ಆ್ಯಂಡರ್‌ಸನ್‌ ವೇಗದ ಶತಕ

7
ಕ್ರಿಕೆಟ್‌: 36 ಎಸೆತಗಳಲ್ಲಿ ಶತಕ ಗಳಿಸಿ ಅಫ್ರಿದಿ ದಾಖಲೆ ಮುರಿದ ಕಿವೀಸ್‌ ಆಟಗಾರ

ಆ್ಯಂಡರ್‌ಸನ್‌ ವೇಗದ ಶತಕ

Published:
Updated:

ಕ್ವೀನ್ಸ್‌ಟೌನ್‌, ನ್ಯೂಜಿಲೆಂಡ್‌ (ಐಎಎನ್‌ಎಸ್‌):  ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೋರಿ ಜೇಮ್ಸ್‌ ಆ್ಯಂಡರ್‌ಸನ್‌ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಗಳಿಸಿದ ಸಾಧನೆಗೆ ಪಾತ್ರರಾದರು. ಈ ಮೂಲಕ ಅವರು ಪಾಕಿಸ್ತಾನದ ಶಾಹಿದ್‌ ಅಫ್ರಿದಿ ದಾಖಲೆ ಅಳಿಸಿ ಹಾಕಿದರು.ಬುಧವಾರ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರನೇ ಏಕದಿನ ಪಂದ್ಯ ದಲ್ಲಿ ಅವರು ಈ ಸಾಧನೆ ಮಾಡಿದರು. ಇದರಿಂದ ಕಿವೀಸ್‌ 159 ರನ್‌ಗಳ ಅಮೋಘ ಗೆಲುವು ಪಡೆಯಿತಲ್ಲದೇ, ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ತಿರುಗೇಟು ನೀಡಿತು.ಟಾಸ್‌ ಗೆದ್ದ ಕೆರಿಬಿಯನ್‌ ನಾಡಿನ ಬಳಗ ಮೊದಲು ಬೌಲ್‌ ಮಾಡಲು ಮುಂದಾಯಿತು. ಆದರೆ, ಮಳೆ ಸುರಿದ ಕಾರಣ 50 ಓವರ್‌ಗಳ ಪಂದ್ಯವನ್ನು 21 ಓವರ್‌ಗೆ ಕಡಿತಗೊಳಿಸಲಾಯಿತು. ಮಳೆಯ ನಂತರ ರನ್‌ ‘ಮಳೆ’ ಸುರಿಸಿದ ಬ್ರೆಂಡನ್‌ ಮೆಕ್ಲಮ್‌ ಸಾರಥ್ಯದ ಕಿವೀಸ್‌ ನಿಗದಿತ ಓವರ್‌ಗಳಲ್ಲಿ 4  ವಿಕೆಟ್‌ ಕಳೆದುಕೊಂಡು 283 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು.ಗುರಿ  ಬೆನ್ನು ಹತ್ತಿದ ವಿಂಡೀಸ್‌  ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡಿತು. ಈ ತಂಡ 21 ಓವರ್‌ಗಳಲ್ಲಿ 5  ವಿಕೆಟ್‌ ನಷ್ಟಕ್ಕೆ 124 ರನ್‌ಗಳನ್ನಷ್ಟೇ ಕಲೆ ಹಾಕಿತು.ಅಬ್ಬರ: ಆರಂಭಿಕ ಬ್ಯಾಟ್ಸ್‌ಮನ್‌ ಜೆಸ್ಸಿ ರೈಡರ್‌ (104, 51ಎಸೆತ, 12 ಬೌಂಡರಿ, 5 ಸಿಕ್ಸರ್‌) ಗಳಿಸಿದರೆ, ಆ್ಯಂಡರ್‌ಸನ್‌ 47 ಎಸೆತಗಳಲ್ಲಿ ಆರು ಬೌಂಡರಿ ಮತ್ತು 14 ಸಿಕ್ಸರ್‌ ಸೇರಿದಂತೆ ಅಜೇಯ 131 ರನ್‌ ಸಿಡಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ಕೇವಲ 75 ಎಸೆತಗಳಲ್ಲಿ 191 ರನ್‌ ಕಲೆ ಹಾಕಿತು.13ನೇ ಓವರ್‌ನಲ್ಲಿ ಬೌಲ್‌ ಮಾಡಿದ ಸುನಿಲ್‌ ನಾರಾಯಣ ಅವರನ್ನು ಆ್ಯಂಡರ್‌ಸನ್‌ ಸರಿಯಾ ಗಿಯೇ ಚಚ್ಚಿದರು. ಈ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. 15ನೇ ಓವರ್‌ನ ರವಿ ರಾಂಪಾಲ್‌ ಎಸೆತದಲ್ಲೂ ಆ್ಯಂಡರ್‌ಸನ್‌ ನಾಲ್ಕು ಸಿಕ್ಸರ್‌ ಬಾರಿಸಿದರು.ಕೇವಲ 20 ಎಸೆತಗಳಲ್ಲಿ 52 ರನ್‌ ಗಳಿಸಿದ್ದ ಎಡಗೈ ಬ್ಯಾಟ್ಸ್‌ಮನ್‌ ನಂತರದ 16 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದರು. 1996 ರಲ್ಲಿ ಶ್ರೀಲಂಕಾ ಎದುರು ಅಫ್ರಿದಿ 37 ಎಸೆತಗಳಲ್ಲಿ ಶತಕ ಗಳಿಸಿದ್ದರು. ಹೋದ ವರ್ಷದ ಜೂನ್‌ನಲ್ಲಿ  ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್‌ಸನ್‌ ಒಟ್ಟು ಏಳು ಪಂದ್ಯ ಗಳನ್ನು ಆಡಿದ್ದಾರೆ. ಇದು ಅವರು ಗಳಿಸಿದ ಚೊಚ್ಚಲ ಶತಕ.ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ 21 ಓವರ್‌ಗಳಲ್ಲಿ 4  ವಿಕೆಟ್‌ಗೆ 283. (ಜೆಸ್ಸಿ ರೈಡರ್‌ 104, ಬ್ರೆಂಡನ್‌ ಮೆಕ್ಲಮ್‌ 33, ಕೋರಿ ಜೇಮ್ಸ್‌ ಆ್ಯಂಡರ್‌ಸನ್‌ ಔಟಾಗದೆ 131; ಜಾಸನ್‌ ಹೋಲ್ಡರ್‌ 48ಕ್ಕೆ2).ವೆಸ್ಟ್‌ ಇಂಡೀಸ್‌ 21 ಓವರ್‌ಗಳಲ್ಲಿ 5 ವಿಕೆಟ್‌ಗೆ 124. (ಡ್ವೇನ್‌ ಬ್ರಾವೊ ಔಟಾಗದೆ 56, ನರಸಿಂಗ ದೇವನಾರಾಯಣ 29; ಮಿಷೆಲ್‌ ಮೆಕ್‌ಲಾಗನ್‌ 7ಕ್ಕೆ2, ಜೆಸ್ಸಿ ರೈಡರ್‌ 13ಕ್ಕೆ1). ಫಲಿತಾಂಶ: ನ್ಯೂಜಿಲೆಂಡ್‌ಗೆ 159 ರನ್‌ ಜಯ. ಪಂದ್ಯ ಶ್ರೇಷ್ಠ: ಕೋರಿ ಜೇಮ್ಸ್‌ ಆ್ಯಂಡರ್‌ಸನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry