ಸೋಮವಾರ, ಡಿಸೆಂಬರ್ 16, 2019
26 °C

ಇಂಗ್ಲೆಂಡ್‌ನ ಪರಿಸ್ಥಿತಿ ಮರುಕಳಿಸದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್‌ನ ಪರಿಸ್ಥಿತಿ ಮರುಕಳಿಸದಿರಲಿ

ಪರ್ತ್ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು  ಟೆಸ್ಟ್‌ಗಳಲ್ಲಿ ನಿರಾಸೆ ಅನುಭವಿಸಿರುವ ಭಾರತ ತಂಡ ಇದೀಗ ಸರಣಿ ಸೋಲು ಹಾಗೂ `ಕ್ಲೀನ್ ಸ್ವೀಪ್~ ಮುಖಭಂಗದ ಆತಂಕ ಎದುರಿಸುತ್ತಿದೆ. ಇನ್ನುಳಿದ ಎರಡು ಪಂದ್ಯಗಳಲ್ಲೂ ಆಸೀಸ್ ಗೆಲುವಿನ ನಗು ಬೀರಿದರೆ ಭಾರತಕ್ಕೆ ಇಂಗ್ಲೆಂಡ್ ನೆಲದಲ್ಲಿ ಉಂಟಾದ ಪರಿಸ್ಥಿತಿಯೇ ಎದುರಾಗಲಿದೆ.

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 0-4 ರಲ್ಲಿ ಸೋಲು ಅನುಭವಿಸಿತ್ತು. ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಇನ್ನುಳಿದ ಪಂದ್ಯಗಳಲ್ಲಿ ಪುಟಿದೆದ್ದು ನಿಲ್ಲುವುದು ಅನಿವಾರ್ಯ.

ಇಂಗ್ಲೆಂಡ್‌ನಲ್ಲಿ ಎದುರಾದ ಪರಿಸ್ಥಿತಿ ಆಸೀಸ್ ನೆಲದಲ್ಲೂ ಎದುರಾಗದಿರಲಿ ಎಂಬ ವಿಶ್ವಾಸದಲ್ಲಿ ಅನುಭವಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಇದ್ದಾರೆ. `ಅದೇ ರೀತಿಯ ಸೋಲು ಎದುರಾಗದಂತೆ ನೋಡಿಕೊಳ್ಳುವುದು ಮುಖ್ಯ. ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಕ್ರಿಕೆಟ್ ಆಡುವ ಮೂಲಕ ಆಸೀಸ್ ತಂಡಕ್ಕೆ ತಿರುಗೇಟು ನೀಡಬೇಕು. ಮೆಲ್ಬರ್ನ್ ಪಂದ್ಯದಲ್ಲಿ ನಾವು ಅಲ್ಪ ಮೇಲುಗೈ ಸಾಧಿಸಿದ್ದೆವು. ಅದರಿಂದ ಉತ್ತೇಜನ ಪಡೆದು ಮುಂದಿನ ಹೆಜ್ಜೆ ಇಡುವುದು ಮುಖ್ಯ. ಇಂಗ್ಲೆಂಡ್‌ನಲ್ಲಿ ಉಂಟಾದ ಅದೇ ನಿರಾಸೆ ಮರುಕಳಿಸುವುದನ್ನು ತಡೆಯುವುದು ಅಗತ್ಯ~ ಎಂದು ತಿಳಿಸಿದ್ದಾರೆ.

ಈ ಸರಣಿಯಲ್ಲಿ ಮೂರು ಸಲ `ಕ್ಲೀನ್ ಬೌಲ್ಡ್~ ಆಗಿ ವಿಕೆಟ್ ಒಪ್ಪಿಸಿದ್ದರ ಬಗ್ಗೆ ಪ್ರಶ್ನೆ ಎದುರಾದಾಗ ದ್ರಾವಿಡ್, `ಖಂಡಿತವಾಗಿಯೂ ಈ ಕುರಿತು ಗಂಭೀರ ಚಿಂತನೆ ನಡೆಸಿದ್ದೇನೆ. ಮೂರು ಸಲ ಬೌಲ್ಡ್ ಆಗಿರುವ ಕಾರಣ ಅದನ್ನು ಲಘುವಾಗಿ ಪರಿಗಣಿಸುವ ಹಾಗಿಲ್ಲ. ಬ್ಯಾಟಿಂಗ್‌ನ ಕೆಲವು ತಂತ್ರಗಳಲ್ಲಿ ಬದಲಾವಣೆ ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ. ಆದರೆ ಅದು ಬಹಳ ದೊಡ್ಡ ಬದಲಾವಣೆಯೇನೂ ಅಲ್ಲ. ಕಳೆದ ವರ್ಷ ನಾನು ಯಶಸ್ವಿಯಾಗಿದ್ದೆ. ಇಂಗ್ಲೆಂಡ್‌ನಲ್ಲಿ ಆಡಿದ ಕೆಲವು ಇನಿಂಗ್ಸ್‌ಗಳ ವೀಡಿಯೊ ಕೂಡಾ ವೀಕ್ಷಿಸಿರುವೆ. ನನ್ನ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಿಲ್ಲ. ಮೂರು ಸಲ ಕ್ಲೀನ್‌ಬೌಲ್ಡ್ ಆಗಿರುವುದು ಆಕಸ್ಮಿಕ ಘಟನೆಯಷ್ಟೆ~ ಎಂದು ಉತ್ತರಿಸಿದ್ದಾರೆ.

ಸತತ ವೈಫಲ್ಯ ಅನುಭವಿಸಿರುವ ವಿವಿಎಸ್ ಲಕ್ಷ್ಮಣ್ ಮತ್ತೆ ಫಾರ್ಮ್ ಕಂಡುಕೊಳ್ಳುವರು ಎಂಬ ವಿಶ್ವಾಸದಲ್ಲಿ ದ್ರಾವಿಡ್ ಇದ್ದಾರೆ. `ಲಕ್ಷ್ಮಣ್ ವಿದಾಯ ಹೇಳಲಿ ಎಂಬ ಕೂಗು ಬಲ ಪಡೆದುಕೊಂಡಿದೆ. ಇದು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಅಂತಹ ಸುದ್ದಿಗಳನ್ನು ನಾನು ಓದಿಲ್ಲ. ಅದೇ ರೀತಿ ಅವರು (ಲಕ್ಷ್ಮಣ್) ಕೂಡಾ ಗಂಭೀರವಾಗಿ ತೆಗೆದುಕೊಂಡಿಲ್ಲ. ಇಂತಹ ಘಟನೆಗಳು ವೃತ್ತಿಜೀವನದ ಒಂದು ಭಾಗವಷ್ಟೆ. ಟೀಕೆಗಳನ್ನು ಮೆಟ್ಟಿನಿಂತು ಆಟ ಮುಂದುವರಿಸಬೇಕು. ಮುಂದಿನ ಎರಡು ಟೆಸ್ಟ್‌ಗಳಲ್ಲಿ ಲಕ್ಷ್ಮಣ್ ಹಳೆಯ ಲಯ ಕಂಡುಕೊಳ್ಳುವ ವಿಶ್ವಾಸ ನನ್ನದು~ ಎಂದು ಸಹ ಆಟಗಾರನ ಬೆಂಬಲಕ್ಕೆ ನಿಂತರು.

ಸಚಿನ್ ನೂರನೇ ಶತಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕದ ಬ್ಯಾಟ್ಸ್‌ಮನ್, `ಅವರು ಈ ಕುರಿತು ಒತ್ತಡದಲ್ಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ 90 ರನ್ ಗಳಿಸಿದ್ದ ಸಚಿನ್ ಕಳೆದ ಎರಡು ಪಂದ್ಯಗಳಲ್ಲಿ 70 ಹಾಗೂ 80 ರ ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಅವರು ನಿರಾಳರಾಗಿದ್ದಾರೆ. ಆಸೀಸ್ ನೆಲದಲ್ಲಿ ನೂರನೇ ಶತಕದ ಸಾಧನೆ ಮಾಡಿದರೆ ಚೆನ್ನ~ ಎಂದರು.

ಪ್ರತಿಕ್ರಿಯಿಸಿ (+)