ಬುಧವಾರ, ಅಕ್ಟೋಬರ್ 16, 2019
28 °C

ಇಂಟರ್‌ನೆಟ್‌ನ ಹೊಸ ಮುಖ...

Published:
Updated:

ಒಂದೇ ಕ್ಲಿಕ್... ಅಷ್ಟೇ! ಏನೇ ಕೆಲಸ ಆಗಬೇಕಿದ್ದರೂ ಮೌಸ್ ಹಿಡಿದು ಒಂದು ಸಲ ಬಟನ್ ಕ್ಲಿಕ್ಕಿಸಿದರೆ ಸಾಕು. ಎಲ್ಲ ಸೌಕರ್ಯ ಬೆರಳ ತುದಿಯಲ್ಲೇ.ಶಾಪಿಂಗ್‌ಗೆ ಹೋಗಿ; ಒಳ್ಳೆಯ ರೆಸ್ಟೊರೆಂಟ್ ಎಲ್ಲಿದೆ ಎಂದು ಹುಡುಕಿ. ಸ್ನೇಹಿತರು ಪಾರ್ಟಿ ನಡೆಸುತ್ತಿರುವ ಸ್ಥಳ ಎಲ್ಲಿದೆ ಎಂದು ಇಲ್ಲೇ ಕುಳಿತು ಪತ್ತೆಹಚ್ಚಿ. ನೀವೇನು ಮಾಡುತ್ತಿದ್ದೀರಿ ಎಂಬುದನ್ನು ಈ ಗೆಳೆಯರಿಗೆ ಕ್ಷಣವೇ ಹೇಳಿ. ಆನ್‌ಲೈನ್‌ನಲ್ಲಿ ಇರುವಾಗ ನಿಮ್ಮ ಗಮನಸೆಳೆಯಲು ಪದೇ ಪದೇ ಕಂಪ್ಯೂಟರ್ ಸ್ಕ್ರೀನ್ ಮೇಲೆ `ಪ್ರತ್ಯಕ್ಷ~ವಾಗುವ ಜಾಹೀರಾತಿನ ಲಾಭವನ್ನೂ (ಬೇಕಿದ್ದರೆ) ಪಡೆದುಕೊಳ್ಳಿ.ಆದರೆ, ಈಗ ಕಾಲ ಬದಲಾಗಿದೆ. ಇಂಟರ್‌ನೆಟ್ ಎಂಬುದು ಈಗ ಕೇವಲ ವೈಯಕ್ತಿಕ ಸೌಲಭ್ಯಕ್ಕೆ ಬಳಕೆಯಾಗುತ್ತಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಪ್ರಯೋಜನ ಕಲ್ಪಿಸಿದೆ. ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಇಂಟರ್‌ನೆಟ್ ಉದ್ಯಮ ಬೆಳೆಯುತ್ತಿರುವ ಪರಿ ಗಮನ ಸೆಳೆಯುವಂತಿದೆ. ಕೋಟ್ಯಂತರ ಡಾಲರ್ ಮೊತ್ತದ ಬಂಡವಾಳವನ್ನು ಈ ಉದ್ಯಮ ವಲಯದಲ್ಲಿ ಹೂಡಲಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವೂ ಇದಾಗಿದೆ.ಕಡಿಮೆ ವೆಚ್ಚದ ಸೆನ್ಸಾರ್ (ಸಂವೇದಿ)ಗಳು, `ಬುದ್ಧಿವಂತ~ ಸಾಫ್ಟ್‌ವೇರ್ (ತಂತ್ರಾಂಶ)ಗಳು ಹಾಗೂ ವೇಗವಾಗಿ ಕಾರ್ಯನಿರ್ವಹಿಸುವ ಕಂಪ್ಯೂಟರ್‌ಗಳದ್ದೇ ಈಗ ಕಾರುಬಾರು! ಇದನ್ನೇ ಮೂಲವಾಗಿಟ್ಟುಕೊಂಡು, ಇಂಧನ, ಸಾರಿಗೆ, ಆರೋಗ್ಯ ಹಾಗೂ ಆಹಾರ ವಿತರಣೆಯಂಥ ವಲಯಗಳಲ್ಲಿ ಪ್ರಯೋಜನ ಪಡೆಯಲಾಗುತ್ತಿದೆ. ಗ್ರಾಹಕ ಸೇವಾ ವಲಯದಲ್ಲೂ ಈಗ ಇಂಟರ್‌ನೆಟ್ ಅಧಿಕ ಸೇವೆ ಒದಗಿಸುತ್ತಿದೆಇಂಟರ್‌ನೆಟ್ ಪ್ರವೇಶವಾಗಿದ್ದ ಆರಂಭದ ದಿನಗಳಲ್ಲಿ `ಇದರಿಂದ ಬರೀ ಕೈಗಾರಿಕೆಗಳಿಗೆ ಉಪಯೋಗವಾದೀತು~ ಎಂಬ ಅಭಿಪ್ರಾಯವಿತ್ತು. `ಆದರೀಗ ಡಿಜಿಟಲ್ ಕ್ರಾಂತಿಯು ಇಂಟರ್‌ನೆಟ್‌ಗೆ ಹೊಸ ವ್ಯಾಖ್ಯೆ ಬರೆದಿದೆ. ಇಂಟರ್‌ನೆಟ್ ಬರೀ ಯಂತ್ರಗಳ ಜತೆ ಮಾತಾಡುವುದಿಲ್ಲ; ಬದಲಾಗಿ ಜನರ ಜತೆಗೆ ಸಂವಾದ ನಡೆಸುವ ಸಾಮರ್ಥ್ಯ ಹೊಂದಿದೆ~ ಎನ್ನುತ್ತಾರೆ, ವಾಷಿಂಗ್ಟನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನಿ ಎಡ್ವರ್ಡ್ ಡಿ. ಲಾಜೋವ್‌ಕಾ.ಒಂದೊಮ್ಮೆ ದುಬಾರಿ ಹಾಗೂ ದೊಡ್ಡ ಅಳತೆಯಲ್ಲಿದ್ದ ಸೆನ್ಸಾರ್‌ಗಳು ಈಗ ಕಡಿಮೆ ವೆಚ್ಚ ಹಾಗೂ ಕಿರಿದಾಗಿವೆ. ಹೀಗಾಗಿ ಇವುಗಳನ್ನು ಕಂಪ್ಯೂಟರ್‌ಗೆ ಅಳವಡಿಸಿ, ವಿವಿಧ ಬಗೆಯ ಕೆಲಸ ನಿರ್ವಹಿಸುವಂತೆ ರೂಪಿಸಲಾಗಿದೆ. `ಸೆನ್ಸಾರ್‌ಗಳೊಂದಿಗೆ ಸಂಪರ್ಕವುಳ್ಳ ಕಂಪ್ಯೂಟರ್ ಬಳಕೆಗೆ ಆಕಾಶವೇ ಮಿತಿ ಎಂಬಂತಿದೆ. ಇತ್ತೀಚಿನ ಕೆಲವು ಸಂಶೋಧನೆಗಳು ಇದನ್ನು ಸಾಬೀತುಪಡಿಸಿವೆ. ಕಂಪ್ಯೂಟರ್ ಬಳಕೆಯ ಹೊಸ ಹೊಸ ಸಾಧ್ಯತೆಗಳನ್ನು ಇದು ವಾಸ್ತವವಾಗಿಸಿದೆ~ ಎಂದು ಕ್ಯಾಲಿಫೋರ್ನಿಯಾದ ದೂರಸಂಪರ್ಕ ಮತ್ತು ಐ.ಟಿ. ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಲಾರಿ ಸ್ಮರ್ ಹೇಳುತ್ತಾರೆ.`ಆ್ಯಪಲ್~ ಕಂಪ್ಯೂಟರ್ಸ್‌ನಲ್ಲಿ ತಂತ್ರಜ್ಞ ಟೋನಿ ಫೆಡೆಲ್ ಸ್ಥಾಪಿಸಿದ ನೆಸ್ಟ್ ಲ್ಯಾಬ್ಸ್‌ನ ಆವಿಷ್ಕಾರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆ್ಯಪಲ್, ಗೂಗಲ್, ಮೈಕ್ರೊಸಾಫ್ಟ್ ಇತರ ಹೈಟೆಕ್ ಕಂಪೆನಿಗಳಿಂದ ನೂರು ಎಂಜಿನಿಯರ್‌ಗಳನ್ನು ನೇಮಿಸಿಕೊಂಡ ನೆಸ್ಟ್ ಲ್ಯಾಬ್, ಕಳೆದ ಅಕ್ಟೋಬರ್‌ನಲ್ಲಿ ಹೊಸ  `ಥರ್ಮೊಸ್ಟ್ಯಾಟ್~ (ಉಷ್ಣತೆ ನಿಯಂತ್ರಕ) ಬಿಡುಗಡೆ ಮಾಡಿದೆ.ಸೆನ್ಸಾರ್, ಯಾಂತ್ರಿಕ ಭಾಗ ಹಾಗೂ   ಸಾಫ್ಟ್‌ವೇರ್ ಒಳಗೊಂಡಿರುವ ಈ ಉಪಕರಣವು ಕೇವಲ  ಉಷ್ಣಾಂಶವೊಂದನ್ನೇ ಆಧರಿಸಿ ಕೆಲಸ ನಿರ್ವಹಿಸುವುದಿಲ್ಲ. ಮನೆಯೊಳಗೆ ಜನರ ಓಡಾಟ, ಅವರ ಪ್ರವೇಶ- ನಿರ್ಗಮನಕ್ಕೆ ತಕ್ಕಂತೆ ಕೊಠಡಿಯ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ಇದರಿಂದ ಅಗಾಧ ಪ್ರಮಾಣದ ವಿದ್ಯುತ್ ಉಳಿತಾಯವಾಗುತ್ತದೆ.

ಕ್ಯಾಲಿಫೋರ್ನಿಯಾದಲ್ಲಿರುವ ನೆಸ್ಟ್ ಲ್ಯಾಬ್,  ಜಾಗತಿಕ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ತಂತ್ರಜ್ಞಾನದ ಮೂಲಕ ಪರಿಹರಿಸಲು ಆವಿಷ್ಕಾರಗಳನ್ನು ಕೈಗೊಳ್ಳುತ್ತಿದೆ.ಗೂಗಲ್ ಕಂಪ್ಯೂಟರ್‌ನಲ್ಲಿ ತಂತ್ರಜ್ಞನಾಗಿ ಕೆಲಸ ಮಾಡಿದ ಅನುಭವವಿರುವ ಯೊಕಿ ಮತ್ಸು ಒಕಾ `ದೊಡ್ಡ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನೆಸ್ಟ್ ಲ್ಯಾಬ್ ಸ್ಥಾಪನಾ ತಂಡದಲ್ಲಿ ಒಬ್ಬನಾಗಿ ಸೇರಿದ್ದೇನೆ~ ಎನ್ನುತ್ತಾರೆ. ಆ್ಯಪಲ್‌ನ ಐಪಾಡ್‌ಗೆ ಸಾಫ್ಟ್‌ವೇರ್ ರೂಪಿಸಿದ್ದ ತಂಡದ ಮುಖ್ಯಸ್ಥ ಮ್ಯಾತ್ ರೋಜರ್, `ನಾವು ಅಲ್ಲಿ (ಆ್ಯಪಲ್) ಬೇರೆಯದೇ ಕೆಲಸ ಮಾಡಿದ್ದೆವು. ಆದರೆ, ನನ್ನ ಕನಸೆಂದರೆ, ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಭಾಗಿಯಾಗುವುದು. ಇದನ್ನು ನೆಸ್ಟ್ ಲ್ಯಾಬ್‌ನಲ್ಲಿ ಸಾಧಿಸಲು ಸಾಧ್ಯವಾಗಲಿದೆ~ ಎಂದು ಹೇಳುತ್ತಾರೆ.ಉದ್ದಿಮೆಗಳಲ್ಲಿ ಸೆನ್ಸಾರ್‌ಗಳು ಹಾಗೂ ಕಂಪ್ಯೂಟರ್‌ಗಳ ಬಳಕೆಯಿಂದ ಯಂತ್ರಗಳ ಕಾರ್ಯಕ್ಷಮತೆ ಅಧಿಕಗೊಂಡಿದೆ. ಜೆಟ್ ಎಂಜಿನ್‌ಗಳು, ಆಯಿಲ್ ರಿಂಗ್ ಇತರ ವಿವಿಧ ಭಾಗಗಳು ದುರಸ್ತಿಗೆ ಬಂದಾಕ್ಷಣ ಸಂಬಂಧಿಸಿದ ಮೆಕ್ಯಾನಿಕ್‌ಗಳಿಗೆ ಸಂದೇಶ ರವಾನಿಸುತ್ತವೆ. ಇದು ಮುಂದೆ ಉದ್ಭವಿಸಬಹುದಾದ ತೊಂದರೆಗಳನ್ನು ಮೊದಲೇ ನಿವಾರಿಸಲು ನೆರವಾಗುತ್ತದೆ.ಹಣ್ಣು ಮತ್ತು ತರಕಾರಿ ಡಬ್ಬಗಳಲ್ಲಿ ಅಳವಡಿಸಲಾದ ಸೆನ್ಸಾರ್‌ಗಳು, ಆ ಸಾಮಗ್ರಿ ಇರುವ ಸ್ಥಳವನ್ನು ಇಂಟರ್‌ನೆಟ್ ಮೂಲಕ ತೋರಿಸುತ್ತವೆ. ಡಬ್ಬಿಯಲ್ಲಿರುವ ತರಕಾರಿಯಾಗಲೀ, ಹಣ್ಣುಗಳಾಗಲೀ ಕೆಡಲು ಆರಂಭವಾಗುತ್ತಲೇ ಅದರ ಸೂಚನೆಯನ್ನು ತಕ್ಷಣ ರವಾನಿಸುತ್ತವೆ. ಇದರಿಂದ ಆ ಸಾಮಗ್ರಿಗಳನ್ನು ಹತ್ತಿರದ ಸ್ಥಳಗಳಿಗೆ ಕಳಿಸಲು ಸಾಧ್ಯ.ಛಾವಣಿಯಲ್ಲಿ ಅಳವಡಿಸಲಾದ ಮೂರು ಕಿರುಕ್ಯಾಮೆರಾಗಳು, ಕೆಳಗೆ ಓಡಾಡುವ ವೈದ್ಯರು, ನರ್ಸ್ ಹಾಗೂ ಜನರನ್ನು ಸತತವಾಗಿ ಗಮನಿಸುತ್ತಲೇ ಇರುತ್ತವೆ. ವೈದ್ಯರು ಚಿಕಿತ್ಸೆಗೆ ಮುನ್ನ ಅಥವಾ ನಂತರ ಕೈ ತೊಳೆಯಲು ಮರೆತರೆ ಅದನ್ನು ಗ್ರಹಿಸಿ ತಕ್ಷಣವೇ ಸಂಬಂಧಿಸಿದವರಿಗೆ ಸೂಚನೆ ನೀಡುತ್ತವೆ! ಮಂಚದ ಮೇಲೆ ಮಲಗಿದ ರೋಗಿ ನೋವು ಅಥವಾ ಒತ್ತಡದಿಂದ ಒದ್ದಾಡಿದರೆ, ಆ ಚಲನೆಯನ್ನು ಗ್ರಹಿಸಿ ಸಿಬ್ಬಂದಿಗೆ ಸೂಚನೆ ನೀಡುತ್ತದೆ. ಇದರಿಂದ ರೋಗಿಯ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ.ಕೇವಲ ಮಾಹಿತಿ- ಮನೋರಂಜನೆ ಉದ್ದೇಶಕ್ಕೆಂದು ಬಳಕೆಯಾಗುತ್ತಿದ್ದ ಇಂಟರ್‌ನೆಟ್ ಈಗ ಯುವ ತಂತ್ರಜ್ಞರ ಕನಸುಗಳ ಸಾಕಾರಕ್ಕೆ ವೇದಿಕೆ ಒದಗಿಸಿದೆ. ಕೈಗಾರಿಕೆಗಳಲ್ಲಿ ಅಥವಾ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾದ ಈ ತಂತ್ರಜ್ಞಾನ, ಬದುಕಿನ ಅವಿಭಾಜ್ಯ ಅಂಗವಾಗಿಯೂ ರೂಪುಗೊಂಡಿದೆ.ಡಿಜಿಟಲ್ ಮೀಟರ್

ಹೆಸರಾಂತ ಕಂಪೆನಿ ಐಬಿಎಂ ಅಮೆರಿಕದ ಪಟ್ಟಣವೊಂದರಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಸಾರಿಗೆ ಸೌಲಭ್ಯಗಳಲ್ಲಿ ಸೆನ್ಸಾರ್ ಬಳಕೆಯ ದೀರ್ಘಾವಧಿಯ ಯೋಜನೆಯೊಂದನ್ನು ಜಾರಿಗೊಳಿಸುತ್ತಿದೆ. ಆರಂಭಿಕ ಹಂತದಲ್ಲಿ 151 ಮನೆಗಳಿಗೆ ಡಿಜಿಟಲ್ ಮೀಟರ್ ಅಳವಡಿಸಲಾಗಿದೆ.

 

ಹೆಚ್ಚು ನೀರು ಬಳಕೆಯಾಗುವಾಗ ಅಥವಾ ನೀರು ಪೋಲಾಗುವ ಸಂದರ್ಭದಲ್ಲಿ ಮೀಟರ್‌ನಲ್ಲಿರುವ ಸಾಫ್ಟ್‌ವೇರ್ ಈ ಕುರಿತು ಎಚ್ಚರಿಕೆ ನೀಡುತ್ತದೆ.ನೀರಿನ ಸೋರಿಕೆ ಕಣ್ಣಿಗೆ ಕಾಣಿಸದೇ ಇದ್ದರೂ ಆ ಬಗ್ಗೆ ಸೂಚನೆ ಕೊಡುತ್ತದೆ. ಹೀಗೇ ಬಿಟ್ಟರೆ ಎಷ್ಟು ಪ್ರಮಾಣದ ನೀರು ಪೋಲಾಗಬಹುದು ಎಂಬ ಕುರಿತು ಈ-ಮೇಲ್ ಮೂಲಕ ಮಾಲೀಕರಿಗೆ ಮಾಹಿತಿ ಕೊಡುತ್ತದೆ.

Post Comments (+)