ಇಂದಿನಿಂದ ಕ್ವಾರ್ಟರ್‌ಫೈನಲ್ ರಂಗು

7

ಇಂದಿನಿಂದ ಕ್ವಾರ್ಟರ್‌ಫೈನಲ್ ರಂಗು

Published:
Updated:
ಇಂದಿನಿಂದ ಕ್ವಾರ್ಟರ್‌ಫೈನಲ್ ರಂಗು

ಸಿದ್ದಾಪುರ: ಅಮ್ಮತ್ತಿಯಲ್ಲಿ ಐಚೆಟ್ಟಿರ ಕಪ್‌ಗಾಗಿ ನಡೆಯುತ್ತಿರುವ ಕೊಡವ ಕುಟುಂಬಗಳ ಹಾಕಿ ಉತ್ಸವಕ್ಕೆ ಗುರುವಾರದಿಂದ ಹೊಸ ರಂಗು.ಈ ಹದಿನಾರನೇ ವಾರ್ಷಿಕ ಹಾಕಿ `ಹಬ್ಬ~ದ ಆರಂಭದಲ್ಲಿ 217 ತಂಡಗಳು ನೋಂದಣಿ ಮಾಡಿಸಿಕೊಂಡಿದ್ದವು. ಒಟ್ಟು 7 ತಂಡಗಳು ವಾಕ್‌ಓವರ್ ನೀಡಿದ್ದರಿಂದ 210 ತಂಡಗಳು ಪಾಲ್ಗೊಂಡಿದ್ದು, ಈವರೆಗೆ 190 ಪಂದ್ಯಗಳು ನಡೆದಿವೆ. ಇದೀಗ ಎಂಟರ ಘಟ್ಟದ ಪೈಪೋಟಿಗೆ ರಂಗಸಜ್ಜಿಕೆಯಾಗಿದೆ. ಇನ್ನು ಕಲಿಯಂಡ, ಕರಿನೆರವಂಡ, ಮಂಡೇಪಂಡ, ಕೂತಂಡ, ಚೆಪ್ಪುಡಿರ, ನೆಲ್ಲಮಕ್ಕಡ, ಅಂಜಪರವಂಡ, ಪಳಂಗಂಡ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.ಈ ನಡುವೆ ಮೂರು ದಿನಗಳ ಕಾಲ ಆಟಕ್ಕೆ ಮಳೆರಾಯನ ಕಾಟ ಇತ್ತಾದ್ದರೂ, ಸಂಘಟಕರು ಅತ್ಯಂತ ವ್ಯವಸ್ಥಿತವಾಗಿ ಸಮಯ ಹೊಂದಿಸಿಕೊಂಡು ಪಂದ್ಯ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬುಧವಾರದವರೆಗೆ ನಡೆದ ಒಟ್ಟು ಪಂದ್ಯಗಳಲ್ಲಿ ಒಟ್ಟು 541 ಗೋಲುಗಳು ಬಂದಿವೆ. ಇವುಗಳಲ್ಲಿ ಒಟ್ಟು 1506 ಪೆನಾಲ್ಟಿಕಾರ್ನರ್‌ಗಳಿಂದ 160 ಗೋಲುಗಳು ಮತ್ತು 26 ಪೆನಾಲ್ಟಿ ಶೂಟೌಟ್‌ಗಳಿಂದ ಬಂದ 21ಗೋಲುಗಳೂ ಸೇರಿವೆ.ಈ `ಉತ್ಸವ~ದಲ್ಲಿ ಹಾಕಿಯ ನಿಯಮಗಳನ್ನು ಕರಾರುವಾಕ್ಕಾಗಿ ಪಾಲಿಸಲಾಗಿದ್ದು, ಒರಟು ಆಟಕ್ಕಾಗಿ ಈವರೆಗೆ 93 ಹಸಿರು ಕಾರ್ಡುಗಳನ್ನು ಮತ್ತು 37 ಹಳದಿ ಕಾರ್ಡುಗಳನ್ನು ತೋರಿಸಲಾಗಿದೆ.ಬುಧವಾರ ನಡೆದ ಹದಿನಾರರ ಘಟ್ಟದ ಪೈಪೋಟಿಯಲ್ಲಿ ಚೆಪ್ಪುಡಿರ ತಂಡವು ಟೈಬ್ರೇಕರ್‌ನಲ್ಲಿ 4-1ಗೋಲುಗಳಿಂದ ಮಚ್ಚಮಾಡ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ಚೆಪ್ಪುಡಿರ ಪರ ಚೇತನ್ ಮತ್ತು ಮಚ್ಚಮಾಡ ಪರ ಬೋಪಣ್ಣ ಗೋಲು ತಂದಿತ್ತರು.ನೆಲ್ಲಮಕ್ಕಡ ತಂಡವು 3-0 ಗೋಲುಗಳಿಂದ ಚೇಂದಂಡ ತಂಡವನ್ನು ಮಣಿಸಿತು. ವಿಜಯೀ ತಂಡದ ಪರ ಸಚಿನ್ ಬೋಪಣ್ಣ 2 ಗೋಲು ಗಳಿಸಿದರೆ, ರಾಹುಲ್ ಪೊನ್ನಣ್ಣ ಇನ್ನೊಂದು ಗೋಲು ತಂದಿತ್ತರು.ಮಧ್ಯಾಹ್ನದ ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ಅಂಜಪರವಂಡ ತಂಡವು ಕೊನೆಯ ಕ್ಷಣದಲ್ಲಿ ಫಾರ್ವಡ್ ಆಟಗಾರ ಜತಿನ್ ಅಪ್ಪಯ್ಯ ತಂದಿತ್ತ ಗೋಲಿನ ನೆರವಿನಿಂದ ಕುಟ್ಟಂಡ ತಂಡವನ್ನು 1-0 ಗೋಲಿನಿಂದ ಮಣಿಸಿ ಮುನ್ನಡೆಯಿತು.ಪಳಂಗಂಡ ತಂಡವು ಮುತ್ತಣ್ಣ, ಅಜಯ್ ಅಯ್ಯಪ್ಪ, ಕಾಳಪ್ಪ ತಂದಿತ್ತ ತಲಾ ಒಂದು ಗೋಲು ಮತ್ತು ಪ್ರಜ್ವಲ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕೊಂಗೇಟ್ಟಿರ ತಂಡವನ್ನು 5-1ಗೋಲುಗಳಿಂದ ಸೋಲಿಸಿತು.

ಶುಕ್ರವಾರ ಸೆಮಿಫೈನಲ್ ಹಣಾಹಣಿ ನಡೆಯಲಿದ್ದು, ಭಾನುವಾರ ಅಂತಿಮ ಪೈಪೋಟಿ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry