ಶನಿವಾರ, ಫೆಬ್ರವರಿ 27, 2021
31 °C

ಆ್ಯಪ್‌ಗಳ ಮಾಲ್‌ – ಗುಡ್‌ಬಾಕ್ಸ್‌

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಆ್ಯಪ್‌ಗಳ ಮಾಲ್‌ – ಗುಡ್‌ಬಾಕ್ಸ್‌

ಬೆಂಗಳೂರಿನ ಮಲ್ಲೇಶ್ವರಂನಲ್ಲಿನ  ದಕ್ಷಿಣ ಭಾರತ ತಿಂಡಿ ತಿನಿಸುಗಳ ವೀಣಾ ಸ್ಟೋರ್ಸ್‌ಗೆ ಮೊಬೈಲ್‌ ಮೂಲಕವೇ ನಮಗೆ ಬೇಕಾದ ತಿಂಡಿ ತಿನಿಸುಗಳ ಪಟ್ಟಿ ಆಯ್ಕೆ ಮಾಡಿ ಆರ್ಡರ್‌ ಮಾಡಿ, ಹತ್ತು ನಿಮಿಷದಲ್ಲಿ ಮಳಿಗೆಗೆ ಬಂದು ಪಾರ್ಸೆಲ್‌ ತೆಗೆದುಕೊಳ್ಳುವೆ ಎಂದು ಆ್ಯಪ್‌ ಮೂಲಕವೇ ಸಂದೇಶ ರವಾನಿಸಿ ವ್ಯಾಲೆಟ್‌, ನೆಟ್‌ ಬ್ಯಾಂಕ್‌, ಡೆಬಿಟ್‌, ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸಿದರೆ ಮುಗಿತು.10 ನಿಮಿಷದ ನಂತರ ವೀಣಾ ಸ್ಟೋರ್ಸ್‌ಗೆ ಹೋಗುವಷ್ಟರಲ್ಲಿ ತಿಂಡಿಯ ಪಾರ್ಸೆಲ್‌ ಸಿದ್ಧವಾಗಿರುತ್ತದೆ. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಕ್ಯಾಂಟೀನ್‌ನಲ್ಲಿ (ಐಐಎಂ–ಬಿ) ಮಧ್ಯಾಹ್ನದ  ಊಟದ ಹೊತ್ತಿಗೆ ಈ ಮೊದಲು ದೊಡ್ಡ ಸರತಿ ಸಾಲು ಕಂಡು ಬರುತ್ತಿತ್ತು. ಕ್ಯಾಂಟಿನ್‌ ಮಾಲೀಕ  ‘ಗುಡ್‌ಬಾಕ್ಸ್‌’ನಲ್ಲಿ (Goodbox) ಮಳಿಗೆ ತೆರೆಯುತ್ತಿದ್ದಂತೆ 'ಕ್ಯೂ' ಕಿರಿಕಿರಿ  ಮಾಯವಾಗಿದೆ.ವಿದ್ಯಾರ್ಥಿಗಳು ತರಗತಿ ಮುಗಿದ ಕೂಡಲೇ ಕೋಣೆಗೆ ತೆರಳಿ ಅಲ್ಲಿಂದಲೇ ತಮಗೆ ಬೇಕಾದ ತಿಂಡಿ ಅಥವಾ ಊಟವನ್ನು ಆ್ಯಪ್‌ ಮೂಲಕ ಆರ್ಡರ್‌ ಮಾಡುತ್ತಾರೆ. ಕೆಲ ಸಮಯ ಬಿಟ್ಟು ಬಂದು ತಮ್ಮ ಪಾಲಿನ ಊಟ, ತಿಂಡಿ ತೆಗೆದುಕೊಳ್ಳುತ್ತಾರೆ. ಡೆಲ್‌ ಸಂಸ್ಥೆಯ ಕ್ಯಾಂಟೀನ್‌ನಲ್ಲಿಯೂ ಇದೇ ಬಗೆಯ ಸೌಲಭ್ಯ ಜಾರಿಯಲ್ಲಿ ಇದೆ.ಬನ್ನೇರುಘಟ್ಟದ ದಿನಪತ್ರಿಕೆಗಳ ವಿತರಕರೊಬ್ಬರು ಅಪಾರ್ಟ್‌ಮೆಂಟ್‌ಗಳಲ್ಲಿನ ಗ್ರಾಹಕರಿಂದ ಪ್ರತಿ ತಿಂಗಳು  ಗುಡ್‌ಬಾಕ್ಸ್‌ ಆ್ಯಪ್‌ ಮೂಲಕವೇ ಹಣ ವಸೂಲಿ ಮಾಡುತ್ತಿದ್ದಾರೆ.ನಗರದ ಕೆಲ ಕೇಬಲ್‌ ಸೇವೆ ಸಲ್ಲಿಸುವವರೂ  ಹಣ ಸಂಗ್ರಹಕ್ಕೆ ಇದೇ ಮಾರ್ಗ ಅನುಸರಿಸುತ್ತಿದ್ದಾರೆ.‘ಈಗಷ್ಟೇ ತಾಜಾ ತರಕಾರಿ ಬಂದಿದೆ. ಬೆಲೆ ಹೀಗಿದೆ. ತಕ್ಷಣಕ್ಕೆ ಬನ್ನಿ. ತಡವಾದರೆ ಸರಕು ಮುಗಿದೀತು’ ಎಂದು ತರಕಾರಿ ಅಂಗಡಿಯವರಿಂದ ಮಳಿಗೆಯ   ಕಾಯಂ ಗ್ರಾಹಕರ ಮೊಬೈಲ್‌ಗೆ  ಸಂದೇಶ  ಬಂದು ಬೀಳುವ ದಿನಗಳು ದೂರವಿಲ್ಲ. ಇದೆಲ್ಲ ‘ಗುಡ್‌ಬಾಕ್ಸ್‌’ ಆ್ಯಪ್‌ನ ಮಹಿಮೆಯ ಫಲವಾಗಿವೆ.  ‘ಆ್ಯಪ್‌ಗಳ ಮಾಲ್‌’ನಲ್ಲೊಂದು ಸುಲಭವಾಗಿ ಅಗ್ಗದ ದರದಲ್ಲಿ ಮಳಿಗೆ ತೆರೆದು ಗ್ರಾಹಕರನ್ನು ಸೆಳೆಯುವ, ವಹಿವಾಟು ನಡೆಸುವ ಸುಲಭ ಉಪಾಯ ಇದಾಗಿದೆ. ಗ್ರಾಹಕರಿಗೂ ಇದರಿಂದ ಸಾಕಷ್ಟು ಲಾಭಗಳಿವೆ.ನಾಲ್ಕೈದು ವರ್ಷಗಳ ಹಿಂದೆ ಅಂತರ್ಜಾಲ ವಹಿವಾಟು ಭರಾಟೆಯಿಂದ ನಡೆಯುತ್ತಿತ್ತು. ಸರಕು ಮತ್ತು ಸೇವಾ ಸಂಸ್ಥೆಗಳು ಹತ್ತಿಪ್ಪತ್ತು ಸಾವಿರ ಖರ್ಚು ಮಾಡಿ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಿ ಆನ್‌ಲೈನ್‌ ಮಳಿಗೆ ಮೂಲಕ ವ್ಯಾಪಾರ (ಇ–ಕಾಮರ್ಸ್‌) ನಡೆಸುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳು ದಾಂಗುಡಿ ಇಟ್ಟಿವೆ.  ಇವುಗಳ ಆಕರ್ಷಣೆಗೆ ಮನಸೋಲದವರೇ ಇಲ್ಲ.ಸ್ಮಾರ್ಟ್‌ಫೋನ್‌ಗಳ ವ್ಯಾಪಕ ಬಳಕೆಗೆ ಅನುಗುಣವಾಗಿ ಮೊಬೈಲ್‌ ಕಿರು ತಂತ್ರಾಂಶಗಳು (ಆ್ಯಪ್‌) ಅಭಿವೃದ್ಧಿಯಾಗುತ್ತಿದ್ದಂತೆ ಬಳಕೆದಾರರು, ಸರಕು ಮತ್ತು ಸೇವೆಗಳ ಮಾರಾಟಗಾರರ ಚಿತ್ತವೆಲ್ಲ ಈಗ ಮೊಬೈಲ್‌ನಲ್ಲಿಯೇ ಕೇಂದ್ರೀಕೃತಗೊಂಡಿದೆ. ಅಂತರ್ಜಾಲ ತಾಣ ಅಭಿವೃದ್ಧಿಪಡಿಸುವುದರ ವೆಚ್ಚಕ್ಕೆ ಹೋಲಿಸಿದರೆ ಮೊಬೈಲ್‌ ಆ್ಯಪ್‌ಗೆ ₹  5ರಿಂದ ₹ 10 ಲಕ್ಷ ಖರ್ಚು ತಗುಲುತ್ತದೆ. ಆಂಡ್ರಾಯ್ಡ್‌, ಆ್ಯಪಲ್‌ ಮತ್ತು ವಿಂಡೋಸ್‌ ಸ್ಮಾರ್ಟ್‌ಫೋನ್‌ಗಳಿಗೆ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಬೇಕಾಗುತ್ತದೆ.'ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ' – ಎನ್ನುವಂತೆ ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಇತರ ದೊಡ್ಡ ದೊಡ್ಡ ವ್ಯಾಪಾರಿ ಸಂಸ್ಥೆಗಳು ಆ್ಯಪ್‌ ಅಭಿವೃದ್ಧಿಪಡಿಸಿ ಗ್ರಾಹಕರಿಗೆ ಗಾಳ ಹಾಕುತ್ತಿವೆ.ಬಿಗ್‌ ಬಾಸ್ಕೆಟ್‌, ಅಮೆಜಾನ್‌ ಮತ್ತಿತರ ಬೃಹತ್‌ ಸಂಸ್ಥೆಗಳು ಮೊಬೈಲ್‌  ಆ್ಯಪ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತ ತೀವ್ರ  ಸ್ಪರ್ಧೆ ನೀಡುತ್ತಿವೆ. ಇವರ  ತೀವ್ರ ಪೈಪೋಟಿ ಎದುರಿಸಲಿಕ್ಕಾಗದೆ ಸಣ್ಣ ಪುಟ್ಟ ವರ್ತಕರಿಗೆ ವ್ಯಾಪಾರ ನಷ್ಟ  ಉಂಟಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ಪುಟ್ಟ ಕಿರಾಣಿ ಅಂಗಡಿ, ರೆಸ್ಟೋರೆಂಟ್‌ ಮತ್ತಿತರ  ವಹಿವಾಟುದಾರರಿಗೂ ಮೊಬೈಲ್   ಆ್ಯಪ್‌ನ ಪ್ರಯೋಜನ ಒದಗಿಸಲು  ಬೃಹತ್‌ ಮಾಲ್‌ ಪರಿಕಲ್ಪನೆ ರೂಪದಲ್ಲಿ  'ಗುಡ್‌ಬಾಕ್ಸ್‌' ಅಭಿವೃದ್ಧಿಪಡಿಸಲಾಗಿದೆ.‘ಸಂತೆಯ ಪರಿಕಲ್ಪನೆಯನ್ನು ಮೊಬೈಲ್‌ನಲ್ಲಿ ಅಳವಡಿಸಿರುವುದು ಈ ಆ್ಯಪ್‌ನ ವಿಶೇಷತೆಯಾಗಿದೆ. ಸಂತೆ ನಡೆಯುವ ಸ್ಥಳದಲ್ಲಿ ಎಲ್ಲ ವ್ಯಾಪಾರಿಗಳು, ಗ್ರಾಹಕರು ಮಧ್ಯವರ್ತಿಗಳ ಹಾವಳಿ ಇಲ್ಲದೆ ಮುಖಾಮುಖಿ ವ್ಯಾಪಾರ ನಡೆಸುತ್ತಾರೆ.ಅಲ್ಲಿ ವ್ಯಾಪಾರಿ ಮತ್ತು ಗ್ರಾಹಕರ ಮಧ್ಯೆ  ಸರಕಿನ ಬೆಲೆ, ಗುಣಮಟ್ಟದ ಬಗ್ಗೆ ಚೌಕಾಸಿಯೂ ನಡೆಯುತ್ತದೆ. ಅದೇ ಬಗೆಯಲ್ಲಿ ಈ ಆ್ಯಪ್‌ ಕಾರ್ಯನಿರ್ವಹಿಸುತ್ತದೆ’ ಎಂದು 'ಗುಡ್‌ಬಾಕ್ಸ್‌'ನ ನಿರ್ದೇಶಕ ಮತ್ತು ಸಹ ಸ್ಥಾಪಕರಾಗಿರುವ ನಿತೀನ್‌ ಚಂದ್ರ  ಜಿ.ಎಸ್‌. ಅವರು ಹೇಳುತ್ತಾರೆ.‘ಆ್ಯಪ್‌ ಅಭಿವೃದ್ಧಿಪಡಿಸಲು ದೊಡ್ಡ ಮೊತ್ತ ವೆಚ್ಚ ಮಾಡಲು ಸಾಧ್ಯವಿಲ್ಲದವರೂ ಮೊಬೈಲ್‌ ಆ್ಯಪ್‌ಗಳ ಪ್ರಯೋಜನ ಪಡೆಯಲು ನೆರವಾಗುವ ಉದ್ದೇಶದಿಂದಲೇ 'ಗುಡ್‌ಬಾಕ್ಸ್‌' ಆ್ಯಪ್‌  ಅಭಿವೃದ್ಧಿಪಡಿಸಲಾಗಿದೆ.‘ಪ್ರತಿಯೊಬ್ಬ ವ್ಯಾಪಾರಿ ಆ್ಯಪ್‌ ಅಭಿವೃದ್ಧಿಪಡಿಸಿದರೆ ಬಳಕೆದಾರರು ಎಲ್ಲವನ್ನೂ ತಮ್ಮ  ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆ್ಯಪ್‌ಗಳ ಆ್ಯಪ್‌ ಇದ್ದರೆ ಒಳಿತು. ಅಂತಹ ಸೌಲಭ್ಯವನ್ನು 'ಗುಡ್‌ಬಾಕ್ಸ್‌' ಒದಗಿಸಿಕೊಡುತ್ತಿದೆ.  ವರ್ತಕರು, ಅಂಗಡಿ ಮುಂಗಟ್ಟು ಮಾಲೀಕರು ಮತ್ತು ಬಳಕೆದಾರರಿಗೆ ಇದರಿಂದ ಬಹಳಷಷ್ಟು ಪ್ರಯೋಜನಗಳು ಇವೆ.‘ಆ್ಯಪ್ ಜತೆಗೆ ಮೋಬಿಕ್ವಿಕ್‌ ಮೊಬೈಲ್‌ ವ್ಯಾಲೆಟ್‌ ಒದಗಿಸಲಾಗುತ್ತಿದೆ. ವರ್ತಕರು ಬೇರೆ ವ್ಯಾಲೆಟ್‌ ಸೌಲಭ್ಯ ಬಯಸಿದರೆ ಅದನ್ನೂ ಒದಗಿಸಲಾಗುತ್ತಿದೆ.‘ಈ ಒಂದು ಆ್ಯಪ್‌ ಅಳವಡಿಸಿಕೊಳ್ಳುವುದರ ಮೂಲಕ ಗ್ರಾಹಕರು ದಿನಸಿ ಅಂಗಡಿ,  ರೆಸ್ಟೊರೆಂಟ್‌, ಔಷಧಿ ವ್ಯಾಪಾರಿಗಳು, ಲಾಂಡ್ರಿ, ತರಕಾರಿ, ಮಾಂಸ, ಗ್ರಾಹಕ ಸೇವೆಗಳ ಬಿಲ್‌ ಪಾವತಿ ಮತ್ತಿತರ ಸೌಲಭ್ಯಗಳನ್ನು ಒಂದೆಡೆಯೇ ಪಡೆದುಕೊಳ್ಳಬಹುದು.‘ಇಂದಿರಾನಗರದ ಕ್ಷೌರದ ಅಂಗಡಿಯಲ್ಲಿ ಪೇಟಿಎಂ  ಮೂಲಕವೆ ಗ್ರಾಹಕರು ಹಣ ಪಾವತಿಸುತ್ತಿದ್ದಾರೆ.  ನಗರದ ಕೆಲ  ಆಟೊರಿಕ್ಷಾದಲ್ಲಿಯೂ ಪೇಟಿಂ ಮೂಲಕ ಹಣ ಪಾವತಿಸಬಹುದಾಗಿದೆ. ಇದು ಮೊಬೈಲ್‌ ಆ್ಯಪ್‌ ಅಥವಾ ಮೊಬೈಲ್‌  ವ್ಯಾಲೆಟ್‌ ಮಹಿಮೆಗೆ ಸಾಕ್ಷಿಯಾಗಿದೆ.‘ಮುಂದಿನ ಮೂರ್ನಾಲ್ಕು  ವರ್ಷಗಳಲ್ಲಿ  ಮೀನು ಮಾರಾಟದಿಂದ ಹಿಡಿದು ಪ್ರತಿಯೊಂದು ಸರಕು ಮತ್ತು ಸೇವೆಗಳ ಮಾರಾಟಕ್ಕೆ ಆ್ಯಪ್‌ ಬಳಕೆ ಜಾರಿಗೆ ಬರಲಿದೆ.2020ರರಷ್ಟರಲ್ಲಿ ಆ್ಯಪ್‌ ಸಂತೆಯಲ್ಲಿ  ಪ್ರತಿಯೊಬ್ಬ ವರ್ತಕ ತನ್ನ ಮಳಿಗೆ ತೆರೆಯುವ ದಿನಗಳು ಬರಲಿವೆ’ ಎಂದು ನಿತೀನ್ ನುಡಿಯುತ್ತಾರೆ.‘ಅಮೆರಿಕ, ಯುರೋಪ್‌ ಮತ್ತಿತರ ಕಡೆಗಳಲ್ಲಿ ಇಂತಹ ಆ್ಯಪ್‌ ಅಗತ್ಯ ಇಲ್ಲ. ನಮ್ಮದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ)  ದೇಶ. ಹೀಗಾಗಿ ಇಲ್ಲಿ ಅಸಂಖ್ಯ ‘ಎಸ್‌ಎಂಇ’ಗಳಿವೆ. ಅವುಗಳ ವಹಿವಾಟು ಮತ್ತು ಸೇವೆ ಗ್ರಾಹಕರಿಗೆ ಸಮರ್ಪಕವಾಗಿ ತಲುಪಲು ‘ಗುಡ್‌ಬಾಕ್ಸ್‌ ಆ್ಯಪ್‌’ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತ ಮತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿಯೇ ಇದರ ಅಗತ್ಯ ಹೆಚ್ಚಿಗೆ ಇದೆ.‘ಈಚೆಗೆ  ಗ್ರಾಹಕರ ವರ್ತನೆ ಬದಲಾಗುತ್ತಿದೆ. ಅವರಿಗೆ ಸರಕು ಮತ್ತು  ಸೇವೆಗಳು ಚೆನ್ನಾಗಿರಬೇಕು. ಹಣ ಪಾವತಿಗೆ ಆನ್‌ಲೈನ್‌ ಸೌಲಭ್ಯ ಇರಬೇಕು. ಮನೆ ಅಥವಾ ಕಚೇರಿಯಲ್ಲಿ ಆರಾಮವಾಗಿ ಕುಳಿತುಕೊಂಡೇ ವಹಿವಾಟು ನಡೆಸಬೇಕು ಎನ್ನುವ ಪ್ರವೃತ್ತಿ ಬೆಳೆಯುತ್ತಿದೆ.  ಅವರ ಇಂತಹ ಬೇಡಿಕೆಗಳನ್ನು ಈಡೇರಿಸಲು ‘ಗುಡ್‌ಬಾಕ್ಸ್‌’ ಸಮರ್ಥವಾಗಿದೆ’ ಎಂದು ನಿತೀನ್ ಹೇಳುತ್ತಾರೆ.'ಗುಡ್‌ಬಾಕ್ಸ್‌'ನಲ್ಲಿ ಮಳಿಗೆ ತೆರೆಯುವವರಿಂದ ವಾರ್ಷಿಕ ₹  999 ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ಸಂಸ್ಥೆಯ ವರಮಾನದ ಮೂಲ’ ಎಂದು ನಿತೀನ್‌ ಹೇಳುತ್ತಾರೆ.‘ವರ್ತಕರ ಅನುಕೂಲಕ್ಕಾಗಿ ಈ ಆ್ಯಪ್‌ನಲ್ಲಿ ನಿರ್ದಿಷ್ಟ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮಳಿಗೆದಾರರ ಪ್ರತ್ಯೇಕ ಅಗತ್ಯಗಳನ್ನು  ಆಧರಿಸಿ ಬೇರೆ ಸೌಲಭ್ಯಗಳನ್ನೂ ಒದಗಿಸುವ ಸೌಲಭ್ಯವೂ ಇಲ್ಲಿದೆ. ಮುಂಬರುವ ದಿನಗಳಲ್ಲಿ ವರ್ತಕರ ಹೆಚ್ಚುವರಿ ಅಗತ್ಯಗಳನ್ನು  ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ನೀಡಲಾಗುವುದು.ಗ್ರಾಹಕರಿಗೆ ಇಲ್ಲಿ ಯಾವುದೇ ಹೊರೆ ಇರುವುದಿಲ್ಲ. ‘ಬೆಂಗಳೂರಿನಲ್ಲಿ 4 ಸಾವಿರ ಮಳಿಗೆಗಳು ಈಗಾಗಲೇ 'ಗುಡ್‌ಬಾಕ್ಸ್‌'ನಲ್ಲಿ ಮಳಿಗೆ ತೆರೆದಿವೆ. ಬೆಳಗಾವಿಯ  ಕೇಬಲ್‌ ಆಪರೇಟರ್ಸ್‌ಗಳೂ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.ಮುಂದಿನ 6 ತಿಂಗಳಲ್ಲಿ ಚೆನ್ನೈ, ಮುಂಬೈ ನಗರಗಳಲ್ಲಿ ಇದರ ಸೇವೆ ವಿಸ್ತರಿಸಲಾಗುವುದು. ನೆಕ್ಸಸ್‌ ವೆಂಚರ್ಸ್‌ ₹ 16.75 ಕೋಟಿಗಳಷ್ಟು ಹಣ ಹೂಡಿಕೆ ಮಾಡಿದೆ. ವಹಿವಾಟು ವಿಸ್ತರಣೆಗೆ ಇನ್ನೂ ಹಣ ಬೇಕಾಗಬಹುದು’ ಎಂದು ನಿತೀನ್‌ ಹೇಳುತ್ತಾರೆ.‘ಎಲ್ಲರ ಆನ್‌ಲೈನ್‌ ಮಳಿಗೆ’– ಇದು ಗುಡ್‌ ಬಾಕ್ಸ್‌ನ –  ಘೋಷವಾಕ್ಯವಾಗಿದೆ. ಈಗ ಬಹುತೇಕ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ ಇದೆ. ದಿನೇ ದಿನೇ ಸ್ಮಾರ್ಟ್‌ಫೋನ್‌ಗಳ ಬಳಕೆಯೂ ಹೆಚ್ಚುತ್ತಿದೆ. ದೂರಸಂಪರ್ಕ ಸೇವಾ ಸಂಸ್ಥೆಗಳ ಮಧ್ಯದ ಪೈಪೋಟಿ ಫಲವಾಗಿ ಇಂಟರ್‌ನೆಟ್‌ ವೆಚ್ಚವೂ ಕಡಿಮೆಯಾಗಲಿದೆ. ಹೀಗಾಗಿ ಗುಡ್‌ಬಾಕ್ಸ್‌ ಆ್ಯಪ್‌ ಸಾಕಷ್ಟು ಜನಪ್ರಿಯವಾಗಲಿದೆ’ ಎಂದು ನಿತೀನ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.‘ವರ್ತಕರು ತಮ್ಮ ರಿಯಾಯ್ತಿ ಅಥವಾ ವಿಶೇಷ ಕೊಡುಗೆಗಳನ್ನು ನೇರವಾಗಿ ಗ್ರಾಹಕರ ಗಮನಕ್ಕೆ ತರಬಹುದು.  ಗುಡ್‌ಬಾಕ್ಸ್‌ನಲ್ಲಿ ಮಳಿಗೆ ಆರಂಭಿಸುವವರ ವಿಶಿಷ್ಟ ಅಗತ್ಯಗಳನ್ನು – ಈಡೇರಿಸಲು  ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವ ಪ್ರತ್ಯೇಕ ತಂಡವೂ ಗುಡ್‌ಬಾಕ್ಸ್‌ ಜತೆ ಕೆಲಸ ಮಾಡುತ್ತಿದೆ.  ಹೆಚ್ಚುವರಿ ಸೇವಾ – ಸೌಲಭ್ಯಗಳನ್ನು ಇಂತಹ ಡೆವಲಪರ್ಸ್‌ಗಳ ಮೂಲಕ  ಒದಗಿಸಲಾಗುತ್ತಿದೆ.‘ಗ್ರಾಹಕರಿಗೆ ನಾಳೆ ಎಷ್ಟು ಹಾಲು ಬೇಕು, ಹಾಲು ಬೇಡ ಅಥವಾ ಹಾಲಿನ ಬದಲು ಮೊಸರು ಬೇಕು ಎನ್ನುವ ಮಾಹಿತಿ ಹಿಂದಿನ ರಾತ್ರಿಯೇ ತಿಳಿದು ಬಂದರೆ ಹಾಲು ಪೂರೈಕೆದಾರರು ತಮ್ಮ ವಹಿವಾಟನ್ನು ಹೆಚ್ಚು ದಕ್ಷತೆಯಿಂದ ಮಾಡಬಹುದು. ಅಂತಹ ಒಂದು ವಿಶಿಷ್ಟ ಕೋರಿಕೆಯೂ ಬಂದಿತ್ತು. ಈ ಬೇಡಿಕೆಯನ್ನು ಕೆಲ ಮಟ್ಟಿಗೆ ಈಡೇರಿಸಲಾಗಿದೆ. ಈ ಸೌಲಭ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಾಗುತ್ತಿದೆ’ ಎಂದು ನಿತೀನ್ ಹೇಳುತ್ತಾರೆ.ಕೇಬಲ್‌ ಆಪರೇಟರ್‌, ಇಂಟರ್‌ನೆಟ್‌ ಸೇವೆ ಒದಗಿಸುವವರು, ಮನೆ ಮನೆಗೆ ದಿನಪತ್ರಿಕೆ ಹಾಕುವವರು ತಮ್ಮ ಗ್ರಾಹಕರಿಂದ ಒಂದೆಡೆಯೇ ಹಣ ಸಂಗ್ರಹಿಸಲೂ ‘ಗುಡ್‌ಬಾಕ್ಸ್‌’ ನೆರವಾಗಲಿದೆ.ಗುಡ್‌ಬಾಕ್ಸ್‌ನಲ್ಲಿ ಎರಡು ಬಗೆಯ ಆ್ಯಪ್‌ಗಳಿವೆ. ಒಂದು ಬಳಕೆದಾರರ ಉದ್ದೇಶಕ್ಕೆ ಮತ್ತು ಇನ್ನೊಂದು ವರ್ತಕರ ಬಳಕೆಗೆ ಪ್ರತ್ಯೇಕ (ಪಾರ್ಟ್‌ನರ್‌ ಆ್ಯಪ್‌) ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ.  ಗುಡ್‌ಬಾಕ್ಸ್‌ ಪಾರ್ಟ್‌ನರ್‌ ಆ್ಯಪ್‌ನಲ್ಲಿ – ವರ್ತಕರು ತಮ್ಮ ಮಳಿಗೆಯನ್ನು  ತಾವೇ ಆರಂಭಿಸಬಹುದು.ಬೆಂಗಳೂರಿನಲ್ಲಿ ಎಂಕೆ ಸೂಪರ್‌ ಮಾರ್ಕೆಟ್‌, ವೀಣಾ ಸ್ಟೋರ್‌, ಹಳ್ಳಿ ಮನೆ, ಮಯ್ಯಾಸ್‌, ಅಡಿಗಾಸ್‌, ಎಂಪೈರ್‌ ಹೋಟೆಲ್, ಇಂದಿರಾನಗರದ ಹೋಲ್‌ ಇನ್‌ದ ವಾಲ್‌ ಕೆಫೆ ಮತ್ತಿತರ ಜನಪ್ರಿಯ  ರೆಸ್ಟೊರೆಂಟ್‌, ದಿನಸಿ ಅಂಗಡಿಗಳು ಗುಡ್‌ಬಾಕ್ಸ್‌ನಲ್ಲಿ ಅಂಗಡಿ ತೆರೆದಿವೆ.‘ಗುಡ್‌ಬಾಕ್ಸ್‌’ ಆ್ಯಪ್‌ ಬಳಸುವ ಮಳಿಗೆಗಳಲ್ಲಿ ಆ್ಯಪ್‌ನ ಲಾಂಛನ ಪ್ರದರ್ಶಿಸಲಾಗಿರುತ್ತದೆ. ಹೀಗಾಗಿ ಗ್ರಾಹಕರು ಸುಲಭವಾಗಿ ಗುರುತಿಸಬಹುದು.ನಗರದ ಬೇರೆ, ಬೇರೆ ಪ್ರದೇಶವಾರು  ಮಳಿಗೆಗಳನ್ನು ಶೋಧಿಸುವ ಸೌಲಭ್ಯವೂ ಇದರಲ್ಲಿ ಇದೆ.ಗ್ರಾಹಕರು ತಮಗೆ ಬೇಕಾದ ಔಷಧ ಮತ್ತು ಮಾತ್ರೆಗಳ ಬಗ್ಗೆ  ಮನೆಯ ಹತ್ತಿರದ ಔಷಧಿ ವ್ಯಾಪಾರಿಗಳಿಗೆ ಆ್ಯಪ್‌ನಲ್ಲಿಯೇ ವಿವರ ನೀಡಿದರೆ ಔಷಧ ವ್ಯಾಪಾರಿಗಳು ಅವುಗಳನ್ನು ಮನೆಗೆ ತಲುಪಿಸಬಹುದು.‘ಆನ್‌ಲೈನ್‌ನ ಈ  ದೊಡ್ಡ ಸಂತೆಯನ್ನು ದುರ್ಬಳಕೆ ಮಾಡಿಕೊಳ್ಳಲು ನಕಲಿ ವರ್ತಕರು, ಕಳಪೆ ಸರಕು ಮಾರಾಟಗಾರರೂ ಬರುವ ಸಾಧ್ಯತೆ ಇದೆ.  ಅದನ್ನು ತಡೆಯಲು ‘ತಿಳಿಯಿರಿ ನಿಮ್ಮ ಗ್ರಾಹಕರು’ (ಕೆವೈಸಿ) ಮಾದರಿಯಲ್ಲಿ  ಅಗತ್ಯ ದಾಖಲೆಗಳನ್ನು ಪರೀಕ್ಷಿಸಿ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗುವುದು’ ಎಂದು ನಿತೀನ್‌ ಸ್ಪಷ್ಟಪಡಿಸುತ್ತಾರೆ.ಸಂತೆಯಲ್ಲಿ ಗೌಜು ಗದ್ದಲ ಇರುವಂತೆ, ಇಲ್ಲಿಯೂ ಸೇವಾ ಕುಂದುಕೊರತೆ ಬಗ್ಗೆ ಗ್ರಾಹಕರು ಮತ್ತು ಗ್ರಾಹಕರ ಬಗ್ಗೆ ಯಾವುದೇ ದೂರುಗಳಿದ್ದರೆ ಮಾಲೀಕರು ದೂರು ದಾಖಲಿಸುವ ಪ್ರತ್ಯೇಕ ವ್ಯವಸ್ಥೆಯೂ ಇಲ್ಲಿ ಇದೆ. ಇದಕ್ಕೆ ಮಾರುಕಟ್ಟೆಯ ಶಿಸ್ತು ಪಾಲನೆ (market place discipline )  ಎನ್ನುತ್ತಾರೆ.‘ಈ ಆ್ಯಪ್‌ ಬಗ್ಗೆ  ಮೌಖಿಕ ಪ್ರಚಾರ ಹೆಚ್ಚಾಗಿದೆ. ಬಳಕೆದಾರರು, ವರ್ತಕರೇ ಈ ಬಗ್ಗೆ ತಮ್ಮ, ತಮ್ಮ ಪರಿಚಯದವರಿಗೆ ವಿವರ ನೀಡಿ, ಆ್ಯಪ್‌ ಅಳವಡಿಸಿಕೊಳ್ಳಲು ಹೇಳುತ್ತಿದ್ದಾರೆ’ ಎಂದು ನಿತೀನ್‌ ಹೇಳುತ್ತಾರೆ.ಏಳು ಜನರ ತಂಡ

ಬ್ರಹ್ಮಾವರದವರಾದ  ನಿತೀನ್‌  ಚಂದ್ರ ಜಿ. ಎಸ್‌., ಸುರತ್ಕಲ್‌ ಎನ್‌ಐಟಿಯ ಎಂಜಿನಿಯರ್‌ ಪದವೀಧರರಾಗಿದ್ದು, ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಮಾಡಿದ್ದಾರೆ. ಇವರು ತಮ್ಮ ಮೂವರು ಸಹಪಾಠಿಗಳು ಮತ್ತು ಇತರರ ಜತೆ ಸೇರಿಕೊಂಡು ಈ ‘ಆ್ಯಪ್‌ ಸಂತೆ’ ಅಭಿವೃದ್ದಿಪಡಿಸಿದ್ದಾರೆ. ರೆಡ್‌ಬಸ್‌ನ ಕೋರ್‌ ಟೀಮ್‌ನಲ್ಲಿ ಇದ್ದ ಮಯಂಕ್‌ ಮತ್ತು ಎ. ಬಿ. ಝಕಾರಿಯಾ ಅವರೂ ಗುಡ್‌ಬಾಕ್ಸ್‌ನ ವಹಿವಾಟಿನಲ್ಲಿ ಪಾಲುದಾರರಾಗಿದ್ದಾರೆ.  ಸಹ ಸ್ಥಾಪಕರಾದ  7 ಜನರ ಪೈಕಿ ನಾಲ್ವರು ಕನ್ನಡಿಗರು ಇದ್ದಾರೆ. ಸಂಸ್ಥೆಯಲ್ಲಿ 50 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಮಾಹಿತಿಗೆ: 080-45133500 ಮತ್ತು Email: contact@goodbox.in ಸಂಪರ್ಕಿಸಬಹುದು.

       

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.