ಇಂದಿನಿಂದ ಕಿತ್ತೂರು ಉತ್ಸವ ಆರಂಭ

7

ಇಂದಿನಿಂದ ಕಿತ್ತೂರು ಉತ್ಸವ ಆರಂಭ

Published:
Updated:

ಚನ್ನಮ್ಮನ ಕಿತ್ತೂರು (ಬೆಳಗಾವಿ): ಬ್ರಿಟಿಷರ ವಿರುದ್ಧ ರಣಕಹಳೆಯನ್ನು ಊದುವ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ್ದ ಚನ್ನಮ್ಮಳ ಉತ್ಸವಕ್ಕೆ ಕಿತ್ತೂರು ನವ ವಧುವಿನಂತೆ ಶೃಂಗಾರಗೊಂಡಿದೆ.ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸುಣ್ಣ, ಬಣ್ಣ ಬಳಿದುಕೊಂಡಿರುವ ಕಟ್ಟಡಗಳು, ಡಾಂಬರು ಕಂಡಿರುವ ರಸ್ತೆ, ಕೋಟೆಯಲ್ಲಿ ನಡೆದಿರುವ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಕಿತ್ತೂರು ಹದಿನೈದು ದಿನಗಳಲ್ಲಿ ಹೊಸ ರೂಪ ಪಡೆದುಕೊಂಡಿದೆ. ಕೋಟೆಯೊಳಗೆ ಉತ್ಸವದ ಸಿದ್ಧತೆಗಳು ಪೂರ್ಣಗೊಂಡಿವೆ. ಕೋಟೆಯ ಮುಂಭಾಗದಲ್ಲಿ ಮಕ್ಕಳ ಆಟಿಕೆಯ ಅಂಗಡಿಗಳನ್ನು ಹಾಕಲಾಗಿದೆ. ಭಾನುವಾರದಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಕೋಟೆ ಆವರಣದಲ್ಲಿ ಮುಖ್ಯ ವೇದಿಕೆ ಹಾಗೂ ಪೆಂಡಾಲ್ ಹಾಕುವ ಕಾರ್ಯ ಪೂರ್ಣಗೊಂಡಿದೆ. ವಸ್ತು ಪ್ರದರ್ಶನದ ಮಳಿಗೆಗಳ ನಿರ್ಮಾಣ ಕಾರ್ಯವೂ ಮುಗಿದಿದೆ. ಕ್ರೀಡೆಗಳಿಗಾಗಿ ಮೈದಾನಗಳನ್ನೂ ಸಜ್ಜುಗೊಳಿಸಲಾಗಿದೆ.ಚಲನಚಿತ್ರ ನಟ ಶಿವರಾಜಕುಮಾರ, ನಟಿ ಅನು ಪ್ರಭಾಕರ, ರಾಗಿಣಿ, ಗಾಯಕ ರಾಜೇಶ್ ಕೃಷ್ಣನ್ ತಂಡದವರು ಕಲಾ ರಸಿಕರನ್ನು ನೃತ್ಯ, ಗಾಯನದ ಮೂಲಕ ರಂಜಿಸಲಿದ್ದಾರೆ. ಕೊಳಲು ವಾದನ ಮೂಲಕ ಪ್ರವೀಣ ಗೋಡ್ಖಿಂಡಿ ಸಂಗೀತದ ಅಲೆಗಳನ್ನು ಎಬ್ಬಿಸಲಿದ್ದಾರೆ. ಮಾಯಾರಾವ್ ತಂಡದಿಂದ ನೃತ್ಯ ನಡೆಯಲಿದೆ. ಹಾಡಿನ ಮೂಲಕ ರಘು ದೀಕ್ಷಿತ್ ತಂಡದವರು ಉತ್ಸವದ ರಂಗು ಹೆಚ್ಚಿಸಲಿದ್ದಾರೆ. ಜನರನ್ನು ನಗೆಗಡಲಲ್ಲಿ ತೇಲಿಸಲು ರಿಚರ್ಡ್ ಲೂಯಿಸ್, ಮೈಸೂರು ಆನಂದ ಮತ್ತಿತರರು ಆಗಮಿಸುತ್ತಿದ್ದಾರೆ.ಗ್ರಾಮೀಣ ಕ್ರೀಡೆಗಳಾದ ವಾಲಿಬಾಲ್, ಕಬಡ್ಡಿ, ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ. ರಾಷ್ಟ್ರೀಯ ಕ್ರೀಡಾಪಟುಗಳಾದ ಜೋಗಿಂದರ್‌ಸಿಂಗ್, ಸಂದೀಪ ಸೋನು, ನರೇಶಕುಮಾರ ಪಪ್ಪು, ಅಮೃತಾ ಬಿಷ್ಣೋಯ್ ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷ.ಕೋಟೆಯ ಹೊರ ಹಾಗೂ ಒಳಗೋಡೆ, ಅರಮನೆ, ಬತ್ತೇರಿ ಸೇರಿದಂತೆ ವಿವಿಧ ಕಟ್ಟಡಗಳನ್ನು ಸುಂದರವಾಗಿ ಅಲಂಕರಿಸಲಾಗಿದೆ. ಅರಮನೆ ಆವರಣದಲ್ಲಿ ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry