ಮಂಗಳವಾರ, ಜೂನ್ 22, 2021
26 °C

ಇಂದಿನಿಂದ ಕೌಶಲ ಪ್ರಾದೇಶಿಕ ಸರಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಷ್ಟ್ರೀಯ ಗ್ರಾಮೀಣ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ `ಕೌಶಲ ಪ್ರಾದೇಶಿಕ ಸರಸ್~ ಮಾರ್ಚ್ 22ರಿಂದ 31ರವರೆಗೆ ನಗರದ ಹೈಸ್ಕೂಲ್‌ಮೈದಾನದಲ್ಲಿ ನಡೆಯಲಿದೆ.ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಈ ಮೇಳ ನಡೆಯಲಿದೆ.

 

22ರಂದು ಸಂಜೆ 6ಕ್ಕೆ  ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಮೇಳ ಉದ್ಘಾಟಿಸಲಿದ್ದಾರೆ. ಸಚಿವ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಂ. ಬಸವರಾಜ ನಾಯ್ಕ, ಡಾ.ಎ.ಎಚ್. ಶಿವಯೋಗಿಸ್ವಾಮಿ, ಎಸ್.ವಿ. ರಾಮಚಂದ್ರ, ಶಾಮನೂರು ಶಿವಶಂಕರಪ್ಪ, ಟಿ. ಗುರುಸಿದ್ದನಗೌಡ,  ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಭಾಗ ವಹಿಸುವರು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮೇಳದ ವಿಶೇಷ: ಸ್ವರ್ಣ ಜಯಂತಿ ಗ್ರಾಮೀಣ ಸ್ವರೋಜ್‌ಗಾರ್ ಯೋಜನೆ ಅಡಿಯಲ್ಲಿ ತಯಾರಿಸಲಾದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು, ನಗರದ ಜನರಿಗೆ ಗ್ರಾಮೀಣ ಉತ್ಪನ್ನದ ಸೊಬಗನ್ನು ನೀಡುವುದು, ಪುರಾತನ ಕಲೆಯನ್ನು ರಕ್ಷಿಸಿ ಬೆಳೆಸುವುದು, ನಗರದ ಜನರಿಗೆ ಈ ಕಲೆಯನ್ನು ಪರಿಚಯಿಸುವುದು ಮೇಳದ ಉದ್ದೇಶ.ಕೈಮಗ್ಗ, ಜರಿ, ಕಸೂತಿ, ಟೆರಾಕೋಟಾ, ಸಿದ್ಧ ಉಡುಪು, ಬೆತ್ತದ ವಸ್ತುಗಳು, ಕೊಲ್ಲಾಪುರಿ ಚಪ್ಪಲಿ, ಗೃಹಾಲಂಕಾರ ವಸ್ತುಗಳು, ವನಸ್ಪತಿ, ಅಲಂಕಾರಿಕ ವಸ್ತುಗಳು, ಪಾರಂಪರಿಕ ತಿಂಡಿ ತಿನಿಸುಗಳು, ಕೃತಕ ಆಭರಣ, ಕಸೂತಿ ವಸ್ತುಗಳು ಮೇಳದಲ್ಲಿ ಲಭ್ಯ ಇವೆ.ಮೇಳದ ವ್ಯವಸ್ಥೆಗೆ ರೂ 90 ಲಕ್ಷ ವೆಚ್ಚ ನಿಗದಿಪಡಿಸಲಾಗಿದೆ. ಮನೋರಂಜನೆಗೆ ಪಕ್ಕದಲ್ಲೇ ಅಮ್ಯೂಸ್‌ಮೆಂಟ್ ಪಾರ್ಕ್ ಇದೆ. ಮೇಳದಲ್ಲಿ ರೂ 1 ಕೋಟಿ ವಹಿವಾಟು ನಿರೀಕ್ಷೆ ಮಾಡಲಾಗಿದೆ. 200 ಸ್ಟಾಲ್‌ಗಳಲ್ಲಿ ವೈವಿಧ್ಯಮಯ ವಸ್ತುಗಳು ಮಾರಾಟಕ್ಕೆ ಲಭ್ಯ ಇವೆ.

 

ಪ್ರತಿದಿನ ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ. 22ರಂದು ಪ್ರಹ್ಲಾದ ಭಟ್ ಮತ್ತು ತಂಡದ ಸುಗಮ ಸಂಗೀತ, 23ಕ್ಕೆ ಚಿರಂತನ ತಂಡದಿಂದ ನೃತ್ಯ, 24ರಂದು ಸ್ಟೆಪ್‌ಡಾನ್ಸ್ ಸ್ಟುಡಿಯೋದಿಂದ ಜಾನಪದ ಮತ್ತು ಸಮಕಾಲೀನ ನೃತ್ಯ, 25ಕ್ಕೆ  ಪ್ರವೀಣ್ ಡಿ. ರಾವ್ ಮತ್ತು ತಂಡದಿಂದ ಅಂತರ್ಧ್ವನಿ ಗೀತಗಾಯನ, 26ಕ್ಕೆ ರೂಪಾಂಜಲಿ ಆರ್ಕೆಸ್ಟ್ರಾ ತಂಡ ದಿಂದ ರಸಮಂಜರಿ,  27ಕ್ಕೆ ವಿದ್ವಾನ್  ಬಿ.ಎಸ್. ಮಧು ಸೂದನ್ ತಂಡದಿಂದ ವಾದ್ಯ ವೈವಿಧ್ಯ, 28ಕ್ಕೆ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ, ತಂಡದಿಂದ  ಸುಗಮ ಸಂಗೀತ 29ಕ್ಕೆ  ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ,  30ಕ್ಕೆ ಮಿಮಿಕ್ರಿ ದಯಾನಂದ್ ತಂಡದಿಂದ ಮಿಮಿಕ್ರಿ, 31ಕ್ಕೆ  ಮಲ್ಲಿಕಾರ್ಜುನ ಸೌಂಶಿ ಮತ್ತು ತಂಡದಿಂದ  ವಚನ ಹಾಗೂ ಭಕ್ತಿ ಸಂಗೀತ ನಡೆಯಲಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ನಿರ್ದೇಶಕ ಬಿ.ಎಸ್. ಪ್ರಕಾಶ್,  ತಾಲ್ಲಿಕು ಪಂಚಾಯ್ತಿ ಕಾರ್ಯ ನಿರ್ವಹಣ ಅಧಿಕಾರಿ ಪ್ರಭುದೇವ್ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.