ಗುರುವಾರ , ನವೆಂಬರ್ 21, 2019
21 °C
ಮಿಂಚಿದ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ; ಮಾರ್ಷ್ ಹೋರಾಟ ವ್ಯರ್ಥ

ಇಂಡಿಯನ್ಸ್‌ಗೆ ತಲೆಬಾಗಿದ ವಾರಿಯರ್ಸ್

Published:
Updated:

ಮುಂಬೈ (ಪಿಟಿಐ): ನಿರೀಕ್ಷೆ ಸುಳ್ಳಾಗಲಿಲ್ಲ. ಲೆಕ್ಕಾಚಾರದಂತೆಯೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 41 ರನ್‌ಗಳ ಗೆಲುವು ಸಾಧಿಸಿತು.



ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಿಕಿ ಪಾಂಟಿಂಗ್ ನೇತೃತ್ವದ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಲಿಟಲ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಹಾಗೂ ರೋಹಿತ್ ಶರ್ಮಾ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಇಂಡಿಯನ್ಸ್ ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 183 ರನ್‌ಗಳನ್ನು ಕಲೆ ಹಾಕಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪರದಾಡಿದ ವಾರಿಯರ್ಸ್ 20 ಓವರ್‌ಗಳು ಅಂತ್ಯ ಕಂಡಾಗ ಎಂಟು ವಿಕೆಟ್ ಕಳೆದುಕೊಂಡು 142 ರನ್ ಮಾತ್ರ ಗಳಿಸಿತು. ಪಾಂಟಿಂಗ್ ಬಳಗ ಈ ಋತುವಿನಲ್ಲಿ ಪಡೆದ ಮೂರನೇ ಗೆಲುವು ಇದು.



ಸವಾಲಿನ ಮೊತ್ತ: ಕ್ರಿಕೆಟ್ ದಿಗ್ಗಜರಾದ ಪಾಂಟಿಂಗ್ ಹಾಗೂ ಸಚಿನ್ ಅವರನ್ನೊಳಗೊಂಡ ಇಂಡಿಯನ್ಸ್ ತಂಡ `ದುರ್ಬಲ' ವಾರಿಯರ್ಸ್ ಎದುರು ಗೆಲ್ಲುವ ನೆಚ್ಚಿನ ತಂಡ ಎನಿಸಿತ್ತು. ಬಲಗೈ ಬ್ಯಾಟ್ಸ್‌ಮನ್ ಪಾಂಟಿಂಗ್ ಎರಡು ಬೌಂಡರಿ ಸೇರಿದಂತೆ 14 ರನ್ ಗಳಿಸಿ ಯುವರಾಜ್ ಸಿಂಗ್ ಎಸೆತದಲ್ಲಿ ಔಟಾದರು. ಆದರೆ, ಸಚಿನ್ ಕೇವಲ 29 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 44 ರನ್ ಗಳಿಸಿದರು.



ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್ ಹಾಗೂ ಸಚಿನ್ ಮೊದಲ ವಿಕೆಟ್‌ಗೆ 54 ರನ್‌ಗಳನ್ನು ಗಳಿಸಿ ಬುನಾದಿ ಗಟ್ಟಿಗೊಳಿಸಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಗಟ್ಟಿ ಬುನಾದಿಯ ಮೇಲೆ ಸುಂದರ ರನ್‌ಸೌಧ ನಿರ್ಮಿಸಿದರು.



ಬಲ ತುಂಬಿದ ಜೊತೆಯಾಟ: ಎರಡು ಅಮೂಲ್ಯ ಜೊತೆಯಾಟದ ನೆರವಿನಿಂದ ಇಂಡಿಯನ್ಸ್ ತಂಡಕ್ಕೆ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು. ಮೂರನೇ ವಿಕೆಟ್‌ಗೆ ಜೊತೆಗೂಡಿದ ದಿನೇಶ್ ಕಾರ್ತಿಕ್ (41, 29ಎಸೆತ, 4ಬೌಂಡರಿ, 1 ಸಿಕ್ಸರ್) ಹಾಗೂ `ಪಂದ್ಯ ಶ್ರೇಷ್ಠ' ಗೌರವ ಪಡೆದ ರೋಹಿತ್ ಶರ್ಮಾ (ಔಟಾಗದೆ 62, 32ಎಸೆತ, 3ಬೌಂಡರಿ, 5 ಸಿಕ್ಸರ್) 55 ರನ್‌ಗಳನ್ನು ಕಲೆ ಹಾಕಿದರು.



ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ರೋಹಿತ್ ಮತ್ತು ಕೀರನ್ ಪೊಲಾರ್ಡ್ (ಔಟಾಗದೆ 19, 14ಎಸೆತ, 1 ಬೌಂಡರಿ, 1 ಸಿಕ್ಸರ್) ಜೋಡಿ ಕೇವಲ 29 ಎಸೆತಗಳಲ್ಲಿ 68 ರನ್ ಕಲೆ ಹಾಕಿ ಇಂಡಿಯನ್ಸ್ ತಂಡವನ್ನು 150ರ ಗಡಿ ದಾಟಿಸಿದರು. ಪಂದ್ಯದ ಆರಂಭದ ಓವರ್‌ಗಳಲ್ಲಿ ನಿಧಾನವಾಗಿ ರನ್ ಪೇರಿಸಿದ ಇಂಡಿಯನ್ಸ್ ನಂತರ ರನ್ ವೇಗವನ್ನು ಹೆಚ್ಚಿಸಿಕೊಂಡಿತು. ಮೊದಲ ಹತ್ತು ಓವರ್‌ಗಳಲ್ಲಿ 72 ರನ್ ಗಳಿಸಿದ ಈ ತಂಡ, ಮುಂದಿನ ಹತ್ತು ಓವರ್‌ಗಳಲ್ಲಿ 111 ರನ್‌ಗಳನ್ನು ಕಲೆ ಹಾಕಿದ್ದೇ ಇದಕ್ಕೆ ಸಾಕ್ಷಿ.



ಮತ್ತೆ ನಿರಾಸೆ: ಮೊದಲಿನ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ವಾರಿಯರ್ಸ್ ತಂಡಕ್ಕೆ ಈ ಪಂದ್ಯದಲ್ಲೂ ನಿರಾಸೆ ತಪ್ಪಲಿಲ್ಲ. ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ತಂದುಕೊಟ್ಟಿದ್ದ ವಾರಿಯರ್ಸ್‌ನ ಆ್ಯರನ್ ಫಿಂಚ್ ರನ್ ಖಾತೆ ತೆರೆಯದೇ ಮಿಷೆಲ್ ಜಾನ್ಸನ್ ಬೌಲಿಂಗ್‌ನ ಮೊದಲ ಓವರ್‌ನಲ್ಲಿಯೇ ಬೌಲ್ಡ್ ಆದರು.



184 ರನ್‌ಗಳ ಗುರಿಯನ್ನು ಬೆನ್ನು ಹತ್ತಿದ ವಾರಿಯರ್ಸ್‌ಗೆ ಆರಂಭದಲ್ಲಿಯೇ ಆಘಾತ ಎದುರಾಯಿತು. ರಾಬಿನ್ ಉತ್ತಪ್ಪ (7), ರಾಸ್ ಟೇಲರ್ (4) ಬೇಗನೇ ವಿಕೆಟ್ ಒಪ್ಪಿಸಿದರು. ಇದಕ್ಕೆ ಕಾರಣವಾಗಿದ್ದು ವೇಗಿ ಮಿಷೆಲ್ ಜಾನ್ಸನ್ ಅವರ ಕರುರುವಾಕ್ಕಾದ ಬೌಲಿಂಗ್. ವಾರಿಯರ್ಸ್ ತಂಡದ ಮಿಷೆಲ್ ಮಾರ್ಷ್ 38 ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ಯಲು ಹೋರಾಟ ನಡೆಸಿದರಾದರೂ, ಅವರ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ.



ಮೊದಲ ಆರು ಓವರ್‌ಗಳಾಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ವಾರಿಯರ್ಸ್ ಸೋಲಿನ ಹಾದಿ ಹಿಡಿದಿತ್ತು. ಆದರೆ, ಐದನೇ ವಿಕೆಟ್‌ಗೆ ಜೊತೆಗೂಡಿದ ಯುವರಾಜ್ ಸಿಂಗ್ (24, 16ಎಸೆತ, 1ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಏಂಜಲೊ ಮ್ಯಾಥ್ಯೂಸ್ (19, 18ಎಸೆತ, 1 ಸಿಕ್ಸರ್) 33 ರನ್ ಕಲೆ ಹಾಕಿ ಮರು ಹೋರಾಟದ ಸೂಚನೆ ನೀಡಿದರು. ಈ ವೇಳೆ ಕೀರನ್ ಪೊಲಾರ್ಡ್ ಎಸೆತದಲ್ಲಿ ಯುವಿ ಬಾರಿಸಿದ ಚೆಂಡನ್ನು ರಿಷಿ ಧವನ್ ಹಿಡಿತಕ್ಕೆ ಪಡೆದರು. ಈ ವೇಳೆ ವಾರಿಯರ್ಸ್ ಗೆಲುವಿನ ಆಸೆ ಕಮರಿ ಹೋಗಿತ್ತು.

ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 183

ರಿಕಿ ಪಾಂಟಿಂಗ್ ಸಿ ನಾಯರ್ ಬಿ ಯುವರಾಜ್ ಸಿಂಗ್  14

ಸಚಿನ್ ತೆಂಡೂಲ್ಕರ್ ಸಿ ಮಿಷೆಲ್ ಮಾರ್ಷ್ ಬಿ ಆ್ಯರನ್ ಫಿಂಚ್ 44

ದಿನೇಶ್ ಕಾರ್ತಿಕ್ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಮಾರ್ಷ್  41

ರೋಹಿತ್ ಶರ್ಮಾ ಔಟಾಗದೆ  62

ಕೀರನ್ ಪೊಲಾರ್ಡ್ ಔಟಾಗದೆ  19

(ಇತರೆ: ವೈಡ್-2, ನೋ ಬಾಲ್-1)  03

ವಿಕೆಟ್ ಪತನ: 1-54 (ಪಾಂಟಿಂಗ್; 7.1), 2-60 (ತೆಂಡೂಲ್ಕರ್; 8.2), 3-115(ಕಾರ್ತಿಕ್;15.1)

ಬೌಲಿಂಗ್: ಆ್ಯರನ್ ಫಿಂಚ್ 2-0-11-1, ಭುವನೇಶ್ವರ ಕುಮಾರ್ 2-0-16-0, ಅಶೋಕ್ ದಿಂಡಾ 4-0-63-0, ರಾಹುಲ್ ಶರ್ಮಾ 4-0-27-0, ಏಂಜಲೊ ಮ್ಯಾಥ್ಯೂಸ್ 4-0-29-0, ಯುವರಾಜ್ ಸಿಂಗ್ 2-0-13-1, ಮಿಷೆಲ್ ಮಾರ್ಷ್ 2-0-24-1.

ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 142

ಆ್ಯರನ್ ಫಿಂಚ್ ಬಿ ಮಿಷೆಲ್ ಜಾನ್ಸನ್  00

ರಾಬಿನ್ ಉತ್ತಪ್ಪ ಬಿ ಮಿಷೆಲ್ ಜಾನ್ಸನ್  07

ರಾಸ್ ಟೇಲರ್ ರನ್‌ಔಟ್ (ಅಂಬಟಿ ರಾಯುಡು/ಪ್ರಗ್ಯಾನ್ ಓಜಾ)  04

ಯುವರಾಜ್ ಸಿಂಗ್ ಸಿ ರಿಷಿ ಧವನ್ ಬಿ ಕೀರನ್ ಪೊಲಾರ್ಡ್ 24

ತಿರುಮಲಶೆಟ್ಟಿ ಸುಮನ್ ಸಿ ಪೊಲಾರ್ಡ್ ಬಿ ಹರಭಜನ್  23

ಎಂಜಲೊ ಮ್ಯಾಥ್ಯೂಸ್ ಸಿ ರೋಹಿತ್ ಬಿ ಪ್ರಗ್ಯಾನ್ ಓಜಾ  19

ಮಿಷೆಲ್ ಮಾರ್ಷ್ ಸಿ ರಿಷಿ ಧವನ್ ಬಿ ಮಿಷೆಲ್ ಜಾನ್ಸನ್  38

ಅಭಿಷೇಕ್ ನಾಯರ್ ಸಿ ಕೀರನ್ ಪೊಲಾರ್ಡ್ ಬಿ ಲಸಿತ್ ಮಾಲಿಂಗ

06

ಭುವನೇಶ್ವರ ಕುಮಾರ್ ಔಟಾಗದೆ  06

ರಾಹುಲ್ ಶರ್ಮಾ ಔಟಾಗದೆ  10

ಇತರೆ: (ಲೆಗ್ ಬೈ-1, ವೈಡ್-4)  05

ವಿಕೆಟ್ ಪತನ: 1-0 (ಫಿಂಚ್; .01), 2-5 (ಟೇಲರ್; 1.1), 3-13 (ಉತ್ತಪ್ಪ; 2.3), 4-38 (ಸುಮನ್; 5.2), 5-71 (ಯುವರಾಜ್; 9.4), 6-89 (ಮ್ಯಾಥ್ಯೂಸ್; 12.2), 7-120 (ನಾಯರ್; 15.3), 8-127 (ಮಾರ್ಷ್; 16.4)

ಬೌಲಿಂಗ್: ಮಿಷೆಲ್ ಜಾನ್ಸನ್ 4-0-33-3, ಪ್ರಗ್ಯಾನ್ ಓಜಾ 2-0-20-1, ಹರಭಜನ್ ಸಿಂಗ್ 3-0-20-1, ಲಸಿತ್ ಮಾಲಿಂಗ 4-0-22-1, ರಿಷಿ ಧವನ್ 4-0-27-0, ಕೀರನ್ ಪೊಲಾರ್ಡ್ 3-0-19-0

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 41ರನ್ ಗೆಲುವು

ಪಂದ್ಯ ಶ್ರೇಷ್ಠ: ರೋಹಿತ್ ಶರ್ಮಾ

ಪ್ರತಿಕ್ರಿಯಿಸಿ (+)