ಇಂದಿನಿಂದ ಜಲಮೂಲ ಸರ್ವೇ ಕಾರ್ಯ

7

ಇಂದಿನಿಂದ ಜಲಮೂಲ ಸರ್ವೇ ಕಾರ್ಯ

Published:
Updated:

ಶಿವಮೊಗ್ಗ: ಜಿಲ್ಲೆಯ ಎಲ್ಲ ಜಲಮೂಲಗಳ ಸರ್ವೇ ಕಾರ್ಯ ಫೆ. 12ರಿಂದ 15 ದಿವಸಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.ಕೊಳವೆಬಾವಿ, ಬಾವಿ, ನದಿ, ಹೊಳೆ ಮತ್ತಿತರ ಜಲಮೂಲಗಳ ಸರ್ವೇ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ನಂತರ, ಈ ಜಲಮೂಲಗಳನ್ನು ಜಿಲ್ಲಾ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.ನೀರಿನ ಲಭ್ಯತೆ ಎಷ್ಟು? ಗುಣಮಟ್ಟ ಹೇಗೆ? ಎಂಬುದರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ಅದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಿ, ಏಪ್ರಿಲ್-ಮೇನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.ಏಕರೂಪ ಶುಲ್ಕ:
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿಗೆ ಏಕ ರೀತಿಯ ಶುಲ್ಕ ವಿಧಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಎಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯಸ್ಥರಿಗೆ ಹಾಗೂ ಎಲ್ಲಾ ಕ್ಷೇತ್ರಗಳಿಗೆ ಈಗಾಗಲೇ ಸುತ್ತೋಲೆ ಕಳುಹಿಸ ಲಾಗಿದೆ ಡಿಡಿಪಿಐ ಪರಮಶಿವಪ್ಪ ಸಭೆಗೆ ತಿಳಿಸಿದರು.ಫೆಬ್ರುವರಿ ಅಂತ್ಯಕ್ಕೆ ವಿವಿಧ ಯೋಜನೆಗಳ ಕಾಮಗಾರಿಗಳ ಮಂಜೂರಾತಿಗಳು ಸೇರಿದಂತೆ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಸಿಇಒ ಹೇಮಚಂದ್ರ ಸೂಚಿಸಿದರು. ಒತ್ತುವರಿ ತೆರವು-ಇಲಾಖೆ ಜವಾಬ್ದಾರಿ: ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಸಾರ್ವಜನಿಕ ಭೂಮಿಯನ್ನು ಬಿಡಿಸಿಕೊಳ್ಳುವುದು ಆಯಾ ಇಲಾಖೆಯ ಜವಾಬ್ದಾರಿಯಾಗಿರುತ್ತದೆ ಎಂದ ಅವರು, ಮುಂದಿನ ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಒತ್ತುವರಿಯಾದ ಭೂಮಿ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದರು.ಈ ಮಾಹಿತಿಯ ಅನ್ವಯ ಜಿಲ್ಲಾಧಿಕಾರಿ ಜತೆ ಚರ್ಚಿಸಿ, ವಿಶೇಷ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಶಂಕರಪ್ಪ, ಉಪ ಕಾರ್ಯದರ್ಶಿ ಹನುಮನರಸಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.‘ಸಬೂಬು ಬಿಟ್ಟು ಬಿಡಿ’

ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಸಭೆಯಲ್ಲಿ ಜಿ.ಪಂ. ಹಿರಿಯ ಸದಸ್ಯರೂ ಆದ ಎಚ್.ಬಿ. ಗಂಗಾಧರಪ್ಪ ಅಧಿಕಾರಿಗಳಿಗೆ ಸಾಕಷ್ಟು ಸಲಹೆ ನೀಡಿದರು.‘ಸಭೆಗಳಲ್ಲಿ ಸಬೂಬು ಹೇಳುವುದನ್ನು ಬಿಡಿ, ಮಾಡಿದ ಕೆಲಸಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳಿ. ಆಪಾದನೆ, ಆರೋಪಗಳು ಚರ್ಚೆಗೆ ಅವಕಾಶವಾಗಬಾರದು. ಮೇಲಧಿಕಾರಿಗಳು ಶಿಸ್ತು ಪಾಲನೆ ಮಾಡಿ. ಅಧೀನ ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ’ ಎಂದು ಹೇಳಿದರು.ಮೊದಲ ಸಭೆಯಲ್ಲೇ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಮೌನವಾಗಿದ್ದರು.ಪ್ರತ್ಯೇಕ ಕೌಂಟರ್

ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲ ಗ್ರಾಹಕರು ಫೆ. 19ರ ಒಳಗೆ ತಮ್ಮ ಮನೆಯ ಆರ್‌ಆರ್ ನಂಬರ್‌ನ ವಿದ್ಯುತ್ ಬಿಲ್‌ನ ಜೆರಾಕ್ಸ್ ಪ್ರತಿ ಜತೆ ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ಸಲ್ಲಿಸಲು ಪ್ರತ್ಯೇಕ ಕೌಂಟರ್ ತೆಗೆಯಲು ಸೂಚಿಸಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಸಿ. ಶ್ರೀಧರ್ ಸಭೆಗೆ ಮಾಹಿತಿ ನೀಡಿದರು.ಈಗಾಗಲೇ ಜಿಲ್ಲೆಯಲ್ಲಿ ಈ ಕೆಲಸ ಶೇ. 30ರಷ್ಟು ಮುಗಿದಿದೆ. ಜಿಲ್ಲೆಯಲ್ಲಿ 18 ಗ್ಯಾಸ್ ಏಜೆನ್ಸಿಗಳಿದ್ದು, ವಿಶೇಷ ಕೌಂಟರ್‌ಗಳು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry