ಭಾನುವಾರ, ಏಪ್ರಿಲ್ 11, 2021
25 °C

ಇಂಗ್ಲೆಂಡ್ ವೀಸಾ ನಿಯಮ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಇಂಗ್ಲೆಂಡ್‌ಗೆ ವೀಸಾ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ಆಗುವ ವಂಚನೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದ್ದು,  ವೀಸಾ ನೀಡುವ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ಭಾರತದಲ್ಲಿನ ಬ್ರಿಟನ್‌ನ ಉಪ ಹೈ ಕಮಿಷನರ್ ರಿಚರ್ಡ್ ಹೈಡ್ ತಿಳಿಸಿದರು.ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೀಸಾ ನಿಯಮಾವಳಿಗಳಲ್ಲಿ ಮಾಡಿರುವ ಬದಲಾವಣೆಗಳು ಈ ತಿಂಗಳ 21ರಿಂದ ಹಂತ ಹಂತವಾಗಿ ಜಾರಿಗೆ ಬರಲಿವೆ’ ಎಂದರು.

 

‘ಇಂಗ್ಲೆಂಡ್ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ವೆಬ್‌ಸೈಟ್: ಠಿಠಿ://್ಠಜ್ಞಿಜಿ.್ಛ್ಚಟ.ಜಟ.್ಠ ನಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ವೀಸಾ ನೀಡಲಾಗುವುದು’ ಎಂದು ಅವರು ವಿವರಿಸಿದರು.‘ತಿದ್ದಿದ ಅಥವಾ ನಕಲಿ ದಾಖಲೆಗಳನ್ನು ಸಲ್ಲಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಂತಹವರು ಹತ್ತು ವರ್ಷಗಳ ಕಾಲ ವೀಸಾಗೆ ಅರ್ಜಿ ಸಲ್ಲಿಸದಂತೆ ನಿರ್ಬಂಧ ವಿಧಿಸಲಾಗುವುದು. ಜತೆಗೆ ಪೊಲೀಸರ ಮೂಲಕ ಕಾನೂನು ಕ್ರಮವನ್ನೂ ಜರುಗಿಸಲಾಗುವುದು’ ಎಂದು ಅವರು ಹೇಳಿದರು.

 

‘ಕನಿಷ್ಠ ಇಂಗ್ಲಿಷ್ ಬಲ್ಲವರಿಗೆ ಮಾತ್ರ ವಿದ್ಯಾರ್ಥಿ ವೀಸಾ ಕೊಡಲಾಗುವುದು. ಇನ್ನು ಮುಂದೆ ದುಭಾಷಿಯೊಂದಿಗೆ ಬರುವ ವಿದ್ಯಾರ್ಥಿಗೆ ವೀಸಾ ನೀಡುವುದಿಲ್ಲ’ ಎಂದು ಹೇಳಿದ ಅವರು, ‘ಬ್ರಿಟನ್‌ನಲ್ಲಿ ಪದವಿ ಪೂರ್ಣಗೊಳಿಸಿದವರು ತಾವು ನೈಪುಣ್ಯ ಪಡೆದ ಕ್ಷೇತ್ರದ ಉದ್ಯೋಗಗಳನ್ನು ಮಾಡಲು ಮಾತ್ರ ಅವಕಾಶ ನೀಡಲಾಗುವುದು. ಕೌಶಲ್ಯದ ಅಗತ್ಯವಿಲ್ಲದ ಉದ್ಯೋಗಗಳಲ್ಲಿ ತೊಡಗಿಕೊಳ್ಳಲು ಅವಕಾಶ ಇರುವುದಿಲ್ಲ’ ಎಂದರು.

 

‘ಇಂಗ್ಲೆಂಡ್ ಸರ್ಕಾರ ಅಥವಾ ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಅರೆಕಾಲಿಕ ಉದ್ಯೋಗ ಮಾಡಲು ಅವಕಾಶ ಕೊಡಲಾಗುವುದು. ಅಂತಹ ವಿದ್ಯಾರ್ಥಿಗಳು ತಮ್ಮ ಸಮಯದ ಶೇಕಡಾ 66ರಷ್ಟನ್ನು ವ್ಯಾಸಂಗಕ್ಕಾಗಿಯೇ ಮೀಸಲಿಡಬೇಕು’ ಎಂದು ಅವರು ಹೇಳಿದರು.‘ಬೆರಳಚ್ಚು ಸೇರಿದಂತೆ ಜೈವಿಕ ಗುರುತುಗಳನ್ನು ಪಡೆದುಕೊಳ್ಳುವುದರಿಂದ ವೀಸಾಗೆ ಅರ್ಜಿ ಸಲ್ಲಿಸದವರೇ ಖುದ್ದಾಗಿ ಹಾಜರಾಗಬೇಕು. ಹೀಗಾಗಿ  ಬೇಗ ವೀಸಾ ಕೊಡಿಸುವುದಾಗಿ ಹೇಳುವ ಮಧ್ಯವರ್ತಿಗಳ ಮಾತಿಗೆ ಮರುಳಾಗಬೇಡಿ.

ಅಲ್ಪಾವಧಿಯ ಡಿಪ್ಲೊಮ ಮತ್ತು ಶೈಕ್ಷಣಿಕ ಕೋರ್ಸ್‌ಗಳ ಬದಲಿಗೆ ದೀರ್ಘಾವಧಿಯ ಕೋರ್ಸುಗಳನ್ನೇ ಆಯ್ಕೆ ಮಾಡಿಕೊಳ್ಳಿ’ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ‘2010ರ ಸಾಲಿನಲ್ಲಿ ವೀಸಾಗಾಗಿ ಐದು ಲಕ್ಷ ಅರ್ಜಿಗಳು ಬಂದಿದ್ದವು. ಅದರಲ್ಲಿ ವೀಸಾ ಪಡೆದ ವಿದ್ಯಾರ್ಥಿಗಳ ಸಂಖ್ಯೆ 41 ಸಾವಿರ. ಇನ್ನು ಮುಂದೆ ಕಂಪೆನಿಗಳ ಆಂತರಿಕ ವರ್ಗಾವಣೆಗೆ ಯಾವುದೇ ಮಿತಿ ವಿಧಿಸುವುದಿಲ್ಲ’ ಎಂದು ಹೇಳಿದ ಅವರು, ‘ಉದ್ಯಮಿಗಳು ಹಾಗೂ ಉದಯೋನ್ಮುಖ ಉದ್ಯಮಿಗಳು ಇಂಗ್ಲೆಂಡ್‌ನಲ್ಲಿ ಉದ್ಯಮ ಸ್ಥಾಪಿಸಲು ಅವಕಾಶ ಇದೆ. ಅಂತಹವರಿಗಾಗಿಯೇ ಪ್ರತ್ಯೇಕ ವೀಸಾ ನೀತಿ ರೂಪಿಸಲಾಗಿದೆ’ ಎಂದರು. ಬ್ರಿಟನ್ ಉಪ ಹೈ ಕಮಿಷನ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಆರ್.ಫರ್ನಾಂಡಿಸ್ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.