ಗುರುವಾರ , ಮೇ 6, 2021
23 °C

ಆ್ಯಪಲ್ `ಐಒಎಸ್ 7' ಅವತಾರ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ಬಾಲ್ಯದಲ್ಲಿ ಅಮ್ಮ ಹೇಳಿದ ಕಥೆ.. `ಬಾಲಕೃಷ್ಣ ತನ್ನ ಮೃದುಲ ಬಾಯನ್ನು ತೆರೆದು ತಾಯಿ ಯಶೋಧೆಗೆ ಇಡೀ ಬ್ರಹ್ಮಾಂಡವನ್ನೇ ಕ್ಷಣ ಮಾತ್ರದಲ್ಲಿ ತೋರಿಸಿಬಿಟ್ಟ'... ಅಬ್ಬಾ!

ಸದ್ಯ ನಮ್ಮ ಅಂಗೈನಲ್ಲಿರುವ ಐ-ಫೋನ್, ಐ-ಪ್ಯಾಡ್‌ಗಳು ಇದೇ ರೀತಿ ಭೂಮಂಡಲದ ಸಕಲವನ್ನೂ ತೋರಿಸುತ್ತಿರುವುದು ಸುಳ್ಳಲ್ಲ... ಅಬ್ಬಾ!ಯುಗಯುಗಗಳ ಹಿಂದಿನ ಕಲ್ಪನೆ, ಕನಸುಗಳೆಲ್ಲಾ ಇಂದು ಸಾಕಾರಗೊಳ್ಳುತ್ತಿವೆ. ಅಂಜನ ಹಾಕಿ ಅಂಗೈನಲ್ಲಿಯೇ ಕಣ್ಣಿಗೆ ಕಾಣದ ಪ್ರದೇಶಗಳನ್ನು ತೋರಿಸುವ ಮಾಯಗಾರರು ನಮ್ಮ ಜನಪದ ಕಥೆಗಳಲ್ಲಿ ಎಲ್ಲೆಂದರಲ್ಲಿ ಸಿಗುತ್ತಾರೆ. ಹಾಗೆಯೇ ಇಂದಿನ ಗೇಣುದ್ದ ಐ-ಫೋನ್‌ಗಳು ಸಹ ತೋರಿಸದ ವಸ್ತುಗಳಿಲ್ಲ, ಚಿತ್ರಗಳಿಲ್ಲ, ಸ್ಥಳಗಳಿಲ್ಲ. ಪರಮಾತ್ಮ ಇರುವ ಸ್ಥಳವೊಂದನ್ನು ಬಿಟ್ಟು ಉಳಿದೆಲ್ಲವೂ ಬಹುಶಃ ಈ ಸಾಧನಗಳಲ್ಲಿ ಗೋಚರಿಸಬಹುದೇನೋ...ಅಬ್ಬಾ!ಏನೇ ಇರಲಿ, ಸದ್ಯ ಐಫೋನ್ ಪ್ರಪಂಚದ ದೊರೆ `ಆ್ಯಪಲ್' ತನ್ನ ಐ-ಫೋನ್, ಐ-ಪ್ಯಾಡ್‌ಗಳ ಕಾರ್ಯನಿರ್ವಹಣಾ ತಂತ್ರಾಂಶವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಿಕೊಂಡಿದೆ.ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ `ಐಒಎಸ್ 7' ಎಂದು ಕರೆಯಲಾಗುವ ಸದ್ಯದ ಕಾರ್ಯನಿರ್ವಹಣಾ ತಂತ್ರಾಂಶವು ಆ್ಯಪಲ್‌ನ ಇತಿಹಾಸದಲ್ಲೇ ಅತಿ ದೊಡ್ಡ ಪರಿಷ್ಕರಣೆ ಎಂದೇ ಬಣ್ಣಿಸಲಾಗುತ್ತಿದೆ.ಕಳೆದ ವಾರವಷ್ಟೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ `ವರ್ಲ್ಡ್ ವೈಡ್ ಡೆವಲಪರ್'ಗಳ ಸಮಾವೇಶದಲ್ಲಿ ಆ್ಯಪಲ್ ತನ್ನ `ಐಒಎಸ್ 7' ಹೊಸ ತಂತ್ರಾಂಶವನ್ನು ಕುರಿತು ಸವಿಸ್ತಾರವಾದ ವಿವರಣೆ ನೀಡಿದೆ.ವೈಶಿಷ್ಟ್ಯಗಳು

1.  ನೋಡಲು ಬಲು ಸುಂದರ, ಬಳಕೆಗೆ ಅತಿ ಸರಳ-ಸುಲಭ, ಸುಲಲಿತ ಹಾಗೂ ಮೊದಲಿಗಿಂತ ಹೆಚ್ಚು ವಿಕಸಿತವಾಗಿದೆ2. ಏರ್ ಡ್ರಾಪ್: ಫೈಲ್‌ಗಳನ್ನು ಒಂದು ಐಫೋನ್‌ನಿಂದ ಮತ್ತೊಂದು ಐಫೋನ್‌ಗೆ ವರ್ಗಾಯಿಸುವುದನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಏರ್ ಡ್ರಾಪ್ ಎನ್ನುವ ತಂತ್ರಾಂಶ ವೈ-ಫೈ ಮೂಲಕ ಸಾಕಷ್ಟು ವೇಗದಲ್ಲಿ ಮತ್ತೊಂದು ಐ-ಫೋನ್‌ಗೆ ಫೈಲ್‌ಗಳನ್ನು ವರ್ಗಾಯಿಸಬಲ್ಲದಾಗಿದೆ.3. ವೈಯಕ್ತಿಕ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಶೇಖರಿಸುವ ವಿಭಾಗಗಳಿಗೆ ಹೆಚ್ಚು ಭದ್ರತೆ ಒದಗಿಸಲಾಗಿದೆ.4. ಹೊಚ್ಚ ಹೊಸ ಐಕಾನ್‌ಗಳು:  ಸಂಪೂರ್ಣವಾಗಿ ಐಕಾನ್‌ಗಳು ಪುನರ್ ವಿನ್ಯಾಸಗೊಂಡಿದ್ದು, ಕೆಲವು ಹೊಚ್ಚ ಹೊಸ ಐಕಾನ್‌ಗಳನ್ನು ಪರಿಚಯಿಸಲಾಗಿದೆ. ಹೊಸ ಕಂಟ್ರೋಲ್ ಪ್ಯಾನಲ್, ಹಾಗೂ ಫಾಂಟ್‌ಗಳನ್ನು ತರಲಾಗಿದೆ.5. `ಸಿರಿ'ಗೆ ಇನ್ನಷ್ಟು ಸಿರಿ ಸೇರಿಸಿ ರೂಪಿಸಲಾದ (ಐ)ಸಿರಿ:

ಹೌದು, `ಸಿರಿ' (ಜ್ಟಿಜಿ)  ಇದೊಂದು ಆ್ಯಪಲ್‌ನಲ್ಲಿರುವ ವಿಶಿಷ್ಟ ಅಂಶ.  ಇದನ್ನು ಟ್ವಿಟರ್ ಹಾಗೂ ವಿಕಿಪಿಡಿಯಾವನ್ನು ಹುಡುಕಲು ಬಳಸುವಂತೆ ನವೀಕರಿಸಲಾಗಿದೆ.6. ಹಿಂದಿನ ಆಯ್ಕೆಗೆ ಅಥವಾ ಹಿಂದಿನ ಮೆನುಗೆ ಮರಳಲು ತಕ್ಷಣ ಸ್ಪಂದಿಸುವ `ಬ್ಯಾಕ್ ಬಟನ್' ಅಳವಡಿಸಲಾಗಿದೆ.7. ಬಹುವಿಧ ಕಾರ್ಯನಿರ್ವಹಣಾ ಅಂಶಗಳನ್ನು ಸಾಮಾನ್ಯವಾಗಿ ಎಲ್ಲಾ ತಂತ್ರಾಂಶಗಳಿಗೂ ಕಲ್ಪಿಸಲಾಗಿದೆ.

8. ತಂತ್ರಾಂಶಗಳನ್ನು ಸದ್ಯ ಕೈಬಳಕೆಯಿಂದಲೇ ಅಪ್‌ಡೇಟ್ ಮಾಡಬೇಕಿದೆ. ಆದರೆ ಇದೀಗ ಅವುಗಳು ತಾನೇ ತಾನಾಗಿ ಅಪ್‌ಡೇಟ್ ಅಗುವಂತೆ ಮಾಡಲಾಗಿದೆ.9. ಕಂಟ್ರೋಲ್ ಸೆಂಟ್ರಲ್ ಎಂಬ ಹೊಸ ಅಂಶವೊಂದನ್ನು ಪರಿಚಯಿಸಲಾಗಿದ್ದು, ಇದರಿಂದ ಅತಿ ಹೆಚ್ಚು ಬಾರಿ ಬಳಸುವ ತಂತ್ರಾಂಶಗಳನ್ನು ಆದ್ಯತೆ ಮೇರೆಗೆ ಫೋನ್‌ನ ಪರದೆ ಮೇಲೆ ಒಪ್ಪವಾಗಿ (ಷಾರ್ಟ್‌ಕಟ್ ರೀತಿ) ಜೋಡಿಸಿಕೊಳ್ಳಬಹುದು.10. ಸಫಾರಿ ವೆಬ್ ಬ್ರೌಸರ್ ಇನ್ನಷ್ಟು ಪುನರ್ ನವೀಕರಿಸಲಾಗಿದೆ. ನಮಗೆ ಬೇಕಾದ ವೆಬ್‌ತಾಣಗಳನ್ನು ಫೇವರಿಟ್‌ನಲ್ಲಿ ಕ್ರಮವಾಗಿ ಜೋಡಿಸಿಟ್ಟು ಬೇಕೆಂದಾಗ ಒಮ್ಮೆಲೇ ಅದನ್ನು ತೆರೆಯುವ ಅನುಕೂಲವನ್ನು ಕಲ್ಪಿಸಲಾಗಿದೆ. ಇದು ಈಗ ಪರದೆ ತುಂಬಾ ಕಂಗೊಳಿಸುತ್ತದೆ.11. ಕ್ಯಾಮೆರಾ ಸಾಕಷ್ಟು ಸುಧಾರಣೆ ಕಂಡಿರುವುದು ಇಲ್ಲಿನ ಮತ್ತೊಂದು ವಿಶೇಷ. ಸ್ವಯಂಚಾಲಿತ ಚೌಕಾಕಾರದ ಕ್ಯಾಮೆರಾದ ಮುಖೇನ ಇನ್ನಷ್ಟು ಸೂಕ್ಷ್ಮವಾದ ಚಿತ್ರಗಳನ್ನು ತೆಗೆಯಬಹುದು. ಇದರೊಟ್ಟಿಗೆ `ಮೊಮೆಂಟ್' ಎನ್ನುವ ಆಯ್ಕೆಯನ್ನೂ ನೀಡಲಾಗಿದ್ದು, ಇದರ ಸಹಾಯದಿಂದ ನಾವು ತೆಗೆದ ಚಿತ್ರಗಳನ್ನು ಸ್ಥಳ ಹಾಗೂ  ಸಮಯದ ಆಧಾರ ಮೇಲೆ ವರ್ಗೀಕರಣ ಮಾಡಬಹುದಾಗಿದೆ.12. ಮೆಸೇಜಿಂಗ್ (ಸಂದೇಶ ರವಾನೆ) ಹಾಗೂ ಮೇಲ್  (ಮಿಂಚಂಚೆ) ತಂತ್ರಾಂಶಗಳು ಇನ್ನಷ್ಟು ಸಿಂಗಾರಗೊಂಡಿವೆ.13. ಹವಾಮಾನ ಕುರಿತ ತಂತ್ರಾಂಶಕ್ಕೆ ಇನ್ನಷ್ಟು ಬಣ್ಣ ಬಳಿದು ಕಣ್ಮನ ಸೆಳೆಯುವಂತೆ ಮಾಡುವಲ್ಲಿ ಆ್ಯಪಲ್ ಯಶಸ್ವಿಯಾಗಿದೆ. ಇದೀಗ ಅದು ಸಂಪೂರ್ಣ ಪರದೆಯನ್ನು ಆವರಿಸಿದ್ದು, ಆ್ಯನಿಮೇಷನ್‌ಗಳನ್ನೂ ಜೋಡಿಸಲಾಗಿದೆ. ಉದಾಹರಣೆಗೆ; ಮಳೆ ಬೀಳುವ ಸಂದರ್ಭದಲ್ಲಿ ಮಳೆ ಬೀಳುವ ಆ್ಯನಿಮೇಟೆಡ್ ಚಿತ್ರ ಮೂಡಿ ಬರುತ್ತದೆ.ಆ್ಯಪಲ್ ಹೆಜ್ಜೆಗುರುತು..

ಅದ್ಭುತ ಹಾಗೂ ಸ್ಫೂರ್ತಿದಾಯಕ ಇತಿಹಾಸವನ್ನೇ `ಆ್ಯಪಲ್' ತನ್ನಲ್ಲಿ ಆವರಿಸಿಕೊಂಡಿದೆ.  ಕಂಪ್ಯೂಟರ್ ಜಗತ್ತಿನಲ್ಲಿ ಇಂದಿಗೂ `ನೆನಪಿನ ಕೊಂಡಿ'ಯಾಗಿರುವ ಸ್ಟೀವ್ ಜಾಬ್ಸ್ 1976ರಲ್ಲಿ ರೂಪಿಸಿದ ಕಂಪೆನಿಯೇ ಆ್ಯಪಲ್.ತನ್ನ ಗ್ಯಾರೇಜ್‌ನಲ್ಲಿ ಗೆಳೆಯ ವೊಜ್ನಿಯಾಕ್ ಜತೆ ಕೂತು `ಆ್ಯಪಲ್ 1' ಕಂಪ್ಯೂಟರ್ ರೂಪಿಸಿದ್ದೇ ಒಂದು ದೊಡ್ಡ ಕಥನ. ಆನಂತರ ತಿರುಗಿ ನೋಡಿದ್ದೇ ಇಲ್ಲ. ಜಾಬ್ಸ್ ಅವರ ನಿರಂತರ ದುಡಿಮೆ, ತುಡಿತಗಳು ಆ್ಯಪಲ್ ಕಂಪೆನಿಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯಿತು.

ಐ-ಫೋನ್ ಇತಿಹಾಸ

ಇದೇ ಆ್ಯಪಲ್ ಕಂಪೆನಿ ಮೊದಲ ತಲೆಮಾರಿನ ಐ-ಫೋನ್ ಬಿಡುಗಡೆ ಮಾಡಿದ್ದು 2007ರ ಜೂನ್ 29ರಂದು. ಇದರಲ್ಲಿ ಅಡಕವಾಗಿದ್ದೇ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶ ಐಒಎಸ್. ಇದು `ಐ-ಫೋನ್ ಕಾರ್ಯನಿರ್ವಹಣಾ ತಂತ್ರಾಂಶ' (ಐ-ಫೋನ್ ಒಎಸ್) ಎಂದೇ ಮನೆಮಾತಾಯಿತು.ಇದೀಗ ತನ್ನ ಇತಿಹಾಸದಲ್ಲಿ ಅತಿ ದೊಡ್ಡ ಎನ್ನುವಂತಹ ಪರಿಷ್ಕರಣೆಯನ್ನು ಆ್ಯಪಲ್ ತನ್ನ ಕಾರ್ಯನಿರ್ವಹಣಾ ತಂತ್ರಾಂಶದಲ್ಲಿ ಮಾಡಿರುವುದು ಐ-ಫೋನ್ ಜಗತ್ತನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.