ಶುಕ್ರವಾರ, ಜನವರಿ 24, 2020
27 °C
ಕ್ರಿಕೆಟ್‌: ಮೂರನೇ ಟೆಸ್ಟ್‌ನಲ್ಲೂ ಇಂಗ್ಲೆಂಡ್‌ಗೆ ಸೋಲು; ಆರು ವರ್ಷಗಳ ಬಳಿಕ ನನಸಾದ ಆತಿಥೇಯರ ಕನಸು

ಆ್ಯಷಸ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ್ಯಷಸ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಜಯಭೇರಿ

ಪರ್ತ್‌ (ಎಎಫ್‌ಪಿ): ಆ್ಯಷಸ್‌ ಟ್ರೋಫಿಯನ್ನು ಮರಳಿ ಪಡೆಯುವ ಆಸ್ಟ್ರೇಲಿಯಾ ತಂಡದವರ ಕನಸು ನನಸಾಗಿದೆ. ಆದರೆ ಅದಕ್ಕಾಗಿ ಆರು ವರ್ಷ ಕಾಯಬೇಕಾಯಿತು. ಈ ತಂಡದವರು ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ.ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಕೊನೆಗೊಂಡ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 150 ರನ್‌ಗಳಿಂದ ಪ್ರವಾಸಿ ಇಂಗ್ಲೆಂಡ್‌ ತಂಡವನ್ನು ಮಣಿಸಿತು. ಅಷ್ಟು ಮಾತ್ರವಲ್ಲದೇ, ಐದು ಪಂದ್ಯಗಳ ಸರಣಿಯಲ್ಲಿ 3–0ರಲ್ಲಿ ಗೆಲುವಿನ ಮುನ್ನಡೆ ಸಾಧಿಸಿದೆ. ಈ ಗೆಲುವಿನ ಬಳಿಕ ಆತಿಥೇಯರ ಸಂಭ್ರಮ ಮುಗಿಲು ಮುಟ್ಟಿತ್ತು. ಡ್ರೆಸ್ಸಿಂಗ್‌ ಕೋಣೆಯಲ್ಲೂ ಅದು ಮುಂದುವರಿಯಿತು.ಕಾಂಗರೂ ಪಡೆ ನೀಡಿದ್ದ 504 ರನ್‌ಗಳ ಗುರಿಗೆ ಉತ್ತರವಾಗಿ ಇಂಗ್ಲೆಂಡ್‌ ತಂಡದವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ ಪಂದ್ಯದ ಅಂತಿಮ ದಿನ 103.2 ಓವರ್‌ಗಳಲ್ಲಿ 353 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡರು.ನಾಲ್ಕನೇ ದಿನದಾಟದಲ್ಲಿ 72 ರನ್‌ ಗಳಿಸಿ ಅಜೇಯರಾಗುಳಿದಿದ್ದ ಬೆನ್‌ ಸ್ಟೋಕ್ಸ್‌ ಚೊಚ್ಚಲ ಶತಕ ಗಳಿಸಿದರು. 195 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್‌ ಹಾಗೂ 18 ಬೌಂಡರಿ ಗಳಿಸಿದರು. ಆದರೆ ಅವರಿಗೆ ಉಳಿದ ಆಟಗಾರರಿಂದ ಉತ್ತಮ ಬೆಂಬಲ ಸಿಗಲಿಲ್ಲ.ವೇಗಿ ಮಿಷೆಲ್‌ ಜಾನ್ಸನ್‌ (78ಕ್ಕೆ4) ಹಾಗೂ ಆಫ್‌ ಸ್ಪಿನ್ನರ್‌ ನೇಥನ್‌ ಲಿಯೋನ್‌ (70ಕ್ಕೆ3) ಅವರ ಪ್ರಭಾವಿ ಬೌಲಿಂಗ್‌ ದಾಳಿಗೆ ಪ್ರವಾಸಿ ತಂಡದ ಕೊನೆಯ ಸರದಿಯ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು.ಮೊದಲ ಎರಡೂ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ಪಾರಮ್ಯ ಮೆರೆದಿತ್ತು. ಈ ತಂಡದವರು 2006–07ರಲ್ಲಿ ಕೊನೆಯ ಬಾರಿ ಆ್ಯಷಸ್‌ ಸರಣಿ ಜಯಿಸಿದ್ದರು. ಆ ಬಳಿಕ ಇಂಗ್ಲೆಂಡ್‌ ಈ ಸರಣಿಯ ಮೇಲೆ ಹಿಡಿತ ಸಾಧಿಸಿತ್ತು. ಈ ವರ್ಷದ ಆರಂಭದಲ್ಲಿ ಸ್ವದೇಶದಲ್ಲಿ ನಡೆದ ಸರಣಿಯಲ್ಲೂ ಇಂಗ್ಲೆಂಡ್‌ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಆ ಆಸೆ ಕೈಗೂಡಲಿಲ್ಲ.‘ಇದೊಂದು ಅಮೋಘ ಸಾಧನೆ. ಏನು ಹೇಳಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಆ್ಯಷಸ್‌ ಟ್ರೋಫಿಯನ್ನು ಮರಳಿ ಪಡೆದಿದ್ದೇವೆ ಎಂದಷ್ಟೇ ಹೇಳಬಲ್ಲೆ’ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಪ್ರತಿಕ್ರಿಯಿಸಿದ್ದಾರೆ.‘ಸರಣಿಯಲ್ಲಿ ಉಳಿದಿರುವ ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟರವರೆಗೆ  ನಾವು ವಿರಮಿಸುವುದಿಲ್ಲ’ ಎಂದಿದ್ದಾರೆ.ಸ್ಕೋರ್‌ ವಿವರ: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 103.3 ಓವರ್‌ಗಳಲ್ಲಿ 385 ಹಾಗೂ 87 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 369 ಡಿಕ್ಲೇರ್ಡ್‌; ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 88 ಓವರ್‌ಗಳಲ್ಲಿ 251 ಹಾಗೂ 103.2 ಓವರ್‌ಗಳಲ್ಲಿ 353 (ಬೆನ್‌ ಸ್ಟೋಕ್ಸ್‌ 120; ಮಿಷೆಲ್‌ ಜಾನ್ಸನ್‌ 78ಕ್ಕೆ4, ನೇಥನ್‌ ಲಿಯೋನ್‌ 70ಕ್ಕೆ3). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 150 ರನ್‌ಗಳ ಗೆಲುವು ಹಾಗೂ ಐದು ಪಂದ್ಯಗಳ ಸರಣಿಯಲ್ಲಿ 3–0ರಲ್ಲಿ ಗೆಲುವಿನ ಮುನ್ನಡೆ. ಪಂದ್ಯ ಶ್ರೇಷ್ಠ: ಸ್ಟೀವನ್‌ ಸ್ಮಿತ್‌.

ಪ್ರತಿಕ್ರಿಯಿಸಿ (+)