ಆ ದಿನಗಳ ಪೇಚು...

7

ಆ ದಿನಗಳ ಪೇಚು...

Published:
Updated:

ಅ ದೊಂದು ಮಲೆನಾಡಿನ ಕುಗ್ರಾಮ. ಸೇವಾ ಸಂಸ್ಥೆಯೊಂದರ ಕಾರ್ಯಕರ್ತರು ಹಳ್ಳಿಯ ಜನರ ಆರ್ಥಿಕ ಸ್ಥಿತಿ, ಅಲ್ಲಿರುವ ಮೂಲ ಸೌಕರ್ಯ, ಕೊರತೆ, ಬೇಡಿಕೆಗಳ ಸಮೀಕ್ಷೆ ನಡೆಸುತ್ತಿದ್ದರು.ತುಸು ಸಂಕೋಚದಿಂದಲೇ ಮಹಿಳೆಯರು ಕಾರ್ಯಕರ್ತರ ಬಳಿ ಚರ್ಚಿಸುತ್ತಿದ್ದರು. ಮೋಡ ಮುಸುಕಿದ ಆಕಾಶ ತೋರುತ್ತಾ ನಮಗೊಂದಿಷ್ಟು ಸೂರ್ಯನ ಬೆಳಕು ಬೇಕು ಎಂಬ ಬೇಡಿಕೆ ಇಟ್ಟಿದ್ದರು. ಕಾರಣ ಕೆದಕಿದಾಗ ತಿಳಿದುಬಂದಿದ್ದು...ಮುಟ್ಟಿನ ಸಮಯದಲ್ಲಿ ಬಳಸುವ ಬಟ್ಟೆ, ಒಳ ಉಡುಪು ಒಣಗಿಸಲು ಅವರು ವರ್ಷದ ಬಹುಕಾಲ ಕಷ್ಟಪಡುತ್ತಿದ್ದರು.ಇದು ಯಾವುದೋ ಒಂದು ಗ್ರಾಮದ ಮಹಿಳೆಯರ ಕಥೆಯಲ್ಲ. ಸಮೀಕ್ಷೆ ನಡೆಸಿದಲ್ಲಿ ಭಾರತದ ಬಹುತೇಕ ಹಳ್ಳಿಗಾಡಿನಲ್ಲಿ, ಪಟ್ಟಣಗಳಲ್ಲಿ ಅಥವಾ ಮಹಾನಗರಗಳ ಕೊಳೇಗೇರಿಗಳಲ್ಲೂ ಇಂತಹ ಕಥೆ ಹೇಳುವ ಅಸಂಖ್ಯ ಮಹಿಳೆಯರು ಸಿಕ್ಕಾರು.ಮಹಿಳಾ ಸಬಲೀಕರಣದ ವಿಚಾರ ಬಂದಾಗ ಭಾರತ ಹಿಂದಿನ ಒಂದು ದಶಕದಲ್ಲಿ ದಾಪುಗಾಲು ಹಾಕುತ್ತ ಸಾಗಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಕಾಯ್ದೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ ಮೀಸಲು ಮಸೂದೆಗೆ ರಾಜ್ಯಸಭೆ ಒಪ್ಪಿಗೆ ದೊರಕಿದೆ. ಸ್ವಸಹಾಯ ಸಂಘಗಳು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಿಳೆಗೆ ಸ್ವಾವಲಂಬನೆಯ ಬದುಕಿಗೆ ಮುನ್ನುಡಿ ಬರೆದಿವೆ.ಆದರೆ, ಮಹಿಳೆಯ ಜನ್ಮದತ್ತ ಹಕ್ಕಾದ ಶುಚಿತ್ವದ ವಿಚಾರ ಬಂದಾಗ ಇದೇ ಮಾತನ್ನು ಹೇಳುವಂತಿಲ್ಲ. ಸ್ವಚ್ಛತೆಯ ವಿಚಾರ ಬಂದಾಗ ಭಾರತೀಯ ಮಹಿಳೆಯರು ಇನ್ನೂ ಶತಮಾನದ ಹಿಂದಿನ ವಿಧಾನ ಅನುಸರಿಸುತ್ತಿದ್ದಾರೆ.ದೈಹಿಕ ರಚನೆಯ ಕಾರಣದಿಂದ ಮಹಿಳೆಗೆ ಪುರುಷನಿಗಿಂತ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಮಾಸಿಕ ಋತುಸ್ರಾವದ ದಿನಗಳಲ್ಲಿ, ಗರ್ಭಿಣಿಯಾಗಿದ್ದಾಗ, ಬಾಣಂತಿಯಾಗಿದ್ದಾಗ ಮತ್ತಷ್ಟು ಕಾಳಜಿ ವಹಿಸಲೇಬೇಕು. ಅದು ಅನಿವಾರ್ಯ ಕೂಡ.ಇಲ್ಲದಿದ್ದಲ್ಲಿ ಅದು ಮೂತ್ರನಾಳ ಸೋಂಕು, ಜನನಾಂಗ ಸೋಂಕಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಅಂಡಾಶಯ ಸೋಂಕಿಗೂ ಕಾರಣವಾಗಬಹುದು...!

ಎ.ಸಿ. ನೆಲ್ಸನ್ ಸಂಸ್ಥೆ, ಪ್ಲಾನ್ ಇಂಡಿಯಾ ಸಹಯೋಗದಲ್ಲಿ ಭಾರತೀಯ ಮಹಿಳೆಯರು, ಹೆಣ್ಣುಮಕ್ಕಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆ ಕುರಿತು ನಡೆಸಿದ ಸಮೀಕ್ಷೆಯ ವರದಿ ಕೆಲವು ಆಘಾತಕಾರಿ ಅಂಶಗಳನ್ನು ಹೊರಹಾಕಿದೆ.ಈ ಸಮೀಕ್ಷೆಯ ಪ್ರಕಾರ ಶೇ 68ರಷ್ಟು ಗ್ರಾಮೀಣ ಮಹಿಳೆಯರಿಗೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟರಿ ನ್ಯಾಪ್‌ಕಿನ್ ಕೊಳ್ಳುವ ಶಕ್ತಿಯಿಲ್ಲ. ಋತುಸ್ರಾವದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಹದಿಹರೆಯದ ಬಾಲಕಿಯರು ವರ್ಷಕ್ಕೆ 50 ದಿನಗಳಷ್ಟು ದಿನ ಶಾಲೆಗೆ ಚಕ್ಕರ್ ಹೊಡೆಯುತ್ತಾರೆ.ಭಾರತದಲ್ಲಿ 35.5 ಕೋಟಿ ಮಹಿಳೆಯರು ಸಂತಾನೋತ್ಪತ್ತಿ ವಯೋಮಾನದಲ್ಲಿ ಬರುತ್ತಾರೆ. ಆದರೆ, ಇವರಲ್ಲಿ ಶೇ 12ರಷ್ಟು ಮಹಿಳೆಯರು ಮಾತ್ರ ನ್ಯಾಪ್‌ಕಿನ್‌ಗಳನ್ನು ಬಳಸುತ್ತಾರೆ. ಉಳಿದ 31.2 ಕೋಟಿ ಹೆಣ್ಣು ಮಕ್ಕಳು ಸ್ರಾವ ಹೀರಿಕೊಳ್ಳಲು ಆ ಸಂದರ್ಭದಲ್ಲಿ ಕೈಗೆ ದೊರಕಿದ ಸಾಮಗ್ರಿ ಬಳಸಿಕೊಳ್ಳುತ್ತಾರೆ. ಬಹುತೇಕ ಉಟ್ಟು ಬಿಸಾಕಿದ ಹಳೆಯ ಕಾಟನ್ ವಸ್ತ್ರಗಳನ್ನು ಇನ್‌ಸ್ಟಂಟ್ ನ್ಯಾಪ್‌ಕಿನ್‌ಗಳಂತೆ ಬಳಸಲಾಗುತ್ತದೆ. ಆದರೆ, ಸೋಂಕಿಗೆ ಆಹ್ವಾನ ನೀಡುವ ಬೂದಿ, ಹೊಟ್ಟು ಇತ್ಯಾದಿ ಅಪಾಯಕಾರಿ ವಸ್ತುಗಳನ್ನು ಬಳಸುವ ಅಭ್ಯಾಸವೂ ಕೆಲ ಪ್ರದೇಶಗಳ ಹೆಣ್ಣು ಮಕ್ಕಳಲ್ಲಿ ಇದೆ.ನಾವು ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿಗೆ ಇಳಿಯುವ ಚೀನಾ ಈ ವಿಚಾರದಲ್ಲಿ ಭಾರಿ ಮುಂದಿದೆಯಂತೆ. ಜಪಾನ್, ಕೊರಿಯಾ, ಸಿಂಗಪುರ್‌ಗಳಲ್ಲಿ ಬಹುತೇಕ ಎಲ್ಲ ಮಹಿಳೆಯರು ನ್ಯಾಪ್‌ಕಿನ್ ಉಪಯೋಗಿಸುತ್ತಾರೆ.ಭಾರತದಲ್ಲಿ ಶೇ 70ರಷ್ಟು ಜನ ಬಡತನ ರೇಖೆಯ ಮೇಲಿದ್ದಾರೆ. ನ್ಯಾಪ್‌ಕಿನ್ ಬಳಕೆಯ ಕುರಿತು ಹೆಚ್ಚಿನ ಮಹಿಳೆಯರಿಗೆ ಅರಿವಿಲ್ಲದಿರುವುದು ಕೊರತೆ, ಅರಿವಿದ್ದರೂ ಕೊಳ್ಳಲು ಆಗದೇ ಇರುವುದು, ಶುಚಿತ್ವದ ಬಗ್ಗೆ ಅಸಡ್ಡೆ ಇದಕ್ಕೆಲ್ಲ ಕಾರಣ ಎಂದು ಸಮೀಕ್ಷೆ ಹೇಳುತ್ತದೆ.ಎ.ಸಿ. ನೆಲ್ಸನ್ ಸಂಸ್ಥೆ ಈ ಸಮೀಕ್ಷೆಗಾಗಿ ದೇಶಾದ್ಯಂತ 151 ಸ್ತ್ರೀರೋಗ ತಜ್ಞರನ್ನು ಪ್ರಶ್ನಿಸಿತ್ತು. ಅವರಲ್ಲಿ ಶೇ 99ರಷ್ಟು ವೈದ್ಯರು, ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆ ಖಂಡಿತವಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯ ಜೀವನದ ಗುಣಮಟ್ಟ ಹೆಚ್ಚಿಸಬಲ್ಲದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಜನನಾಂಗ ಸೋಂಕನ್ನೂ ಇದು ತಡೆಯಬಲ್ಲದು ಎಂಬುದು ಬಹುತೇಕ ಎಲ್ಲ ವೈದ್ಯರ ಅಭಿಮತವಾಗಿತ್ತು.

ಮೌಢ್ಯದ ಮುಸುಕಿನಲ್ಲಿ...

16, 20 ರೂಪಾಯಿಗೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ದೊರೆಯುವ ಈ ಕಾಲದಲ್ಲಿ 31.2 ಕೋಟಿ ಹೆಣ್ಣು ಮಕ್ಕಳು ಇಂತಹ ಸ್ವಚ್ಛತೆಯ ಅಭ್ಯಾಸದಿಂದ ದೂರ ಉಳಿದಿದ್ದೇಕೆ..? ಇದಕ್ಕೆಲ್ಲ ಒಂದೇ ಉತ್ತರ, ಮೌಢ್ಯ.ಆರ್ಥಿಕವಾಗಿ ಮೇಲ್ಮಟ್ಟದಲ್ಲಿರುವವರು ಮತ್ತು ಸುಶಿಕ್ಷಿತ ವರ್ಗದ ಕೆಲವರನ್ನು ಹೊರತುಪಡಿಸಿದಲ್ಲಿ ಭಾರತದಲ್ಲಿ ಹೆಣ್ಣು ಸಾಮಾಜಿಕ ಮೌಢ್ಯದ ಮುಸುಕಿನಲ್ಲಿ ಬದುಕುತ್ತಾಳೆ. ಹೆಣ್ಣು ಮಗು ಹುಟ್ಟಿದ ನಕ್ಷತ್ರದಿಂದ ಹಿಡಿದು ಆಕೆ ಸಾಯುವವರೆಗೆ ಒಂದಿಲ್ಲ ಒಂದು ಸಾಮಾಜಿಕ ದೂಷಣೆಗೆ ತುತ್ತಾಗುತ್ತಲೇ ಇರುತ್ತಾಳೆ.ಸಸ್ತನಿ ವರ್ಗಕ್ಕೆ ಸೇರಿದ ಮಾನವ ಪ್ರಬೇಧದಲ್ಲಿ ಹೆಣ್ಣು, ದೇಹದ ಒಳಗೆ ಸಂತಾನವನ್ನು ಪೋಷಿಸುವ ನೈಸರ್ಗಿಕ ರಚನೆ ಹೊಂದಿರುತ್ತಾಳೆ. ಪ್ರತಿ ತಿಂಗಳು ಬಿಡುಗಡೆಯಾಗುವ ಅಂಡಾಣು ಫಲಿತವಾಗದಿದ್ದಲ್ಲಿ ತ್ಯಾಜ್ಯದಂತೆ ಹೊರಹೋಗುತ್ತದೆ. ಯಾವುದೇ ಪ್ರೌಢಶಾಲೆಯ ಪುಸ್ತಕವೂ ವಿವರಿಸುವ ಸರಳ ಮಾಹಿತಿ ಇದು.ಆದರೆ, ಭಾರತೀಯರು ಮಾತ್ರ ಇದನ್ನು ಮನದಟ್ಟು ಮಾಡಿಕೊಂಡಿಲ್ಲ. ಋತುಸ್ರಾವದ ಸಂದರ್ಭದಲ್ಲಿ ಯಾರನ್ನೂ ಮುಟ್ಟಬಾರದು, ಮನೆಯ ಬಾವಿಯನ್ನು ಮುಟ್ಟಬಾರದು, ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ, ದೇವಸ್ಥಾನಕ್ಕೆ ಹೋಗುವಂತಿಲ್ಲ... ಗಿಡ ಮುಟ್ಟಿದರೂ ಅದು ಸಾಯುತ್ತದೆ...ಶುಭ ಕಾರ್ಯಕ್ಕೆ ಹೋಗುವವರಿಗೆ ಎದುರಾಗುವಂತಿಲ್ಲ..ಹೀಗೆ ಮೌಢ್ಯಗಳ ಸರಪಣಿ ಮುಂದುವರಿಯುತ್ತದೆ.ಹಾಗಾಗಿ ಮಹಿಳೆಯರಿಗೆ ಅದನ್ನು ಮುಚ್ಚಿಟ್ಟು ರೂಢಿ. ಮನೆಯ ಗಂಡಸರಿಗೂ ಅದೊಂದು ಸಂಕೋಚದ ವಿಚಾರವೇ. ಉಳಿದೆಲ್ಲ ವಿಚಾರಗಳನ್ನು ಅಣ್ಣನ ಬಳಿ, ಅಪ್ಪನ ಬಳಿ ಮುಕ್ತವಾಗಿ ಚರ್ಚಿಸುವ ಹೆಣ್ಣು ಮಕ್ಕಳು ಹೊಟ್ಟೆನೋವಿನ ವಿಚಾರ ಬಂದಾಗ ಅದನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ.ಅರ್ಧ ಮೌಢ್ಯ, ಇನ್ನರ್ಧ ಸಂಕೋಚ ಋತುಸ್ರಾವದ ಸಂದರ್ಭದಲ್ಲಿ ಸ್ವಚ್ಛತೆ ನಿರ್ಲಕ್ಷ್ಯಿಸುವಂತೆ ಮಾಡುತ್ತದೆ. ಸ್ವಚ್ಛತೆ ನಿರ್ಲಕ್ಷಿಸಿದಲ್ಲಿ ಆಗುವ ಭೀಕರ ಪರಿಣಾಮಗಳ ಅರಿವು ಹೆಣ್ಣು ಮಕ್ಕಳಿಗೆ ಇರುವುದಿಲ್ಲ. ಕೆಲವೊಮ್ಮೆ ಅದು ಗರ್ಭಾಶಯ ಸೋಂಕಿಗೆ ಕಾರಣವಾಗಿ ಹೆಣ್ಣಿನ ಸಂತಾನೋತ್ಪತ್ತಿ ಶಕ್ತಿಯನ್ನೇ ಅಳಿಸಿಹಾಕಿಬಿಡಬಹುದು.ಮಹಿಳಾ ಸಬಲೀಕರಣಕ್ಕಾಗಿ ಇನ್ನಿಲ್ಲದೇ ಶ್ರಮಿಸುತ್ತಿರುವ ನಿವೃತ್ತ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಸಮೀಕ್ಷೆಯ ವರದಿಯ ಹಿನ್ನೆಲೆಯಲ್ಲಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.ಭಾರತದಲ್ಲಿ ಮಹಿಳೆಯನ್ನು ಶಕ್ತಿಯ ಅಧಿದೇವತೆ ಎಂದು ಪೂಜಿಸಲಾಗುತ್ತದೆ. ಆದರೆ, ಆಕೆಯ ಆರೋಗ್ಯದ ವಿಚಾರಕ್ಕೆ ಇಷ್ಟೊಂದು ನಿರ್ಲಕ್ಷ್ಯ ಏಕೆ? ನೀತಿ ನಿರೂಪಕರು, ಆರೋಗ್ಯ ತಜ್ಞರು, ಸಮಾಜದ ಎಲ್ಲ ವರ್ಗದ ನಾಯಕರು ಇದನ್ನು ರಾಷ್ಟ್ರೀಯ ಮಹತ್ವದ ವಿಚಾರವಾಗಿ ಪರಿಗಣಿಸಬೇಕು. ಮಹಿಳಾ ಅಭಿವೃದ್ಧಿ ಮತ್ತು ಉತ್ತಮ ಸ್ಥಿತಿಗೆ ಇಂತಹ ವಿಚಾರಕ್ಕೂ ಗಮನ ನೀಡಲೇಬೇಕು ಎನ್ನುತ್ತಾರೆ ಅವರು.ಸಮೀಕ್ಷೆಯ ನಂತರ ಎ.ಸಿ. ನೆಲ್ಸನ್ ಸಂಸ್ಥೆ ಹಾಗೂ ಪ್ಲಾನ್ ಇಂಡಿಯಾ ಮೂರು ಶಿಫಾರಸು ಮಾಡಿವೆ.*ಬಡ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳಿಗೂ ಸ್ಯಾನಿಟರಿ ನ್ಯಾಪ್‌ಕಿನ್ ದೊರೆಯುವಂತೆ ಅಗ್ಗದ ಮತ್ತು ಗುಣಮಟ್ಟದ ನ್ಯಾಪ್‌ಕಿನ್ ಉತ್ಪಾದಿಸಲು ನೂತನ ಕಾರ್ಯತಂತ್ರ ಅನುಸರಿಸಬೇಕು.*ಋತುಸ್ರಾವದ ಸಂದರ್ಭದ ಸ್ವಚ್ಛತೆಯ ಕೊರತೆ, ಎಲ್ಲ ರಾಜ್ಯಗಳ ಮಹಿಳೆಯರನ್ನು ಕಾಡುತ್ತಿರುವ ರಾಷ್ಟ್ರೀಯ ಸಮಸ್ಯೆಯಾಗಿ ನೀತಿ ನಿರೂಪಣೆಯ ಹಂತದಲ್ಲೇ ಪರಿಗಣಿಸಬೇಕು.*ಎಲ್ಲ ಹದಿಹರೆಯದ ಬಾಲಕಿಯರು ಮತ್ತು ಮಹಿಳೆಯರಿಗೆ ಅಗ್ಗದ ಮತ್ತು ಗುಣಮಟ್ಟದ ನ್ಯಾಪ್‌ಕಿನ್ ದೊರೆಯುವಂತೆ, ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಪೂರಕ ನೀತಿ ರೂಪಿಸಬೇಕು.ಈ ಸಮೀಕ್ಷೆ ಆಘಾತಕಾರಿ ಅಂಶಗಳನ್ನು ಹೇಳಿದೆ. ಹೆರಿಗೆ ಯಂತ್ರವಾಗಿದ್ದ ಭಾರತೀಯ ಹೆಣ್ಣು ಮಕ್ಕಳಿಗೆ ತಕ್ಕಮಟ್ಟಿನ ಮುಕ್ತಿ ನೀಡಿದ ಕುಟುಂಬ ಯೋಜನೆ ಜಾರಿಗೆ ಬಂದು ಹತ್ತಿರ ಹತ್ತಿರ ಅರ್ಧ ಶತಮಾನವಾಗಿದೆ. ಆದರೆ, ಹದಿಹರೆಯದ ಹೆಣ್ಣುಮಕ್ಕಳು, ಮಹಿಳೆಯರ ಆರೋಗ್ಯ, ವೈಯಕ್ತಿಕ ಸ್ವಚ್ಛತೆ ಕಾಪಾಡುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆ ಕುರಿತು ಅರಿವು ಮೂಡಿಸುವ, ಬಳಕೆಯನ್ನು ಸಾರ್ವತ್ರಿಕಗೊಳಿಸುವ ಯೋಜನೆಯೊಂದು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಕಡತಗಳಲ್ಲೇ ಬಂಧಿಯಾಗಿ ಉಳಿದಿದೆ.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಂ) ಮೂಲಕ ದೇಶದ ಅತಿ ಹಿಂದುಳಿದ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ ಹದಿಹರೆಯದ ಬಾಲಕಿಯರಿಗೆ 1 ರೂಪಾಯಿಗೆ ನ್ಯಾಪ್‌ಕಿನ್ ಪ್ಯಾಕ್ ವಿತರಿಸುವ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಹತ್ತು ತಿಂಗಳ ಹಿಂದೆ ಹಸಿರು ನಿಶಾನೆ ತೋರಿತ್ತು. ರಾಜ್ಯದ 9 ಜಿಲ್ಲೆಗಳನ್ನು ಅದಕ್ಕಾಗಿ ಆಯ್ದುಕೊಳ್ಳಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಉದಾಸೀನದಿಂದ ಈ ಯೋಜನೆ ಕಾರ್ಯಗತವಾಗವಾಗಿಲ್ಲ. ಕೇಂದ್ರದ ಮಾರ್ಗದರ್ಶಿ ಸೂತ್ರ, ಸೂಕ್ತ ಆದೇಶವಿಲ್ಲದ ಕಾರಣ ಯೋಜನೆ ನೆನೆಗುದಿಯಲ್ಲಿದೆ ಎಂದು ‘ಎನ್‌ಆರ್‌ಎಚ್‌ಎಂ’ ಮೂಲಗಳು ತಿಳಿಸಿವೆ.ಮಹಿಳೆಯ ಆರೋಗ್ಯವನ್ನು ರಾಷ್ಟ್ರೀಯ ಮಹತ್ವದ ವಿಚಾರವಾಗಿ ಪರಿಗಣಿಸಿದಾಗ, ಮಹಿಳಾ ಸಬಲೀಕರಣದಲ್ಲಿ ಇದೂ ಒಂದು ಮೈಲಿಗಲ್ಲಾಗುವ ಹೆಜ್ಜೆ ಎಂದು ಸರ್ಕಾರ, ಆರೋಗ್ಯ ತಜ್ಞರು, ಮಹಿಳಾ ಹೋರಾಟಗಾರರು ಪರಿಗಣಿಸಿದಾಗ ‘ಮೂರು ದಿನಗಳ’ ಈ ಯಾತನೆಯಿಂದ ಮುಕ್ತಿ ಸಿಕ್ಕೀತು..!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry