ಇಂಡಿಯನ್ಸ್‌ಗೆ ಜಯದ ನಿರೀಕ್ಷೆ

7
ಕ್ರಿಕೆಟ್‌: ಇಂದು ಒಟಾಗೊ ವೋಲ್ಟ್ಸ್‌ ಜೊತೆ ಪೈಪೋಟಿ

ಇಂಡಿಯನ್ಸ್‌ಗೆ ಜಯದ ನಿರೀಕ್ಷೆ

Published:
Updated:

ಅಹಮದಾಬಾದ್‌ (ಪಿಟಿಐ): ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ನಿರಾಸೆಯಿಂದ ಹೊರಬರುವ ಪ್ರಯತ್ನದಲ್ಲಿರುವ ಮುಂಬೈ ಇಂಡಿಯನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಒಟಾಗೊ ವೋಲ್ಟ್ಸ್‌ ವಿರುದ್ಧ ಪೈಪೋಟಿ ನಡೆಸಲಿದೆ.ಜೈಪುರದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೋಹಿತ್‌ ಶರ್ಮ ನೇತೃತ್ವದ ಇಂಡಿಯನ್ಸ್‌ ತಂಡ ರಾಜಸ್ತಾನ ರಾಯಲ್ಸ್‌ ಕೈಯಲ್ಲಿ ಏಳು ವಿಕೆಟ್‌ಗಳ ಸೋಲು ಅನುಭವಿಸಿತ್ತು.ಬ್ಯಾಟಿಂಗ್‌ ವೈಫಲ್ಯದ ಕಾರಣ ತಂಡಕ್ಕೆ ಸೋಲು ಎದುರಾ ಗಿತ್ತು. ಆದ್ದರಿಂದ ಇಂದಿನ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ತಂಡ ಉತ್ತಮ ಪ್ರದರ್ಶನವನ್ನು ನಿರೀಕ್ಷಿ ಸುತ್ತಿದೆ. ಮುಂಬೈ ಇಂಡಿಯನ್ಸ್‌ ಪರ ತಮ್ಮ ಕೊನೆಯ ಟೂರ್ನಿ ಆಡುತ್ತಿರುವ ಸಚಿನ್‌ ತೆಂಡೂಲ್ಕರ್‌ ರಾಯಲ್ಸ್‌ ವಿರುದ್ಧ ಮೂರು ಬೌಂಡರಿಗಳ ನೆರವಿನಿಂದ 15 ರನ್‌ ಗಳಿಸಿದ್ದರು.ರೋಹಿತ್‌ ಮತ್ತು ಕೀರನ್‌ ಪೊಲಾರ್ಡ್‌ ಶನಿವಾರ ತೋರಿದ್ದ ಉತ್ತಮ ಆಟವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ದ್ದಾರೆ. ದಿನೇಶ್‌ ಕಾರ್ತಿಕ್‌ ಮತ್ತು ಅಂಬಟಿ ರಾಯುಡು ಲಯ ಕಂಡುಕೊಂಡರೆ, ಇಂಡಿಯನ್ಸ್‌ಗೆ ಬೃಹತ್ ಮೊತ್ತ ಪೇರಿಸುವುದು ಕಷ್ಟವಾಗದು.

ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್‌ ತಂಡವನ್ನು ಸುಲಭವಾಗಿ ಕಡೆಗಣಿಸುವಂತಿಲ್ಲ. ಏಕೆಂದರೆ ಈ ತಂಡ ಅರ್ಹತಾ ಹಂತದಲ್ಲಿ ಆಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.ಬ್ರೆಂಡನ್‌ ಮೆಕ್ಲಮ್‌ ಮುನ್ನಡೆಸುತ್ತಿರುವ ತಂಡ ಅರ್ಹತಾ ಹಂತದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌, ಪಾಕಿಸ್ತಾನದ ಫೈಸಲಾಬಾದ್‌ ವೂಲ್ವ್ಸ್‌ ಮತ್ತು ಶ್ರೀಲಂಕಾದ ಕಂದುರತಾ ಮರೂನ್ಸ್‌ ತಂಡಗಳನ್ನು ಮಣಿಸಿತ್ತು.ಆದರೆ ಬ್ಯಾಟಿಂಗ್‌ನಲ್ಲಿ ಮೆಕ್ಲಮ್‌ ಅವರನ್ನೇ ಅತಿಯಾಗಿ ನೆಚ್ಚಿಕೊಂಡಿರುವುದು ಈ ತಂಡಕ್ಕೆ ಅಲ್ಪ ಆತಂಕ ಉಂಟುಮಾಡಿದೆ. ಮೆಕ್ಲಮ್‌ ವಿಫಲರಾದರೆ, ಇತರ ಆಟಗಾರರು ಒತ್ತಡಕ್ಕೆ ಒಳಗಾಗುವುದು ಖಚಿತ.ಲಯನ್ಸ್‌- ಸ್ಕಾಚರ್ಸ್‌ ಪೈಪೋಟಿ: ಸೋಮವಾರ ನಡೆಯುವ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಲಯನ್ಸ್‌ ಹಾಗೂ ಆಸ್ಟ್ರೇಲಿಯದ ಪರ್ತ್‌ ಸ್ಕಾಚರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ. ಹೋದ ಋತುವಿನ ಟೂರ್ನಿಯಲ್ಲಿ ‘ರನ್ನರ್‌ ಅಪ್‌’ ಎನಿಸಿಕೊಂಡಿದ್ದ ಲಯನ್ಸ್‌ ತಂಡ ಪ್ರಮುಖ ಆಟಗಾರರನ್ನು ಒಳಗೊಂಡಿದ್ದು, ಈ ಬಾರಿಯೂ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.ಈ ತಂಡವನ್ನು ಅಲ್ವಿರೊ ಪೀಟರ್ಸನ್‌ ಮುನ್ನಡೆಸುತ್ತಿದ್ದು, ನೀಲ್‌ ಮೆಕೆಂಜಿ, ಇಮ್ರಾನ್‌ ತಾಹಿರ್‌, ಲೋನ್ವಾಬೊ ಸೊಸೊಬೆ ಹಾಗೂ ಪಾಕಿಸ್ತಾನದ ಸೊಹೇಲ್‌ ತನ್ವೀರ್‌ ಅವರಂತಹ ಆಟಗಾರರನ್ನು ಒಳಗೊಂಡಿದೆ.ಅನುಭವಿ ಸೈಮನ್‌ ಕ್ಯಾಟಿಚ್‌ ಮುನ್ನಡೆಸುತ್ತಿರುವ ಪರ್ತ್‌ ಸ್ಕಾಚರ್ಸ್‌ ತಂಡ ಕೂಡಾ ಬಲಿಷ್ಠವಾಗಿದೆ. ಈ ಕಾರಣ ಪಂದ್ಯದಲ್ಲಿ ಪ್ರಬಲ ಪೈಪೋಟಿ ಕಂಡುಬರುವ ಸಾಧ್ಯತೆಯಿದೆ. ಈ ತಂಡ ಬ್ಯಾಟಿಂಗ್‌ನಲ್ಲಿ ಕ್ಯಾಟಿಚ್‌, ಆ್ಯಡಮ್‌ ವೋಗ್ಸ್‌ ಹಾಗೂ ಮಾರ್ಕಸ್‌ ನಾರ್ತ್‌ ಅವರನ್ನು ನೆಚ್ಚಿಕೊಂಡಿದೆ.ಆಸ್ಟನ್‌ ಅಗರ್‌ ಅವರಿಂದಲೂ ತಂಡ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಈ ಎಡಗೈ ಸ್ಪಿನ್ನರ್‌ ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 98 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು.ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲಿ ಇವೆರಡು ತಂಡಗಳು ಪೈಪೋಟಿ ನಡೆಸುತ್ತಿರುವುದು ಇದೇ ಮೊದಲು.ಇಂದಿನ ಪಂದ್ಯಗಳು

ಲಯನ್ಸ್‌- ಸ್ಕಾಚರ್ಸ್‌ : ಸ್ಥಳ: ಅಹಮದಾಬಾದ್‌

ಆರಂಭ: ಸಂಜೆ 4.00ಕ್ಕೆ

ಮುಂಬೈ ಇಂಡಿಯನ್ಸ್‌-ಒಟಾಗೊ ವೋಲ್ಟ್ಸ್‌

ಸ್ಥಳ: ಅಹಮದಾಬಾದ್‌. ಆರಂಭ: ರಾತ್ರಿ 8.00ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry