ಇಂಟರ್‌ನೆಟ್‌ಗೆ 30 ವರ್ಷ

7
ಸುದ್ದಿ ಹಿನ್ನೆಲೆ

ಇಂಟರ್‌ನೆಟ್‌ಗೆ 30 ವರ್ಷ

Published:
Updated:
ಇಂಟರ್‌ನೆಟ್‌ಗೆ 30 ವರ್ಷ

ಜಾಗತಿಕ ಕಂಪ್ಯೂಟರ್ ಸಂಪರ್ಕ ಜಾಲವಾಗಿರುವ ಇಂಟರ್‌ನೆಟ್‌ಗೆ ಈಗ 30 ವರ್ಷ ತುಂಬಿದೆ.  ಅದಿನ್ನೂ ತಾರುಣ್ಯಾವಸ್ಥೆಯಲ್ಲಿಯೇ ಇದ್ದರೂ, ದಿನೇ ದಿನೇ ಅದರ ಸ್ವರೂಪ ಬದಲಾಗುತ್ತಲೇ ಇದೆ. ಇಂಟರ್‌ನೆಟ್‌ನ ಸರ್ವತ್ರ ಬಳಕೆ ಪ್ರಮಾಣ ಎಷ್ಟಿದೆ ಎಂದರೆ, ನವ ಪೀಳಿಗೆಯಷ್ಟೇ ಅಲ್ಲ, 40 ವರ್ಷಕ್ಕಿಂತ ಹೆಚ್ಚಿನವರೂ ಇಂಟರ್‌ನೆಟ್ ಸಂಪರ್ಕ ಇಲ್ಲದ ಜಗತ್ತನ್ನೂ ಊಹಿಸುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ.  ಒಳಿತೊ - ಕೆಡುಕೊ ಒಟ್ಟಿನಲ್ಲಿ, ಇಂಟರ್‌ನೆಟ್ ವಿಶ್ವವನ್ನೇ ಬದಲಿಸಿದೆ. ಜನರ ಜೀವನ ವಿಧಾನದಲ್ಲಿ ಭಾರಿ ಪರಿವರ್ತನೆ ತಂದಿದೆ.ಮೂವತ್ತು ವರ್ಷಗಳ ಹಿಂದೆ, 1983ರ ಜನವರಿ 1ರಂದು ವಿಂಟ್ ಸರ್ಫ್ ಮತ್ತು ಆತನ ಸಹೋದ್ಯೋಗಿಗಳು ಇಂಟರ್‌ನೆಟ್‌ಗೆ ಚಾಲನೆ ನೀಡಿದ್ದರು. ಕೆಲವೇ ಕೆಲ ಕಂಪ್ಯೂಟರ್‌ಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಅವರು ಸಫಲರಾಗಿದ್ದರೂ,  ತಮಗೆ ಗೊತ್ತಿಲ್ಲದೇ ಇಂಟರ್‌ನೆಟ್ ಎನ್ನುವ ಹೊಸ ಮಾಂತ್ರಿಕ ಲೋಕಕ್ಕೆ ಮನುಕುಲವನ್ನು ಕರೆದುಕೊಂಡು ಹೋಗಿದ್ದರು. ಅದೊಂದು ಮಾನವನ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ನಡುವಿನ ಹೊಸ ಕ್ರಾಂತಿಕಾರಿ ಸಂಪರ್ಕಕೊಂಡಿಯಾಗಿತ್ತು.ಇಂಟರ್‌ನೆಟ್ ಮಂತ್ರದಂಡದಂತೆ ಇಲ್ಲವೆ ವಿಧ್ವಂಸಕ ಅಸ್ತ್ರವಾಗಿಯೂ ಬಳಕೆಯಾಗಬಲ್ಲದು. ಎಲ್ಲವೂ ಬಳಸುವವನ ವಿವೇಚನೆಗೆ ಬಿಟ್ಟದ್ದು. ವಿವೇಕವಂತರ ಕೈಯಲ್ಲಿ ಇದ್ದರೆ ಜನರನ್ನು ಬೆಸೆಯುವ, ಹೊಸ ಉದ್ದಿಮೆಗಳನ್ನು ಸೃಷ್ಟಿಸುವ ಮತ್ತು ಸರ್ವಾಧಿಕಾರಿಗಳನ್ನು ಪದಚ್ಯುತಗೊಳಿಸಲು ನೆರವಾಗಲಿದೆ.  ದುಷ್ಟರ ಪಾಲಾದರೆ, ದ್ವೇಷ ಬಿತ್ತುವ ಕಿಚ್ಚು ಹಚ್ಚುವ, ಪೂರ್ವಗ್ರಹಗಳನ್ನು ಬೆಳೆಸುವ, ಏಕಸ್ವಾಮ್ಯ  ಮತ್ತು ಅಭಿವ್ಯಕ್ತಿಸ್ವಾತಂತ್ರ್ಯ ಮಟ್ಟ ಹಾಕುವ ಅಪಾಯಕಾರಿ ಸಾಧನವಾಗಲಿದೆ.ಮೂಲ

ವೈವಿಧ್ಯಮಯ ಸಂಪರ್ಕ ವ್ಯವಸ್ಥೆ ಬಳಸುತ್ತಿದ್ದ ಅಮೆರಿಕದ ಸೇನೆಯು ಕಂಪ್ಯೂಟರ್‌ಗಳ ಮಧ್ಯೆ ಸುಲಭ ಮತ್ತು ಏಕರೂಪದ ಸಂಪರ್ಕ ಸಾಧಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೇ ಇಂದಿನ ಇಂಟರ್‌ನೆಟ್ ಆವಿಷ್ಕಾರಕ್ಕೆ ಮೂಲ ಕಾರಣ. ಕಂಪ್ಯೂಟರ್ ವಿಜ್ಞಾನಿಗಳು ನಡೆಸಿದ ಹಲವು ಪ್ರಯೋಗಗಳ ಫಲವಾಗಿ ಸಂಪರ್ಕ ನಿಯಂತ್ರಣ ಶಿಷ್ಟಾಚಾರ / ಅಂತರ್‌ಜಾಲ ಶಿಷ್ಟಾಚಾರವನ್ನು (Transm­ission Control Protocol/­Internet Protocol (TCP/IP) 1983ರ ಜನವರಿ 1ರಂದು ಅಂಗೀಕರಿಸಲಾಯಿತು. ಈ `ಟಿಸಿಪಿ / ಐಪಿ' ಸೌಲಭ್ಯವು ಅಮೆರಿಕ ಸೇನೆ ಎದುರಿಸುತ್ತಿದ್ದ ಅನೇಕ ಸಂವಹನ ಸಮಸ್ಯೆಗಳಿಗೆ ಪರಿಹಾರ ಒದಗಿಸಿತು.ವಿಸ್ತರಣೆ

1995ರಷ್ಟೊತ್ತಿಗೆ ವಿಶ್ವದಾದ್ಯಂತ 1.6 ಕೋಟಿ ಜನರು ಆನ್‌ಲೈನ್ ಸೌಲಭ್ಯ ಪಡೆದುಕೊಂಡಿದ್ದರು. ಅಷ್ಟೊತ್ತಿಗೆ ಅನೇಕರಿಗೆ ಇಂಟರ್‌ನೆಟ್‌ನ ಗೀಳು ಅಂಟಿಕೊಂಡಾಗಿತ್ತು. ಸದ್ಯಕ್ಕೆ ವಿಶ್ವದಾದ್ಯಂತ 240 ಕೋಟಿಗಳಷ್ಟು ಜನರು ಇಂಟರ್‌ನೆಟ್ ಬಳಸುತ್ತಿರುವ ಅಂದಾಜು ಇದೆ. ಸಂಗೀತ, ನಿಯತಕಾಲಿಕೆ, ಮಾಹಿತಿ ಶೋಧ, ಸಾಮಾಜಿಕ ಸಂಪರ್ಕ ತಾಣ, ಆನ್‌ಲೈನ್ ವಹಿವಾಟು ಹೀಗೆ ಹತ್ತಾರು ಬಗೆಗಳಲ್ಲಿ ಇಂಟರ್‌ನೆಟ್ ಪ್ರಪಂಚ ವಿಸ್ತರಣೆಗೊಂಡಿದೆ.ಬದಲಾವಣೆ

ಅಮೆರಿಕದ ರಕ್ಷಣಾ ಇಲಾಖೆಯ ಅರ್ಪಾನೆಟ್ ಸಂಪರ್ಕ ಜಾಲವು ಇಂಟರ್‌ನೆಟ್ ವ್ಯವಸ್ಥೆ ಅಳವಡಿಸಿಕೊಂಡಿತು. 6 ವರ್ಷಗಳ ನಂತರ, ವಿಶ್ವವ್ಯಾಪಿ ಸಂಪರ್ಕ ಜಾಲ (world wide web- www) ಕಾರ್ಯರೂಪಕ್ಕೆ ಬಂದಿತು. ಅಲ್ಲಿಂದಾಚೆಗೆ ಜೀವನ ಶೈಲಿಯ ಸ್ವರೂಪವೇ ಬದಲಾಯಿತು. 1990ರ ಮಧ್ಯಭಾಗದಲ್ಲಿ ಮನೆಗಳಲ್ಲಿಯೂ ಇಂಟರ್‌ನೆಟ್ ಕಾಲಿಟ್ಟಿತು. ಆರಂಭದಲ್ಲಿ ಡಯಲ್ ಅಪ್ ಇಂಟರ್‌ನೆಟ್ ಸಂಪರ್ಕ ಸೌಲಭ್ಯ ಇತ್ತು. ಈಗ ವೇಗವಾಗಿ ದತ್ತಾಂಶ ಲಭಿಸುವ ಬ್ರಾಡ್‌ಬ್ಯಾಂಡ್ ಸೇವೆ ಬಂದಿದೆ.ಭಾರತಕ್ಕೆ ಎಷ್ಟು ಪ್ರಯೋಜನ?

ದೇಶದ ಅಭಿವೃದ್ಧಿಯಲ್ಲಿ ಇಂಟರ್‌ನೆಟ್‌ನ ಕೊಡುಗೆ ಗಮನಾರ್ಹವಾಗಿದೆ. ನಮ್ಮಲ್ಲಿ ಭೌತಿಕ ಮೂಲ ಸೌಕರ್ಯ ಕಡಿಮೆ ಇದ್ದರೂ, ವಿಶ್ವದ ಇತರ ಭಾಗಗಳ ಜತೆ ಸಂಪರ್ಕ ಹೊಂದಲು ಇಂಟರ್‌ನೆಟ್ ಕೊಡುಗೆ ಗಣನೀಯವಾಗಿದೆ. ಮೊಬೈಲ್ ಇಂಟರ್‌ನೆಟ್ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ಅಂತರ ತಗ್ಗಿಸಿದೆ. ಐ.ಟಿ ಮತ್ತು ಐ.ಟಿ ಆಧಾರಿತ ಸೇವೆಗಳು, ಹೊರಗುತ್ತಿಗೆ, ಸಾಫ್ಟ್‌ವೇರ್ ರಫ್ತು ಮತ್ತಿತರ ಕೊಡುಗೆಗಳಿಂದ ದೇಶಿ ಅರ್ಥವ್ಯವಸ್ಥೆಗೆ ಚೇತರಿಕೆ ನೀಡಿದೆ.ಮುಂದೇನು?

ಮುಂಬರುವ ವರ್ಷಗಳಲ್ಲಿ ಸರಕುಗಳಿಗೆ ವಿಸ್ತರಣೆಯಾಗುವ ಕೈಗಾರಿಕಾ ಇಂಟರ್‌ನೆಟ್, ವ್ಯಾಪಕ ಪ್ರಮಾಣದಲ್ಲಿ ಆರ್ಥಿಕ ಪರಿಣಾಮ ಬೀರುವ ನಿರೀಕ್ಷೆ ಇದೆ. ಆರೋಗ್ಯ ಮತ್ತು ಸರಕುಗಳ ಪೂರೈಕೆ ಸರಣಿಯಲ್ಲಿ   ಭಾರಿ ಬದಲಾವಣೆಗಳು ನಡೆಯಲಿವೆ. ವೈಜ್ಞಾನಿಕ ಕಾಲ್ಪನಿಕ ಕತೆಗಳಲ್ಲಿನ ಅನೇಕ ಸಂಗತಿಗಳೂ ನಿಜವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry