ಇಂಟರ್ಸಿಟಿ ರೈಲು ಆರಂಭಕ್ಕೆ ಒತ್ತಾಯ
ಬೀದರ್: ಬೀದರ್-ಸಿಕಂದರಾಬಾದ್ ಇಂಟರ್ಸಿಟಿ ರೈಲು ಸಂಚಾರ ಶೀಘ್ರ ಆರಂಭಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ)ಯು ನಗರದ ರೈಲ್ವೆ ನಿಲ್ದಾಣದ ಎದುರು ಸೋಮವಾರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದೆ.
ಬೆಳಿಗ್ಗೆ ನಗರದ ಅಂಬೇಡ್ಕರ್ ವೃತ್ತದಿಂದ ರೈಲ್ವೆ ನಿಲ್ದಾಣದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವೇದಿಕೆಯ ಕಾರ್ಯಕರ್ತರು ನಂತರ ಧರಣಿ ಸತ್ಯಾಗ್ರಹ ಆರಂಭಿಸಿದರು.
ಬೀದರ್-ಸಿಕಂದರಾಬಾದ್ ನಡುವೆ ಇಂಟರ್ಸಿಟಿ ರೈಲು ಓಡಿಸುವ ಬಗ್ಗೆ ಕಳೆದ ರೈಲ್ವೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ರೈಲಿನ ಸಮಯವನ್ನೂ ನಿಗದಿ ಮಾಡಲಾಗಿದೆ. ಆದರೆ, ಇದುವರೆಗೆ ಕಾರ್ಯಾಚರಣೆ ಪ್ರಾರಂಭಿಸಿಲ್ಲ ಎಂದು ದೂರಿದ್ದಾರೆ.
ಸಂಚಾರ ದಟ್ಟಣೆ ತಪ್ಪಿಸಲು ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರೈಲ್ವೆ ಕೆಳಸೇತುವೆ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಬಸವೇಶ್ವರ ವೃತ್ತದ ಮೂಲಕ ಗಾಂಧಿಗಂಜ್ ಮತ್ತು ಗುಂಪಾ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಕೆಳ ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು-ನಾಂದೇಡ್ ರೈಲು ಗಾಡಿಯ ಸಮಯ ಬದಲಿಸಬೇಕು. ಬೀದರ್-ಗುಲ್ಬರ್ಗ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು. ಬೀದರ್-ಬೋಧನ್ ಮತ್ತು ಬೀದರ್-ನಾಂದೇಡ್ ರೈಲು ಮಾರ್ಗದ ಸರ್ವೇ ನಡೆಸಬೇಕು. ಲಾತೂರ್-ಮುಂಬೈ ಎಕ್ಸ್ಪ್ರೆಸ್ ರೈಲನ್ನು ಬೀದರ್ವರೆಗೆ ವಿಸ್ತರಿಸಬೇಕು. ಬೀದರ್ ಮಾರ್ಗವಾಗಿ ಸಂಚರಿಸುವ ಪುಣೆ- ಹೈದರಾಬಾದ್ ರೈಲನ್ನು ಪ್ರತಿ ದಿನ ಓಡಿಸಬೇಕು. ರೈಲ್ವೆ ಪೊಲೀಸ್ ಠಾಣೆಯನ್ನು ರೈಲ್ವೆ ನಿಲ್ದಾಣಕ್ಕೇ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಸಂಸದರು ಹಾಗೂ ಉಸ್ತುವಾರಿ ಸಚಿವರು ಸೂಕ್ತ ಭರವಸೆ ನೀಡುವವರಗೆ ಅನಿರ್ದಿಷ್ಟ ಧರಣಿ ಮುಂದುವರೆಯಲಿದೆ ಎಂದು ವೇದಿಕೆಯ ಪ್ರಮುಖರು ತಿಳಿಸಿದ್ದಾರೆ.
ವೇದಿಕೆಯ ವಿಭಾಗೀಯ ಸಂಚಾಲಕ ಶಶಿಧರ ಕೋಸಂಬೆ, ಜಿಲ್ಲಾ ಅಧ್ಯಕ್ಷ ಸೋಮನಾಥ ಮುಧೋಳಕರ್, ಪ್ರಧಾನ ಕಾರ್ಯದರ್ಶಿ ಪೀಟರ್ ಚಿಟಗುಪ್ಪಾ, ಪ್ರಮುಖರಾದ ಸುಭಾಷ್ ಕೆನಡೆ, ಸುನೀಲ್ ದಳವೆ, ಪಪ್ಪು ಭಾವಿಕಟ್ಟಿ, ಪ್ರಕಾಶ್ ಅಲ್ಮಾಜೆ, ನಾಗಪ್ಪ, ಯುವರಾಜ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.