ಇಂಗ್ಲೆಂಡ್ ತಂಡಕ್ಕೆ ದಂಡ

7

ಇಂಗ್ಲೆಂಡ್ ತಂಡಕ್ಕೆ ದಂಡ

Published:
Updated:
ಇಂಗ್ಲೆಂಡ್ ತಂಡಕ್ಕೆ ದಂಡ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ತಂಡದ ಎದುರಿನ ಪಂದ್ಯದಲ್ಲಿ ತನ್ನ ಪಾಲಿನ ಓವರ್ ಪೂರ್ಣಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದಕ್ಕೆ ಇಂಗ್ಲೆಂಡ್ ತಂಡದ ಮೇಲೆ ದಂಡ ವಿಧಿಸಲಾಗಿದೆ. ಈ ಕಾರಣ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರ ಮೇಲೆ ಪಂದ್ಯದ ಶೇಕಡಾ 20ರಷ್ಟು ಹಾಗೂ ಸಹ ಆಟಗಾರರ ಮೇಲೆ ಶೇಕಡಾ 10ರಷ್ಟು ದಂಡ ಹೇರಲಾಗಿದೆ.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನಿಗದಿತ ಸಮಯ ಮುಗಿದಾಗ ಇಂಗ್ಲೆಂಡ್ ತಂಡ ಇನ್ನೂ ಒಂದು ಓವರ್ ಬೌಲ್ ಮಾಡಬೇಕಿತ್ತು. ‘ನಿಗದಿತ ಸಮಯ ಮುಗಿದರೂ ಓವರ್ ಪೂರ್ಣಗೊಳ್ಳದ ಕಾರಣ ಆ್ಯಂಡ್ರ್ಯೂ ಸ್ಟ್ರಾಸ್ ಪಡೆ ಮೇಲೆ ಐಸಿಸಿ ಮ್ಯಾಚ್ ರೆಫರಿ ರೋಶನ್ ಮಹಾನಾಮ ದಂಡ ವಿಧಿಸಿದ್ದಾರೆ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ರೋಚಕ ಅಂತ್ಯ ಕಂಡ ‘ಬಿ’ ಗುಂಪಿನ ಈ ಪಂದ್ಯ ಟೈ ಆಗಿತ್ತು. ಹಾಗಾಗಿ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಗಿತ್ತು. ದಂಡ ನೀಡಲು ಇಂಗ್ಲೆಂಡ್ ಆಟಗಾರರು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯ ಇಲ್ಲ ಎಂದು ಐಸಿಸಿ ಹೇಳಿದೆ. ಬ್ರಿಸ್ನನ್‌ಗೆ ಐಸಿಸಿ ಛೀಮಾರಿ: ಭಾರತ ವಿರುದ್ಧದ ಪಂದ್ಯದಲ್ಲಿ ಔಟ್ ಆದ ಬಳಿಕ ಅಸಮಾಧಾನದಿಂದ ವಿಕೆಟ್‌ಗೆ ಬ್ಯಾಟ್‌ನಿಂದ ಬಡಿದಿದ್ದಕ್ಕೆ ಇಂಗ್ಲೆಂಡ್ ತಂಡದ ಆಟಗಾರ ಟಿಮ್ ಬ್ರಿಸ್ನನ್‌ಗೆ ಐಸಿಸಿ ಛೀಮಾರಿ ಹಾಕಿದೆ.ಅನುಚಿತ ವರ್ತನೆ ತೋರುವ ಮೂಲಕ ಆಲ್‌ರೌಂಡ್ ಆಟಗಾರ ಬ್ರಿಸ್ನನ್ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ‘ಅನುಚಿತ ವರ್ತನೆ ತೋರಿದ ಕಾರಣ ಟಿಮ್ ಬ್ರಿಸ್ನನ್‌ಗೆ ಛೀಮಾರಿ ಹಾಕಲಾಗಿದೆ’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ಪಂದ್ಯದ 49ನೇ ಓವರ್‌ನ ಕೊನೆಯ ಎಸೆತದಲ್ಲಿ ಬ್ರಿಸ್ನನ್ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಎಸೆತದಲ್ಲಿ ಬೌಲ್ಡ್ ಆದರು.

ಆಗ ಸಿಟ್ಟಿನಿಂದ ಅವರು ವಿಕೆಟ್‌ಗೆ ಬ್ಯಾಟ್‌ನಿಂದ ಬಡಿದರು.ಬ್ರಿಸ್ನನ್ ಈ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಯಾವುದೇ ವಿಚಾರಣೆ ನಡೆದಿಲ್ಲ. ‘ತಪ್ಪನ್ನು ಒಪ್ಪಿಕೊಂಡ ಬ್ರಿಸ್ನನ್ ಕ್ಷಮೆಯಾಚಿಸಿದ್ದಾರೆ. ಅದನ್ನು ಪರಿಗಣಿಸಿ ನಾನು ಈ ತೀರ್ಪು ನೀಡಿದ್ದೇನೆ’ ಎಂದು ಐಸಿಸಿ ಮ್ಯಾಚ್ ರೆಫರಿ ರೋಶನ್ ಮಹನಾಮಾ ತಿಳಿಸಿದ್ದಾರೆ. ‘ಅಷ್ಟು ಮಾತ್ರವಲ್ಲದೇ; ಬ್ರಿಸ್ನನ್ ಖುದ್ದಾಗಿ ಅಂಪೈರ್‌ಗಳತ್ತ ತೆರಳಿ ತಪ್ಪು ಒಪ್ಪಿಕೊಂಡಿದ್ದಾರೆ. ಈ ತಪ್ಪಿನ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದಿದ್ದಾರೆ’ ಎಂದು ಮಹನಾಮಾ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry