ಗುರುವಾರ , ಅಕ್ಟೋಬರ್ 17, 2019
21 °C

ಆ... ಟಚ್ಚಲೇ...!

Published:
Updated:

ಆಗಿನ್ನೂ 10ನೇ ತರಗತಿಯಲ್ಲಿದ್ದೆ. ಸುಪ್ರಭಾತ ಚಾನೆಲ್‌ನಲ್ಲಿ ನಾದಲಹರಿ ಎಂಬ ಮಕ್ಕಳಿಗಾಗಿ ನಡೆಯುತ್ತಿದ್ದ ಹಾಡಿನ ಸ್ಪರ್ಧೆಯದು. ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದವರು ಸಂಗೀತ ನಿರ್ದೇಶಕ ಗುರುಕಿರಣ್. ತೀರ್ಪುಗಾರರು ಗಾಯಕ ರಾಜೇಶ್ ಕೃಷ್ಣನ್.

ನನ್ನ ಧ್ವನಿ ಮೆಚ್ಚಿದ ಗುರುಕಿರಣ್ ತಮ್ಮ ಸಂಗೀತ ನಿರ್ದೇಶನದ ಗೀತೆಗೆ ಟ್ರ್ಯಾಕ್‌ನಲ್ಲಿ ಹಾಡಲು ಅವಕಾಶ ನೀಡಿದರು. ಚಿತ್ರಕ್ಕಾಗಿ ಅದನ್ನು ಬಾಲಿವುಡ್‌ನ ಖ್ಯಾತ ಗಾಯಕಿಯೊಬ್ಬರು ಹಾಡಬೇಕಿತ್ತು.

 

ಆದರೆ ಟ್ರ್ಯಾಕ್ ಹಾಡನ್ನು ಇಷ್ಟಪಟ್ಟ ಗುರುಕಿರಣ್ ಅದನ್ನೇ ಚಿತ್ರಕ್ಕೆ ಉಳಿಸಿಕೊಂಡರು. ಆ ಹಾಡು ತುಂಬಾ ಜನಪ್ರಿಯವಾಯಿತು. ಮುಂದೆ ಅವಕಾಶಗಳನ್ನೂ ತಂದುಕೊಟ್ಟಿತು. ಅದೇ `ದಮ್~ ಚಿತ್ರದ `ಈ ಟಚ್ಚಲಿ ಏನೋ ಇದೆ...~ ಹಾಡು.ಎಷ್ಟೋ ಪ್ರತಿಭಾವಂತರು ಅವಕಾಶಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಈ ವಿಷಯದಲ್ಲಿ ನಾನು ಅದೃಷ್ಟವಂತೆ. ಅವಕಾಶಗಳೇ ನನ್ನನ್ನು ಹುಡುಕಿಕೊಂಡು ಬಂದವು.ಇವ್ಯಾವುದೂ ನಾನು ಬಯಸಿದ್ದಲ್ಲ. ಅಂದಹಾಗೆ, ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ. ಬೆಳೆದದ್ದು ಹಾಸನದಲ್ಲಿ. ಚಿಕ್ಕಂದಿನಲ್ಲಿ ಕಲಿತಿದ್ದು ಭರತನಾಟ್ಯ. ಅಪ್ಪ ಅಮ್ಮ ಇಬ್ಬರಿಗೂ ಸಂಗೀತದ ಒಲವು. ಹೀಗಾಗಿ ಒಳ್ಳೆ ಪ್ರೋತ್ಸಾಹವೂ ಇತ್ತು. ಮೂರನೇ ವಯಸ್ಸಿಗೇ ನೃತ್ಯ ಕಲಿಯಲು ಪ್ರಾರಂಭಿಸಿದಾಕೆ ನಾನು.

 

ಭರತನಾಟ್ಯ ಜೂನಿಯರ್‌ನಲ್ಲಿ ರ‌್ಯಾಂಕ್ ಕೂಡ ಬಂತು. ಆರನೇ ತರಗತಿಯಲ್ಲಿದ್ದಾಗ ಒಮ್ಮೆ ಕಾರ್ಯಕ್ರಮವೊಂದರ ಬಳಿಕ ಸುಮ್ಮನೆ ಹಾಡೊಂದನ್ನು ಗುನುಗುತ್ತಾ ಕುಳಿತಿದ್ದೆ. ಅದನ್ನು ಕೇಳಿಸಿಕೊಂಡ ಖ್ಯಾತ ಕೊಳಲು ವಾದಕ ಎ.ವಿ.ಪ್ರಕಾಶ್ ನಿನ್ನ ಸ್ವರ ಚೆನ್ನಾಗಿದೆ. ಸಂಗೀತ ಕಲಿಸಿಕೊಡುತ್ತೇನೆ ಎಂದರು.

 

ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಾಗ ಹಿಂದೆ ಮುಂದೆ ನೋಡದೆ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯಲು ಸೇರಿಕೊಂಡೆ. ಎರಡೂ ದೋಣಿಯಲ್ಲಿ ಪಯಣ ಅಸಾಧ್ಯ ಎಂದು ಗೊತ್ತಿತ್ತು. ಗಾಯನ ಅಥವಾ ನೃತ್ಯ- ಎರಡು ಆಯ್ಕೆಗಳಲ್ಲಿ ಆಯ್ದುಕೊಂಡದ್ದು ಗಾಯನವನ್ನು.

 

ಚಿಕ್ಕಂದಿನಲ್ಲೇ ಹಲವು ಕಾರ್ಯಕ್ರಮಗಳಲ್ಲಿ ಹಾಡಿದ್ದೆ. ಅವಕಾಶಗಳು ಸಿಗಬೇಕೆಂದರೆ ಬೆಂಗಳೂರಿನಲ್ಲಿ ಇರಬೇಕು ಎಂಬುದು ಅಮ್ಮನ ಅಭಿಪ್ರಾಯ. ಏಳನೇ ತರಗತಿಯಲ್ಲಿದ್ದಾಗ ನಮ್ಮ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಯಿತು.ಈ ಟಿ.ವಿ ವಾಹಿನಿಯಲ್ಲಿ ಹಾಡಿನ ಸ್ಪರ್ಧೆಯ ಆಡಿಷನ್ ಇತ್ತು. ಫೋನ್ ಮೂಲಕವೇ ಆಡಿಷನ್ ನಡೆಯುತ್ತಿತ್ತು. ನನ್ನ ಧ್ವನಿ ಪರೀಕ್ಷೆ ನಡೆದ ಬಳಿಕ ಆಹ್ವಾನ ಸಿಕ್ಕಿದ್ದು ಕಾರ್ಯಕ್ರಮ ನಿರೂಪಣೆಗೆ. ಚಿಕ್ಕಮಕ್ಕಳಿಗಾಗಿ ಇದ್ದ ಅಂತ್ಯಾಕ್ಷರಿ ಕಾರ್ಯಕ್ರಮವದು.

 

ನನಗೆ ನಿರೂಪಣೆ ಎಂದರೆ ಏನೆಂಬುದೇ ಸರಿಯಾಗಿ ಗೊತ್ತಿರಲಿಲ್ಲ. ಆದರೆ ಎಲ್ಲವನ್ನೂ ಕಲಿತುಕೊಂಡೆ. ಬಳಿಕ ಈ ಟಿ.ವಿಯ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದು ಮರೆಯಲಾಗದ ಅನುಭವ.ಸಿನಿಮಾದಲ್ಲೂ ನಟಿಸುವ ಅವಕಾಶಗಳು ಬಂದವು. `ಮೌರ್ಯ~ ಚಿತ್ರದಲ್ಲಿ ನಟಿಸುವಂತೆ ನಿರ್ದೇಶಕ ಎಸ್.ನಾರಾಯಣ್ ಆಹ್ವಾನ ನೀಡಿದರು. ಆದರೆ ನಟನೆ ನನಗೆ ಹಿಡಿಸದ ವಿಭಾಗ. ನಟಿಯಾಗುವುದನ್ನು ತಿರಸ್ಕರಿಸಲು ಇದೊಂದೇ ಕಾರಣವಲ್ಲ. ನಮ್ಮದು ಸಂಪ್ರದಾಯಸ್ಥ ಕುಟುಂಬ. ಗಾಯಕಿಯಾಗಲು ಹೊರಟಾಗಲೇ ಕೆಲವರು ಹುಬ್ಬೇರಿಸಿದ್ದರು.

 

ಇನ್ನು ನಟಿಸುತ್ತೇನೆ ಎಂದಿದ್ದರೆ.... ತೆರೆ ಮೇಲೆ ಮಿಂಚುವುದು, ಹೆಸರು ಮಾಡುವುದು ನನಗೆ ಇಷ್ಟವಾಗದ ವಿಷಯ. ಇದಕ್ಕೆ ನನ್ನ ಸಂಕೋಚದ ಸ್ವಭಾವವೂ ಕಾರಣ. ಹೀಗಾಗಿಯೇ ಆದರೆ ನನಗೆ ತೆರೆಯ ಮೇಲಿಗಿಂತ ತೆರೆ ಹಿಂದಿನ ಕೆಲಸವೇ ಹೆಚ್ಚು ಬೇಕು.ಅಂತಹ ಕೆಲಸವಿದ್ದರೆ ಕೊಡಿ ಎಂದು ಎಸ್.ನಾರಾಯಣ್‌ರನ್ನು ಕೇಳಿದೆ. ಆಗ ಸಿಕ್ಕಿದ್ದು ಡಬ್ಬಿಂಗ್ ಮಾಡುವ ಅವಕಾಶ. ನಟಿ ಮೀರಾ ಜಾಸ್ಮಿನ್‌ಗೆ ಕಂಠದಾನ ಮಾಡಿದೆ. ಅಲ್ಲಿಂದ ಶುರುವಾದ ಡಬ್ಬಿಂಗ್ ಪ್ರವೃತ್ತಿ ಸುಮಾರು 150 ಚಿತ್ರಗಳನ್ನು ದಾಟಿದೆ. ರಮ್ಯಾ, ಸದಾ, ಐಂದ್ರಿತಾ ರೇ, ರಾಗಿಣಿ ಹೀಗೆ ಅನೇಕ ನಟಿಯರಿಗೆ ಧ್ವನಿ ನೀಡಿದ್ದೇನೆ.ಗಾಯಕಿಯಾಗಿ 10 ವರ್ಷವಾಯಿತು. 100ಕ್ಕೂ ಅಧಿಕ ಗೀತೆಗಳಿಗೆ ದನಿಯಾಗಿದ್ದೇನೆ. ಮೆಲೋಡಿ ಹಾಡುಗಳೆಂದರೆ ತುಂಬಾ ಇಷ್ಟ. ನನ್ನ ಅದೃಷ್ಟವೆಂದರೆ ನನಗೆ ಸಿಗುವ ಹಾಡುಗಳೂ ಮೆಲೋಡಿ ಆಗಿರುತ್ತವೆ. ಮೆಲೋಡಿ ಹಾಡುಗಳಲ್ಲಿ ಏಕತಾನತೆ ಇರುವುದಿಲ್ಲ. ಇಲ್ಲಿ ಪ್ರಯೋಗಗಳಿಗೆ ಹೆಚ್ಚು ಅವಕಾಶವಿದೆ. ಇದೆಲ್ಲಾ ಸಂಗೀತ ನಿರ್ದೇಶಕರನ್ನು ಅವಲಂಬಿಸಿರುತ್ತದೆ.

 

ಒಳ್ಳೆ ಸಂಗೀತವಿದ್ದರೆ ಎಂಥ ಹಾಡುಗಾರನೂ ಚೆನ್ನಾಗಿ ಹಾಡಬಲ್ಲ. ಅಂತಹದೇ ಮಧುರ ಹಾಡಿನ ಮೂಲಕ ನನಗೆ ಅವಕಾಶ ಕೊಟ್ಟ ಗುರುಕಿರಣ್‌ಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನನ್ನ ಬದುಕಿಗೆ ತಿರುವು ನೀಡಿದವರು ಅವರು. `ಫಸ್ಟ್ ಟೈಂ ನಿನ್ನ ನೋಡಿದಾಗ...~, `ನೀನೆ ನನ್ನ ಡ್ರೀಮಲಿ...~ ಹಾಡುಗಳನ್ನು ಪದೇ ಪದೇ ಮೆಲಕು ಹಾಕುತ್ತಿರುತ್ತೇನೆ. `ಕೃಷ್ಣನ್ ಲವ್ ಸ್ಟೋರಿ~ ಚಿತ್ರದ `ಹೃದಯವೆ ಬಯಸಿದೆ ನಿನ್ನನೆ...~ ಹಾಡಿಗೆ ಸುವರ್ಣ ಪಿಲ್ಮ್ ಅವಾರ್ಡ್ ಸಹ ಬಂತು.

 

ಹಳೆ ಹಾಡುಗಳು ಸಾರ್ವಕಾಲಿಕ ಸುಂದರ. ಕಷ್ಟದ ಹಾಡುಗಳನ್ನು ಎಸ್.ಜಾನಕಿ ಎಷ್ಟು ಸರಳವಾಗಿ ಹೇಳುತ್ತಿದ್ದರು. ನಾನೂ ಹಾಗೇ ಹಾಡಬೇಕು ಎನಿಸುತ್ತದೆ. ಎಸ್.ಜಾನಕಿ, ಚಿತ್ರಾ, ಲತಾ ಮಂಗೇಶ್ಕರ್, ಆಶಾ ಬೋಂಸ್ಲೆ ನನ್ನ ಮಾನಸಿಕ ಗುರುಗಳು. ಅದರಲ್ಲೂ ಆಶಾ ಬೋಂಸ್ಲೆ ಜಾಸ್ತಿ ಇಷ್ಟ. ಏಕೆಂದರೆ ವೈವಿಧ್ಯಮಯ ಹಾಡುಗಳನ್ನು ಸಲೀಸಾಗಿ ಹಾಡುತ್ತಿದ್ದವರು ಅವರು.ಎಸ್.ಪಿ.ಬಾಲಸುಬ್ರಮಣ್ಯಂ, ಸೋನು ನಿಗಮ್ ನನ್ನ ಮೆಚ್ಚಿನ ಗಾಯಕರು. ಸೋನು ನಿಗಮ್ ಸರಿಗಮಪ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾಗ ನಾನೂ ಅವರಂತೆ ಆಗಬೇಕು ಎಂಬ ಹಂಬಲವಿತ್ತು. ಬಳಿಕ ನಾನೂ ನಿರೂಪಕಿ ಆದೆ. ಅವರೊಟ್ಟಿಗೆ ಹಾಡುವ ಸೌಭಾಗ್ಯವೂ ಸಿಕ್ಕಿದೆ.`ಮೊದಲ ಮಿಂಚು~ ಚಿತ್ರಕ್ಕಾಗಿ ಅವರ ಜೊತೆ ದನಿಗೂಡಿಸಿದ ಹಾಡಿನ ಬಗ್ಗೆ ತುಂಬಾ ನಿರೀಕ್ಷೆಯಿದೆ. ಆ ಹಾಡು ಸೋನು ನಿಗಂ ಅವರಿಗೆ ಅಚ್ಚುಮೆಚ್ಚು. ಹಾಗಂತ ಅವರು ಫೇಸ್‌ಬುಕ್‌ನಲ್ಲೂ ಬರೆದುಕೊಂಡಿದ್ದಾರಂತೆ.ಇನ್ನು ವೈಯಕ್ತಿಕ ಬದುಕಿಗೆ ಬಂದರೆ ಮೊದಲೇ ಹೇಳಿದಂತೆ ಸಂಕೋಚದ ಸ್ವಭಾವ. ಮಾತು ತುಂಬಾ ಕಡಿಮೆ. ಓದುವುದೆಂದರೆ ಪಂಚಪ್ರಾಣ. ವಿಪರೀತ ಓದುತ್ತೇನೆ. ಅದರಲ್ಲೂ ಇಂಗ್ಲಿಷ್‌ನ ಸಸ್ಪೆನ್ಸ್ ಥ್ರಿಲ್ಲರ್ ನಾವೆಲ್‌ಗಳೆಂದರೆ ಹಾಡಿನಷ್ಟೆ ಪ್ರೀತಿ. ಪೌಲೊ ಕೊಯೆಲ್ಹೋರ  `ದಿ ಆಲ್ಕೆಮಿಸ್ಟ್~ ಅಚ್ಚುಮೆಚ್ಚಿನ ಕೃತಿ.ಕೈಗೆ ಪುಸ್ತಕ ಸಿಕ್ಕರೆ ಅದನ್ನು ಕೆಳಗಿಳಿಸುವುದು ಯಾವಾಗಲೋ. ಹೀಗಾಗಿ ಅಕ್ಕಪಕ್ಕದ ಮನೆಯವರಿಗೆ ನನ್ನ ಪರಿಚಯವೇ ಇರುವುದಿಲ್ಲ. ನಾನು ಗಾಯಕಿ ಎಂದೂ ಹೆಚ್ಚಿನವರಿಗೆ ಗೊತ್ತಿಲ್ಲ. ನನಗೆ ಫ್ಯಾಮಿಲಿ ಅಟ್ಯಾಚ್‌ಮೆಂಟ್ ಜಾಸ್ತಿ. ಅದರಲ್ಲೂ ಅಮ್ಮನೇ ನನಗೆ ಸ್ನೇಹಿತೆಯಾಗಿದ್ದವರು. ನಮ್ಮಿಬ್ಬರ ಚಿಂತನೆಗಳು ಒಂದೇ. ನಾನು ಹೋದಲ್ಲಿಗೆ ಅಮ್ಮನೂ ಇರುತ್ತಿದ್ದರು. 24 ಗಂಟೆಯೂ ಜೊತೆಗಿರುತ್ತಿದ್ದರು. ಈಗ ನನ್ನ ಸಂಸಾರವೆಂದರೆ ಅಪ್ಪ, ತಮ್ಮ ಮತ್ತು ಪುಟ್ಟ ನಾಯಿಮರಿ.ಸೋಲು ಗೆಲುವಿನ ವಿಚಾರದಲ್ಲಿ ನಾನು ಸ್ಥಿತಪ್ರಜ್ಞೆ. ಯಾವುದಕ್ಕೂ ಎಕ್ಸೈಟ್ ಆಗದೆ ಎಲ್ಲವನ್ನೂ ಸಾವಧಾನದಿಂದ ಸ್ವೀಕರಿಸುವುದು ನನ್ನ ಗುಣ. ಹಾಗೆ ಆಶಾವಾದಿ ಕೂಡ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ನನ್ನ ಬದುಕಿನ ಬಂಡಿ ಸಾಗಿದ ರೀತಿಯೂ ಹಾಗೆಯೇ. ತಾನಾಗೇ ಅರಸಿ ಬಂದ ಅವಕಾಶಗಳು ನನ್ನನ್ನು ಬೆಳೆಸುತ್ತಿದೆ.ನನಗಿದು ಹೆಮ್ಮೆ ಕೂಡ. ಎಲ್ಲಾ ಬಗೆಯ ಹಾಡುಗಳನ್ನು ಹಾಡುವ ಆಸೆ ನನಗಿಲ್ಲ. ಆದರೆ ಹಾಡುವ ಹಾಡುಗಳು ಜನರಿಗೆ ಮತ್ತು ನನಗೆ ಖುಷಿ ಕೊಡಬೇಕು. ವರ್ಷಕ್ಕೆ ಒಂದು ಹಾಡು ಹೇಳುವ ಅವಕಾಶ ಸಿಕ್ಕರೂ ಬೇಸರವಿಲ್ಲ. ಆದರೆ ಅದು ಮೆಲೋಡಿಯಾಗಿರಬೇಕು.ಅನ್ಯಭಾಷೆಯ ಹಾಡುಗಾರರಿಗೆ ಮಣೆ ಹಾಕಲಾಗುತ್ತಿದೆ ಎಂಬ ವಿಷಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಿಜ. ಕನ್ನಡಿಗರಿಗೆ ಆದ್ಯತೆ ನೀಡಬೇಕು. ಆದರೆ ಆ ಕುರಿತ ಚರ್ಚೆಗಳಿಂದ ಪ್ರಯೋಜನವಿಲ್ಲ. ನಾವು ನಮ್ಮಲ್ಲಿರುವ ಪ್ರತಿಭೆಯನ್ನು ಸೂಕ್ತವಾಗಿ ಹೊರಹಾಕಿದರೆ ಸಾಕು.

 

ಪೈಪೋಟಿ ನೀಡುವ ಗುಣ ನಮ್ಮಲ್ಲಿದ್ದರೆ ಅನ್ಯಭಾಷೆಯವರು ಹೇಗೆ ಬರುತ್ತಾರೆ? ಹಾಗೇ ನಮ್ಮಲ್ಲಿ ಆಲ್ಬಮ್ ಸಂಸ್ಕೃತಿ ಇಲ್ಲ. ಇಲ್ಲಿ ಗಾಯಕ ಮತ್ತು ಸಂಗೀತ ನಿರ್ದೇಶಕ ಸಿನಿಮಾಗಳಿಗೆ ಸೀಮಿತ. ನಾವು ಹಿನ್ನೆಲೆ ಗಾಯಕರಾಗಿಯೇ ಕಳೆದುಹೋಗಿಬಿಡುತ್ತೇವೆ.ಅದರಾಚೆಗೆ ಪ್ರತಿಭೆ ತೋರಿಸಲು ವೇದಿಕೆಗಳಿಲ್ಲ. ಪರಭಾಷೆಗಳಲ್ಲಿರುವಂತೆ ಆಲ್ಬಮ್‌ಗಳು ಬಂದರೆ ಮಾತ್ರ ನಮ್ಮ ಮಾರುಕಟ್ಟೆ ಬೆಳೆಯುತ್ತದೆ. ನಾವೂ ಬೆಳೆಯುತ್ತೇವೆ. ಹಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ.

 

ಸೃಜನಶೀಲತೆ ಬಯಸುವ ಕೆಲಸಗಳಲ್ಲಿ ನಾನು ಸದಾ ಮುಂದು. ನನ್ನಂತೆ ಎಲ್ಲರನ್ನೂ ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ. ಹಾಗಂತ ನಿರಾಶಾವಾದ ತಪ್ಪು. ನಾವು ನಂಬಿದ ದಾರಿಯಲ್ಲಿ ಕಾದರೆ ಬಯಸಿದ್ದು ಸಿಕ್ಕೇ ಸಿಗುತ್ತದೆ. ಆಶಾವಾದವಿರಲಿ.

Post Comments (+)