ಆ ಮರ ಈ ಮರ ಕ್ರಿಸ್‌ಮಸ್ ಕೈಮರ!

7

ಆ ಮರ ಈ ಮರ ಕ್ರಿಸ್‌ಮಸ್ ಕೈಮರ!

Published:
Updated:
ಆ ಮರ ಈ ಮರ ಕ್ರಿಸ್‌ಮಸ್ ಕೈಮರ!

ಕೇಕ್ ಮತ್ತು ಕ್ರಿಸ್‌ಮಸ್ ಟ್ರೀ ಇಲ್ಲದ ಹಬ್ಬದ ಆಚರಣೆ ಕಲ್ಪನೆಗೂ ನಿಲುಕದ ವಿಚಾರ. ನಗರದ ಇಕ್ಕಟ್ಟಿನ ಬದುಕಿನಲ್ಲಿ ಸಹಜ ಗಿಡ ಬೆಳೆಯುವುದು, ಅಲಂಕರಿಸುವುದು ಕಷ್ಟ. ಆದರೇನು, ಕೃತಕ ಗಿಡಗಳು ಯಥೇಚ್ಛವಾಗಿ ಮಾರುಕಟ್ಟೆಯಲ್ಲಿ ಲಭ್ಯ.

ಮನಸ್ಸಿಗೆ ದೇವರಧ್ಯಾನದ ಅಲಂಕಾರ, ಮನೆಗೆ ವಿದ್ಯುದ್ದೀಪ, ಪುಟ್ಟ ಪುಟ್ಟ ಗಂಟೆ, ಮಿಣಮಿಣ ಮಿಣುಕುವ ನಕ್ಷತ್ರಗಳು, ಹೂಗಳು, ಚಮಕಿಗಳನ್ನು ಹೊತ್ತ `ಟ್ರೀ' ಸಿಂಗಾರ. ಇದು ಕ್ರಿಸ್‌ಮಸ್ ಹಬ್ಬದ ಹೈಲೈಟ್. ಟ್ರೀ ಇಲ್ಲದ ಕ್ರಿಸ್‌ಮಸ್ ಅನ್ನು ಊಹಿಸುವುದೂ ಸಾಧ್ಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಕ್ರಿಸ್‌ಮಸ್ ಟ್ರೀಗಳು ಬೇಡಿಕೆ ಕಳೆದುಕೊಂಡಿವೆ. ಅತ್ತ ನರ್ಸರಿಗಳಲ್ಲಿ ಬೆಳೆದುನಿಂತ ಕ್ರಿಸ್‌ಮಸ್ ಗಿಡಗಳು, ಮರಗಳು ಗ್ರಾಹಕರ ನಿರೀಕ್ಷೆಯಲ್ಲಿದ್ದರೆ, ಇತ್ತ ಕೃತಕ ಕ್ರಿಸ್‌ಮಸ್ ಗಿಡಗಳ ಮಾರಾಟ ಬಿರುಸಾಗಿದೆ.ಅಂಗಳದಲ್ಲೋ, ಬಾಲ್ಕನಿಯಲ್ಲೋ ಬೆಳೆದುನಿಂತ ಕ್ರಿಸ್‌ಮಸ್ ಮರವೇ ಅದು ಕ್ರೈಸ್ತ ಬಾಂಧವರ ಮನೆ ಎಂಬುದನ್ನು ಸಾರಿಹೇಳುತ್ತಿತ್ತು. ಇದು ದಶಕಗಳ ಹಿಂದಿನ ಮಾತು. ಈಗ ಟ್ರೆಂಡ್ ಬದಲಾಗಿದೆ. ಮನೆ ಮುಂದೆ ಗಿಡ ಬೆಳೆಯಲು ಜಾಗವಿಲ್ಲ. ಇದ್ದರೂ ಅದರ ಆರೈಕೆಗೆ ಆಸಕ್ತಿಯಿಲ್ಲ. ಇದ್ದಲ್ಲೇ ಅದನ್ನು ಅಲಂಕರಿಸುವುದು ಏಕತಾನತೆ. ಅದಕ್ಕಿಂತ ನಮಗೆ ಬೇಕಾದ ಆಕಾರ ಮತ್ತು ಸಂಖ್ಯೆಯ ಕೃತಕ ಮರವನ್ನು ತಂದು ಅಲಂಕರಿಸಿ ಬೇಕೆಂದಲ್ಲಿ ಇರಿಸುವುದೇ ಸೂಕ್ತ ಎಂಬುದು ಜಾಣ ಲೆಕ್ಕಾಚಾರ.

ಅನುಕೂಲಕ್ಕೆ ತಕ್ಕ ಅವಕಾಶ

`ನಾವು ಅಪಾರ್ಟ್‌ಮೆಂಟ್‌ನಲ್ಲಿರೋದು. ಟ್ರೀ ಬೆಳೆಸಲು ಇಷ್ಟವಿದ್ದರೂ ಸ್ಥಳಾವಕಾಶ ಬೇಕಲ್ಲ? ನಾಲ್ಕು ವರ್ಷಗಳ ಹಿಂದೆ ಒಂದು ಟ್ರೀ ಬೆಳೆಸಿದ್ದೆ. ಆದರೆ ಅದು ಸತ್ತು ಹೋಯಿತು. ಹಾಗಾಗಿ ಈಗ ಕೃತಕ ಟ್ರೀಯನ್ನೇ ಬಳಸುತ್ತೇವೆ. ಒಮ್ಮೆ ಖರೀದಿಸಿದ ಟ್ರೀ ಅನೇಕ ವರ್ಷ ಕಾಲ ಉಳಿಯುತ್ತದೆ. ನಮಗೆ ಬೇಕೆಂದಲ್ಲಿ ಇರಿಸಿ ಅಲಂಕರಿಸಲೂ ಸಾಧ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ಪರಿಸರಸ್ನೇಹಿಯಾಗಿ ಹಬ್ಬವನ್ನು ಆಚರಿಸುವುದು ನಮ್ಮ ಆದ್ಯತೆ' ಎಂದು ತಮ್ಮ ಉದ್ದೇಶವನ್ನು ವಿವರಿಸುತ್ತಾರೆ ಸೇವಾನಗರದ ಸೋಫಿಯಾ ಸುದೇವನ್.`ಕೃತಕ ಮರವಾದರೆ ದೀರ್ಘಾವಧಿ ಇರಿಸುವುದು ಸುಲಭ. ಸಹಜ ಮರಕ್ಕೆ ಅಷ್ಟೊಂದು ಅಲಂಕಾರ ಮಾಡಿದಾಗ ರೆಂಬೆಗಳು ಬಾಗಿ ಮುರಿಯಬಹುದು ಇಲ್ಲವೇ ಹಾನಿಯಾಗಬಹುದು. ನಾವಂತೂ 20ರಿಂದ 25 ದಿನಗಳ ಕಾಲ ಟ್ರೀ ಇಡುತ್ತೇವೆ. ಆದ್ದರಿಂದ ಕೃತಕ ಮರವೇ ಇದಕ್ಕೆ ಸೂಕ್ತ' ಎನ್ನುತ್ತಾರೆ ಕಾಕ್ಸ್‌ಟೌನ್‌ನ ಡಾ.ಲೀನಾ.ಹೀಗೆ ಅವಕಾಶ ಮತ್ತು ಅನುಕೂಲಕ್ಕೆ ತಕ್ಕಂತೆ ಹಬ್ಬದ ಆಚರಣೆಯಲ್ಲಿ ಬದಲಾವಣೆಯಾಗುತ್ತಲೇ ಇದೆ. ಆಧುನಿಕ ಸ್ಪರ್ಶಗಳೇನೇ ಇದ್ದರೂ ಸಾಂಪ್ರದಾಯಿಕ ರೀತಿ ರಿವಾಜುಗಳಿಗೆ ಒಂದಿನಿತೂ ಚ್ಯುತಿ ಬಾರದಂತೆ ಹಬ್ಬ ಆಚರಿಸುವುದು ಇವರೆಲ್ಲರ ಆದ್ಯತೆ.ಬೆಳೆಯುವ ಸವಾಲು

ಈ `ಟ್ರೀ' ಬೆಳೆಯೋದು ಸುಲಭವಲ್ಲ.ವಿಶಿಷ್ಟ ಆಕಾರದಿಂದ ಗಮನ ಸೆಳೆಯುವ ಟ್ರೀಗಳು ಪುಟ್ಟ ಪುಟ್ಟ ಗಂಟೆ, ಟೋಪಿ, ಸ್ವಾಗತ/ಶುಭಾಶಯ ಪತ್ರಗಳು, ನಕ್ಷತ್ರಾಕಾರದ ಬಗೆಬಗೆ ಆಲಂಕಾರಿಕ ವಸ್ತುಗಳಿಂದ ಮತ್ತು ಪುಟಾಣಿ ವಿದ್ಯುದ್ದೀಪಗಳಿಂದ ಜಗಮಗಿಸುತ್ತಾ ಹಬ್ಬಕ್ಕೊಂದು ಮೆರುಗು ಕೊಡುತ್ತವೆ.ಆದರೆ ಟ್ರೀಗಳನ್ನು ಬೆಳೆಯವುದು ಸುಲಭವೇನಲ್ಲ. ವಿದೇಶಿ ಬೀಜಗಳು ಕಣ್ಣು ಬಿಟ್ಟು ಗಿಡದ ರೂಪ ಪಡೆಯಬೇಕಾದರೆ ಪುಟ್ಟ ಕಂದಮ್ಮನಂತೆ ಆರೈಕೆ ಮಾಡಬೇಕು. ಎಳೆ ಸಸಿಗಳಿಗೂ 15ರಿಂದ 20 ರೂಪಾಯಿ ಬೆಲೆ ಇರುತ್ತದೆ. ನಾಲ್ಕೈದು ಅಡಿ ಎತ್ತರ ಬೆಳೆದ ಟ್ರೀ 200-300 ರೂಪಾಯಿ ಬೆಲೆ ಬಾಳುತ್ತದೆ.ಆದರೆ ಇಷ್ಟು ಎತ್ತರ ಬೆಳೆಯಲು ಕನಿಷ್ಠ ನಾಲ್ಕು ವರ್ಷ ಕಾಯಬೇಕು.`ಕಳೆದ ದಶಕದಲ್ಲಿ ನಗರದ ಕ್ರಿಸ್‌ಮಸ್ ಟ್ರೀಗಳಿಗೆ ದೇಶದೆಲ್ಲೆಡೆ ಬೇಡಿಕೆಯಿತ್ತು. ಈಗ ಅದು ಗಣನೀಯವಾಗಿ ಕುಗ್ಗಿದೆ. ಆದರೆ ದೆಹಲಿ, ಕೋಲ್ಕತ್ತ ಮುಂತಾದೆಡೆಯ ಹೋಲ್‌ಸೇಲ್ ಗ್ರಾಹಕರು ಗೋದಾವರಿ ಬಳಿಯ ಬೃಹತ್ ನರ್ಸರಿಗಳಿಂದಲೇ ಕಡಿಮೆ ಬೆಲೆಗೆ ಖರೀದಿಸುವ ಕಾರಣ ನಮ್ಮ ನರ್ಸರಿಗಳಿಗೆ ನಷ್ಟ ಎದುರಾಗುತ್ತಿದೆ' ಎಂದು ವಿವರಿಸುತ್ತಾರೆ `ಗೋಕುಲ್' ಕೃಷ್ಣ.

ಮಾಹಿತಿಗೆ: ರೂಪೇಶ್: 93796 73080/ ಕೃಷ್ಣ 99001 72423/ ನರ್ಸರಿ ಬೆಳೆಗಾರರ ಸಹಕಾರ ಸಂಘ, ಲಾಲ್‌ಬಾಗ್: 2656 4005.ಪ್ರಳಯದ ಛಾಯೆ!?

ಸಹಜ ಕ್ರಿಸ್‌ಮಸ್ ಟ್ರೀಗಳು ನಗರದೆಲ್ಲೆಡೆ ನರ್ಸರಿಗಳಲ್ಲಿ ಲಭ್ಯ. ಇವುಗಳ ಮಾರಾಟಕ್ಕಾಗಿ ಲಾಲ್‌ಬಾಗ್‌ನಲ್ಲಿ ಪ್ರತ್ಯೇಕ ವಿಭಾಗವೇ ಇದೆ. ನರ್ಸರಿ ಬೆಳೆಗಾರರ ಸಹಕಾರ ಸಂಘದಲ್ಲೂ ಕ್ರಿಸ್‌ಮಸ್ ಟ್ರೀ ಸಿಗುತ್ತದೆ. ಆದರೆ ಈ ಬಾರಿ ಈ ಮರಗಳ ಮಾರಾಟ ಮತ್ತು ಹಬ್ಬದ ಮೂಡ್‌ಗೆ ಏನೇನೋ ಅಡ್ಡಿ, ಆತಂಕಗಳು ಎದುರಾಗಿವೆ ಎನ್ನುತ್ತದೆ ನರ್ಸರಿ ಉದ್ಯಮ.`ಈ ತಿಂಗಳ ಮೂರನೆಯ ವಾರದಲ್ಲಿ ಪ್ರಳಯವಾಗುತ್ತದೆ' ಎಂದು ಟೀವಿ ಚಾನೆಲ್‌ಗಳು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮಗಳು ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಯ ಮೇಲೆ ಕರಿಛಾಯೆ ಬೀರಿದೆಯೇ? ಲಾಲ್‌ಬಾಗ್ ಸಿದ್ದಾಪುರ ಗೇಟ್ ಬಳಿಯಿರುವ ಕೃಷ್ಣೇಂದ್ರ ನರ್ಸರಿಯ ಪಾಲುದಾರರಾದ ಸಿ.ವಿ. ರೂಪೇಶ್ ಕುಮಾರ್ ಹೌದು ಎನ್ನುತ್ತಾರೆ.`ಪ್ರಳಯವಾಗುತ್ತದಂತೆ. ಹಾಗಿರುವಾಗ ಹಬ್ಬಕ್ಕೆ ಯಾಕೆ ಖರ್ಚು ಮಾಡೋದು' ಎನ್ನುವ ನಿರ್ಧಾರವೂ ಇರಬಹುದು, ಆತಂಕವೂ ಇರಬಹುದು. ಈ ಬಾರಿ ಕ್ರಿಸ್‌ಮಸ್ ಟ್ರೀಗಳಿಗೆ ಅಷ್ಟಾಗಿ ಆರ್ಡರ್ ಬರುತ್ತಿಲ್ಲ. 2009ರಲ್ಲಿ 50 ಸಾವಿರ ಗಿಡ/ಮರಗಳು ಮಾರಾಟವಾಗಿದ್ದವು. ದೇಶದ ಯಾವುದೇ ಭಾಗಕ್ಕೆ ಬೇಕಾದರೂ ವಿಮಾನ ಹಾಗೂ ರಸ್ತೆ ಸಾರಿಗೆ ಮೂಲಕ ಕಳುಹಿಸಿಕೊಡುತ್ತಿದ್ದೆವು. ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ತೀರಾ ಕುಸಿದಿದೆ' ಎಂದು ವಾಸ್ತವವನ್ನು ವಿವರಿಸುತ್ತಾರೆ ರೂಪೇಶ್.ಲಾಲ್‌ಬಾಗ್ ಬಳಿಯ ಗೋಕುಲ ನರ್ಸರಿಯ ಕೃಷ್ಣ ಅವರದೂ ಇದೇ ಅಭಿಪ್ರಾಯ. `ಪ್ಲಾಸ್ಟಿಕ್, ಪಿವಿಸಿ ಮುಂತಾದವುಗಳಿಂದ ತಯಾರಿಸುವ ಕೃತಕ ಗಿಡ/ಮರಗಳನ್ನೇ ಜನ ಹೆಚ್ಚು ಇಷ್ಟಪಡುವ ಕಾರಣ ಈಗ ನೈಸರ್ಗಿಕ ಕ್ರಿಸ್‌ಮಸ್ ಗಿಡಗಳಿಗೆ ಹಿಂದಿನಷ್ಟು ಬೇಡಿಕೆಯಿಲ್ಲ. ಸ್ಥಳೀಯ ಮಾರುಕಟ್ಟೆಗಳಲ್ಲಿ ಸಿಗುವುದು ಚೀನಾ ಮತ್ತು ಅಮೆರಿಕದಿಂದ ಆಮದು ಮಾಡಿಕೊಂಡ ಕ್ರಿಸ್‌ಮಸ್ ಟ್ರೀಗಳು. ಬಾಳ್ವಿಕೆ ಮತ್ತು ಉತ್ತಮ ಗುಣಮಟ್ಟವೇ ಕೃತಕ ಟ್ರೀಗಳ ನೆಚ್ಚಿಕೊಳ್ಳಲು ಕಾರಣ ಎನ್ನುವುದು ಗ್ರಾಹಕರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry