರ ಆಪ್ತ ಸಚಿವರು, ಶಾಸಕರು ಮತ್ತು ಹಿತೈಷಿಗಳು ನಿರ್ಧರಿಸಿದ್ದಾರೆ. ಶುಕ್ರವಾರ ಸಂಜೆ ಅವರ ನಿವಾಸದಲ್ಲಿ ಪ್ರಮುಖರು ಸಭೆ ಸೇರಿ ಈ ಕುರಿತು ಚರ್ಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry