ಶನಿವಾರ, ಜೂನ್ 6, 2020
27 °C

ಇಂಗ್ಲೆಂಡ್ ತಂಡದ ಸಿಬ್ಬಂದಿ 15...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್ ತಂಡದ ಸಿಬ್ಬಂದಿ 15...!

ಕೋಲ್ಕತ್ತ: ಸ್ವದೇಶದಲ್ಲಿ ನಡೆದ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಅಜೇಯ ಸಾಧನೆಯ ಖುಷಿಯಲ್ಲಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದವರು ಭಾರತ ಪ್ರವಾಸಕ್ಕೆ ಬರುವಾಗ 15 ಮಂದಿ ಸಹಾಯಕ ಸಿಬ್ಬಂದಿಯನ್ನು ಕರೆ ತಂದಿರುವುದು ಗಮನಾರ್ಹ ವಿಷಯ!ಈ ತಂಡದಲ್ಲಿ ಆಟಗಾರರ ಸಂಖ್ಯೆಯಷ್ಟೇ ಸಹಾಯಕ ಸಿಬ್ಬಂದಿ ಇರುವುದು ಅಚ್ಚರಿ ಮೂಡಿಸಿದೆ. ಮುಖ್ಯ ಕೋಚ್ ಆ್ಯಂಡಿ ಫ್ಲವರ್, ಸ್ಪಿನ್ ಬೌಲಿಂಗ್ ಕೋಚ್ ಮುಷ್ತಾಕ್ ಅಹ್ಮದ್, ಫೀಲ್ಡಿಂಗ್ ಕೋಚ್ ರಿಚರ್ಡ್ ಹಲ್ಸಲ್, ವೇಗದ ಬೌಲಿಂಗ್ ಕೋಚ್ ಡೇವಿಡ್ ಸೇಕರ್, ಫಿಟ್‌ನೆಸ್ ಕೋಚ್ ಹ್ಯೂ ಬೆವನ್, ವಿಕೆಟ್ ಕೀಪಿಂಗ್ ಕೋಚ್ ಬ್ರೂಸ್ ಫ್ರೆಂಚ್, ಕ್ರೀಡಾ ಮನಃಶಾಸ್ತ್ರ ತಜ್ಞ ಮಾರ್ಕ್ ಬೌಡೆನ್, ಪ್ರದರ್ಶನ ವಿಶ್ಲೇಷಕಿ ಎಮ್ಮಾ ಬ್ರಾಡ್... ಹೀಗೆ ಪಟ್ಟಿ ಬೆಳೆಯುತ್ತದೆ.ಮಾಧ್ಯಮ ಮ್ಯಾನೇಜರ್, ಕಿಟ್ ಸಹಾಯಕ ಕೂಡ ಈ 15ರ ಪಟ್ಟಿಯಲ್ಲಿ ಸೇರಿದ್ದಾರೆ. ವಿಶೇಷವೆಂದರೆ ಈ ತಂಡ ಏಕದಿನ ಸರಣಿಗೆ ಮಾತ್ರ. ಟೆಸ್ಟ್ ಸರಣಿ ಇದ್ದ ಸಮಯದಲ್ಲಿ ಇದರಲ್ಲಿ ಕೆಲವರು ಬದಲಾಗುತ್ತಾರೆ.ಆದರೆ ಇಷ್ಟು ಮಂದಿ ಇದ್ದರೂ ಭಾರತದಲ್ಲಿ ಅಲಸ್ಟರ್ ಕುಕ್ ಪಡೆಗೆ ಒಂದೂ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. 2008ರ ಪ್ರವಾಸದ ವೇಳೆ ಆಘಾತ ಅನುಭವಿಸಿದ್ದ ರೀತಿ ಈ ಬಾರಿಯೂ 0-5ರಲ್ಲಿ ಸರಣಿ ಸೋಲು ಕಂಡರು.

ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಈ ತಂಡದ ಮಾಧ್ಯಮ ಮ್ಯಾನೇಜರ್ ಜೇಮ್ಸ, `ಈ ಸರಣಿಗಾಗಿ ಇಷ್ಟು ಮಂದಿ ಬಂದಿಲ್ಲ. ಯಾವುದೇ ಪ್ರವಾಸ ಕೈಗೊಂಡಾಗ 15 ಮಂದಿ ಸಿಬ್ಬಂದಿ ಇರುತ್ತಾರೆ~ ಎಂದರು.ವಿಶೇಷವೆಂದರೆ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಪುತ್ರಿ ಹಾಗೂ ಇಂಗ್ಲೆಂಡ್ ಟ್ವೆಂಟಿ-20 ತಂಡದ ನಾಯಕ ಸ್ಟುವರ್ಟ್ ಬ್ರಾಡ್ ಸಹೋದರಿ ಎಮ್ಮಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಕ್ರೀಡಾ ವಿಜ್ಞಾನದಲ್ಲಿ ಪದವಿ ಪಡೆದಿರುವ ಎಮ್ಮಾ ಪ್ರದರ್ಶನ ವಿಶ್ಲೇಷಣೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಹೊಂದಿದ್ದಾರೆ. 2007ರಲ್ಲಿ ಅವರು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ)ಯಲ್ಲಿ ಉದ್ಯೋಗ ಗಿಟ್ಟಿಸಿದರು. ಆರಂಭದಲ್ಲಿ ಮಹಿಳಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ಮಹಿಳಾ ತಂಡ ಟ್ವೆಂಟಿ-20 ಹಾಗೂ ಏಕದಿನ ವಿಶ್ವ ಚಾಂಪಿಯನ್ ಕೂಡ ಆಯಿತು. ಇದಕ್ಕಾಗಿ ಅವರಿಗೆ ಬಡ್ತಿ ಲಭಿಸಿತು. ಅದು ಪುರುಷರ ತಂಡದಲ್ಲಿ ಕೆಲಸ ಮಾಡುವ ಅವಕಾಶ.ಇಲ್ಲೂ ಅವರು ಯಶಸ್ವಿಯಾದರು. ಏಕೆಂದರೆ ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಯಿತು.ಜೊತೆಗೆ ಆಸ್ಟ್ರೇಲಿಯಾ ನೆಲದಲ್ಲಿ ಆ್ಯಷಸ್ ಸರಣಿ ಗೆದ್ದು ಇತಿಹಾಸ ಬರೆಯಿತು. ನಂತರ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು 4-0ರಲ್ಲಿ ಸೋಲಿಸಿ ಅಗ್ರಪಟ್ಟ ಪಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.