ಶನಿವಾರ, ಜೂಲೈ 4, 2020
28 °C

ಇಂಗ್ಲಿಷ್ ಮೀಡಿಯಂ ಠೀವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲಿಷ್ ಮೀಡಿಯಂ ಠೀವಿ

ಮೊಬೈಲ್ ಫೋನ್‌ಗಳಲ್ಲಿರುವ ಕನ್ನಡದ ಸವಲತ್ತು ಕನ್ನಡದ ಈಗಿನ ಸ್ಥಿತಿಗೆ ಒಳ್ಳೆಯ ರೂಪಕ. ಅತ್ಯಂತ ಶ್ರೀಮಂತರು ಬಳಸುವಂಥ ಐಫೋನ್, ಐಪ್ಯಾಡ್‌ಗಳಲ್ಲಿ ಒಳ್ಳೆಯ ಕನ್ನಡ ಸವಲತ್ತಿದೆ.ಇವುಗಳಲ್ಲಿ ಕನ್ನಡವನ್ನು ಓದಬಹುದು ಹಾಗೆಯೇ ಬರೆಯಬಹುದು. ಕಡಿಮೆ ಬೆಲೆಗೆ ಲಭ್ಯವಿರುವ ಸಿಂಬಿಯನ್ ಫೋನ್‌ಗಳಲ್ಲೂ ಕೂಡಾ ಕನ್ನಡ ಲಭ್ಯವಿದೆ.ಅಂದರೆ ಮೊಬೈಲ್‌ನ ಮಟ್ಟಿಗೆ ಕನ್ನಡ ಅತೀ ಶ್ರೀಮಂತರ ಮತ್ತು ಬಡವರ ಭಾಷೆ ಮಾತ್ರವಾಗಿ ಉಳಿದಿದೆ.ಸಮಸ್ಯೆ ಇರುವುದು ಮಧ್ಯಮ ವರ್ಗದವರು ಬಳಸುವ ಮಧ್ಯಮ ಎನ್ನಬಹುದಾದ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ.ಮಧ್ಯಮ ವರ್ಗದ ಇಂಗ್ಲಿಷ್ ಮೀಡಿಯಂ ಮನಸ್ಥಿತಿಯಂತೇ ಇದೂ ಕೂಡಾ.ಸಿಂಬಿಯನ್ ಆಪರೇಟಿಂಗ್ ಸಿಸ್ಟಂ ಬಳಸುವ ನೋಕಿಯಾದ ಸ್ಮಾರ್ಟ್‌ಫೋನ್‌ಗಳಲ್ಲಿ ಕಷ್ಟಪಟ್ಟು ಒಪೆರಾ ಬ್ರೌಸರ್‌ನ ಸೆಟ್ಟಿಂಗ್ ಬದಲಾಯಿಸಿದರೆ ಕನ್ನಡದ ವೆಬ್‌ಸೈಟ್‌ಗಳನ್ನು ಓದಬಹುದು. ಮುಕ್ತ ತಂತ್ರಾಂಶವಾದ ಆಂಡ್ರಾಯ್ಡಾ ಬಳಸುವ ಸ್ಮಾರ್ಟ್‌ಫೋನ್‌ಗಳ ಸ್ಥಿತಿಯೂ ಇಂಥದ್ದೇ. ಕನ್ನಡವನ್ನು ಓದುವಂತೆ ಮಾಡಿಕೊಳ್ಳಬಹುದೇ ಹೊರತು ಫೋನ್ ಬಳಸಿಯೇ ಕನ್ನಡದಲ್ಲಿ ಸಂದೇಶ ಕಳುಹಿಸುತ್ತೇನೆಂದರೆ ಅದು ಬಿಲ್‌ಕುಲ್ ಸಾಧ್ಯವಿಲ್ಲ.ಕಡಿಮೆ ಬೆಲೆಯ ಹಲವು ಕಂಪೆನಿಯ ಫೋನ್‌ಗಳಲ್ಲಿ ಕನ್ನಡ ಕೀಪ್ಯಾಡ್ ಇದೆ. ಈ ಸ್ಥಿತಿಯನ್ನು ನಿವಾರಿಸುವುದಕ್ಕೆಂದು ಕರ್ನಾಟಕ ಸರ್ಕಾರ ನೇಮಿಸಿದ್ದ ತಂತ್ರಾಂಶ ಅಭಿವೃದ್ಧಿ ಸಮಿತಿ ಎಲ್ಲಾ ಬಗೆಯ ಮೊಬೈಲ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಬಳಸಲು ಅನುವಾಗುವಂತೆ ಸ್ವತಂತ್ರ ರೆಂಡರಿಂಗ್ ಇಂಜಿನ್ ಒಂದನ್ನು ಅಭಿವೃದ್ಧಿಪಡಿಸಬೇಕೆಂದು ಹೇಳಿದೆ.ಈ ವರದಿಯ ಶಿಫಾರಸುಗಳು ಇನ್ನೂ ದೂಳು ತಿನ್ನುತ್ತಿರುವುದರಿಂದ ಸದ್ಯಕ್ಕೆ ಇದು ಸಾಧ್ಯವಾಗುತ್ತದೆ ಎಂಬ ಭರವಸೆಯನ್ನೇನೂ ಇಟ್ಟುಕೊಳ್ಳಲು ಸಾಧ್ಯವಿಲ್ಲ.ಮೊಬೈಲ್ ಫೋನ್‌ಗಳ ಸಮಸ್ಯೆ ಮಾರುಕಟ್ಟೆಯ ಕಾರಣದಿಂದಲಾದರೂ ಬದಲಾಗುವ ಸಾಧ್ಯತೆ ಇದೆ. ಆದರೆ ಟಿ.ವಿ., ವಾಷಿಂಗ್ ಮಷೀನ್, ಓವನ್‌ಗಳಂಥ ಪರಿಕರಗಳಲ್ಲಿ ಎಲ್ಲಾ ಸೂಚನೆಗಳೂ ಇಂಗ್ಲಿಷ್‌ನಲ್ಲೇ ಇರುತ್ತವೆ. ಕೆಲವು ಕಂಪೆನಿಗಳ ಟಿ.ವಿ.ಗಳು ಚೀನೀ, ಕೊರಿಯನ್, ಹಿಂದಿಯಂಥ ಭಾಷೆಗಳಲ್ಲಿ ಇಂಥ ಆನ್‌ಸ್ಕ್ರೀನ್ ಸೂಚನೆಗಳನ್ನು ಕೊಡುತ್ತವೆಯಾದರೂ ಕನ್ನಡ ಇಲ್ಲೆಲ್ಲೂ ಇಲ್ಲ. ಕರ್ನಾಟಕ ಸರ್ಕಾರದ ಅಧೀನದಲ್ಲೇ ಇದ್ದ ಕಿಯಾನಿಕ್ಸ್ ತಯಾರಿಸುತ್ತಿದ್ದ ಟಿ.ವಿ.ಗಳಲ್ಲೇ ಇದು ಇಲ್ಲದೇ ಇದ್ದ ಮೇಲೆ ಉಳಿದ ಟಿ.ವಿ.ಗಳಲ್ಲಿ ಇದನ್ನು ನಿರೀಕ್ಷಿಸುವುದಾದರು ಹೇಗೆ?ಕೊರಿಯನ್, ಚೀನೀ, ಜಪಾನೀ, ಅರಾಬಿಕ್ ಅಷ್ಟೇಕೆ ಹಿಂದಿಯಲ್ಲೂ ಈ ವಿವರಗಳನ್ನು ನೀಡುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಕರು ಕನ್ನಡದಂಥ ಭಾಷೆಗಳ ವಿಷಯದಲ್ಲಿ ಯಾವಾಗಲೂ ಮೌನ ತಳೆಯುತ್ತಾರೆ.ಇನ್ನು ಹಾಡು ಕೇಳಲು ಬಳಸುವ ಎಂಪಿ4, ಎಂಪಿ3 ಪ್ಲೇಯರ್‌ಗಳ ವಿಷಯವನ್ನಂತೂ ಹೇಳಿ ಪ್ರಯೋಜನವಿಲ್ಲ.ಈ ವಿಷಯದಲ್ಲಿ ಎಲ್ಲರೂ ಇಂಗ್ಲಿಷ್ ಮತ್ತಿತರ ಭಾಷೆಗಳಿಗಷ್ಟೇ ಸೀಮಿತವಾಗಿ ಉಳಿದಿದ್ದಾರೆ.ಬೆಂಗಳೂರಿನಲ್ಲಿ ಕನ್ನಡ ನಾಮಫಲಕಕ್ಕಾಗಿ ‘ಓರಾಟ’ ನಡೆಸುವವರು ಜನರ ನಿತ್ಯ ಬಳಕೆಯ ವಸ್ತುಗಳಲ್ಲಿ ಕನ್ನಡವಿಲ್ಲ ಎಂಬುದನ್ನು ಮರೆತಿದ್ದಾರೆ.ಇಂಥ ಉಪಕರಣಗಳಲ್ಲಿ ಕನ್ನಡವನ್ನು ಬಳಸುವುದಕ್ಕೆ ಕಂಪ್ಯೂಟರ್‌ನಲ್ಲಿ ಇರುವಂಥ ಸಮಸ್ಯೆಗಳಿಲ್ಲ.ಯಂತ್ರಗಳ ಮೇಲ್ಭಾಗದಲ್ಲಿ ಮುದ್ರಿಸುವ ವಿವರಗಳು ಕನ್ನಡವಾಗಿಸುವುದಕ್ಕೆ ಭಾರೀ ದೊಡ್ಡ ಶಿಷ್ಟತೆಗಳ ಅಗತ್ಯವೇನೂ ಇಲ್ಲ.ಟಿ.ವಿ.ಯಲ್ಲಿ ಇರುವ ಆನ್‌ಸ್ಕ್ರೀನ್ ಸೂಚನೆಗಳ ವಿಷಯವೂ ಅಷ್ಟೇ. ಇದಕ್ಕೆ ಯೂನಿಕೋಡ್ ಅಥವಾ ಅಂಥ ಯಾವುದಾದರೂ ಶಿಷ್ಟತೆ ಬೇಕೆಂದೇನೂ ಇಲ್ಲ. ಇದೆಲ್ಲಾ ಬರುವ ಮೊದಲೇ ಬಹುಭಾಷಾ ಆಯ್ಕೆಗಳನ್ನು ಸೋನಿ, ಎಲ್‌ಜಿ, ಫಿಲಿಪ್ಸ್‌ನಂಥ ಟಿ.ವಿ.ಗಳು ನೀಡಿದ್ದವು. ಕನ್ನಡಿಗರು ಇದನ್ನು ಬಯಸುವುದಿಲ್ಲ ಎಂಬುದಷ್ಟೇ ಇದಕ್ಕಿರುವ ದೊಡ್ಡ ಸಮಸ್ಯೆ.ಆಡಳಿತದಲ್ಲಿ ಕನ್ನಡ ಎಂಬುದನ್ನು ಧ್ಯೇಯ ವಾಕ್ಯವನ್ನಾಗಿಸಿಕೊಂಡಿರುವ ಕರ್ನಾಟಕ ಸರ್ಕಾರದ ಪೊಲೀಸರು ಬೆಂಗಳೂರಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲು ಬ್ಲಾಕ್ ಬೆರಿ ಬಳಸುತ್ತಾರೆ.ಈ ಬ್ಲಾಕ್‌ಬೆರಿಯಲ್ಲಿ ಕನ್ನಡವೇ ಇಲ್ಲ. ಸಾವಿರಾರು ಬ್ಲಾಕ್‌ಬೆರಿಗಳನ್ನು ಖರೀದಿಸುವ ಸರ್ಕಾರವೇ ಕನ್ನಡ ಬೇಕೆಂದು ಕೇಳದೇ ಇದ್ದರೆ ಅವರಾದರೂ ಏಕೆ ಕನ್ನಡದ ಬಗ್ಗೆ ಯೋಚಿಸಿಯಾರು? ಗ್ಯಾಜೆಟ್‌ಗಳಲ್ಲಿ ಕನ್ನಡವೇಕಿಲ್ಲ ಎಂಬುದಕ್ಕೂ ಇರುವುದು ಇದೇ ಉತ್ತರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.