ಇಂಗ್ಲಿಷ್ ರೋಗ!

7
ವೈದ್ಯ - ಹಾಸ್ಯ

ಇಂಗ್ಲಿಷ್ ರೋಗ!

Published:
Updated:
ಇಂಗ್ಲಿಷ್ ರೋಗ!

ನಮ್ಮ ವೈದ್ಯ ವೃತ್ತಿಯಲ್ಲಿ ಹಲವು ಹಾಸ್ಯ ಪ್ರಸಂಗಗಳು ಜರುಗುತ್ತಲೇ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ವೈದ್ಯರಾದ ನಾವೇ ಹಾಸ್ಯಕ್ಕೆ ವಸ್ತುವಾಗಿಬಿಡುತ್ತೇವೆ. ಗೆಳೆಯರೆಲ್ಲಾ ಅಪರೂಪಕ್ಕೊಮ್ಮೆ ಸೇರಿದಾಗ ಅಂತಹ ಹಾಸ್ಯ ಪ್ರಸಂಗಗಳನ್ನು ಒಬ್ಬರಿಗೊಬ್ಬರು ಹೇಳಿಕೊಂಡು ನಕ್ಕು ಹಗುರಾಗುತ್ತೇವೆ.

* * *

ಒಬ್ಬ ಮಹಾಶಯರಿಗೆ ಆಂಗ್ಲ ಪದಗಳನ್ನು ಉಪಯೋಗಿಸಿದರೆ ವೈದ್ಯರಿಗೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂಬ ನಂಬಿಕೆ. ಒಮ್ಮೆ ಬಂದವರೇ, `ಡಾಕ್ಟ್ರೆ ನನಗೆ ಟೀತ್‌ಪೇನ್ (ಹಲ್ಲು ನೋವು), ಅದರಿಂದಾಗಿ ಹೆಡ್‌ವ್ಹೇಟ್ (ತಲೆ ಭಾರ!?), ಹೆಡ್‌ಪೇನು (ತಲೆನೋವು)' ಅಂದ್ರು. ಪರೀಕ್ಷಿಸಿ ನೋಡಿದಾಗ ಹಲ್ಲು ತುಂಬಾನೇ ಹುಳುಕಾಗಿತ್ತು.`ಹಲ್ಲು ನೋವು ಕಡಿಮೆ ಆಗೋ ಹಾಗೆ ಮಾತ್ರೆ ತಗೊಳ್ಳಿ. ನೋವು ಕಮ್ಮಿಯಾದ ಮೇಲೆ ಹಲ್ಲಿನ ಡಾಕ್ಟರ್ ಹತ್ರ ಹೋದ್ರೆ ಲೋಕಲ್ ಅನಸ್ತೇಶಿಯಾ (ಸ್ಥಾನೀಯ ಅರಿವಳಿಕೆ) ಕೊಟ್ಟು ಹಲ್ಲು ಕಿತ್ತು ಬಿಡ್ತಾರೆ' ಅಂದೆ. `ಛೆ... ಛೆ... ಲೋಕಲ್ ಗೀಕಲ್ ಎಲ್ಲ ಬೇಡ ಡಾಕ್ಟ್ರೇ, ಒಂದು ನೂರೋ ಇನ್ನೂರೋ ಜಾಸ್ತಿ ಆದ್ರೂ ಪರ‌್ವಾಗಿಲ್ಲ, ಒಳ್ಳೆ ಕಂಪನಿ ಮಾಲೇ ಕೊಟ್ಟು ಕೀಳಿ ಅಂತ ಒಂದು ಲೆಟರ್ ಬರ‌್ಕೊಟ್ಬಿಡಿ' ಅನ್ನೋದೆ!ಅದೇ ಮನುಷ್ಯ ಇನ್ನೊಂದು ಸಂದರ್ಭದಲ್ಲಿ ತುಂಬಾ ಗಡಿಬಿಡಿಯಿಂದ ಚಿಕಿತ್ಸಾಲಯಕ್ಕೆ ಬಂದವರೇ, `ಡಾಕ್ಟ್ರೆ ತುಂಬಾನೇ ಎಮೋಶನ್, ಕಂಟ್ರೋಲ್ ಆಗ್ತಿಲ್ಲ, ಥಟ್ ಅಂತ ಕಂಟ್ರೋಲ್ ಮಾಡ್ಕೊಡಿ' ಅಂದ್ರು. `ನೋಡಿ ಆ ಥರ ಎಮೋಶನ್ ಕಂಟ್ರೋಲ್ ಆಗೋಕೆ ಅಂತ ಮಾತ್ರೆ ಗೀತ್ರೆ ತಗೋಬಾರ‌್ದು, ಯಾವುದೇ ಸಮಸ್ಯೆ ಇರಲಿ ತಲೆಗೆ ಹಚ್ಕೋಬಾರ‌್ದು. ಹಚ್ಕೊಂಡ್ರೆ ಹೀಗೇ ಆಗೋದು' ಎಂದೆ. `ಅಯ್ಯೋ ಇದು ತಲೆಗೆ ಹಚ್ಕೊಳ್ಳೊ ಸಮಸ್ಯೆ ಅಲ್ಲ ಡಾಕ್ಟ್ರೆ, ಹೊಟ್ಟೆ ಸಮಸ್ಯೆ, ಎಮೋಶನ್ ಅಂದ್ರೆ ಅರ್ಥ ಆಗ್ಲಿಲ್ವ ನಿಮ್ಗೆ?' ಎನ್ನುತ್ತಾ ಉಂಗುರ ಬೆರಳು ಮತ್ತು ತೋರುಬೆರಳುಗಳನ್ನು ಮೇಲೆತ್ತಿ ತೋರಿಸಿದರು. ಆಗಲೇ ನನಗೆ ತಿಳಿದದ್ದು, ಅವರ ಪ್ರಕಾರ ಎಮೋಶನ್ ಅಂದರೆ ಮೋಶನ್ ಅಥವಾ ಲೂಸ್ ಮೋಶನ್ (ಭೇದಿ) ಎಂದು!

* * *

ಕೆಲಸದ ಒತ್ತಡದಿಂದಾಗಿ ಒಂದೇ ಊರಿನಲ್ಲಿದ್ದರೂ ನಾವು ಮಿತ್ರರು ಒಬ್ಬರನ್ನೊಬ್ಬರು ಭೇಟಿಯಾಗದೆ ಹಲವು ದಿನಗಳು, ಕೆಲವೊಮ್ಮೆ ತಿಂಗಳುಗಳೇ ಕಳೆದಿರುತ್ತವೆ. ಹೀಗೆಯೇ ಒಮ್ಮೆ ನನ್ನ ಹಿರಿಯ ಮಿತ್ರರೊಬ್ಬರನ್ನು ಭೇಟಿಯಾಗುವ ಸಲುವಾಗಿ ಅವರ ಚಿಕಿತ್ಸಾಲಯಕ್ಕೆ ಹೋದೆ. ಅವರು ಇನ್ನೂ ಇಬ್ಬರು ಮೂವರು ರೋಗಿಗಳಿಗೆ ಚಿಕಿತ್ಸೆ ನೀಡುವುದಿತ್ತಾದ್ದರಿಂದ ಅವರ ಚಿಕಿತ್ಸಾಲಯದ ಪಕ್ಕದಲ್ಲೇ ಇದ್ದ ಔಷಧಿ ಅಂಗಡಿಗೆ ಹೋದೆ. ಅಂಗಡಿ ಮಾಲೀಕರು ನನಗೆ ಪರಿಚಿತರೇ ಆಗಿದ್ದುದರಿಂದ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು.ಆಗ ನನ್ನ ಮಿತ್ರರಲ್ಲಿ ಚಿಕಿತ್ಸೆ ಪಡೆದು ಔಷಧಿ ಚೀಟಿಯೊಂದಿಗೆ ಅಂಗಡಿಗೆ ಬಂದ ವ್ಯಕ್ತಿಯೊಬ್ಬ, `ಈ ಮಾತ್ರೆ ಯಾತಕ್ಕೆ, ಈ ಔಷಧಿ ಯಾವುದಕ್ಕೆ' ಎಂದು ಚಿಕಿತ್ಸಾಲಯದವರನ್ನು ಪ್ರಶ್ನಿಸತೊಡಗಿದ. ನಂತರ, `ಮತ್ಯಾಕೂ ಅಲ್ಲ, ನಮ್ಮ ಡಾಕ್ಟ್ರು ಈಗ ಹೊಸದಾಗಿ ಪದಗಳ ಜೊತೆ ಆಟ ಆಡೋಕೆ ಶುರು ಮಾಡವ್ರೆ. ಪದಗಳ ಜೊತೆ ಆಡ್ತಾ, ಆಡ್ತಾ ನಮ್ಮ ಜೀವದ ಜೊತೆಗೂ ಆಟ ಆಡ್‌ಬಿಟ್ರೆ ಕಷ್ಟ ಅಂತ ಕೇಳ್ದೆ' ಎನ್ನುತ್ತಾ ಔಷಧಿಯನ್ನು ಕೊಂಡುಕೊಂಡು ಹೋದ. ನನಗೆ ಅವನಾಡಿದ ಮಾತುಗಳು ಅರ್ಥವಾಗಿದ್ದು ನನ್ನ ಮಿತ್ರರನ್ನು ಮುಖತಃ ಭೇಟಿಯಾದ ನಂತರವೇ.ಅವರಾಗ ಬರೀ ವೈದ್ಯರಾಗಿ ಉಳಿದಿರಲಿಲ್ಲ. ಜೊತೆಗೆ ಕವಿಯೂ ಆಗಿ ರೂಪಾಂತರಗೊಂಡಿದ್ದರು. ನಾನು ಒಳಹೊಕ್ಕೊಡನೆಯೇ ತಾವು ಬರೆದ ಗದ್ಯರೂಪಿ ಪದ್ಯವನ್ನು ನನಗೆ ಓದಿ ಹೇಳಿ `ಹೆಂಗೆ' ಎನ್ನುವಂತೆ ನನ್ನ ಮುಖವನ್ನೊಮ್ಮೆ ನೋಡಿದರು. ಕೂಡಲೇ ನನಗೆ ಮಾತನಾಡಲೂ ಅವಕಾಶ ಕೊಡದೆ ತಾವು ಬರೆದ ಪದ್ಯದ ಅರ್ಥವನ್ನು ವಿವರಿಸಲು ಆರಂಭಿಸಿ, `ಕವಿ (ಅಂದರೆ ಸಾಕ್ಷಾತ್ ಅವರೇ) ಇಲ್ಲಿ ಏನು ಮಾಡಿದ್ದಾನೆ ಗೊತ್ತೇ? ಪದಗಳ ಜೊತೆ ಆಟವಾಡಿದಾನೆ...' ಎಂದು ಏನೇನೋ ಹೇಳುತ್ತಲೇ ಇದ್ದರು. ಅವರ ಮುಂದಿನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry