ಇಂಡಿಯನ್ ಮುಜಾಹಿದ್ದೀನ್ ಹುಟ್ಟಿಗೆ ಗುಜರಾತ್ ಗಲಭೆ ಕಾರಣ
ನವದೆಹಲಿ (ಪಿಟಿಐ): ಗುಜರಾತ್ನ ಕೋಮು ಗಲಭೆಗಳು ಇಂಡಿಯನ್ ಮುಜಾಹಿದ್ದೀನ್ನಂತಹ ಭಯೋತ್ಪಾದಕ ಸಂಘಟನೆಯ ಹುಟ್ಟಿಗೆ ಕಾರಣವಾದವು ಎಂದು ಕಾಂಗ್ರೆಸ್ ನೀಡಿರುವ ಹೇಳಿಕೆ ಹೊಸ ವಿವಾದವನ್ನು ಹುಟ್ಟು ಹಾಕಿದೆ.
ಕಾಂಗ್ರೆಸ್ನ ಈ ಹೇಳಿಕೆಗೆ ಅಷ್ಟೇ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪದೇ ಪದೇ ಕೋಮುವಾದದ ವಿಷಯವನ್ನು ಕೆದಕುತ್ತಿರುವ ಕಾಂಗ್ರೆಸ್ ಈ ವಿಷಯವನ್ನು ಮತ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದೆ ಎಂದು ತಿರುಗೇಟು ನೀಡಿದೆ. `ಗುಜರಾತ್ ಗಲಭೆಯ ಬೆನ್ನಲ್ಲೇ ಇಂಡಿಯನ್ ಮುಜಾಹಿದ್ದೀನ್ ಜನ್ಮತಾಳಿತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ಆರೋಪ ಪಟ್ಟಿಯಲ್ಲಿ ಹೇಳಿದೆ. ಈಗಲಾದರೂ ಆರ್ಎಸ್ಎಸ್ ಮತ್ತು ಬಿಜೆಪಿ ಕೋಮುವಾದ ರಾಜಕೀಯಕ್ಕೆ ತಿಲಾಂಜಲಿ ನೀಡುವುದೇ ಎಂದು ಕಾಂಗ್ರೆಸ್ ಮುಖಂಡ ಶಕೀಲ್ ಅಹಮದ್ ಟ್ವೀಟರ್ನಲ್ಲಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಈ ಆರೋಪ ನಿಂದನಾತ್ಮಕ ಮತ್ತು ಮೂರ್ಖತನದ್ದು ಎಂದು ಪ್ರತಿಕ್ರಿಯಿಸಿರುವ ಬಿಜೆಪಿ, ಮುಜಾಹಿದ್ದೀನ್ಯಂತಹ ಭಯೋತ್ಪಾದಕ ಸಂಘಟನೆಗಳ ಪಾಕ್ ಸಂಪರ್ಕ ಎಲ್ಲರಿಗೂ ತಿಳಿದ ವಿಷಯ. ಆದರೆ, ತೀವ್ರ ಹತಾಶಗೊಂಡಿರುವ ಕಾಂಗ್ರೆಸ್ ರಾಜಕೀಯಕ್ಕೆ ಕೋಮುವಾದದ ಬಣ್ಣ ಬಳಿಯಲು ಯತ್ನಿಸುತ್ತಿದೆ. ರಾಷ್ಟ್ರೀಯತೆಗೆ ಧಕ್ಕೆ ತರುತ್ತಿದೆ ಎಂದು ತಿರುಗೇಟು ನೀಡಿದೆ.
ಗುಜರಾತ್ ಕೋಮು ಗಲಭೆಗೂ ಮುಂಚೆಯೇ ದೇಶದಲ್ಲಿ `ಸಿಮಿ'ಯಂತಹ ಭಯೋತ್ಪಾದಕ ಸಂಘಟನೆಗಳಿದ್ದವು. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯದೆ ಹತಾಶರಾಗಿರುವ ಕಾಂಗ್ರೆಸ್ನ ಕೆಲ ವಕ್ತಾರರು ರಾಜಕೀಯ ಕ್ಷೇತ್ರಕ್ಕೆ ಕೋಮುವಾದದ ಬಣ್ಣ ಬಳಿಯಲು ಪೈಪೋಟಿ ನಡೆಸಿದ್ದಾರೆ ಎಂದು ಬಿಜೆಪಿಯ ರವಿಶಂಕರ ಪ್ರಸಾದ್ ಲೇವಡಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.