ಸೋಮವಾರ, ಆಗಸ್ಟ್ 10, 2020
24 °C

ಇಂದಿನಿಂದ ಆನ್‌ಲೈನ್‌ನಲ್ಲಿ ಸೀಟು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ ಆನ್‌ಲೈನ್‌ನಲ್ಲಿ ಸೀಟು ಆಯ್ಕೆ

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ನಡುವೆ ಒಪ್ಪಂದ ಆದ ಬೆನ್ನಿಗೇ ಶುಲ್ಕ ವಿವರಗಳನ್ನು ಪ್ರಕಟಿಸಲಾಗಿದೆ.ಆನ್‌ಲೈನ್ ಮೂಲಕ ಕೋರ್ಸ್ ಮತ್ತು ಕಾಲೇಜುಗಳನ್ನು ಆದ್ಯತೆ ಮೂಲಕ ಗುರುತಿಸುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅದಕ್ಕೂ ಮೊದಲೇ ಸೀಟು ಹಂಚಿಕೆ ಮತ್ತು ಶುಲ್ಕ ವಿವರಗಳನ್ನು ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ.ಮಾತುಕತೆ ಸಂದರ್ಭದಲ್ಲಿ ಸರ್ಕಾರ ಒಪ್ಪಿಕೊಂಡಿದ್ದ ಪ್ರಕಾರ ಶುಲ್ಕದಲ್ಲಿ ಶೇ 10ರಷ್ಟು ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳ ಸರ್ಕಾರಿ ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ. ಖಾಸಗಿ ಕಾಲೇಜುಗಳಲ್ಲಿನ  ಸರ್ಕಾರಿ ಕೋಟಾ ಮತ್ತು `ಕಾಮೆಡ್-ಕೆ~ ಕೋಟಾ ಸೀಟುಗಳಿಗೆ ಶುಲ್ಕ ಹೆಚ್ಚಳ ಅನ್ವಯವಾಗಲಿದೆ. ಕಳೆದ ಸಾಲಿನ ಸೀಟು ಹಂಚಿಕೆ ಅನುಪಾತವೇ ಈ ವರ್ಷವೂ ಮುಂದುವರಿಯಲಿದೆ.ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ಗುರುವಾರ ಬೆಳಿಗ್ಗೆ 6ರಿಂದ ಆನ್‌ಲೈನ್ ಮೂಲಕ ಆದ್ಯತೆ ಗುರುತಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇದೇ 18ರ ಸಂಜೆ 5ಕ್ಕೆ ಈ ಪ್ರಕ್ರಿಯೆ ಮುಕ್ತಾಯವಾಗಲಿದೆ. ಇದೇ 20ರಂದು ಸೀಟುಗಳ `ಅಣಕು~ ಆಯ್ಕೆಯ ಫಲಿತಾಂಶ ಲಭ್ಯವಾಗಲಿದೆ.ಇದೇ 20ರ ಬೆಳಿಗ್ಗೆ 5ರಿಂದ 22ರ ಸಂಜೆ 5ರವರೆಗೆ ಆದ್ಯತೆಗಳಲ್ಲಿ ಏನಾದರೂ ಬದಲಾವಣೆ ಇದ್ದರೆ, ಮಾಡಬಹುದಾಗಿದೆ. ಮೊದಲ ಸುತ್ತಿನ ಖಚಿತ ಸೀಟು ಹಂಚಿಕೆಯನ್ನು ಇದೇ 23ರಂದು ಮಾಡಲಾಗುತ್ತದೆ. ಇದೇ 25ರಂದು ಸೀಟು ಹಂಚಿಕೆಯ ವಿವರಗಳನ್ನು ಪ್ರಕಟಿಸಲಾಗುತ್ತದೆ. 26ರಿಂದ 30ರ ಒಳಗೆ ಸೀಟು ಲಭ್ಯವಾಗಿರುವ ಪತ್ರವನ್ನು ನಿಗದಿತ ದಾಖಲಾತಿ ಕೇಂದ್ರಗಳಲ್ಲಿ ಪಡೆದು ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ಸೀಟು ಹಂಚಿಕೆ ಪತ್ರವನ್ನು ಪಡೆಯುವಾಗಲೇ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಈ ಬಾರಿ ಆನ್‌ಲೈನ್ ಕೌನ್ಸೆಲಿಂಗ್ ಆಗಿರುವುದರಿಂದ ಮನೆಯಿಂದಲೇ ಸೀಟು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿರುವ ದಾಖಲಾತಿ ಪರಿಶೀಲನಾ ಕೇಂದ್ರಗಳಿಗೆ ತೆರಳಿ ಅಲ್ಲಿಂದಲ್ಲೂ ಆದ್ಯತೆಗಳನ್ನು ಗುರುತಿಸಿ ಸೀಟು ಆಯ್ಕೆ ಮಾಡಿಕೊಳ್ಳಬಹುದಾಗಿದೆ.ಸೂಚನೆ: ಆನ್‌ಲೈನ್ ಮೂಲಕ ಆದ್ಯತೆಗಳನ್ನು ಗುರುತಿಸುವ ಮುನ್ನ ಸಿಇಟಿ ಕೈಪಿಡಿಯಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು. ಸೀಟು ಹಂಚಿಕೆ ಪ್ರಕ್ರಿಯೆ ಮುಗಿಯುವವರೆಗೂ ವಿದ್ಯಾರ್ಥಿಗಳಿಗೆ ನೀಡಿರುವ ರಹಸ್ಯ ಸಂಖ್ಯೆಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಕೋರ್ಸ್, ಕಾಲೇಜುಗಳನ್ನು ಗುರುತಿಸುವುದಾದರೆ ಅದಕ್ಕೂ ಅವಕಾಶವಿದೆ. ಆ ಸಂದರ್ಭದಲ್ಲಿ ಮೊದಲ ಆದ್ಯತೆ, ಎರಡನೇ ಆದ್ಯತೆ ಯಾವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.ಸೀಟು ಹಂಚಿಕೆ ಪಟ್ಟಿ: ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಪಟ್ಟಿ ಸಿದ್ಧವಿದೆ. ಸರ್ಕಾರಿ ಕೋಟಾ ಮೂಲಕ ಹಂಚಿಕೆ ಮಾಡಲು ವೈದ್ಯಕೀಯ ವಿಭಾಗದಲ್ಲಿ 2,138 ಸೀಟುಗಳು ಲಭ್ಯವಾಗಲಿವೆ. ಬುಧವಾರ ಸಂಜೆ ಸೀಟು ಹಂಚಿಕೆ ಪಟ್ಟಿಗೆ ಸರ್ಕಾರ ಅಂತಿಮ ರೂಪ ನೀಡಿದೆ. ಗುರುವಾರ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಸೀಟುಗಳ ವಿವರ ಲಭ್ಯವಾಗಲಿದೆ. ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆ ಪಟ್ಟಿಗೂ ಅಂತಿಮ ರೂಪ ನೀಡಲಾಗಿದ್ದು, ಗುರುವಾರ ವಿವರಗಳು ಲಭ್ಯವಾಗಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಸೀಟು ಅನುಪಾತ: ಎಂಜಿನಿಯರಿಂಗ್‌ನಲ್ಲಿ ಸರ್ಕಾರ ಮತ್ತು `ಕಾಮೆಡ್-ಕೆ~ ನಡುವೆ ಶೇ 45: 55ರ ಅನುಪಾತದಲ್ಲಿ ಸೀಟು ಹಂಚಿಕೆಯಾಗಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಎಲ್ಲ ಸೀಟುಗಳಿಗೆ ರೂ 18,090 ಶುಲ್ಕ ನಿಗದಿಪಡಿಸಲಾಗಿದೆ. ಖಾಸಗಿ ಅನುದಾನಿತ ಕಾಲೇಜುಗಳ ಶೇ 95ರಷ್ಟು ಸೀಟುಗಳಿಗೂ ಇದೇ ಶುಲ್ಕ ಅನ್ವಯವಾಗಲಿದೆ. ಉಳಿದ ಶೇ 5ರಷ್ಟು ಸೀಟುಗಳಿಗೆ ರೂ 1.10 ಲಕ್ಷ ಅಥವಾ ರೂ 1,37,500 ನಿಗದಿ ಮಾಡಲಾಗಿದೆ.ಸೂಪರ್ ನ್ಯೂಮರರಿ ಕೋಟಾ:  ಈ ವರ್ಷವೂ ಶೇ 5ರಷ್ಟು ಸೂಪರ್ ನ್ಯೂಮರರಿ ಕೋಟಾ ಮುಂದುವರಿಯಲಿದೆ. ಈ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಶುಲ್ಕ ರೂ 3,090 ಮಾತ್ರ ಪಾವತಿಸಬೇಕು. ಉಳಿದಂತೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.ಎರಡು ರೀತಿಯ ಶುಲ್ಕ: `ಕಾಮೆಡ್-ಕೆ~ ಕೋಟಾ ಸೀಟುಗಳಿಗೆ ರೂ 1.10 ಲಕ್ಷ ಶುಲ್ಕ ಪಡೆಯುವ ಕಾಲೇಜುಗಳು, ಸರ್ಕಾರಿ ಕೋಟಾ ಸೀಟುಗಳಿಗೆ ರೂ 38,500 ಶುಲ್ಕ ಪಡೆಯಬಹುದಾಗಿದೆ. ಕಾಮೆಡ್-ಕೆ ಕೋಟಾ ಸೀಟುಗಳಿಗೆ ರೂ1,37,500 ಶುಲ್ಕ ಪಡೆಯುವ ಕಾಲೇಜುಗಳು, ಸರ್ಕಾರಿ ಕೋಟಾ ಸೀಟುಗಳಿಗೆ ರೂ 33,000 ಶುಲ್ಕ ಪಡೆಯಬಹುದಾಗಿದೆ. ಯಾವ ವಿಧದ ಶುಲ್ಕ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಕೌನ್ಸೆಲಿಂಗ್‌ಗೂ ಮೊದಲೇ ಕಾಲೇಜುಗಳು, ಪರೀಕ್ಷಾ ಪ್ರಾಧಿಕಾರಕ್ಕೆ ತಿಳಿಸಬೇಕು. ವಿದ್ಯಾರ್ಥಿಗಳ ಮಾಹಿತಿಗಾಗಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.ಸಹಾಯವಾಣಿ: ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ದೂ: 080-23461575, 23462599, 23462758, 23568201, 2356820223568202 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.