ಭಾನುವಾರ, ಡಿಸೆಂಬರ್ 15, 2019
26 °C

ಇಂಗಳಹಳ್ಳಿಯ ಕಣ್ಮಣಿ ಈ ಕೃಷ್ಣಮೃಗ ಜೋಡಿ

ವೆಂಕಟೇಶ್‌ ಜಿ.ಎಚ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗಳಹಳ್ಳಿಯ ಕಣ್ಮಣಿ ಈ ಕೃಷ್ಣಮೃಗ ಜೋಡಿ

ಹುಬ್ಬಳ್ಳಿ: ಆಗಷ್ಟೇ ಹುಟ್ಟಿದ ಜರ್ಸಿ ಹಸುವಿನ ಕರುಗಳಂತೆ ಕಾಣುವ ಎರಡು ಕೃಷ್ಣಮೃಗಗಳು, ಗ್ರಾಮದ ತುಂಬಾ ಚಟುವಟಿಕೆಯಿಂದ ಓಡಾಡುತ್ತಾ ಊರಿನವರ ಕಣ್ಮಣಿಗಳಾಗಿ ಬದಲಾದ ಸ್ವಾರಸ್ಯಕರ ಸಂಗತಿ ತಾಲ್ಲೂಕಿನ ಇಂಗಳಹಳ್ಳಿಯದು.ಗುಂಪಿನಿಂದ ಬೇರ್ಪಟ್ಟು ಕಂಗಾಲಾಗಿದ್ದ ಇವುಗಳಿಗೆ ಇಂಗಳಹಳ್ಳಿ ಗ್ರಾಮಸ್ಥರು  ಎರಡು ವರ್ಷಗಳಿಂದ ಆಶ್ರಯ ನೀಡಿದ್ದಾರೆ. ಗ್ರಾಮದ ಜನರ ಪ್ರೀತಿ–ವಾತ್ಸಲ್ಯಕ್ಕೆ ಒಗ್ಗಿಕೊಂಡಿರುವ ಪುಟ್ಟ ಮರಿಗಳು ಮರಳಿ ಕಾಡಿಗೆ ಹೋಗಲು ಬಯಸದ ಊರಿನ ಭಾಗವಾಗಿಯೇ ಮಾರ್ಪಟ್ಟಿವೆ.ಇಂಗಳಹಳ್ಳಿ ಕೆರೆಯ ಪಕ್ಕದ ಮೃತ್ಯುಂಜಯ ಮಠದಲ್ಲಿ ಕೃಷ್ಣಮೃಗಗಳು ಆಶ್ರಯ ಪಡೆದಿವೆ. ಊರಿನ ಪುಟ್ಟ ಮಕ್ಕಳು, ಮಹಿಳೆಯರು, ಹಿರಿಯರು ಕೊಡುವ ಹಾಲು, ಹಣ್ಣು, ಚಿಗುರು ಹುಲ್ಲು, ನೀರು ಈ ಪ್ರಾಣಿಗಳಿಗೆ ಆಹಾರ.ಗ್ರಾಮದ ಪಕ್ಕದಲ್ಲಿಯಲ್ಲಿಯೇ ಹರಿಯುವ ಬೆಣ್ಣೆಹಳ್ಳದ ಸರಹದ್ದಿನಲ್ಲಿ ಗುಂಪಿನಿಂದ ಬೇರ್ಪಟ್ಟು ನಿಂತಿದ್ದ ಎರಡು ಕೃಷ್ಣಮೃಗಗಳ ಮರಿಗಳನ್ನು ಕಂಡ ರೈತರೊಬ್ಬರು ಅವುಗಳನ್ನು ರಕ್ಷಿಸಿ ತಂದು ಮಠದ ಆವರಣದಲ್ಲಿ ಬಿಟ್ಟಿದ್ದರು. ಹುಟ್ಟಿ ಕೆಲವೇ ಗಂಟೆಗಳಾಗಿದ್ದ ಮರಿಗಳಿಗೆ ಆಗ ಹುಲ್ಲು ತಿನ್ನುವ ಅಭ್ಯಾಸವೂ ಇರಲಿಲ್ಲ. ಮೊದಲಿಗೆ ಬಾಟಲಿಯಲ್ಲಿ ಹಾಲು ಕುಡಿಸಲಾಯಿತು.ನಾಯಿ, ಬೆಕ್ಕು, ಕಾಡು ಪ್ರಾಣಿಗಳಿಂದ ರಕ್ಷಿಸಲು ಮಠದ ಪ್ರಾಂಗಣದಲ್ಲಿ ಇಟ್ಟು ರಾತ್ರಿ ವೇಳೆ ಕಾಯುತ್ತಿದ್ದ ಸ್ಥಳೀಯರು, ಆರಂಭದಲ್ಲಿ  ಅನ್ನ, ಅಂಬಲಿ ಮುಂತಾದ ಮೃದು ಆಹಾರಗಳನ್ನು ಕೊಡುತ್ತಿದ್ದರು. ಕ್ರಮೇಣ ಮಠದ ಅಂಗಳದಲ್ಲಿನ ಹಸಿರು ಗರಿಕೆ, ಕ್ಯಾರೆಟ್‌, ಸೌತೆಕಾಯಿ ತಿನ್ನುವುದನ್ನು ರೂಢಿ ಮಾಡಿಕೊಂಡ ಕೃಷ್ಣಮೃಗಗಳಿಗೆ ಸರತಿಯಂತೆ ಪ್ರತಿ ಮನೆಯಿಂದ ಹಸಿ ಹುಲ್ಲು ತಂದು ತಿನ್ನಿಸಲಾಗುತ್ತಿತ್ತು.ಇನ್ನು ಸ್ವತಂತ್ರವಾಗಿ ಬದುಕಬಲ್ಲವು ಎನಿಸುತ್ತಲೇ ಬೆಣ್ಣೆಹಳ್ಳದ ಸುತ್ತಲಿನ ಕುರುಚಲು ಕಾಡಿನಲ್ಲಿ ಬಿಟ್ಟುಬಂದರೂ ಊರಿನ ಜನರ ಒಡನಾಟ ಇಲ್ಲಿನ ಅಕ್ಕರೆಗೆ ಹೊಂದಿಕೊಂಡಿದ್ದ ಎರಡೂ ಮರಿಗಳು, ಕಾಡಿಗೆ ಹೋಗಿದ್ದವರು ಮರಳಿ ಬರುವ ಮುನ್ನವೇ, ಮಠದ ಅಂಗಳಕ್ಕೆ ಬಂದು ನಿಲ್ಲತೊಡಗಿದವು.‘ನಮ್ಮನ್ನು ಬಿಟ್ಟು ಹೋಗಲು ನಿರಾಕರಿಸಿದಾಗ ಅನಿವಾರ್ಯವಾಗಿ ನಾವೇ ಅವುಗಳ ರಕ್ಷಣೆಯ ಹೊಣೆ ಹೊತ್ತೆವು. ನಿತ್ಯ ಕುಡಿಯುವ ನೀರು, ಹುಲ್ಲಿನ ಕಂತೆಗಳನ್ನು ಸರತಿಯಂತೆ ಹಾಕುವ ತೀರ್ಮಾನ ಕೈಗೊಂಡು ಆಗಿನಿಂದಲೂ ಊರಿನ ಆಸ್ತಿಯಂತೆ ಕಾಪಾಡಿಕೊಂಡು ಬಂದೆವು’ ಎನ್ನುತ್ತಾರೆ ಇಂಗಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ.‘ಈಗ ಊರಿನ ನಾಯಿಗಳೂ ಈ ಕಾಡಾಡಿಗಳಿಗೆ ಹೊಂದಿಕೊಂಡಿದ್ದು ಅವುಗಳಿಗೆ ಯಾವುದೇ ತೊಂದರೆ ನೀಡುತ್ತಿಲ್ಲ, ದಿನವಿಡೀ ಕೆರೆಯ ಸುತ್ತಲೂ ಮೇಯುತ್ತಾ ಕಾಲ ಕಳೆಯುವ ಕೃಷ್ಣಮೃಗಗಳ ಸಾಂಗತ್ಯ ಬೇಕೆನಿಸಿದಾಗ ಶಿಳ್ಳೆ ಹಾಕುತ್ತಲೇ ಓಡೋಡಿ ಬರುತ್ತವೆ’ ಎನ್ನುತ್ತಾರೆ ಗ್ರಾಮದ ಹಿರಿಯ ಪರಶುರಾಮ ನರಗುಂದ.‘ಶಾಲೆಗೆ ರಜೆ ಇದ್ದಾಗ, ಮಂಜಾನೆ–ಸಂಜೆ ಬಿಡುವಿನ ವೇಳೆ ಮಠದ ಅಂಗಳಕ್ಕೆ ಬರುವ ಮಕ್ಕಳು ಕೃಷ್ಣಮೃಗ ಜೋಡಿಯೊಂದಿಗೆ ಆಟವಾಡುತ್ತಾ ಸಮಯ ಕಳೆಯುವುದನ್ನು ಕಾಣಬಹುದು. ಕೆಲವರು ಅವುಗಳ ಕೊರಳಿಗೆ ಗಂಟೆ ಕಟ್ಟಿದ್ದರೆ, ಮತ್ತೆ ಕೆಲವರು, ಪುಟ್ಟ ಕರುಗಳ ರೀತಿ ಚಿನ್ನಾಟ ಆಡುವ ಅವುಗಳೊಂದಿಗೆ ಓಡುತ್ತಾರೆ. ಕೆರೆಯ ನೀರು ತಂದು ಸ್ನಾನ ಮಾಡಿಸುತ್ತಾ, ನೀರು–ಹುಲ್ಲು ಕೊಟ್ಟು ಮೈದಡವಿ ಸಂಭ್ರಮಿಸುತ್ತಾರೆ.ಕೃಷ್ಣಮೃಗ ಗಂಡು–ಹೆಣ್ಣು ಜೋಡಿ ಇರುವುದರಿಂದ ನಾಳೆ ಸಂತಾನಾಭಿವೃದ್ಧಿಗೆ ಮನಸ್ಸು ಮಾಡಿದಲ್ಲಿ ನಾವೇ ಬಾಣಂತನ ಮಾಡಲು ಸಿದ್ಧರಿದ್ದೇವೆ’ ಎಂದು ಗ್ರಾಮದ ಮಲ್ಲಪ್ಪ ಹಳಕಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಪ್ರತಿಕ್ರಿಯಿಸಿ (+)