ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೊರಟ್ಟಿ ವಿರೋಧ

7

ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೊರಟ್ಟಿ ವಿರೋಧ

Published:
Updated:
ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೊರಟ್ಟಿ ವಿರೋಧ

ತುಮಕೂರು: ರಾಜ್ಯದಲ್ಲಿ 616 ಇಂಗ್ಲಿಷ್ ಮಾಧ್ಯಮ ಶಾಲೆ ಸ್ಥಾಪಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಗುರುವಾರ ವಿರೋಧಿಸಿದರು.ರಾಜ್ಯದ ಸಂಸ್ಕೃತಿ, ಭಾಷೆ ಉಳಿವಿನ ದೃಷ್ಟಿಯಿಂದ ಕನ್ನಡ ಮಾಧ್ಯಮ ಶಾಲೆಗಳು ಮುಂದುವರಿಯಬೇಕು. ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸ್ಥಾಪಿಸುವುದು ಮಾತೃಭಾಷೆಗೆ ದ್ರೋಹ ಮಾಡಿದಂತೆ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ಲೇಷಿಸಿದರು.ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ಮಕ್ಕಳು ಇಂಗ್ಲಿಷನ್ನು ಒಂದು ಭಾಷೆಯಾಗಿ ಅಭ್ಯಾಸ ಮಾಡಿದರೆ ಸಾಕು. ಪಿಯುಸಿ ಮತ್ತು ಸಿಇಟಿಯಲ್ಲಿ ಅತ್ಯುತ್ತಮ ಅಂಕಪಡೆದ ಬಹುತೇಕ ಮಕ್ಕಳು ಮಾತೃಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ ಎಂದು ಹೇಳಿದರು.ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರುತ್ತಿಲ್ಲ. ಶಾಲೆಗಳಲ್ಲಿ ಶೇ 36ರಷ್ಟು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ಹೆಚ್ಚುವರಿ ಶಿಕ್ಷಕರ ಸಮಸ್ಯೆ ಎದುರಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಸೆಳೆಯಲೇಬೇಕೆನ್ನುವ ಉದ್ದೇಶದಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಸರ್ಕಾರದ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ.ಇಂಗ್ಲಿಷ್ ಕಲಿಯದವರು ದಡ್ಡರು ಎನ್ನುವ ಸಾರ್ವಜನಿಕರ ನಂಬಿಕೆಯನ್ನು ಪುಷ್ಟೀಕರಿಸಲು ಸರ್ಕಾರವೂ ಪ್ರಯತ್ನಿಸುತ್ತಿರುವಂತಿದೆ ಎಂದು ಅಭಿಪ್ರಾಯಪಟ್ಟರು.`ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮವೇ ಇರಬೇಕು ಎನ್ನುತ್ತಿದ್ದೀರಿ. ಹಣವಿದ್ದವರು ಮಾತ್ರ ಇಂಗ್ಲಿಷ್ ಕಲಿಯಬೇಕು. ಇಲ್ಲದವರು ಮಾತ್ರ ಕನ್ನಡ ಓದಬೇಕು ಎನ್ನುವುದು ನಿಮ್ಮ ಧೋರಣೆಯೇ?~ ಎಂಬ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, 1994ರ ನಂತರ ರಾಜ್ಯದಲ್ಲಿ ಒಂದೂ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆ ಸ್ಥಾಪನೆಯಾಗಿಲ್ಲ ಎಂದು ಹೇಳಿದರು.`ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿರೋಧಿಸುತ್ತಿರುವ ನೀವು ಸಾಮಾಜಿಕ ಅಸಮಾನತೆಗೆ ಕಾರಣರಾಗುತ್ತಿದ್ದೀರಿ. ಏಕರೂಪ ಶಿಕ್ಷಣ ಜಾರಿಗೆ ಏಕೆ ಒತ್ತಾಯಿಸುತ್ತಿಲ್ಲ?~ ಎಂಬ ಪ್ರಶ್ನೆ ಎದುರಾದಾಗ, `ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸುತ್ತೇನೆ~ ಎಂದು ಕೈಮುಗಿದರು.ಪರಿಷತ್ ಚುನಾವಣೆ ಸ್ವರೂಪ ಹಾಳಾಗಿದೆ: ಹೊರಟ್ಟಿ

ತುಮಕೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗಳ ಸ್ವರೂಪ ಹಾಳಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸುಶಿಕ್ಷಿತರು ಚುನಾವಣೆಗೆ ನಿಲ್ಲಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ ಬಸವರಾಜಹೊರಟ್ಟಿ ಖೇದ ವ್ಯಕ್ತಪಡಿಸಿದರು.ನಗರದ ಶ್ರೀದೇವಿ ತಾಂತ್ರಿಕ ಶಿಕ್ಷಣ ಕಾಲೇಜಿನಲ್ಲಿ ಶುಕ್ರವಾರ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಆರ್.ಚೌಡರೆಡ್ಡಿ ಪರ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆಯ ಸ್ವರೂಪ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.ಇತರ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಕಾಣಿಸಿಕೊಂಡರೆ ಬೀದಿಗೆ ಬೀಳುತ್ತೀರಿ ಎಂದು ಮೈಸೂರಿನ ಜೆಓಸಿ ಶಿಕ್ಷಕರನ್ನು ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರು ಬೆದರಿಸಿದ್ದಾರೆ. ಶಿಕ್ಷಣ ಸಚಿವ ಕಾಗೇರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಸರ್ಕಾರಿ ಕಾಲೇಜುಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ದೈಹಿಕ ಶಿಕ್ಷಣ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಸೇವಾ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ತರಾತುರಿಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಹೊರಟಿರುವ ಸರ್ಕಾರ ಅಗತ್ಯ ಪೂರ್ವ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಕುಂಭಕರ್ಣ ನಿದ್ದೆಯಿಂದ ಮೇಲೆದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯ ಎಂದು ಲೇವಡಿ ಮಾಡಿದರು.ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್ ಜ್ಯೋತಿ ಪ್ರಕಾಶ್ ಮಿರ್ಜಿ, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry