ಇಂಡೋನೇಷ್ಯಾ ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

7

ಇಂಡೋನೇಷ್ಯಾ ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

Published:
Updated:

ಬೆಂಗಳೂರು:  ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯಲ್ಲಿ ಇಂಡೋನೇಷ್ಯಾ ಮೂಲದ ಮಕ್ಕಳಿಗೆ ಇತ್ತೀಚೆಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.ಇಂಡೋನೇಷ್ಯಾದ ಮೇಡನ್ ನಗರದ ಸ್ಟುಡಿಯೊ ಒಂದರಲ್ಲಿ ಕೆಲಸ ಮಾಡುವ ಹೆನಿಯವರ ಮೊದಲನೇ ಮಗ ಕೆವಿನ್‌ಗೆ ಎರಡನೇ ತಿಂಗಳಿಗೆ ಹೃದಯದಲ್ಲಿ ತೊಂದರೆ ಇದೆ ಎಂದು ತಿಳಿದುಬಂದಿತ್ತು. ಸ್ಥಳೀಯ ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಹೇಳಿದ್ದರು. ಆದರೆ, ಮನೆಯಲ್ಲಿ ಬಡತನವಿದ್ದ ಕಾರಣದಿಂದ ಅಲ್ಲಿ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಅವರು ಅಸಮರ್ಥರಾಗಿದ್ದರು.ಜಕಾರ್ತಾ ಮೂಲದ ಅಕಿಯಾಂಗ್ ಅವರ ದತ್ತು ಮಗಳು  10 ವರ್ಷದ ಆಂಜಲೀನ್‌ಳಿಗೆ ಜನ್ಮದಿಂದಲೇ ಬರುವ ಹೃದಯ ಸಂಬಂಧಿ ಕಾಯಿಲೆ ಇತ್ತು. ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯನ್ನು ಸ್ಥಳೀಯ ವೈದ್ಯರು ತಿಳಿಸಿದ್ದರು.ಆದರೆ, ಜಕಾರ್ತಾದ ರಸ್ತೆ ಬದಿಯ ಚಿಕ್ಕ ಅಂಗಡಿಯಲ್ಲಿ ಕೇಕ್ ಮಾರಾಟ ಮಾಡಿಕೊಂಡು ಜೀವನವನ್ನು ನಡೆಸುತ್ತಿರುವ ಇವರಿಗೆ ಅಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸುಮಾರು 5 ರಿಂದ 7ಲಕ್ಷ ರೂಪಾಯಿಗಳನ್ನು ಹೊಂದಿಸುವುದು ಕಷ್ಟವಾಗಿತ್ತು.ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ವೈದ್ಯ ಡಾ. ಸೀತಾರಾಮ್ ಭಟ್ ಹಾಗೂ ಸಿಬ್ಬಂದಿ ತಂಡ ಈ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದೆ.

 

ಸಾವಿರಕ್ಕೆ 6 ಮಕ್ಕಳಿಗೆ ಬರುವ ಸಾಧ್ಯತೆ

`ಹೃದಯದ ತೊಂದರೆಯ ಕಾಯಿಲೆಯು ಒಂದು ಸಾವಿರ ಮಕ್ಕಳಲ್ಲಿ 6 ಮಕ್ಕಳಿಗೆ ಬರುವ ಸಾಧ್ಯತೆಯಿದೆ. ಹೃದಯದ ತೊಂದರೆಯ ಪರಿಣಾಮ ಶುದ್ಧ ರಕ್ತವು ಅಶುದ್ಧ ರಕ್ತದೊಂದಿಗೆ ಸೇರಿ ಶ್ವಾಸಕೋಶಕ್ಕೆ ಹೆಚ್ಚು ಚಲಿಸುತ್ತದೆ. ಪದೇ ಪದೇ ಜ್ವರ, ಕೆಮ್ಮು, ನ್ಯುಮೋನಿಯಾ, ಬೆಳವಣಿಗೆಯಲ್ಲಿ ಕುಂಠಿತ ಮುಂತಾದವು ಕಾಯಿಲೆಯ ಲಕ್ಷಣಗಳಾಗಿವೆ~

-ಡಾ.ಸಿ.ಎನ್.ಮಂಜುನಾಥ್

ನಿರ್ದೇಶಕ, ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry