ಆ ಗುಡ್ಡದಲ್ಲಿ... ಆ ಮೌನದಲ್ಲಿ...

7

ಆ ಗುಡ್ಡದಲ್ಲಿ... ಆ ಮೌನದಲ್ಲಿ...

Published:
Updated:

ಅಮ್ಮನ ಹೊಲಿಗೆ ಮೆಷಿನಿನ ಮೇಲೆ ಪುಸ್ತಕ ಇಟ್ಟುಕೊಂಡು ಹುಡುಗನ ಓದು. ಎಂದಿನಂತೆ ಕರೆಂಟು ಹೋಯ್ತು. ಅಮ್ಮ ಕಂದೀಲು ಉರಿಸಿದಳು. ಕಂದೀಲಿನ ನೆಳಲು ಬೆಳಕಿನ ತೂಗಾಟ. ಹುಡುಗನ ಮನಸ್ಸಿನಲ್ಲೂ ಹೊಯ್ದಾಟ. ತೂಕಡಿಕೆ. ಆ ತೂಗಾಟದಲ್ಲೇ ನೆನಪಾದದ್ದು, ಶಾಲೆಯಲ್ಲಿ ಮೇಷ್ಟ್ರು ಹೇಳಿದ `ಕಾವ್ಯ-ಗಾಯನ ಸ್ಪರ್ಧೆ'ಯ ವಿಷಯ. ಅಮ್ಮ ಉರಿಸಿದ ಕಂದೀಲು ಇದ್ದಕ್ಕಿದ್ದಂತೆ ಎದೆಯಲ್ಲೂ ಉರಿದಂತಾಯಿತು. ಆ ಉರಿಯಲ್ಲಿ ಪದಗಳು ಹೊಳೆದವು, ಸಾಲುಗಳು ಮೂಡಿದವು, ಪ್ರಾಸಕ್ಕೆ ಪ್ರಾಸ ಸೇರಿತು. ಹಾಗೆ ಮೂಡಿದ ಸಾಲುಗಳು ಸಹಪಾಠಿಯೊಬ್ಬನ ಕಂಠಕ್ಕೆ ಒಗ್ಗಿದವು. ಆತ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಹಾಡಿದ. ಮೊದಲ ಬಹುಮಾನದ ಕರತಾಡನ. ಆಮೇಲೆ ಜಿಲ್ಲಾಮಟ್ಟದ ಸ್ಪರ್ಧೆಯಲ್ಲೂ ಮೊದಲ ಸ್ಥಾನ.ಹೀಗೆ, ಮೊದಲ ರಚನೆಯಲ್ಲೇ ಯಶಸ್ಸು ಗಳಿಸಿದ ಹುಡುಗನ ಹೆಸರು ಆರಿಫ್ ರಾಜಾ!

ಅಮ್ಮ ಸೂಜಿ ದಾರದ ಮೂಲಕ ಬಟ್ಟೆಗಳ ಹೊಲಿದರೆ, ಮಗನಿಗೆ ಕಾವ್ಯವೇ `ಬಟ್ಟೆ'. ಮನುಷ್ಯ ಸಂಬಂಧಗಳ ಹುಡುಕಾಟಕ್ಕೆ, ತಾನು ಬದುಕುವ ಪರಿಸರದ ತವಕತಲ್ಲಣಗಳ ಅಭಿವ್ಯಕ್ತಿಗೆ, ಒಳಗಿನ ತುಡಿತಗಳಿಗೆ ಕಂಪನಗಳಿಗೆ ಕವಿತೆಯ ದಾರಿ.ಕಂದೀಲು, ನೆಳಲು ಬೆಳಕಿನ ಉಯ್ಯಾಲೆ, ಒಮ್ಮೆಗೇ ಮೂಡಿದ ಸಾಲುಗಳ ಅಚ್ಚರಿ, ಎದೆಯೊಳಗಿನ ಉರಿ, ಸ್ಪರ್ಧೆ ಸಮ್ಮಾನದ ಗರಿ- ಕವಿತೆಯೊಂದರ ದೇಹದ ಚೆಲ್ಲಾಪಿಲ್ಲಿ ತುಣುಕುಗಳಂತೆ ಕಾಣುವ ಇವೆಲ್ಲ ಆರಿಫ್ ಸಾಗಿಬಂದ ದಾರಿಯ ಹೆಜ್ಜೆಗುರುತುಗಳೂ ಹೌದು. ರಾಯಚೂರು ಸೀಮೆಯ ಈ ಯುವ ಕವಿಗೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ.`ಜಂಗಮ ಫಕೀರನ ಜೋಳಿಗೆ' ದೀಪಾವಳಿ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕವಿತೆ. ಇದೇ ಕವಿತೆಯ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಕಾವ್ಯಸಂಕಲನಕ್ಕೀಗ ಕೇಂದ್ರ ಸಾಹಿತ್ಯ ಅಕಾಡೆಮಿ `ಯುವ ಪ್ರಶಸ್ತಿ' ಸಂಭ್ರಮ.ಆರಿಫ್ ತವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೆರಾ. ಹತ್ತನೇ ಇಯತ್ತೆವರೆಗೆ ಅಲ್ಲಿಯೇ ಕಲಿತದ್ದು. ಶಾಲಾ ದಿನಗಳಲ್ಲಿ ಆರಿಫ್‌ಗೆ ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ. ಶಾಲೆಯ ಗ್ರಂಥಾಲಯದಲ್ಲಿದ್ದ ವಿಜ್ಞಾನ ಪುಸ್ತಕಗಳ ದೂಳು ಕೊಡವಿ ಓದಿದರು. ಗೆಳೆಯರೊಂದಿಗೆ ಕೂಡಿ ಟೆಲಿಸ್ಕೋಪ್ ಮಾಡಿಕೊಂಡು, ಗುಡ್ಡದ ತುದಿಯಲ್ಲಿ ಮುಗಿಲಿಗೆ ಕಣ್ಣುನೆಟ್ಟು ನಕ್ಷತ್ರ ವೀಕ್ಷಿಸಿದರು. ಹೀಗೆ, ವಿಜ್ಞಾನದ ಗುಂಗು ಹತ್ತಿಸಿಕೊಂಡ ಸಮಯದಲ್ಲೇ ಗಮನ ಸೆಳೆದದ್ದು ಮಹಾಂತೇಶ ಮಸ್ಕಿ ಎನ್ನುವ ವಿಜ್ಞಾನದ ಮೇಷ್ಟ್ರು.

ಒಂದು ದಿನ ಬಾಲಕ ಆರಿಫ್ ಲೈಬ್ರರಿಯಲ್ಲಿ ಪುಸ್ತಕಗಳ ತಡಕಾಟದಲ್ಲಿದ್ದಾಗ ದೂಳು ತುಂಬಿದ ಒಂದಷ್ಟು ಪುಸ್ತಕಗಳು ಆಯತಪ್ಪಿ ಕೆಳಗೆ ಬಿದ್ದವು. ಆ ಪುಸ್ತಕಗಳ ನಡುವೆಯೊಂದು ಬೆತ್ತಲೆ ಹೆಣ್ಣಿನ ದೇಹದ ಮುಖಪುಟ ಹೊಂದಿರುವ ಪುಸ್ತಕ. ಹುಡುಗನಿಗೆ ಗಾಬರಿ. ಸನಿಹದಲ್ಲೇ ಗೆಳೆಯರು, ಮೇಷ್ಟ್ರ ಸರಿದಾಟ.ಒಲೆಯಿಂದ ಹೊರಬಿದ್ದ ಕೆಂಡವನ್ನು ಅರೆಕ್ಷಣದಲ್ಲಿ ಒಲೆಗೆ ದೂಡುವಂತೆ ಪುಸ್ತಕವನ್ನು ಕಪಾಟು ಸೇರಿಸಿದ್ದಾಯಿತು. ಆದರೆ, ಆ ಪುಸ್ತಕ ಹುಳುವಿನಂತೆ ಮನಸ್ಸನ್ನು ಕೊರೆಯತೊಡಗಿತು. ಯಾರೂ ಇಲ್ಲದೆ ಇದ್ದಾಗ ಮತ್ತೆ ಪುಸ್ತಕದ ತಡಕಾಟ. ಪುಟ ತಿರುಗಿಸಿದರೆ ಎದುರಾದುದು ಕವಿತೆಗಳು! ಆ ಕವನ ಸಂಕಲನದ ಕವಿ: ಮಹಾಂತೇಶ ಮಸ್ಕಿ. ಕಡಿಮೆ ಮಾತಿನ ವಿಚಿತ್ರ ಮೇಷ್ಟ್ರು ಬರೆದ ಪದ್ಯಗಳ ಕಟ್ಟದು! ಮುಖಪುಟದಲ್ಲಿನ ಚಿತ್ರ (ಪಿ.ಎ.ಬಿ. ಈಶ್ವರ್) ಒಂದು ವಿಲಕ್ಷಣ ಕವಿತೆಯಂತೆ ಆರಿಫ್‌ಗೆ ಕಾಣಿಸಿತು. ಅದು ಕವಿತೆಯ ಹೊಸ ಬಾಗಿಲೊಂದು ತೆರೆದ ಕ್ಷಣ. ಎದೆಯಲ್ಲಿ ಚಿಟ್ಟೆ ಹಾರಿದ ಸಪ್ಪಳ.ಆರಿಫ್ ಮನೆಯಿದ್ದುದು ಲಿಂಗಾಯತರ ಓಣಿಯಲ್ಲಿ. ಅಲ್ಲೊಬ್ಬಳು ಹುಡುಗಿಗೆ ಅಯಸ್ಕಾಂತ ಗುಣವಿದೆ ಅನ್ನಿಸಿತ್ತು. ಆದರೆ, ಎದೆಯ ಬಣ್ಣಗಳನ್ನು ಕವಿತೆಯಲ್ಲಿ ಮೂಡಿಸುವುದು ಹೇಗೆ? ಕವಿತೆ ಒಂದು ಸವಾಲಿನಂತೆ ಕಾಣಿಸತೊಡಗಿತು. ಕಾವ್ಯದ ದಾರಿಯಲ್ಲವರು ಜೋಳಿಗೆ ಹಿಡಿದು ನಡೆದರು. ಕಾವ್ಯಕನ್ನಿಕೆಯಂತೂ ಕೈಹಿಡಿದಳು.ಹೈಸ್ಕೂಲು ಮುಗಿದ ಮೇಲೆ ತಮ್ಮನ್ನು ಕಾಡುವ, ತಮ್ಮ ಕವಿತೆಗಳಲ್ಲಿ ಬಂದು ಕೂರುವ ಹುಡುಗ ಹುಡುಗಿಯರನ್ನು ಬಿಟ್ಟು ಕಾಲೇಜು ಮೆಟ್ಟಿಲು ಹತ್ತಿದರು. ಪಿಯುಸಿಯಲ್ಲಿ ಆರಿಸಿಕೊಂಡಿದ್ದು ವಿಜ್ಞಾನ. ಆದರೆ, ವಿಜ್ಞಾನದ ಕಲಿಕೆ ಸಹನೀಯ ಅನ್ನಿಸಲಿಲ್ಲ.ಲ್ಯಾಬೊರೇಟರಿಗಳು ಕುತೂಹಲ ಹುಟ್ಟಿಸಲಿಲ್ಲ. ತರಗತಿಗಳಿಗಿಂತ ರಾಯಚೂರಿನ ಗುಡ್ಡಗಳ ಸಖ್ಯವೇ ಹಿತವೆನ್ನಿಸಿತು. ಹೊಟ್ಟೆ ತುಂಬಿಸಲು ಖಾನಾವಳಿಯಿತ್ತು. ಅಮ್ಮ ಬಟ್ಟೆ ಹೊಲಿದು ದುಡ್ಡು ಕಳಿಸುತ್ತಿದ್ದಳು. ಆರಿಫ್ ಪರೀಕ್ಷೆಯಲ್ಲಿ ನಪಾಸಾದರು. ಎರಡು ವರ್ಷ ಗುಡ್ಡಗಳ ಸಖ್ಯದೊಂದಿಗೇ ದಿನ ಕಳೆದವು. ಆರಿಫ್ ಮತ್ತು ಗುಡ್ಡ- ಬೇರೆ ಮಾತೇ ಇಲ್ಲ! ಪ್ರಶ್ನೆಗಳನ್ನು ಮೈಗೂಡಿಸಿಕೊಂಡ ತರುಣ; ಮಹಾಮೌನದ ಮೂರ್ತರೂಪ ಗುಡ್ಡ. ತನ್ನ ಬಗ್ಗೆ ತನಗೇ ಭಯ ಕಾಡತೊಡಗಿದಾಗ, ಆರಿಫ್ ಮತ್ತೆ ಕಾಲೇಜು ಮೆಟ್ಟಿಲು ತುಳಿದರು. ಕಲಾ ವಿಭಾಗ ಕೈಬಿಡಲಿಲ್ಲ. ಒಳ್ಳೆಯ ಅಂಕಗಳು ಬಂದವು, ಡಿ.ಎಡ್‌ಗೆ ಪ್ರವೇಶ ದೊರೆಯಿತು.ಮೈಸೂರಿನಲ್ಲಿ ಶಿಕ್ಷಕ ತರಬೇತಿ ಪಡೆದ ಆರಿಫ್‌ಗೆ ಪ್ರಾಥಮಿಕ ಶಾಲಾ ಶಿಕ್ಷಕನ ಹುದ್ದೆ ದೊರೆಯಿತು. ಉಪ್ಪರಾಳ ಕ್ಯಾಂಪ್‌ನ ಶಾಲೆ. ಏಕೋಪಾಧ್ಯಾಯರಾಗಿ ಆರಿಫ್ ಆ ಶಾಲೆಯನ್ನು ಆರಂಭಿಸಿದರು. ಮರದ ಕೆಳಗೆ ತರಗತಿ. ಶಾಲೆ ಶುರುವಾದದ್ದು ಮೂವರು ಮಕ್ಕಳೊಂದಿಗೆ. ಇದೀಗ ಮಕ್ಕಳ ಸಂಖ್ಯೆ ನಲವತ್ತಕ್ಕೇರಿದೆ. ಸ್ವಂತ ಕಟ್ಟಡ ಬಂದಿದೆ. ಮತ್ತೊಬ್ಬ ಶಿಕ್ಷಕರು ಜೊತೆಯಾಗಿದ್ದಾರೆ. ಶಾಲೆಯೊಂದಿಗೆ ಮಕ್ಕಳೊಂದಿಗೆ ಮೇಷ್ಟರೂ ಬೆಳೆದಿದ್ದಾರೆ.`ಸೈತಾನನ ಪ್ರವಾದಿ' ಆರಿಫರ ಚೊಚ್ಚಿಲ ಕವನ ಸಂಕಲನ. ಮೊದಲ ಪುಸ್ತಕದ ಪ್ರಕಟಣೆ ಅಷ್ಟೇನೂ ಸವಿಯಾಗಿರಲಿಲ್ಲ. ಆನಂತರದ್ದು `ಜಂಗಮ ಫಕೀರನ ಜೋಳಿಗೆ'. ಅದರದ್ದು ಅಕ್ಷಯಪಾತ್ರೆಯ ಗುಣ. ಗುಲ್ಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ ಸೇರಿದಂತೆ ಅನೇಕ ಗೌರವಗಳು ಜೋಳಿಗೆಗೆ ಸಂದವು. ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರದ ಗರಿ.`ಸಂಜೆಯಾಗುತ್ತಲೆ ನನ್ನ ಮನಸ್ಸು ಹಾರಿಹೋಗುತ್ತದೆ' ಎನ್ನುವುದು ಗಜಲೊಂದರ ಸಾಲು. ಆರಿಫರ ಮನಸಿಗೆ ಇರುಳಿನ ಮರುಳು. ರಾತ್ರಿಯಾಯಿತೆಂದರೆ ಅವರು ಕಾವ್ಯವಶ. ರಾತ್ರಿ ಬಹು ಹೊತ್ತಿನವರೆಗೂ ನಿದ್ದೆ ಹತ್ತುವುದಿಲ್ಲ. ಕವಿತೆಗಳು ಮೂಡುತ್ತವೆ. ಬರವಣಿಗೆ ರಾತ್ರಿಯಲ್ಲಷ್ಟೇ ಸಾಧ್ಯವಾಗುತ್ತದೆ. ಇರುಳೊಂದು ಗುಡ್ಡದ ರೂಪದಲ್ಲಿ, ಮಹಾಮೌನದ ರೂಪದಲ್ಲಿ ಆವರಿಸಿಕೊಂಡು ಕಾವ್ಯವನ್ನು ಸ್ಫುರಿಸುತ್ತದೆ. ಹೀಗೆ ಕಾವ್ಯಕ್ಕೆ ನಿಷ್ಠನಾದ ಕವಿ ಕಥೆ ಬರೆದಿರುವುದೂ ಇದೆ. ಅದೂ ಒಂದು ಕಥೆ.ಆರಿಫ್ ಕವಿತೆಯ ಶಿಲ್ಪ ಅಚ್ಚುಕಟ್ಟು. ಆದರೆ, ಅವರ ಅಕ್ಷರಗಳ ಶಿಲ್ಪ ಮಾತ್ರ ಓರೆಕೋರೆ. ಅಕ್ಷರ ದುಂಡಗೆ ಇದ್ದಿದ್ದರೆ ಪರೀಕ್ಷೆಯಲ್ಲಿ ಇನ್ನಷ್ಟು ಅಂಕ ಸಿಗುತ್ತಿದ್ದವು ಅನ್ನಿಸಿದ್ದಿದೆ. ಕೋಳಿ ಕಾಲಿನ ಲಿಪಿ ನೆಪವಾಗಿಸಿಕೊಂಡು ವಿದ್ಯಾರ್ಥಿಗಳು ಮೇಷ್ಟ್ರ ಕಾಲೆಳೆದಿರುವುದೂ ಇದೆ. ಇಂಥ ಕವಿಗೆ, ದುಂಡುಮಲ್ಲಿಗೆ ಮೊಗ್ಗುಗಳನ್ನು ಅಕ್ಷರರೂಪದಲ್ಲಿ ಪೋಣಿಸಿಟ್ಟಂತೆ ಬರೆಯುವ ಒಬ್ಬ ಲಿಪಿಕಾರ ಗೆಳೆಯ.ಆತ ಒಂದು ಕಥೆ ಹೇಳಿಕೊಂಡ. ಗೆಳೆಯನ ಕಥೆಯನ್ನು ಕವಿತೆಯಲ್ಲಿ ಹಿಡಿದಿಡಲಿಕ್ಕೆ ಸಾಧ್ಯವಿಲ್ಲ ಎನ್ನಿಸಿತು. ಹೆಸರುಗಳನ್ನು, ಹೆಸರುಗಳ ನಡುವಣ ಕಥನವನ್ನು ಕವಿತೆಯಲ್ಲಿ ತರುವುದು ಹೇಗೆ? ಗೆಳೆಯನನ್ನೂ ಅವನ ಹುಡುಗಿಯನ್ನೂ ಕಥೆಯಲ್ಲಷ್ಟೇ ತರಬಹುದು ಎನ್ನಿಸಿತು. ಆಗ ಬರೆದ ಕಥೆ `ಕಥೆಯಾದ ಹುಡುಗಿ'. `ನೀವು ಕಾಣಿರೇ ನೀವು ಕಾಣಿರೇ' ಕೂಡ ಗೆಳೆಯರನ್ನು ಕಾಣಿಸಲೆಂದೇ ಬರೆದ ಕಥೆ.

ಆರಿಫ್ ಅವರ ಪದ್ಯಪ್ರೇಮದ ಗೆಳೆಯರ ನಡುವೆ ದಂತಕಥೆಗಳಿವೆ. ಇಂಥ ಕವಿಗೂ ವಿಮರ್ಶೆ ಬರೆಯುವ ಮೂಲಕ ವ್ರತಭಂಗ ಮಾಡಬಹುದು ಅನ್ನಿಸಿದ್ದಿದೆ. ಆದರೇನು ಮಾಡುವುದು, ಕಾವ್ಯದ್ದು ಸವತಿ ಮಾತ್ಸರ‌್ಯ. ಅದು ಗದ್ಯದ ಸಂಗಕ್ಕೆ ಬಿಡುವನ್ನೇ ಒದಗಿಸುತ್ತಿಲ್ಲ.ಆರಿಫ್ ಬಗ್ಗೆ ಮಾತನಾಡುವಾಗ ಅವರ ಕಾವ್ಯಭಾಷೆಯ ಚೆಲುವಿನ ಬಗ್ಗೆ ಮಾತನಾಡದೆ ಹೋದರೆ ಅದು ಅಸಡ್ಡೆಯಾದೀತು. ಅತ್ಯಂತ ಚೆಲುವಿನ ನುಡಿಗಟ್ಟು ಅವರ ಕವಿತೆಗಳದು. ಸರೀಕ ಕವಿಗಳಿಗೆ ಹೋಲಿಸಿದರೆ ಆರಿಫರ ಕಾವ್ಯದ ಪರಿಮಳ ಗುಲಗಂಜಿಯಷ್ಟು ಹೆಚ್ಚೇ.ವೈಚಾರಿಕ ನಿಲುವು ಮುಂದು ಮಾಡುವ ಭರದಲ್ಲಿ ಕಾವ್ಯದಲ್ಲಿ ಲಯ ಹಿಂದಾಗುತ್ತಿರುವ ದಿನಗಳಲ್ಲಿ, ವೈಚಾರಿಕತೆಯ ಜೊತೆಗೆ ಲಯ-ಶಿಲ್ಪಕ್ಕೂ ಒತ್ತು ಕೊಟ್ಟ ಕಸುಬುದಾರಿಕೆ ಅವರದು. ಈ ಚೆಲುವು, ಲಯ ದಕ್ಕಿದ್ದಾದರೂ ಹೇಗೆ? `ಬಹುಶಃ ಉರ್ದು ಕಾವ್ಯದ ಪ್ರಭಾವ ಇದ್ದಿರಬಹುದು' ಎನ್ನುತ್ತಾರೆ ಆರಿಫ್.ಇರೋದು ಲಿಂಗಾಯತರ ಓಣಿಯಲ್ಲಿ. ಒಡನಾಟ ಮುಸ್ಲಿಂ ಪರಿಸರದಲ್ಲಿ. ಬಂದೇ ನವಾಜ್ ದರ್ಗಾದಲ್ಲಿ ರಾತ್ರಿಯೆಲ್ಲ ಮೈದುಂಬಿಕೊಂಡ ಮೆಹಫಿಲ್‌ಗಳು, ಜುಗಲ್‌ಬಂದಿಗಳು. ಇವೆಲ್ಲ ಆರಿಫ್ ಕಾವ್ಯವನ್ನು ಪೋಷಿಸಿವೆ, ಚೆಲುವಾಗಿಸಿವೆ.`ತನ್ನ ಬಗ್ಗೆ ಏನು ಹೇಳಿಕೊಂಡರೂ ಅದು ಇತರರಿಗೆ ಅತಿಯಂತೆ ಕಾಣಿಸೀತು' ಎನ್ನುವ ಅಳುಕು ಅವರದು. `ತಾನು ಬದುಕುತ್ತಿರುವ ಬಹು ಭಾಷಿಕ, ಬಹು ಧರ್ಮೀಯ, ಬಹು ಸಂಸ್ಕೃತಿಯ ಪರಿಸರವೂ ತನ್ನ ಕವಿತೆಗೆ ಕಸುವಾಗಿ ಪರಿಣಮಿಸಿರಬಹುದು. ತತ್ವಪದ, ವಚನಗಳೂ ಜಂಗಮ ಫಕೀರನ ಜೋಳಿಗೆಯ ಕಾಳುಗಳಾಗಿರಬಹುದು' ಎನ್ನುವ ವಿನಯ ಅವರದ್ದು. ತನ್ನ ಖಾಸಗಿ ಕನವರಿಕೆಗಳಿಗೆ ಸಾಂಸ್ಕೃತಿಕ ಚಹರೆಯೂ ಇರುವ ಆಯಾಮ ಅವರಿಗೆ ಅಚ್ಚರಿಯಂತೆ, ಕಾವ್ಯದ ಶಕ್ತಿಯಂತೆ ತೋರಿದೆ.`ಕಣ್ಣೀರಿಲ್ಲದವನು ಕವಿ ಆಗಲಾರ. ಕಣ್ಣೀರಿಗೆ ವೈಯಕ್ತಿಕ- ಸಾಮಾಜಿಕ ಎನ್ನುವ ಭೇದ ಇಲ್ಲ' ಎನ್ನುವ ನಂಬಿಕೆ ಆರಿಫರದು. ಅವರ ಕವಿತೆಗಳಲ್ಲಿ ಕಣ್ಣೀರಿನ ಆರ್ದ್ರತೆಯನ್ನು ಸ್ಪಷ್ಟವಾಗಿ ಕಾಣಬಹುದು. ಆ ಆರ್ದ್ರತೆ ಕವಿತೆಯ ಶಕ್ತಿ ಆಗಿರುವಂತೆ ಕೆಲವೊಮ್ಮೆ ಮಿತಿಯೂ ಆಗಿರುವುದಿದೆ. ಹೀಗೆ, ಕಾವ್ಯದ ಕಾಲುದಾರಿಯಲ್ಲಿ ತನ್ನ ಹೆಜ್ಜೆಗಳನ್ನು ಮೂಡಿಸುತ್ತ, ನಡೆದುಬಂದ ದಾರಿಯನ್ನು ಆಗಾಗ ಹೊರಳಿನೋಡುತ್ತ, ನಡೆಯಬೇಕಾದ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳುತ್ತ ಸಾಗಿರುವ ಆರಿಫರಿಗೆ 2012ರ ಡಿಸೆಂಬರ್ ವಿಶೇಷ ತಿಂಗಳು. ಡಿಸೆಂಬರ್ 6 ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ಸಿಹಿ ಕೊಂಚ ತಡವಾಗಿ ತಲುಪಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ದೊರೆತಿದೆ. ಇದರ ಬೆನ್ನಿಗೇ ಅವರ ಹೊಸ ಕವಿತೆಗಳ ಸಂಕಲನ `ಬೆಂಕಿಗೆ ತೊಡಿಸಿದ ಬಟ್ಟೆ' ಇನ್ನೇನು ಓದುಗರ ಕೈ ಸೇರುವ ಹಂತದಲ್ಲಿದೆ (ಪ್ರ: ಪಲ್ಲವ ಪ್ರಕಾಶನ).ಪ್ರಶಸ್ತಿ, ಹೊಸ ಸಂಕಲನದ ಜೊತೆಗೆ ಮತ್ತೊಂದು ರಮ್ಯ ಕನಸಿಗೂ ಆರಿಫರ ಅಮ್ಮ ತಿದಿ ಒತ್ತಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾದಾಗ ಆ ತಾಯಿಗೆ ಸಿಕ್ಕಾಪಟ್ಟೆ ಖುಷಿ. ಅವರದ್ದು ಒಂದೇ ಕೋರಿಕೆ- `ಮದುವೆ ಆಗು'. ಬೆಳೆದ ಮಕ್ಕಳ ಎಲ್ಲ ಅಮ್ಮಂದಿರದೂ ಇದೇ ಆಸೆ.ಆರಿಫನ ಅಮ್ಮ ಮಗನಿಗೆ ಧಮಕಿ ಬೇರೆ ಹಾಕಿದ್ದಾರೆ. “ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಲ್ಲಿಗೆ ನಾನೂ ಬರ‌್ತೇನೆ. ಬಹುಮಾನ ಕೊಟ್ಟವರನ್ನು ಕೇಳ್ತೇನೆ- ನನ್ನ ಮಗನಿಗೊಂದು ಮದುವೆಯನ್ನೂ ಮಾಡಿಸಿ”. ಅಮ್ಮನ ಈ ಮಾತಿನಲ್ಲಿ ಒಂದು ಅಪೂರ್ವ ಕಾವ್ಯ ಇದೆಯಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry