ಇಂಗ್ಲೆಂಡ್ ಹಿಂಸಾಚಾರ: 3 ಏಷ್ಯನ್ನರ ಸಾವು

7

ಇಂಗ್ಲೆಂಡ್ ಹಿಂಸಾಚಾರ: 3 ಏಷ್ಯನ್ನರ ಸಾವು

Published:
Updated:
ಇಂಗ್ಲೆಂಡ್ ಹಿಂಸಾಚಾರ: 3 ಏಷ್ಯನ್ನರ ಸಾವು

ಲಂಡನ್ (ಪಿಟಿಐ): ಹಿಂಸಾಚಾರ ನಡೆಸುತ್ತಿದ್ದವರಿಂದ ತಮ್ಮ ಸಮುದಾಯವನ್ನು ರಕ್ಷಿಸಲು ಹೋದ ಮೂವರು ಏಷ್ಯಾ ಮೂಲದ ಇಂಗ್ಲೆಂಡ್ ಪ್ರಜೆಗಳು ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.ಈ ಮೂವರೂ ಅಪಘಾತದಿಂದಾಗಿ ಸಾವನ್ನಪ್ಪಿದರೂ ಪೊಲೀಸರು ಇದನ್ನು ಕೊಲೆ ಪ್ರಕರಣವೆಂದೇ ಪರಿಗಣಿಸಿದ್ದಾರೆ.ಮೃತಪಟ್ಟ ಮೂವರಲ್ಲಿ ಇಬ್ಬರು ಸಹೋದರರಾಗಿದ್ದು ಷಹಜಾದ್ ಮತ್ತು ಹ್ಯಾರಿ ಹುಸೇನ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ಇವರ ಸ್ನೇಹಿತ ಮೂಸವರ್ ಅಲಿ ಎಂದು ತಿಳಿದು ಬಂದಿದೆ.ಲಂಡನ್‌ನಲ್ಲಿ ಆರಂಭಗೊಂಡಿದ್ದ ಲೂಟಿ, ಹಿಂಸಾಚಾರ ಬರ್ಮಿಂಗ್‌ಹ್ಯಾಮ್‌ಗೂ ಮಂಗಳವಾರ ವ್ಯಾಪಿಸಿ ತೀವ್ರ ಸ್ವರೂಪ ಪಡೆದುಕೊಂಡಿತ್ತು.ಉದ್ರಿಕ್ತ ಗುಂಪುಗಳಿಂದ ತಮ್ಮ ಅಂಗಡಿಯನ್ನು ರಕ್ಷಿಸುವುದಕ್ಕಾಗಿ ಈ  ಮೂವರು  ರಸ್ತೆಗೆ ಇಳಿದಿದ್ದರು.

`ಪರಸ್ಪರ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಎರಡು ಕಾರುಗಳು ಇವರಿಗೆ ಡಿಕ್ಕಿ ಹೊಡೆಯಿತು~ ಎಂದು ಮೃತಪಟ್ಟ ಸಹೋದರರ ಸಂಬಂಧಿಯಾದ ಕಬೀರ್ ಖಾನ್ ಇಸಾಖಲ್ ಎಂಬುವವರು ಸ್ಕೈ ನ್ಯೂಸ್‌ಗೆ ತಿಳಿಸಿದ್ದಾರೆ.`ಈ ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕೊಲೆ ಆರೋಪದಲ್ಲಿ 32 ವರ್ಷದ ಶಂಕಿತ ವ್ಯಕ್ತಿಯೊಬ್ಬರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ~ ಮಿಡ್‌ಲ್ಯಾಂಡ್ಸ್ ಪೊಲೀಸ್ ವಕ್ತಾರರೊಬ್ಬರು ಹೇಳಿದ್ದಾರೆ.

`ಕುಸಿಯುತ್ತಿರುವ ನೈತಿಕತೆ~

ಈ ಹಿಂಸಾಚಾರಕ್ಕೆ ನಾಗರಿಕ ಸಮಾಜದಲ್ಲಿ ನೈತಿಕತೆ ಕುಂಠಿತವಾಗಿರುವುದು ಮತ್ತು ಬೇಜವಾಬ್ದಾರಿತನ ಕಾರಣ ಎಂದು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ವಿಷಾದಿಸಿದ್ದಾರೆ.ಬುಧವಾರ ತುರ್ತು ಪ್ರತಿಕ್ರಿಯೆ ಸಮಿತಿಯ ಮತ್ತೊಂದು ಸಭೆ ಕರೆದು ಸದ್ಯದ ಪರಿಸ್ಥಿತಿ ಕುರಿತು ಚರ್ಚಿಸಿದ  ಬಳಿಕ ಮಾತನಾಡಿದ ಅವರು `ನಮ್ಮ ಸಮಾಜದ ಕೆಲವು ವರ್ಗಗಳು ಕೇವಲ ಒಡೆದು ಹೋಗಿರುವುದು ಮಾತ್ರವಲ್ಲ. ರೋಗ ಪೀಡಿತವಾಗಿವೆ. 12 ಅಥವಾ 13 ವರ್ಷದ ಮಕ್ಕಳು ಲೂಟಿ ಮಾಡುತ್ತಿದ್ದಾರೆ ಎಂದರೆ ನಮ್ಮ ಸಮಾಜದಲ್ಲಿ ಹಲವು ತಪ್ಪುಗಳಿವೆ ಎಂದೇ ಅರ್ಥ~ ಎಂದು ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry