ಇಂಡಿಯನ್ಸ್‌ನ ಬಲ; ಸೂಪರ್ ಕಿಂಗ್ಸ್‌ನ ಅದೃಷ್ಟ

7

ಇಂಡಿಯನ್ಸ್‌ನ ಬಲ; ಸೂಪರ್ ಕಿಂಗ್ಸ್‌ನ ಅದೃಷ್ಟ

Published:
Updated:
ಇಂಡಿಯನ್ಸ್‌ನ ಬಲ; ಸೂಪರ್ ಕಿಂಗ್ಸ್‌ನ ಅದೃಷ್ಟ

ಬೆಂಗಳೂರು: ಒಂದೆಡೆ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್, ಇನ್ನೊಂದೆಡೆ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ದೋನಿ. ಕ್ರಿಕೆಟ್ ಪ್ರೇಮಿಗಳ ಮನದಾಸೆ ಈಡೇರಲು ಇಂಥ ಅದ್ಭುತ ಕ್ಷಣಕ್ಕಿಂತ ಮತ್ತೊಂದೇನಿದೆ?ಅಭಿಮಾನಿಗಳ ಮನಸ್ಸು ತಣಿಸುವ ಅಂತಹದೊಂದು ಸಂದರ್ಭ ಈಗ ಕೂಡಿ ಬಂದಿದೆ. ಏಕೆಂದರೆ ಈ ಮಹಾನ್ ಆಟಗಾರರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಮುಖಾಮುಖಿಯಾಗುತ್ತಿದ್ದಾರೆ.  ಐಪಿಎಲ್ ಟೂರ್ನಿಯ ಎರಡನೇ ಪ್ಲೇ ಆಫ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪೈಪೋಟಿ ನಡೆಸಲಿವೆ.ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದ್ದರೂ ಉದ್ಯಾನ ನಗರಿಯ ಪ್ರೇಕ್ಷಕರ ಉತ್ಸಾಹವೇನು ಕಡಿಮೆಯಾಗಿಲ್ಲ. ಕ್ರೀಡಾಂಗಣದ ಸುತ್ತ ಟಿಕೆಟ್‌ಗಾಗಿ ದಿನವಿಡೀ ಸಾಲುಗಟ್ಟಿ ನಿಂತಿದ್ದ ಜನರೇ ಅದಕ್ಕೆ ಸಾಕ್ಷಿ.ಅದರಲ್ಲೂ ಸಚಿನ್ ಅವರ ದರ್ಶನಕ್ಕಾಗಿ ಎಷ್ಟಾದರೂ ಹಣ ತೆತ್ತು ಬ್ಲ್ಯಾಕ್‌ನಲ್ಲಿ ಟಿಕೆಟ್ ಕೊಂಡುಕೊಳ್ಳಲು ಸಿದ್ಧರಾಗಿ ಬಂದವರಿದ್ದರು. ಒಂದು ವಾರದ ಹಿಂದೆಯಷ್ಟೇ ಚಾಲೆಂಜರ್ಸ್ ಎದುರು ಇಲ್ಲಿ ನಡೆದ ಲೀಗ್ ಪಂದ್ಯದಲ್ಲಿ ತೆಂಡೂಲ್ಕರ್ ಮೊದಲ ಎಸೆತದಲ್ಲಿಯೇ ಔಟ್ ಆಗಿದ್ದರು. ಹಾಗಾಗಿ ಅವರಾಟ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ.`ಐಪಿಎಲ್ ವಿವಾದಗಳು ಬೇಸರ ಉಂಟು ಮಾಡಿರುವುದು ನಿಜ. ಆದರೆ ಹೆಚ್ಚು ಹಣ ಹರಿದಾಡುತ್ತಿರುವಾಗ ವಿವಾದ ಇದ್ದೇ ಇರುತ್ತದೆ. ಎಲ್ಲಿ ವಿವಾದ ಇಲ್ಲ ಹೇಳಿ? ನಮ್ಮ ಪಾಲಿಗೆ ಸಚಿನ್ ದೇವರು ಇದ್ದಂತೆ. ದೇವರು ತಪ್ಪು ಮಾಡುವುದಿಲ್ಲ. ಅವರಾಟ ನೋಡಿ ಕ್ರೀಡಾಂಗಣದಿಂದ ಹೊರಬರುತ್ತೇವೆ~ ಎಂದಿದ್ದು ತುಮಕೂರಿನ ಶಫೀಕ್ ಅಹ್ಮದ್. ಅವರು ಟಿಕೆಟ್‌ಗಾಗಿ ಮಂಗಳವಾರ ಬೆಳಿಗ್ಗೆಯೇ ಕ್ರೀಡಾಂಗಣಕ್ಕೆ ಬಂದಿದ್ದರು.ಉಭಯ ತಂಡಗಳು ಎಲಿಮಿನೇಟರ್ ಪಂದ್ಯಕ್ಕೆ ಸಿದ್ಧರಾಗಿ ನಿಂತಿವೆ. ಈ ಪಂದ್ಯದಲ್ಲಿ ಸೋತ ತಂಡಕ್ಕೆ ಈ ಬಾರಿಯ ಐಪಿಎಲ್ ಬಾಗಿಲು ಮುಚ್ಚಿದಂತೆ. ಹಾಗಾಗಿ ಅಭ್ಯಾಸದ ವೇಳೆ ದೀರ್ಘ ಕಸರತ್ತಿನಲ್ಲಿ ತೊಡಗಿದ್ದು ಕಂಡುಬಂತು. ಮುಂಬೈ ಇಂಡಿಯನ್ಸ್ ಆಟಗಾರರು ರಾತ್ರಿ 10 ಗಂಟೆಯವರೆಗೆ ಹೊನಲು ಬೆಳಕಿನಲ್ಲಿ ಅಭ್ಯಾಸ ನಡೆಸಿದರು.ಸೂಪರ್ ಕಿಂಗ್ಸ್‌ನ ಅದೃಷ್ಟ

ಸೂಪರ್ ಕಿಂಗ್ಸ್ ತಂಡ ಈ ಬಾರಿ ಪ್ಲೇ ಆಫ್ ಹಂತಕ್ಕೆ ಬಂದಿರುವುದು ಅದೃಷ್ಟದ ಬಲದಿಂದ ಎಂದು ಕೆಲವರು ಹೇಳುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದಿದ್ದರೆ ಮಹಿ ಬಳಗ ಟೂರ್ನಿಯಿಂದ ಹೊರಬೀಳುತಿತ್ತು. ಆದರೆ ದೋನಿ ಅವರ `ಅದೃಷ್ಟದ ಬಲ~ ಇಲ್ಲಿಯೂ ಕೆಲಸ ಮಾಡಿದಂತಿದೆ.ಅದಕ್ಕಾಗಿ ಚಾಲೆಂಜರ್ಸ್ ತಂಡವನ್ನು ಮಣಿಸಿದ ಡೆಕ್ಕನ್ ಚಾರ್ಜರ್ಸ್‌ಗೆ ಅವರು ಧನ್ಯವಾದ ಹೇಳಬೇಕು! ಪಾಯಿಂಟ್‌ನಲ್ಲಿ ಸಮಬಲ ಹೊಂದಿದ್ದರೂ ರನ್‌ರೇಟ್‌ನಲ್ಲಿ ಕಿಂಗ್ಸ್ ಮುಂದಿತ್ತು. ಈ ಮೂಲಕ ಐಪಿಎಲ್‌ನ ಐದೂ ಆವೃತ್ತಿಗಳಲ್ಲಿ ನಾಕ್‌ಔಟ್ ಹಂತ ತಲುಪಿದ ತಂಡ ಎಂಬ ಖ್ಯಾತಿ ಪಡೆದಿದೆ.ಸೂಪರ್ ಕಿಂಗ್ಸ್ ಈಗ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2010, 2011ರಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಅಂತಹ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ನಾಯಕ ದೋನಿ ಇದ್ದಾರೆ. ಆದರೆ ಫೇವರಿಟ್ ಸ್ಥಾನದಲ್ಲಿ ಹರಭಜನ್ ಸಿಂಗ್ ಸಾರಥ್ಯದ ಮುಂಬೈ ಇಂಡಿಯನ್ಸ್ ಇದೆ.ಇಂಡಿಯನ್ಸ್ ಈ ಬಾರಿಯ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ತಂಡದವರು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೇ ರಾಜಸ್ತಾನ ರಾಯಲ್ಸ್ ಎದುರು ಗೆದ್ದಿದ್ದರು. ಅದರಲ್ಲೂ ಸಚಿನ್ ಹಾಗೂ ಡ್ವೇನ್ ಸ್ಮಿತ್ ಮೊದಲ ವಿಕೆಟ್‌ಗೆ 163 ರನ್ ಸೇರಿಸಿದ್ದು ಐಪಿಎಲ್‌ನಲ್ಲಿ ದಾಖಲೆ ಕೂಡ.ಆದರೆ ಈ ತಂಡದ ಸಮಸ್ಯೆ ಎಂದರೆ ಇದುವರೆಗೆ ಐದು ಮಂದಿ ತೆಂಡೂಲ್ಕರ್ ಜೊತೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದಾರೆ. ಇವರೆಲ್ಲಾ ಒಂದು ಪಂದ್ಯದಲ್ಲಿ ಯಶಸ್ವಿಯಾದರೆ ಮತ್ತೊಂದು ಪಂದ್ಯದಲ್ಲಿ ವೈಫಲ್ಯ ಕಂಡಿದ್ದಾರೆ.ಹಾಗಾಗಿ ಬ್ಯಾಟಿಂಗ್ ಚಾಂಪಿಯನ್ ಜೊತೆ ಇನಿಂಗ್ಸ್ ಆರಂಭಿಸಲು ಯಾರನ್ನು ಕಳುಹಿಸುವುದು ಎಂಬುದು ಈ ತಂಡದ ಆಡಳಿತವನ್ನು ಚಿಂತೆಗೀಡು ಮಾಡಿದೆ. ಕೊನೆ ಲೀಗ್ ಪಂದ್ಯದಲ್ಲಿ ಯಶಸ್ವಿಯಾಗಿರುವ ಜೋಡಿಯೇ ಕಣಕ್ಕಿಳಿದರೂ ಅಚ್ಚರಿ ಇಲ್ಲ.ಸಚಿನ್ ಬಿಟ್ಟರೆ ಈ ತಂಡದ ಆಧಾರಸ್ತಂಭ ರೋಹಿತ್ ಶರ್ಮ ಹಾಗೂ ಅಂಬಟಿ ರಾಯುಡು. ಇವರಿಬ್ಬರು ಈ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಆದರೆ ಕೀರನ್ ಪೊಲಾರ್ಡ್ ಅವರಿಂದ ಇದುವರೆಗೆ ಹೇಳಿಕೊಳ್ಳುವಂತಹ ಆಟ ಮೂಡಿಬಂದಿಲ್ಲ. ಅವರಿಂದ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಆಟದ ನಿರೀಕ್ಷೆಯಲ್ಲಿ ಈ ತಂಡವಿದೆ.ಹಾಗೇ, ಬೌಲಿಂಗ್‌ನಲ್ಲಿ ಲಸಿತ್ ಮಾಲಿಂಗ ಅವರ ಮೇಲೆ ಪೂರ್ಣ ಭರವಸೆ ಇಟ್ಟಿದೆ. ಹಾಗಂತ ಮುನಾಫ್ ಪಟೇಲ್ ಹಾಗೂ ಆರ್.ಪಿ.ಸಿಂಗ್ ಅವರನ್ನು ಮರೆಯುವಂತಿಲ್ಲ. ಇದು ಐಪಿಎಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇಂಡಿಯನ್ಸ್ ಆಸೆಗೆ ಆಸರೆಯಾಗಿದೆ. ಇನ್ನೊಂದು ವಿಷಯವೆಂದರೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಇಂಡಿಯನ್ಸ್ ಇದುವರೆಗೆ ಸೋತಿಲ್ಲ.ದೋನಿ ಬಳಗದ ಎದುರು ಲೀಗ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿದೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಸೂಪರ್ ಕಿಂಗ್ಸ್ ಕಾಯುತ್ತಿದೆ. ಜೊತೆಗೆ ಅದೃಷ್ಟದ ಬೆಂಬಲವೂ ಈ ತಂಡಕ್ಕಿದೆ. ಫ್ರಾನ್ಸಿಸ್ ಡು   ಪ್ಲೆಸಿಸ್, ಸುರೇಶ್ ರೈನಾ, ಮೈಕ್ ಹಸ್ಸಿ ಅವರ ಮೇಲೆ ನಿರೀಕ್ಷೆಯ ಭಾರವಿದೆ. ಬೆನ್ ಹಿಲ್ಫೆನ್ಹಾಸ್ ಹಾಗೂ ಆರ್.ಅಶ್ವಿನ್ ಅಪಾಯಕಾರಿ ಬೌಲರ್‌ಗಳು.

ತಂಡಗಳು:

ಮುಂಬೈ ಇಂಡಿಯನ್ಸ್:
ಹರಭಜನ್ ಸಿಂಗ್ (ನಾಯಕ), ಸಚಿನ್ ತೆಂಡೂಲ್ಕರ್, ಡ್ವೇನ್ ಸ್ಮಿತ್, ರೋಹಿತ್ ಶರ್ಮ, ಅಂಬಟಿ ರಾಯುಡು, ಕೀರನ್ ಪೊಲಾರ್ಡ್, ದಿನೇಶ್ ಕಾರ್ತಿಕ್, ಲಸಿತ್ ಮಾಲಿಂಗ, ಮುನಾಫ್ ಪಟೇಲ್, ಆರ್.ಪಿ. ಸಿಂಗ್, ಪ್ರಗ್ಯಾನ್ ಓಜಾ, ರಿಚರ್ಡ್ ಲೆವಿ, ಜೇಮ್ಸ ಫ್ರಾಂಕ್ಲಿನ್, ಅಬು ನೆಚೀಮ್ ಅಹ್ಮದ್, ಆದಿತ್ಯ ತಾರೆ, ಧವಳ್ ಕುಲಕರ್ಣಿ, ಟಿ. ಸುಮನ್, ಏಡನ್ ಬ್ಲಿಜಾರ್ಡ್, ಕ್ಲಿಂಟ್ ಮೆಕೇ, ಡೇವಿ ಜೇಕಬ್ಸ್, ಹರ್ಷಲ್ ಗಿಬ್ಸ್ ಹಾಗೂ ತಿಸಾರ ಪೆರೇರಾ.

 

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ನಾಯಕ), ಮುರಳಿ ವಿಜಯ್, ಮೈಕ್ ಹಸ್ಸಿ, ಎಸ್.ಬದರೀನಾಥ್, ಫ್ರಾನ್ಸಿಸ್ ಡು ಪ್ಲೆಸಿಸ್, ಸುರೇಶ್ ರೈನಾ, ಡ್ವೇನ್ ಬ್ರಾವೊ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ, ಅಭಿನವ್ ಮುಕುಂದ್, ಆರ್.ಅಶ್ವಿನ್, ನುವಾನ್ ಕುಲಶೇಖರ, ಶಾದಾಬ್ ಜಕಾತಿ, ಡಗ್ ಬೋಲಿಂಜರ್, ಎಸ್.ಅನಿರುದ್ಧ್, ಸುದೀಪ್ ತ್ಯಾಗಿ, ವಿ. ಯೋ ಮಹೇಶ್, ಅಲ್ಬಿ ಮಾರ್ಕೆಲ್, ಬೆನ್ ಹಿಲ್ಫೆನಾಸ್ ಹಾಗೂ ಸೂರಜ್ ರಂದೀವ್.

ಪಂದ್ಯ ಆರಂಭ: ರಾತ್ರಿ 8.00ಕ್ಕೆ. ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry