ಸೋಮವಾರ, ಜನವರಿ 27, 2020
14 °C

ಇಂಗ್ಲಿಷ್‌ ಕಲಿಕೆಗೆ ಇಲ್ಲಿದೆ ಮಾದರಿ ಶಾಲೆ!

ಪ್ರಜಾವಾಣಿ ವಾರ್ತೆ / ಪಿ.ಕೆ. ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಕಾರವಾರ: ಇಂಗ್ಲಿಷ್‌ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವತ್ತ ಮುಖ ಮಾಡುತ್ತಿದ್ದರೆ, ಇತ್ತ ಸರ್ಕಾರಿ ಶಾಲೆಯೊಂದು ‘ಇಂಗ್ಲಿಷ್‌ ಕ್ಲಾಸ್‌ರೂಮ್‌’ ವೊಂದನ್ನು ಆರಂಭಿಸಿ ಪೋಷಕರ ಗಮನ ಸೆಳೆಯುವಂತೆ ಮಾಡಿದೆ. ಜತೆಗೆ ಈ ಕ್ಲಾಸ್‌ ರೂಮ್‌ ಇತರ ಸರ್ಕಾರಿ ಶಾಲೆಗಳಿಗೆ ಮಾದರಿ ಎನಿಸಿದೆ. ಇಂತಹ ಮಾದರಿ ಇಂಗ್ಲಿಷ್‌ ತರಗತಿಯನ್ನು ಆರಂಭಿಸಿದ ಹಿರಿಮೆಗೆ ನಗರದ ಹಬ್ಬುವಾಡದ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಪಾತ್ರವಾಗಿದೆ. ಇಲ್ಲಿನ ಶಿಕ್ಷಕರು ಇಂಗ್ಲಿಷ್‌ ಕಲಿಕೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡುತ್ತಿದ್ದಾರೆ.ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೆ ಜಾಸ್ತಿ. ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಇಲ್ಲ ಹಾಗೂ ಸೌಕರ್ಯಗಳ ಕೊರತೆ ಇದೆ ಎನ್ನುವುದು ಹಲವರ ಪ್ರತಿಪಾದನೆ. ಅಂತಹ ಶಾಲೆಗಳ ನಡುವೆ ಈ ಶಾಲೆ ವಿಭಿನ್ನ ಸಾಲಿನಲ್ಲಿ ನಿಲ್ಲುತ್ತದೆ.

ಈ ಶಾಲೆಯಲ್ಲಿ 1–5ನೇ ತರಗತಿವರೆಗೆ ಒಟ್ಟು 69 ಮಕ್ಕಳು ಕಲಿಯುತ್ತಿದ್ದು, ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲ್ಲಿನ ಶಿಕ್ಷಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಕಲಿಕೆ ಅನಿವಾರ್ಯ ಎಂದು ಮನಗಂಡಿರುವ ಇಲ್ಲಿನ ಶಿಕ್ಷಕರು ಪ್ರತ್ಯೇಕ ಕೊಠಡಿಯನ್ನು ಮೀಸಲಿಟ್ಟು ಅಲ್ಲಿ ಇಂಗ್ಲಿಷ್‌ ತರಗತಿಯನ್ನು ಆರಂಭಿಸಿದ್ದಾರೆ. ಮಕ್ಕಳು ಸಹ ಇತರ ವಿಷಯಗಳ ಜೊತೆಗೆ ಇಂಗ್ಲಿಷ್‌ ಕಲಿಕೆಯಲ್ಲಿ ತಲ್ಲೀನರಾಗಿದ್ದಾರೆ.ಶಾಲೆಯ ಮೊದಲ ಅಂತಸ್ತಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ₨ 5.28 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಯೊಂದನ್ನು ಈಚೆಗಷ್ಟೇ ನಿರ್ಮಿಸಲಾಗಿದೆ. ಶಿಕ್ಷಕರು, ಎಸ್‌ಡಿಎಂಸಿ, ಜನಪ್ರತಿನಿಧಿಗಳು ಹಾಗೂ ಸಮುದಾಯದ  ಕೊಡುಗೆಯಿಂದ ಈ ಕೊಠಡಿಯು ಇಂಗ್ಲಿಷ್‌ ಕಲಿಕೆಗೆ ಪೂರಕವಾದ ತರಗತಿಯಾಗಿ ಪರಿವರ್ತಿತವಾಗಿದೆ.ತರಗತಿಯಲ್ಲಿ ಏನೇನಿದೆ?: ಇಲ್ಲಿನ ಕೊಠಡಿಯು ವಿಶಾಲವಾಗಿದ್ದು, ಹೊರಗೆ ಹಾಗೂ ಒಳಗೆ ಎಲ್ಲವೂ ಇಂಗ್ಲಿಷ್‌ಮಯವಾಗಿದೆ. ಕೊಠಡಿಯ ಹೊರಭಾಗದ ಗೋಡೆಯಲ್ಲಿ ರಚಿಸಿರುವ ‘ಮಿಕ್ಕಿಮೌಸ್‌’ ಚಿತ್ರ ಆಕರ್ಷಕವಾಗಿದ್ದು, ಅದು ಇಂಗ್ಲಿಷ್‌ ತರಗತಿಗೆ ಸ್ವಾಗತ ಕೋರುತ್ತಿದೆ. ಇಷ್ಟೇ ಅಲ್ಲದೇ ಮಕ್ಕಳ ನೆಚ್ಚಿನ ‘ಜಾಕ್‌ ಅಂಡ್‌ ಜಿಲ್‌’, ‘ರೇನ್‌ ರೇನ್‌ ಗೋ ಅವೇ’, ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್‌’,  ‘ಜಾನಿ ಜಾನಿ ಎಸ್‌ ಪಪ್ಪಾ’ ಸೇರಿದಂತೆ ಹಲವು ಇಂಗ್ಲಿಷ್‌ ಪದ್ಯಗಳು, ಕವನಗಳು ಚಿತ್ರ ಸಮೇತ ಗೋಡೆ ಮೇಲೆ ರಾರಾಜಿಸುತ್ತಿವೆ.ತರಗತಿ ಒಳಗಡೆ ಕೂಡ ಗೋಡೆಗಳ ಮೇಲೆ ಇಂಗ್ಲಿಷ್‌ ಅಕ್ಷರಗಳು, ಪದಗಳು, ಸಂಖ್ಯೆಗಳು, ಪಕ್ಷಿ–ಪ್ರಾಣಿಗಳ ಹೆಸರು, ಹಣ್ಣು–ತರಕಾರಿಗಳ ಹೆಸರು, ಗಣಿತದ ಲೆಕ್ಕಗಳು, ಮನುಷ್ಯ ಸಂಬಂಧಗಳು, ಭ್ರಾತೃತ್ವ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ಬರಹಗಳು ಹಾಗೂ ಚಿತ್ರಗಳು ಮಕ್ಕಳ ಗಮನ ಸೆಳೆಯುತ್ತಿವೆ ಹಾಗೂ ಇಲ್ಲಿನ ಚಿತ್ರ ಬರಹಗಳು ಮಕ್ಕಳಿಗೆ ಮನದಟ್ಟಾಗಲು ಪೂರಕ ವಾಗಿವೆ. ಅಲ್ಲದೇ ಗೋಡೆ ಮೇಲೆ ಕೆಲ ಘೋಷಣಾ ವಾಕ್ಯಗಳು ಕೂಡ ಇವೆ. ನಗರದ ಶಾಸಕರ ಮಾದರಿ ಶಾಲೆಯ ಚಿತ್ರಕಲಾ ಶಿಕ್ಷಕ ಸಂಜೀವ ಬಸ್ತವಾಡ ಅವರು ಈ ಚಿತ್ರ ಬರಹಗಳನ್ನು ರಚಿಸಿದ್ದಾರೆ.‘ಮಕ್ಕಳಿಗೆ ಇಂಗ್ಲಿಷನ್ನು ಪರಿಣಾಮಕಾರಿಯಾಗಿ ಬೋಧಿಸಬೇ ಕೆಂಬ ಹಿನ್ನೆಲೆಯಲ್ಲಿ ಈ ವಿಶೇಷ ಕ್ಲಾಸ್‌ರೂಮ್‌ ತೆರೆಯಲಾಗಿದೆ. ಕೊಠಡಿ ಯಲ್ಲಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಇಂಗ್ಲಿಷ್‌ ಭಾಷಾ ಕೌಶಲವನ್ನು ಕಲಿಸಲಾಗುತ್ತಿದೆ. ಗೋಡೆಗಳಲ್ಲಿ ರಚಿಸಿರುವ ಚಿತ್ರ, ಬರಹಗಳು ಮಕ್ಕಳಿಗೆ ಆಸಕ್ತಿದಾಯಕ ವಾಗಿದ್ದು, ಮಕ್ಕಳು ಖುಷಿಯಿಂದ ಕಲಿಯುತ್ತಿದ್ದಾರೆ’ ಎನ್ನುತ್ತಾರೆ ಕಾರವಾರ ತಾಲ್ಲೂಕಿನ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಯಾದ (ಸಿಆರ್‌ಪಿ) ಐರಿನ್‌ ರೋಡ್ರಿಗಸ್‌. ‘ಇಂಗ್ಲಿಷ್‌ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಆದರೆ, ಇಂಗ್ಲಿಷ್‌ ಕಲಿಸುವಲ್ಲಿ ಸರ್ಕಾರಿ ಶಾಲೆಯು ಖಾಸಗಿ ಶಾಲೆಗಿಂತ ಕಡಿಮೆ ಏನಿಲ್ಲ ಎಂಬುದು ತೋರಿಸುವ ದೃಷ್ಟಿಯಿಂದ ಇತರ ಭಾಷೆಗಳೊಂದಿಗೆ ಇಂಗ್ಲಿಷ್‌ಗೆ ಒತ್ತು ನೀಡ ಲಾಗುತ್ತಿದೆ’ ಎಂದು ಮುಖ್ಯಶಿಕ್ಷಕಿ ಯಮುನಾ ಪಟಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)