ಬುಧವಾರ, ನವೆಂಬರ್ 13, 2019
22 °C

ಇಂಡಿಯನ್ ಓಪನ್: ಸೈನಾಗೆ ಅಗ್ರಶ್ರೇಯಾಂಕ

Published:
Updated:

ನವದೆಹಲಿ (ಪಿಟಿಐ): ಚೀನಾ ಸ್ಪರ್ಧಿಗಳ ಗೈರು ಹಾಜರಿಯ ನಡುವೆ ಭಾರತದ ಸೈನಾ ನೆಹ್ವಾಲ್ ಏಪ್ರಿಲ್ 23ರಿಂದ 28ರ ವರೆಗೆ ಇಲ್ಲಿ ನಡೆಯಲಿರುವ ಯೊನೆಕ್ಸ್ ಸನ್‌ರೈಸ್ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ.ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಹೈದರಾಬಾದ್‌ನ ಸೈನಾಗೆ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಡ್ರಾ ಲಭಿಸಿದೆ. ಈ ಆಟಗಾರ್ತಿ ಇಂಡೊನೇಷ್ಯಾದ   ಬೆಲಟ್ರೆಕ್ಸ್ ಮನುಪುತಿ ಎದುರು ಪೈಪೋಟಿ ನಡೆಸಲಿದ್ದಾರೆ.ಕಳೆದ ತಿಂಗಳು ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ಅವರು ಮನುಪತಿ ಅವರನ್ನು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿದ್ದರು. ಭಾರತದ ಇನ್ನೊಬ್ಬ ಸ್ಪರ್ಧಿ ಪಿ.ವಿ. ಸಿಂಧುಗೆ ಈ ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಲಭಿಸಿದೆ.ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ಪಿ. ಕಶ್ಯಪ್‌ಗೆ ಆರಂಭದಲ್ಲಿಯೇ ಕಠಿಣ ಎದುರಾಳಿ ಎದುರಾಗಿದ್ದಾರೆ. ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಹಾಗೂ ಮಾಜಿ ವಿಶ್ವ ಚಾಂಪಿಯನ್ ತೌಫಿಕ್ ಹಿದಯಂತ್ ಎದುರು ಕಶ್ಯಪ್ ಆಡಲಿದ್ದಾರೆ.ಇನ್ನುಳಿದಂತೆ ಸಿಂಗಲ್ಸ್‌ನಲ್ಲಿ ಗುರುಸಾಯಿದತ್, ಅಜಯ್ ಜಯರಾಮನ್, ಆನಂದ್ ಪವಾರ್,  ಸೌರಭ್ ವರ್ಮಾ ಮತ್ತು ಬಿ. ಸಾಯಿ ಪ್ರಣೀತ್ ಕಣದಲ್ಲಿದ್ದಾರೆ. ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ-ಪ್ರಜಕ್ತಾ ಸಾವಂತ್ ಮತ್ತು ಅಶ್ವಿನಿ ಪೊನ್ನಪ್ಪ-ಪ್ರಜ್ಞಾ ಗಾದ್ರೆ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಪ್ರತಿಕ್ರಿಯಿಸಿ (+)