ಇಂಡಿಯನ್ಸ್‌ಗೆ ರಾಯಲ್ಸ್‌ ಸವಾಲು

7
ಚಾಂಪಿಯನ್ಸ್‌ ಲೀಗ್‌: ಕುತೂಹಲ ಕೆರಳಿಸಿದ ಸಚಿನ್‌- ದ್ರಾವಿಡ್‌ ಮುಖಾಮುಖಿ

ಇಂಡಿಯನ್ಸ್‌ಗೆ ರಾಯಲ್ಸ್‌ ಸವಾಲು

Published:
Updated:

ಜೈಪುರ (ಪಿಟಿಐ): ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಶನಿವಾರ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ತಾನ ರಾಯಲ್ಸ್‌ ತಂಡಗಳು ಎದುರಾಗಲಿವೆ.ರಾಯಲ್ಸ್‌ ತಂಡವನ್ನು ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್‌ ರಾಹುಲ್‌ ದ್ರಾವಿಡ್‌ ಮುನ್ನಡೆಸುತ್ತಿದ್ದಾರೆ. ರೋಹಿತ್‌ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಬ್ಯಾಟಿಂಗ್‌ ಚಾಂಪಿಯನ್‌ ಸಚಿನ್‌ ತೆಂಡೂಲ್ಕರ್‌ ಇದ್ದಾರೆ. ಆದ್ದರಿಂದ ಭಾರತ ಕಂಡಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಪರಸ್ಪರ ಎದುರಾಗುತ್ತಿರುವ ಕಾರಣ ಈ ಪಂದ್ಯ ಕುತೂಹಲ ಕೆರಳಿಸಿದೆ.ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟೂರ್ನಿಯ ವೇಳೆ ನಡೆದಿದ್ದ ‘ಸ್ಪಾಟ್‌ ಫಿಕ್ಸಿಂಗ್‌’ ಪ್ರಕರಣದಿಂದಾಗಿ ರಾಯಲ್ಸ್‌ ತಂಡ ಕುಗ್ಗಿಹೋಗಿತ್ತು. ಎಸ್‌. ಶ್ರೀಶಾಂತ್‌ ಒಳಗೊಂಡಂತೆ ಈ ತಂಡದ ಕೆಲವು ಆಟಗಾರರು ‘ಸ್ಪಾಟ್‌ ಫಿಕ್ಸಿಂಗ್‌’ನಲ್ಲಿ ಭಾಗಿಯಾಗಿದ್ದರು. ಈ ಘಟನೆ ರಾಯಲ್ಸ್‌ ತಂಡದ ಘನತೆಗೆ ಧಕ್ಕೆ ಉಂಟುಮಾಡಿತ್ತು.ಹಳೆಯ ಕಹಿ ಘಟನೆಯನ್ನು ಮರೆತು ಸಂಘಟಿತ ಹೋರಾಟ ನೀಡುವ ಸವಾಲು ಈ ತಂಡದ ಮುಂದಿದೆ. ಆಟಗಾರರಿಗೆ ಹೊಸ ಉತ್ತೇಜನ ನೀಡುವ ಜವಾಬ್ದಾರಿ ನಾಯಕ ದ್ರಾವಿಡ್‌ ಹಾಗೂ ಕೋಚ್‌ ಪ್ಯಾಡಿ ಅಪ್ಟನ್‌ ಮೇಲಿದೆ. ಮೊದಲ ಪಂದ್ಯವನ್ನು ತವರು ನೆಲದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಆಡಲಿರುವುದು ರಾಯಲ್ಸ್‌ ತಂಡಕ್ಕೆ ಅಲ್ಪ ಸಮಾಧಾನ ನೀಡಿರುವ ಅಂಶ. ಏಕೆಂದರೆ ಐಪಿಎಲ್‌ ವೇಳೆ ರಾಯಲ್ಸ್‌ ತಂಡ ಈ ಕ್ರೀಡಾಂಗಣದಲ್ಲಿ ಆಡಿದ ಎಲ್ಲ ಎಂಟು ಪಂದ್ಯಗಳಲ್ಲೂ ಜಯ ಪಡೆದಿತ್ತು.ಶೇನ್‌ ವಾಟ್ಸನ್‌, ದ್ರಾವಿಡ್‌ ಮತ್ತು ಆಜಿಂಕ್ಯ ರಹಾನೆ ರಾಯಲ್ಸ್‌ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಟೆಸ್ಟ್‌ ಹಾಗೂ ಬಳಿಕ ನಡೆದ ಏಕದಿನ ಸರಣಿಯಲ್ಲಿ ತೋರಿದ್ದ ಉತ್ತಮ ಫಾರ್ಮ್‌ಅನ್ನು ಇಲ್ಲೂ ಮುಂದುವರಿಸುವ ವಿಶ್ವಾಸದಲ್ಲಿ ವಾಟ್ಸನ್‌ ಇದ್ದಾರೆ.ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಪ್ರಮುಖ ಆಟಗಾರರನ್ನು ಒಳಗೊಂಡಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ. ಸಚಿನ್‌ ತಂಡದಲ್ಲಿರುವುದು ಇತರ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.ಕೀರನ್‌ ಪೊಲಾರ್ಡ್‌, ರೋಹಿತ್‌ ಶರ್ಮ, ಡ್ವೇನ್‌ ಸ್ಮಿತ್‌, ದಿನೇಶ್‌ ಕಾರ್ತಿಕ್‌ ಮತ್ತು ಅಂಬಟಿ ರಾಯುಡು ಅವರನ್ನೊಳಗೊಂಡ ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ.ತಂಡಗಳು: ರಾಜಸ್ತಾನ ರಾಯಲ್ಸ್‌: ರಾಹುಲ್‌ ದ್ರಾವಿಡ್‌ (ನಾಯಕ), ಸ್ಟುವರ್ಟ್‌ ಬಿನ್ನಿ, ಕೆವೊನ್‌ ಕೂಪರ್‌, ಜೇಮ್ಸ್‌ ಫಾಕ್ನರ್‌, ಬ್ರಾಡ್‌ ಹಾಡ್ಜ್‌, ವಿಕ್ರಮ್‌ಜೀತ್‌ ಮಲಿಕ್‌, ಅಶೋಕ್‌ ಮೆನಾರಿಯಾ, ಆಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್‌, ರಾಹುಲ್‌ ಶುಕ್ಲಾ, ಶಾನ್‌ ಟೇಟ್‌, ಪ್ರವೀಣ್‌ ತಾಂಬೆ, ಶೇನ್‌ ವಾಟ್ಸನ್‌, ದಿಶಾಂತ್‌ ಯಾಗ್ನಿಕ್‌ಮುಂಬೈ ಇಂಡಿಯನ್ಸ್‌:

ರೋಹಿತ್‌ ಶರ್ಮ (ನಾಯಕ), ಸಚಿನ್‌ ತೆಂಡೂಲ್ಕರ್‌, ಅಬು ನೆಚಿಮ್‌, ನಥಾನ್‌ ಕೌಲ್ಟರ್‌, ರಿಷಿ ಧವನ್‌, ಹರಭಜನ್‌ ಸಿಂಗ್‌, ಮಿಷೆಲ್‌ ಜಾನ್ಸನ್‌, ದಿನೇಶ್‌ ಕಾರ್ತಿಕ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಪ್ರಗ್ಯಾನ್‌ ಓಜಾ, ಅಕ್ಷರ್‌ ಪಟೇಲ್‌, ಕೀರನ್‌ ಪೊಲಾರ್ಡ್‌, ಅಂಬಟಿ ರಾಯುಡು, ಡ್ವೇನ್‌ ಸ್ಮಿತ್‌, ಆದಿತ್ಯ ತಾರೆಇಂದಿನ ಪಂದ್ಯ

ರಾಜಸ್ತಾನ ರಾಯಲ್ಸ್‌- ಮುಂಬೈ ಇಂಡಿಯನ್ಸ್‌

ಸ್ಥಳ: ಜೈಪುರ, ಆರಂಭ: ರಾತ್ರಿ 8.00ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry