ಇಂದಿನಿಂದ ಜೆಡಿಎಸ್ ಜಯವಾಹಿನಿ ಯಾತ್ರೆ

7

ಇಂದಿನಿಂದ ಜೆಡಿಎಸ್ ಜಯವಾಹಿನಿ ಯಾತ್ರೆ

Published:
Updated:

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹಟ ತೊಟ್ಟಿದ್ದು, ಶುಕ್ರವಾರದಿಂದಲೇ `ಜಯವಾಹಿನಿ ಯಾತ್ರೆ~ ಆರಂಭವಾಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುರುವಾರ ಇಲ್ಲಿ ತಿಳಿಸಿದರು.ಸಾಮೂಹಿಕ ನಾಯಕತ್ವದಡಿ ಪಕ್ಷವನ್ನು ಸಂಘಟಿಸಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಜನಪರ ಜನತಾ ಜಾಥಾ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ್, ಎಂ.ಸಿ.ನಾಣಯ್ಯ, ಬಸವರಾಜ ಹೊರಟ್ಟಿ, ಪಿ.ಜಿ.ಆರ್.ಸಿಂಧ್ಯ ಸೇರಿದಂತೆ ಒಟ್ಟು 12 ಜನ `ಜಯವಾಹಿನಿ~ ಬಸ್‌ನಲ್ಲಿ ಒಟ್ಟಾಗಿ ಪ್ರವಾಸ ಮಾಡುತ್ತೇವೆ. ಮೊದಲ ಹಂತದಲ್ಲಿ ಹತ್ತು ಜಿಲ್ಲೆಗಳಲ್ಲಿ ಪ್ರವಾಸ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಶುಕ್ರವಾರ ಬೆಳಿಗ್ಗೆ ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ದೇವೇಗೌಡ, ಕುಮಾರಸ್ವಾಮಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ದೊರೆಯಲಿದೆ. ಮೊದಲ ದಿನ ಚಾಮರಾಜನಗರ ಜಿಲ್ಲೆಯ ಹನೂರು, ಮೈಸೂರಿನಲ್ಲಿ ಸಮಾವೇಶ ನಡೆಯಲಿದೆ. ಒಟ್ಟು ಮೂರು ಹಂತಗಳಲ್ಲಿ ಪ್ರವಾಸ ನಡೆಯಲಿದ್ದು, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.ಒಟ್ಟಾಗಿ ಸೇರಿ ಪ್ರವಾಸ ಮಾಡಿದರೆ ಸಂಘಟನೆಗೆ ಅನುಕೂಲವಾಗುತ್ತದೆ. ಜನಬೆಂಬಲ ಮತವಾಗಿ ಪರಿವರ್ತನೆಯಾಗುತ್ತದೆ ಎಂಬ ದೃಷ್ಟಿಯಿಂದ ಮುಖಂಡರೆಲ್ಲ ಒಂದೇ ವಾಹನದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಮಳೆಗಾಲ ಆರಂಭಕ್ಕೂ ಮುನ್ನ ನಾಲ್ಕು ವಿಭಾಗಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲಾಗುವುದು ಎಂದರು.`ಸದನದಲ್ಲಿ ಅಶ್ಲೀಲ ದೃಶ್ಯ ನೋಡಿದಂತಹ ಪ್ರಕರಣ ನನ್ನ ಜೀವಮಾನದಲ್ಲಿ ನಡೆದಿರಲಿಲ್ಲ. ಬಿಜೆಪಿ ಹೈಕಮಾಂಡ್ ತಪ್ಪಿತಸ್ಥ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಉದ್ಧಟತನದಿಂದ ಹೇಳಿಕೆಗಳನ್ನು ನೀಡುವುದು ಬಿಟ್ಟು ಶಾಸಕರನ್ನು ಅನರ್ಹಗೊಳಿಸಲು ಮುಂದಾಗಬೇಕು~ ಎಂದು ಆಗ್ರಹಿಸಿದರು.ಇದಕ್ಕೂ ಮುನ್ನ ಜೆಡಿಎಸ್ ಯುವ ಘಟಕದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಇರುವುದು ಬಿಟ್ಟು ದೇವೇಗೌಡರಿಗೆ ಈ ವಯಸ್ಸಿನಲ್ಲಿ ಯಾಕೆ ರಾಜಕೀಯ ಎಂದು ಕೆಲವರು ಭಾವಿಸಬಹುದು. ನಾನೇನು ಮುಖ್ಯಮಂತ್ರಿ ಆಗಬೇಕಿಲ್ಲ, ಆರು ಕೋಟಿ ಜನರ ನೋವಿಗೆ ಸ್ಪಂದಿಸುವ ಕೆಲಸವನ್ನು ಪಕ್ಷ ಮಾಡುತ್ತಿದೆ ಅಷ್ಟೇ~ ಎಂದರು.`ರಾಜ್ಯ ಮುಖಂಡರು ಜಿಲ್ಲಾ ಪ್ರವಾಸ ಮಾಡುವ ಮಾದರಿಯಲ್ಲೇ ಜಿಲ್ಲಾ ಘಟಕದ ಪದಾಧಿಕಾರಿಗಳು ತಾಲ್ಲೂಕು ಮಟ್ಟದ ಪ್ರವಾಸ ಮಾಡುತ್ತಾರೆ. ಮೂರು ತಿಂಗಳ ಒಳಗೆ ಪಕ್ಷದ ಚಟುವಟಿಕೆಗಳು ಚುರುಕಾಗಲಿವೆ~ ಎಂದು ತಿಳಿಸಿದರು.ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, `ಸಿಂದಗಿಯಲ್ಲಿ ಆರ್‌ಎಸ್‌ಎಸ್‌ನವರು ಪಾಕಿಸ್ತಾನದ ಧ್ವಜಹಾರಿಸಿ, ಶ್ರೀರಾಮಸೇನೆಯವರ ಮೇಲೆ ಆರೋಪ ಮಾಡಿದರು. ಅಲ್ಪಸಂಖ್ಯಾತರು ಮಾಡಿದ್ದರೆ ಬಿಜೆಪಿಯವರು ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರು. ಬಿಜೆಪಿಯವರು ಈ ಕೃತ್ಯದಲ್ಲಿ ತೊಡಗಿರುವುದಾಗಿ ಗೊತ್ತಿದ್ದರೂ ಯಾಕೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ~ ಎಂದು ಕಿಡಿಕಾರಿದರು.ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಕಾರ್ಯಾಧ್ಯಕ್ಷ ಬಿ.ಎಚ್.ಚಂದ್ರಶೇಖರ್ ಮೊದಲಾದವರು ಮಾತನಾಡಿದರು.

 

`ಆಯೋಗವೇ ಕಡ್ಡಾಯ ಮಾಡಲಿ~

ಬೆಂಗಳೂರು: ಚುನಾವಣೆಯಲ್ಲಿ ಮಹಿಳೆಯರಿಗೆ ಇಂತಿಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ಮಾತ್ರ ರಾಜಕೀಯ ಪಕ್ಷಗಳಿಗೆ ಚಿಹ್ನೆ ನೀಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಜಾರಿಗೊಳಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸಲಹೆ ಮಾಡಿದರು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಇಂತಿಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಬೇಕು ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry