ಇಂಗ್ಲಿಷ್ ಹೊಸ ರೀತಿಯ ಕಿಂದರಿಜೋಗಿ

7

ಇಂಗ್ಲಿಷ್ ಹೊಸ ರೀತಿಯ ಕಿಂದರಿಜೋಗಿ

Published:
Updated:

ಮೈಸೂರು:  ಕನ್ನಡದ ಮಕ್ಕಳ ಪಾಲಿಗೆ ಇಂಗ್ಲಿಷ್ ಹೊಸ ರೀತಿಯ ಕಿಂದರಿ ಜೋಗಿಯಾಗಿದೆ ಎಂದು ಲೇಖಕಿ ವೈದೇಹಿ ಶುಕ್ರವಾರ ಮಾರ್ಮಿಕವಾಗಿ ಹೇಳಿದರು.ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ದಸರಾ ಕವಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಯಾರಿಗೂ ಬೇಡವಾಗಿದೆ. ಎಲ್ಲರೂ ಇಂಗ್ಲಿಷ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೇ ನೆಪವನ್ನು ಮುಂದಿಟ್ಟುಕೊಂಡು ಸರ್ಕಾರ ಅವುಗಳನ್ನು ಮುಚ್ಚುತ್ತಿದೆ. ಹೀಗಾದರೆ ಕನ್ನಡ ಭಾಷೆ ಉಳಿಸಿಕೊಳ್ಳುವುದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡ ಒಣಗಿದ ಮರದಂತೆ ಕಾಣಿಸುತ್ತಿದೆ. ಇದರ ಬುಡಕ್ಕೇ ಗೆದ್ದಲು ಹಿಡಿದೆ. ಕನ್ನಡ ಯಾರಿಗೂ ಬೇಡವಾಗಿದೆ. ಭಾಷೆ ಇಲ್ಲದೇ ಹೋದರೆ ಯಾವ ಕವಿತೆ ಕಟ್ಟುತ್ತೀರಿ ಎಂದು ಪ್ರಶ್ನಿಸಿದರು.`ಯಾರಿಗೂ ಕನ್ನಡ ಓದಲು ಸಮಯ ಇಲ್ಲವಾಗಿದೆ. ರೈಲಿನಲ್ಲಿ ಪ್ರಯಾಣಿಸುವವರ ಕೈಯಲ್ಲಿ ಇಂಗ್ಲಿಷ್ ಪುಸ್ತಕಗಳು ಕಾಣಸಿಗುತ್ತವೆ. ಮಕ್ಕಳು ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆ ಕಲಿಯದೇ ಹೋದರೆ ಕವಿಯಾಗಲು ಸಾಧ್ಯ ಇಲ್ಲ. ಶಬ್ದ, ಭಾಷೆ,  ಅಡುಗೆ ಮನೆಗೂ ಇಂಗ್ಲಿಷ್ ಬಂದಿದೆ. ಇದರಿಂದ ಸಾಹಿತ್ಯ, ಹಾಡಿಗೆ ಕುತ್ತಿ ಬಂದಿದೆ ಎಂದು ಹೇಳಿದರು.ತಾವು ಇಂಗ್ಲಿಷ್ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ವೈದೇಹಿ, ಮಾಹಿತಿ ಭಾಷೆಯಿಂದಾಗಿ ರೂಪಕ ಭಾಷೆ ಸತ್ತು ಹೋಗಿದೆ. ಭಾವನೆ, ಮುಗ್ಧತೆ ಎಲ್ಲವನ್ನೂ ಕಳೆದುಕೊಂಡು ಕಾವ್ಯ ಕಟ್ಟುವುದು ಹೇಗೆ. ರನ್ನ, ಪಂಪ, ಕುವೆಂಪು, ಬೇಂದ್ರೆ ಅವರನ್ನು ನಮ್ಮ ಮಕ್ಕಳಿಗೆ ಕೊಡಬೇಕು. ಅಪ್ಪ, ಅವ್ವನಂತಹ ಕನ್ನಡ ಭಾಷೆಯನ್ನು ಮಕ್ಕಳಿಂದ ದೂರ ಮಾಡಬಾರದು. ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ಗಮನ ಕೊಡಬೇಕು ಎಂದು ಮನವಿ ಮಾಡಿದರು.ಧ್ವನಿ ಮತ್ತು ಬೆಳಕು ಇಡೀ ಪ್ರಪಂಚ ಆಳುತ್ತಿವೆ. ಆದರೆ, ಈಗ ಧ್ವನಿಯನ್ನು ಗಲಾಟೆಯನ್ನಾಗಿ, ಬೆಳಕನ್ನು ಬೆಂಕಿಯನ್ನಾಗಿ ಮಾಡಿಕೊಂಡಿದ್ದೇವೆ. ದೇಶದಲ್ಲಿ ದಿನಕ್ಕೆ ನೂರಾರು ಅತ್ಯಾಚಾರಗಳು ನಡೆಯುತ್ತಿವೆ. ಆದ್ದರಿಂದ ಎಲ್ಲ ಮಹಿಳೆಯರು ದುರ್ಗೆಯರಾಗಬೇಕು. ಇದು ಸುಲಭವಲ್ಲ. ಏಕೆಂದರೆ ಮಹಿಷಾಸುರರು ಜೋರಾಗಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry