ಭಾನುವಾರ, ಜೂನ್ 20, 2021
23 °C

ಇಂದಿನಿಂದ ಅಪ್ಪನ ಜಾತ್ರಾ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಸ್ತೆಯ ಬದಿಗೆ ಸಾಲಾಗಿ ನಿರ್ಮಿಸಿರುವ ಬಿಡಾರಗಳು, ಸೌಂದರ್ಯವರ್ಧಕ ಸಾಮಗ್ರಿಗಳ ಮಳಿಗೆ, ಕಿವಿಗಡಚಿಕ್ಕುವ ಹಲವು ಶಬ್ದಗಳ ಮಕ್ಕಳ ಆಟಿಕೆಗಳ ಆರ್ಭಟ ಒಂದೆಡೆಯಾದರೆ, ಘಮಘಮಿಸುವ ಕುರಕಲ ತಿಂಡಿಗಳು ಹಾಗೂ ತಂಪಾದ ಪಾನೀಯಗಳು ಮತ್ತೊಂದೆಡೆ. ಹೀಗೆ ವಿವಿಧ ಅಂಗಡಿಗಳು ವಿವಿಧ ಕಡೆಯಿಂದ ಬಂದ ಜನರ ಸಂಗಮವನ್ನು ಇಲ್ಲಿ ಕಾಣಬಹುದು.ಸೋಮವಾರದಿಂದ ಗುಲ್ಬರ್ಗ ನಗರದಲ್ಲಿ ನಡೆಯಲಿರುವ ಐತಿಹಾಸಿಕ ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಸಿದ್ಧಗೊಳ್ಳುತ್ತಿರುವ ದೇವಸ್ಥಾನದ ಸುತ್ತಮುತ್ತಲಿನ ಪರಿಸರದ ನೋಟವಿದು. ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ವಿವಿಧ ಕಡೆಗಳಿಂದ ವೈವಿಧ್ಯಮಯ ಮಾರಾಟ ಮಳಿಗೆಗಳು ಬಂದು ಇಲ್ಲಿ ಬಿಡಾರ ಹೂಡಿವೆ.ಮಣ್ಣಿನ ಮುದ್ದೆಗೆ ಚಿತ್ರಗಳ ಮೆರಗು ನೀಡಿ, ಹಲವು ವಿಧದ ಮೂರ್ತಿಗಳನ್ನು ರಚಿಸಿರುವುದು ಜನರನ್ನು ಆಕರ್ಷಿಸುತ್ತಿವೆ. ವಿವಿಧ ರಾಜ್ಯಗಳಿಂದ ವಾಹನಗಳಲ್ಲಿ ತಂದು ಮಾರಾಟ ಮಾಡುತ್ತಿರುವ ಇವರಿಗೆ ಈ ವರ್ಷದ ವ್ಯಾಪಾರ ಹೇಗಿರುತ್ತದೋ ಎಂಬ ಕಳವಳ. ಮೂರ್ತಿಗಳ ಸಾಗಾಣಿಕೆಯಲ್ಲಿ ದಾರಿ ಮಧ್ಯೆ ಹಲವಾರು ಮೂರ್ತಿಗಳು ಒಡೆದು ಹೋಗಿರುವುದರಿಂದ ಹಾನಿಯಾಗಿದೆ. ಬುದ್ಧ, ಬಸವ, ಆನೆ, ಸ್ವಾಗತ ಕೋರುವ ಮಹಿಳೆಯ ಗೊಂಬೆಗಳು ಜನರನ್ನು ಆಕರ್ಷಿಸುತ್ತಿವೆ. ಪ್ರತಿಯೊಂದು ಮೂರ್ತಿಗೆ ಅದರದೆ ಆದ ಬೆಲೆ ನಿಗದಿ ಪಡಿಸಲಾಗಿದೆ.`ಮೂರು ವರ್ಷದಿಂದ ಈ ಜಾತ್ರೆಗೆ ಬರುತ್ತಿದ್ದೇವೆ. ಇಲ್ಲಿರುವ ದೇವಸ್ಥಾನ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವುದರಿಂದ ಇಲ್ಲಿಗೆ ಜನರು ಬರುತ್ತಾರೆ. ವ್ಯಾಪಾರವು ಚೆನ್ನಾಗಿ ಆಗುತ್ತದೆ. ಅದನ್ನು ಅರಿತ ನಾವು ಇಲ್ಲಿಗೆ ಸಂಸಾರ ಸಮೇತ ಬರುತ್ತೇವೆ. ನಮಗೆ ಯಾವುದೇ ನಷ್ಟ ಆಗುವುದಿಲ್ಲ.  ಜಾತ್ರೆಗೆಂದು ಮಹಿಳೆಯರು ತವರು ಮನೆಗೆ ಬಂದವರಿಗೆ ಬಳೆ ತೊಡಿಸುವ ವಾಡಿಕೆ ಇದೆ. ಅದೇ ರೀತಿ ಜಾತ್ರೆಗೆ ಬಂದ ಹೆಣ್ಣುಮಕ್ಕಳೆಲ್ಲ ಬಳೆ ಹಾಕಿಕೊಳ್ಳುತ್ತಾರೆ. ಇದರಿಂದ ನಮ್ಮ ಶ್ರಮಕ್ಕೆ ತಕ್ಕ ಆದಾಯ ಸಿಗುತ್ತದೆ ಎಂಬ ನಂಬಿಕೆ ಇದೆ ಎಂಬುದು ಬಳೆ ಅಂಗಡಿ ಸಾಬಮ್ಮಳ ಭರವಸೆಯ ಮಾತು.ಜಾತ್ರೆಯಲ್ಲಿ ತಿರುಗಾಡಿ ಸುಸ್ತಾದವರಿಗೆ ತಂಪು ಪಾನೀಯದ ಅವಶ್ಯಕತೆ ಇರುತ್ತದೆ. ಎರಡು ವಾರ ಇಲ್ಲಿ ಬಿಡಾರ ಹೂಡುವ ಆಲೋಚನೆ ಇದೆ. ನಿಂಬೆ ಹಣ್ಣಿನ ಪಾನೀಯ ಜಾಸ್ತಿ ಮಾಡುವ ಆಲೋಚನೆ ಹೊಂದ್ದ್ದಿದೇನೆ ಎಂದು ವ್ಯಾಪಾರಿ ಸಿದ್ದಾರ್ಥ ಹೇಳುತ್ತಾರೆ.ಜಾತ್ರೆಗೆ ಸಿದ್ಧಗೊಂಡಿರುವ ಚೂಡಾ,  ಮಹಿಳೆಯರನ್ನು ತನ್ನತ್ತ ಸೆಳೆಯುವ ಉದ್ದೇಶದೊಂದಿಗೆ  ವಿವಿಧ ರೀತಿಯ ಓಲೆ, ಕೇಶಾಲಂಕೃತ ವಸ್ತುಗಳು, ಬಳೆ ಅಂಗಡಿಗಳು ತೆರೆದುಕೊಂಡಿವೆ, ಮಕ್ಕಳ ಮನವನ್ನು ಆಕರ್ಷಿಸುವ ವಿವಿಧ ಆಟಿಕೆಗಳು ಜಾತ್ರೆಯಲ್ಲಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.