ಮಂಗಳವಾರ, ಮೇ 11, 2021
26 °C

ಇಂಥವರು ನಿಮ್ಮ ಮನೆಗೂ ಬರಬಹುದು..!

ಪ್ರಜಾವಾಣಿ ವಾರ್ತೆ/ ಆರ್.ವೀರೇಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಗದಗ: ನಾಟಿ ಔಷಧಿ ಕೊಟ್ಟರೆ ಮಾರಾಣಾಂತಿಕ ಕಾಯಿಲೆಗಳು ವಾಸಿಯಾಗುತ್ತದೆ ಎಂದು ನಂಬಿಸಿ ಸಾವಿರಾರೂ ರೂಪಾಯಿ ಹಣ ಪಡೆದುಕೊಂಡು ವಂಚನೆ ಮಾಡುವುದನ್ನೇ ದಂಧೆಯಾಗಿಸಿಕೊಂಡಿದ್ದಾರೆ ಕೆಲವು ಮಹಿಳೆಯರು.ಸ್ಟೇಷನರಿ ವಸ್ತುಗಳನ್ನು ಮಾರುವ ನೆಪದಲ್ಲಿ ಊರಿಂದ ಊರಿಗೆ ತಿರುಗುತ್ತಾ, ಯಾವ ಊರಿನಲ್ಲಿ ಯಾವ-ಯಾವ ತರಹದ ರೋಗಿಗಳು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನುವ ವಿಷಯವನ್ನು ಅಕ್ಕ-ಪಕ್ಕದ ಮನೆಯವರಿಂದ ತಿಳಿದುಕೊಂಡು, ನಂತರ ರೋಗಿಗಳ ಮನೆಗೆ ಹೋಗಿ ತಮ್ಮ `ಕಾರ್ಯಾಚರಣೆ~ ಪ್ರಾರಂಭಿಸುತ್ತಾರೆ ಈ ಮಹಿಳೆಯರು.ಗದುಗಿನ ಆಯುರ್ವೇದ ಔಷಧಿ ಮಾರಾಟ ಮಾಡುವ ಅಂಗಡಿಯಲ್ಲಿ ಮೊನ್ನೆಯಷ್ಟೇ ನಡೆದ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಮೋಸಗಾರರ ನಯವಂಚಕತನವನ್ನು ಬಯಲಿಗೆ ಎಳೆದಿದೆ.ನಡೆದಿದ್ದು ಇಷ್ಟು...

ಗದುಗಿನಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ಇರುವ ಅಡವಿ ಸೋಮಾಪುರ ಗ್ರಾಮಕ್ಕೆ ಸ್ಟೇಷನರಿ ವಸ್ತುಗಳನ್ನು ಮಾರಲು ಹೋಗಿರುವ ಮಧ್ಯವಯಸ್ಕ ಮಹಿಳೆಯೊಬ್ಬರು, ಊರಿನವರಿಂದ ಮಾಹಿತಿ ಸಂಗ್ರಹಿಸಿಕೊಂಡು, ಆದೇ ಗ್ರಾಮದಲ್ಲಿ ಪಾರ್ಶ್ವವಾಯುನಿಂದ ಬಳಲುತ್ತಿದ್ದವರ ಮನೆಗೆ ಹೋಗಿದ್ದಾರೆ.`ನಮ್ಮ ಮನೆಯವರಿಗೂ ಈ ಕಾಯಿಲೆ ಬಂದಿತ್ತು. ನಾವು ಗದುಗಿನಲ್ಲಿ ಇರುವ ವೈದ್ಯರು, ಅಕ್ಕ-ಪಕ್ಕ ಜಿಲ್ಲೆಗಳಲ್ಲಿ ಇರುವ ವೈದ್ಯರು ಎಲ್ಲರಿಗೂ ತೋರಿಸಿದ್ದರೂ ಕಾಯಿಲೆ ವಾಸಿಯಾಗಲಿಲ್ಲ. ಕೊನೆಗೆ ಯಾರೋ ಒಬ್ಬರು ಹೇಳಿದರು, ಗದುಗಿನ ಆಯುರ್ವೇದ ಅಂಗಡಿಯಲ್ಲಿ ಈ ಕಾಯಿಲೆಗೆ ಔಷಧಿ ಸಿಗುತ್ತದೆ ಎಂದರು. ನಂತರ ಅಲ್ಲಿಂದ ಔಷಧಿ ತಂದು ಕೊಟ್ಟ ನಂತರ ಕಾಯಿಲೆ ಉಪಶಮನವಾಗಿದೆ~ ಎಂದು  ಹೇಳಿ ಮನೆಯವರಿಗೆ ಸ್ವಲ್ಪ ವಿಶ್ವಾಸ ಮೂಡುವಂತೆ ಮಾಡಿದ್ದಾರೆ.ಕಾಯಿಲೆ ವಾಸಿಯಾಗುತ್ತದೆ ಎನ್ನುವ ಆಸೆಯಿಂದ ಮನೆಯವರು ಔಷಧ ತಂದುಕೊಂಡುವಂತೆ ಕೇಳಿಕೊಂಡರು. ಅದಕ್ಕೆ ಆ ಮಹಿಳೆ `ಔಷಧಕ್ಕೆ ಕೆಲವು ಸಾಮಗ್ರಿ ಮಿಶ್ರಣ ಮಾಡಬೇಕು. ನಾನು ಹೇಳಿದ ಸಾಮಗ್ರಿಯನ್ನು ತಂದು ಕೊಡಿ~ ಎಂದು ಹೇಳಿ ಹತ್ತಾರು ವಸ್ತುಗಳ ಪಟ್ಟಿಯನ್ನೇ ಕೊಟ್ಟರು. ಆಮೇಲೆ ಔಷಧಿ ಕೊಡುತ್ತೇನೆ, ನಿಮ್ಮ ಕೈಲಾದಷ್ಟು ಹಣ ಕೊಡಿ ಎಂದು ಬೆಣ್ಣೆಯಲ್ಲಿ ಕೂದಲು ತಗೆದಂತೆ ಮಾತನಾಡಿದರು ಆ ಮಹಿಳೆ.ಸಾಮಗ್ರಿಗಳು ಬಂದವು, ಮನೆಯ ಒಂದು ಮೂಲೆಯಲ್ಲಿ ಸ್ಟೌವ್ ಹಚ್ಚಿ, ಆ ಸಾಮಗ್ರಿಗಳ ಮಿಶ್ರಣ ಕಾರ್ಯವೂ ನಡೆಯಿತು. ನಂತರ ಅರ್ಧ ಗಂಟೆ ಬಳಿಕ ಆ ಮಹಿಳೆ ` ಈಗ ಗದುಗಿಗೆ ಹೋಗೋಣ ಬನ್ನಿ. ಔಷಧಿ ತರಬೇಕು~ ಎಂದು ಮನೆಯ ಯುವಕನನ್ನು ಗದುಗಿಗೆ ಕರೆದುಕೊಂಡು ಬಂದು, ಜನತಾ ಕಿರಾಣಿ ಅಂಗಡಿಯ ಸಮೀಪ ಒಂದು ಮೂಲೆಯಲ್ಲಿ ಇರುವ ಆಯುರ್ವೇದಿಕ ಔಷಧಿ ಅಂಗಡಿಗೆ ಕರೆದುಕೊಂಡು ಹೋದರು.ಅಲ್ಲಿ ಹೋಗಿ ಔಷಧಿ ತಗೆದುಕೊಂಡರು. `ಇದು ಬಹಳ ಸ್ಟ್ರಾಂಗ್, ನಮ್ಮಂತಹ ಗೊತ್ತಿರುವವರನ್ನು ಕರೆದುಕೊಂಡು ಬಂದೇ ತಗೆದುಕೊಳ್ಳಬೇಕು. ಕಾಯಿಲೆ ಇರುವವರಿಗೆ ಎನಾದರೂ ಹೆಚ್ಚುಕಮ್ಮಿಯಾದರೆ~ ಎಂದು ಕಾಳಜಿ ಇರುವವರ ರೀತಿ ಆ ಮಹಿಳೆ ಮಾತನಾಡಿದರು.ಒಂದು ಗ್ರಾಂ ಔಷಧಿಗೆ ಸುಮಾರು 60 ರೂಪಾಯಿಯಂತೆ ಮೂರು ತರಹದ ಔಷಧಿಗೆ ಎಲ್ಲ ಸೇರಿ ಎರಡು ಸಾವಿರ ರೂಪಾಯಿ ಆಗುತ್ತದೆ ಎಂದು ಅಂಗಡಿ ಮಾಲೀಕನು ತಿಳಿಸಿದ. ಇದರ ನಡುವೆ  ಮಹಿಳೆಯ ನಡವಳಿಕೆ ಬಗ್ಗೆ ಅನುಮಾನ ಬಂದ ಯುವಕ, `ನಮಗೆ ಗೊತ್ತಿರುವ ವೈದ್ಯರನ್ನು ಕರೆದುಕೊಂಡು ಬರುತ್ತೇನೆ. ಅವರು ಈ ಔಷಧಿ ಅಸಲಿಯೋ, ನಕಲಿಯೋ ಎಂದು ಹೇಳುತ್ತಾರೆ~ ಎಂದಿದ್ದೆ ತಡ ಆ ಮಹಿಳೆಯ ಏನೇನೋ ಬಡ ಬಡಿಸತೊಡಗಿದಳು. ಅಂಗಡಿಯವನು ಯುವಕನ ಮೇಲೆ ಹರಿಹಾಯ್ದ. ಕೊನೆಗೆ ಯುವಕ ಪೊಲೀಸ ರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದ ತಕ್ಷಣ ಆ ಮಹಿಳೆ ಪರಾರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.