ಇಂಡಿಯನ್ ರೈಲ್ವೇಸ್ನ ಸ್ಟಾರ್!
ಇಂಡಿಯನ್ ರೈಲ್ವೇಸ್ ಕಬಡ್ಡಿ ತಂಡದಲ್ಲಿ ಎದ್ದು ಕಾಣಿಸುವಂಥ ಎತ್ತರದ ನಿಲುವು ಈಕೆಯದ್ದು. ಎದುರಾಳಿ ಅಂಕಣಕ್ಕೆ ದಾಳಿಗೆ ಹೋದರೆ ಸಾಕು, ಪಾಯಿಂಟ್ ಪಡೆದೇ ಬರಬೇಕು ಎಂಬ ಛಲ. ಇಷ್ಟು ಹೇಳಿದರೆ ಕಬಡ್ಡಿ ಅಭಿಮಾನಿಗಳು ಆ ಆಟಗಾರ್ತಿ ಯಾರೆಂದು ಊಹಿಸಬಹುದು.
ಆಕೆ ಮಮತಾ ಪೂಜಾರಿ. ಮಾರ್ಚ್ 3 ರಿಂದ 6ವರೆಗೆ ತವರು (ಉಡುಪಿ) ಜಿಲ್ಲೆಯ ಬೈಂದೂರಿನಲ್ಲಿ ನಡೆದ 58ನೇ ರಾಷ್ಟ್ರೀಯ ಸೂಪರ್ಲೀಗ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಮಿಂಚಿದವಳು ಈಕೆ. ಚಾಂಪಿಯನ್ಷಿಪ್ನ ಶ್ರೇಷ್ಠ ಆಟಗಾರ್ತಿ ಪಟ್ಟಕ್ಕೆ ಈಕೆಗೆ ಪೈಪೋಟಿಯೇ ಇರಲಿಲ್ಲ. ರೈಲ್ವೇಸ್ ತಂಡ ರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ಷೇತ್ರದಲ್ಲಿ ಪಾರಮ್ಯ ಮುಂದುವರಿಸುವಲ್ಲಿ, ಏಷ್ಯನ್ ಗೇಮ್ಸ್ನಲ್ಲಿ ಗಮನ ಸೆಳೆದಿದ್ದ ಮಮತಾಳದ್ದೇ ನಿರ್ಣಾಯಕ ಪಾತ್ರ. 1984ರಿಂದ ರೈಲ್ವೇಸ್ ತಂಡ ರಾಷ್ಟ್ರೀಯ ಮಹಿಳಾ ಕಬಡ್ಡಿಯಲ್ಲಿ ಚಾಂಪಿಯನ್ ಆಗಿ ಮೆರೆಯುತ್ತಿದೆ!
ಹೊನಲು ಬೆಳಕಿನಡಿ ನಡೆದ ಬೈಂದೂರಿನ ಚಾಂಪಿಯನ್ಷಿಪ್ನಲ್ಲಿ ಕಾರ್ಕಳ ತಾಲ್ಲೂಕಿನ ಹೆರ್ಮುಂಡೆ ಗ್ರಾಮದ ಈ ಪ್ರತಿಭೆಗೆ ಸಾವಿರಾರು ಪ್ರೇಕ್ಷಕರ ಒಕ್ಕೊರಲ ಬೆಂಬಲ. ಪ್ರತಿ ಬಾರಿ ದಾಳಿಗಿಳಿದಾಗ ಹರ್ಷೋದ್ಘಾರ. ಮೂರೂ ದಿನ ಭರ್ತಿಯಾಗಿದ್ದ ಪ್ರೇಕ್ಷಕರಿಗೂ ಒಂದಿಷ್ಟೂ ನಿರಾಸೆಯಾಗದಂತೆ ಆಡಿದವಳು ಮಮತಾ. ರೈಲ್ವೇಸ್, ಚಾಂಪಿಯನ್ಷಿಪ್ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ನಿರಾಯಾಸ ಜಯ ಸಾಧಿಸಿತ್ತು!
ರೈಲ್ವೇಸ್ ತಂಡದಲ್ಲಿ ಮೂವರು ಕನ್ನಡಿಗ ಆಟಗಾರ್ತಿಯರಿದ್ದರು. ಆದರೆ ಬೆಂಗಳೂರಿನ ತೇಜಸ್ವಿನಿ ಗಾಯಾಗೊಂಡಿದ್ದರಿಂದ ಆಡಲಾಗಲಿಲ್ಲ. ಮತ್ತೊಬ್ಬ ಗ್ರಾಮೀಣ ಆಟಗಾರ್ತಿ ದಾವಣಗೆರೆ ತೋಳಹುಣಸೆಯ ಶಶಿ ರಕ್ಷಣೆಯಲ್ಲಿ ಗಮನ ಸೆಳೆದಳು. ದಾಳಿಯಲ್ಲಿ ಮಮತಾಗೆ ಒಂದಿಷ್ಟು ಬೆಂಬಲ ನೀಡಿದವರು ಮಹಾರಾಷ್ಟ್ರ ಮೂಲದ ಅಭಿಲಾಷಾ ಮ್ಹೇತ್ರೆ ಮಾತ್ರ.
ಹಾಗೆ ನೋಡಿದರೆ, ರೈಲ್ವೇಸ್ ಫೈನಲ್ಗಿಂತ ಸೆಮಿಫೈನಲ್ನಲ್ಲೇ ಸ್ವಲ್ಪ ಪ್ರತಿರೋಧ ಎದುರಿಸಿತ್ತು. ಹಿಮಾಚಲ ಪ್ರದೇಶದ ಆಟಗಾರ್ತಿಯರು ವಿರಾ ಮಕ್ಕೆ ಮೊದಲಿನ ಆಟದಲ್ಲಿ ಚಾಂಪಿಯನ್ ತಂಡಕ್ಕೆ ಸ್ಪರ್ಧೆ ನೀಡಿದ್ದರು. ಆದರೆ ಉತ್ತರಾರ್ಧದಲ್ಲಿ ಮಮತಾ ದಾಳಿಗೆ ದಿಕ್ಕೆಟ್ಟುಹೋದರು. ತನ್ನ ಎತ್ತರವನ್ನು ಚೆನ್ನಾಗಿಯೇ ಬಳಸಿಕೊಂಡಳು ಮಮತಾ.
ಫೈನಲ್ನಲ್ಲಿ ಮಹಾರಾಷ್ಟ್ರ, ಭಾರತ ತಂಡದ ಆಟಗಾರ್ತಿ ದೀಪಿಕಾ ಜೋಸೆಫ್ ಅವರನ್ನೇ ನೆಚ್ಚಿಕೊಂಡಿತ್ತು. ಆದರೆ ದೀಪಿಕಾ ಯಶಸ್ಸಿಗೆ ಮೊಣಕಾಲು ನೋವೂ ಕಡಿವಾಣ ಹಾಕಿತು. ಹೀಗಾಗಿ ರೈಲ್ವೇಸ್ ತಂಡದ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಮಹಾರಾಷ್ಟ್ರ ತಂಡದಲ್ಲಿ ಯಾರೂ ಇರಲಿಲ್ಲ.
‘ನಾವು ದೀಪಿಕಾ ಅವರನ್ನು ಅತಿಯಾಗಿ ನೆಚ್ಚಿಕೊಂಡಿದ್ದು ತಪ್ಪು. ಎದುರಾಳಿ ಮುನ್ನಡೆ 4-5 ಪಾಯಿಂಟ್ಗಿಂತ ಹೆಚ್ಚು ಇರಬಾರದಂತೆ ನೋಡಿಕೊಳ್ಳಬೇಕೆಂಬ ಎಂಬ ನಮ್ಮ ಯೋಜನೆ ಬುಡಮೇಲಾಯಿತು’ ಎಂದು ಮಹಾರಾಷ್ಟ್ರದ ಕೋಚ್ ಹೇಳಿದ್ದು ಸೂಕ್ತವಾಗಿತ್ತು.
ಹಳಿ ತಪ್ಪದ ರೈಲ್ವೆ: ಪುರುಷರ ವಿಭಾಗದಲ್ಲೂ ಇಂಡಿಯನ್ ರೈಲ್ವೇಸ್ ಅಂತಿಮವಾಗಿ ಜಯಶಾಲಿಯಾಯಿತು. ಆದರೆ ಇಲ್ಲಿ ಅದು ಮಹಿಳೆಯರ ವಿಭಾಗದ ರೀತಿಯಲ್ಲಿ ‘ಹಾಟ್ ಫೇವರಿಟ್’ ಆಗಿರಲಿಲ್ಲ.
ಇಂಡಿಯನ್ ರೈಲ್ವೇಸ್ ಜತೆ ರಾಜಸ್ತಾನ, ಸರ್ವಿಸಸ್ ಮತ್ತು ಮಹಾರಾಷ್ಟ್ರ ನೆಚ್ಚಿನ ತಂಡಗಳಾಗಿದ್ದವು. ಕಳೆದ ಬಾರಿಯ ವಿಜೇತ ದೆಹಲಿ ಕ್ವಾರ್ಟರ್ಫೈನಲ್ನಲ್ಲೇ ಹೊರಬಿದ್ದಿತ್ತು. ಕರ್ನಾಟಕ ಲೀಗ್ ಹಂತದಿಂದ ಮೇಲೇರಲಿಲ್ಲ. ಕೇರಳದ ಅನುಭವಿ ಹಾಗೂ 2002 ಬೂಸಾನ್ ಏಷ್ಯನ್ ಕ್ರೀಡೆಗಳಲ್ಲಿ ಆಡಿದ್ದ ಜಗದೀಶ್ ಕುಂಬ್ಳೆ ಅವರ ಅನುಭವ ಕೇರಳದ ನೆರವಿಗೆ ಬಂತು.
ಚಾಣಾಕ್ಷ ರೈಡರ್: ಭಾರತ ತಂಡದ ಕ್ಯಾಪ್ಟನ್ ಕೂಡ ಆಗಿರುವ ರೈಲ್ವೇಸ್ ನಾಯಕ ರಾಕೇಶ್ ಕುಮಾರ್, ಏಷ್ಯನ್ ಕ್ರೀಡೆಗಳ ಫೈನಲ್ ಪಂದ್ಯದ ಆರಂಭದಲ್ಲಿ ಗಾಯಗೊಂಡ ಮೇಲೆ ಪೂರ್ಣಪ್ರಮಾಣದಲ್ಲಿ ಆಡಿದ್ದು ಇದೇ ಚಾಂಪಿಯನ್ಷಿಪ್ನಲ್ಲಿ. ಅವರೂ ಪ್ರೇಕ್ಷಕರನ್ನು ನಿರಾಸೆಗೊಳಿಸಲಿಲ್ಲ. ಇನ್ನೊಂದೆಡೆ ರಾಜಸ್ತಾನ ತಂಡದವರು ಸಾಂಘಿಕ ಹೋರಾಟ ತೋರಲಿಲ್ಲ. ಕ್ಯಾಚಿಂಗ್ನಲ್ಲಿ ಸಂಪೂರ್ಣ ವಿಫಲವಾಗಿತ್ತು. ಚಾಂಪಿಯನ್ಷಿಪ್ನ ಉತ್ತಮ ರೈಡರ್ ಗೌರವಕ್ಕೆ ಪಾತ್ರರಾದ ವಝೀರ್ ಮಾತ್ರ ರೈಡಿಂಗ್ನಲ್ಲಿ ಗಮನ ಸೆಳೆದರು. ಬೈಂದೂರಿನಂಥ ಗ್ರಾಮೀಣ ಪ್ರದೇಶದಲ್ಲಿ ಇಂಥ ಮಹತ್ವದ ಚಾಂಪಿಯನ್ಷಿಪ್ ನಡೆಸಿದ್ದು ಉತ್ತಮ ಬೆಳವಣಿಗೆ. ಕಬಡ್ಡಿ ದೇಸಿ ಆಟ. ಟಿಕೆಟ್ ಇದ್ದರೂ ಪ್ರೇಕ್ಷಕರು ತುಂಬಿದ್ದರು.
ಕಡೆಗೆ ಟಿಕೆಟ್ ಖಾಲಿಯಾದವು. ಕಬಡ್ಡಿಗೆ ವಿಶಾಲ ತಳಹದಿ ಸಿಗುವಂತಾಗಲು ಇಂಥ ಕ್ರಮಗಳು ನೆರವಾಗಲಿವೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಅಮೆಚೂರ್ ಕಬಡ್ಡಿ ಫೆಡರೇಷನ್, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ, ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಅಭಿನಂದನಾರ್ಹ. ಬೈಂದೂರಿನ ಪ್ರಥ್ವಿ ಕ್ರೀಡಾ ಸಂಸ್ಥೆ ಸದಸ್ಯರು ತೊಡಗಿಕೊಂಡ ರೀತಿ ಕೂಡ ಮೆಚ್ಚುಗೆ ಗಳಿಸಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.